Sunday 26 April 2015

ತಲಕಾಡಿನ ಶಿಲ್ಪ ವೈಭವ - ಮೂರು ಮುಖದ ಧೇನು

ಕ್ಷೀರಾಭಿಷೇಕದಲ್ಲಿ ಲೀನವಾಗಿರುವ ಮೂರು ಮುಖದ ಧೇನು
ಪುರಾತನ ಹಾಗೂ ಕಲಾತ್ಮಕವಾದ  ದೇವಾಲಯಗಳಿರುವ ತಲಕಾಡು ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು. ದಕ್ಷಿಣಕಾಶಿ ಎಂದು ಕರೆಸಿಕೊಳ್ಳುತ್ತಿರುವ ತಲಕಾಡು ಪುಣ್ಯಕ್ಷೇತ್ರವಾಗಿರುವಂತೆ ಪ್ರೇಕ್ಷಣೀಯ ತಾಣವೂ ಆಗಿದೆ.

ಗಂಗರು, ಚೋಳರು, ಹೊಯ್ಸಳರ ಕಾಲಕ್ಕೆ ಸೇರಿದ ಸುಂದರ ದೇವಾಲಯಗಳು ಇಲ್ಲಿವೆ. ವೈದ್ಯನಾಥೇಶ್ವರ ದೇವಾಲಯ ಇಲ್ಲಿರುವ ಪ್ರಮುಖ ಹಾಗೂ ಭವ್ಯ ದೇಗುಲ. 

ಕಣಶಿಲೆಯಿಂದ ನಿರ್ಮಿಸಿರುವ ಈ ದೇಗುಲವು ಶಿಲ್ಪಾಲಂಕಾರದಿಂದ ಸುಂದರವಾಗಿದೆ. ಹೊರಬಿತ್ತಿಯ ಅಡ್ಡ ಪಟ್ಟಿಕೆಗಳಲ್ಲಿ ಹಲವು ಸುಂದರ ಶಿಲ್ಪಗಳಿವೆ. ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿರುವುದು ಒಂದೇ ದೇಹದ ಮೂರು ಮುಖವುಳ್ಳ ಮೂರು ಭಂಗಿಯ ಕಾಮಧೇನು. ಶಿವನಿಗೆ ಕ್ಷೀರಾಭಿಷೇಕಮಾಡುವುದರಲ್ಲಿ ತಲ್ಲೀನವಾಗಿ ಕಲಾಪ್ರೇಮಿಗಳ ಮನಸ್ಸನ್ನೂ ಸೂರೆಗೊಳ್ಳುತ್ತಿದೆ.


ಹಸುವಿನ  ಮೂರುಮುಖಗಳಲ್ಲಿ ಯಾವುದಾದರೂ ಎರಡು ಮುಖಗಳನ್ನು ಮುಚ್ಚಿ ಒಂದು ಹಸುವನ್ನು ನೋಡಿದಾಗ ಪವಿತ್ರ ಕಾರ್ಯದಲ್ಲಿ ತನ್ನನ್ನು ಅದು ತೊಡಗಿಸಿಕೊಂಡಿರುವುದು ಸುಲಭವಾಗಿ ಗೊತ್ತಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಒಂದು ಹಸು ಒಂದೆಡೆ ಕ್ಷೀರಾಭಿಷೇಕಮಾಡುತ್ತ ಮತ್ತೊಂದೆಡೆ ಶಿವಲಿಂಗವನ್ನು ಶುಚಿಗೊಳಿಸುತ್ತಿದ್ದರೆ, 

ಮತ್ತೊಂದು ಕ್ಷೀರಾಭಿಷೇಕ ಮಾಡುವುದರಲ್ಲಿ ಮಘ್ನವಾಗಿರುವಂತೆಯೂ, 

ಮಗದೊಂದು ಅಭಿಷೇಕವನ್ನು ಮಾಡುತ್ತಾ ಅದನ್ನು ವೀಕ್ಷಿಸುತ್ತಿರುವಂತೆಯೂ ಗೋಚರವಾಗುತ್ತದೆ.

ನಾವು ನೋಡುವ ನೋಟಕ್ಕೆ ಅನುಗುಣವಾಗಿ ನಾನಾ ಭಾವನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ನೋಡುಗನ ಮನಸ್ಥಿತಿ, ಮನೋಭಾವಕ್ಕೆ ಅನುಗುಣವಾಗಿ ಭಾವನೆಗಳೂ ಬೇರೆಯೇ ಆಗುತ್ತವೆ.
ಡಿವಿಜಿ ಅವರು ಕಗ್ಗದಲ್ಲಿ ಹೇಳಿರುವಂತೆ –
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ|
ಬಿಡಿಗಾಸು ಹೂವೊಳಗೆ – ಮಂಕುತಿಮ್ಮ||
‘ದೃಷ್ಟಿಯಂತೆ ಸೃಷ್ಟಿ.’ ‘ಯದ್ಭಾವಂ ತದ್ಭವತಿ.’ ಈ ಧೇನುವನ್ನು ಸೂಕ್ಷ್ಮವಾಗಿ ವೀಕ್ಷಿಸಿ ನಿಮ್ಮ ನೋಟಕ್ಕೆ ನಿಲುಕುವ, ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಪದಗಳಲ್ಲಿ ಸೆರೆಹಿಡಿದು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.

ಕನ್ನಡ ಪ್ರಥಮಭಾಷೆ ಎಂಟನೆಯ ತರಗತಿಯ ‘ತಲಕಾಡಿನ ವೈಭವ’ ಗದ್ಯ ಭಾಗಕ್ಕೆ ಸಂಬಂಧಿಸಿದಂತೆ ನೀಡ ಬಹುದಾದ ಚಟುವಟಿಕೆಗಳು.

ಚಟುವಟಿಕೆಗಳು:
1)   ಮೂರುಮುಖದ  ಹಸುವಿನ ಶಿಲ್ಪವನ್ನು ಗಮನಿಸಿ  ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು 8-10 ಸಾಲುಗಳಲ್ಲಿ ಬರೆಯಿರಿ.
2)  ನಿಮ್ಮ ಊರಿನ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿರುವ ಸೋಜಿಗಗಳನ್ನು ವೀಕ್ಷಿಸಿ. ಅವುಗಳನ್ನು ಕುರಿತು 10-15 ವಾಕ್ಯಗಳಲ್ಲಿ ವಿವರಿಸಿ. (ಸಾಧ್ಯವಾದರೆ ಛಾಯಾಚಿತ್ರ ಸಹಿತ).
3)  ಗುರು ಹಿರಿಯರ ಮಾರ್ಗದರ್ಶನದಲ್ಲಿ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿ ವೈದ್ಯನಾಥೇಶ್ವರ ದೇವಾಲಯದ ವಿಶೇಷತೆಗಳನ್ನು ಕುರಿತು ಒಂದು ಪ್ರಬಂಧವನ್ನು ಬರೆಯಿರಿ.
4)    ತಲಕಾಡು ವೈಭವವನ್ನು ತಿಳಿಸುವ ಲೇಖನಗಳನ್ನು ಓದಿ ಒಂದು ಪ್ರಬಂಧವನ್ನು ರಚಿಸಿರಿ.
5)  ಶಾಲೆಯಿಂದ ತಲಕಾಡಿಗೆ ಪ್ರವಾಸವನ್ನು ಏರ್ಪಡಿಸುವಂತೆ  ಕೋರಿ, ನಿಮ್ಮ ಮುಖ್ಯೋಪಾಧ್ಯಾಯರಿಗೆ ಒಂದು ಪತ್ರಬರೆಯಿರಿ.
6)   ನಿಮ್ಮ ಶಾಲೆಯಲ್ಲಿ ಏರ್ಪಡಿಸಿರುವ ತಲಕಾಡು ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ನಿಮ್ಮ ತಂದೆಯವರಿಗೆ ಒಂದು ಪತ್ರ ಬರೆಯಿರಿ.
7)   ತಲಕಾಡಿನ ವೈಭವಗಳನ್ನು ತಿಳಿಸುತ್ತಾ ನಿಮ್ಮ ಗೆಳತಿಗೆ ಒಂದು ಪತ್ರ ಬರೆಯಿರಿ.
8)   ವಿವಿಧ ಭಂಗಿಯ ಗೋವಿನ ಚಿತ್ರವನ್ನು ಬಿಡಿಸಿ. ಸೂಕ್ತ ಶೀರ್ಷಿಕೆಗಳನ್ನು ನೀಡಿರಿ.
9)  ನಿಮ್ಮ ಊರಿನ ದೇವಾಲಯಗಳಿಗೆ ಭೇಟಿನೀಡಿ ಛಾಯಾಚಿತ್ರಗಳನ್ನು ತೆಗೆದು, ಪ್ರತಿಯೊಂದು ಫೋಟೋವಿಗೂ ಸೂಕ್ತ ತಲೆಬರಹವನ್ನು ನೀಡಿ ಒಂದು ಆಲ್ಬಮ್ ತಯಾರಿಸಿರಿ.
10) ಪುಸ್ತಕ ಮತ್ತು ಅಂತರ್ಜಾಲದ ಸಹಾಯದಿಂದ ಸಂಗ್ರಹಿಸಿರುವ ವಿಷಯಗಳನ್ನಾಧರಿಸಿ ಒಂದು ಪ್ರವಾಸ ಕಥನವನ್ನು ಬರೆಯಿರಿ.


No comments:

Post a Comment