Thursday 30 April 2015

ಭಾಷಾ ಚಟುವಟಿಕೆಗಳು-ಕವಿ ಕೃತಿ ಪರಿಚಯ

ಹಿರೇಮಲ್ಲೂರು ಈಶ್ವರನ್’ ಇವರ ಪರಿಚಯವನ್ನಾಧರಿಸಿದ ಭಾಷಾ ಚಟುವಟಿಕೆ.
ಸೂಚನೆ
·   ಸಾಮರ್ಥ್ಯಕ್ಕನುಗುಣವಾಗಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿರಿ.
·   ಎರಡು ಮತ್ತು ಮೂರನೆಯ ಗುಂಪಿನ ವಿದ್ಯಾರ್ಥಿಗಳನ್ನು ವೀಕ್ಷಕರನ್ನಾಗಿ ಮಾಡಿಕೊಂಡು ಮೊದಲನೆಯ ಗುಂಪಿನ ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿ ತೊಡಗಿಸಿರಿ.

·   ಮೂರನೆಯ ಗುಂಪಿನ ವಿದ್ಯಾರ್ಥಿಗಳನ್ನು ವೀಕ್ಷಕರನ್ನಾಗಿ ಕೂರಿಸಿಕೊಂಡು, ಒಂದನೆಯ ಗುಂಪಿನ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಎರಡನೆಯ ಗುಂಪಿನ ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿ ತೊಡಗಿಸಿರಿ.

·   ಒಂದನೆಯ ಗುಂಪಿನ ವಿದ್ಯಾರ್ಥಿಗಳ ನಾಯಕತ್ವದಲ್ಲಿ ಎರಡನೆ ಗುಂಪಿನ ವಿದ್ಯಾರ್ಥಿಗಳ ಸಹಾಯದಿಂದ ಮೂರನೆಯ ಗುಂಪಿನ ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿ ತೊಡಗಿಸಿರಿ.
ಮೊದಲನೆ ಗುಂಪಿನವರಿಗೆ                                                          ಒಟ್ಟು 15 ಅಂಕಗಳು
ಸುಳುಹನ್ನು ತೆಗೆದುಕೊಳ್ಳದೆ ಉತ್ತರಿಸಿದರೆ 10 ಅಂಕಗಳು
ಪ್ರತಿ ಒಂದು ಸುಳುಹಿಗೆ ಒಂದೊಂದು ಅಂಕ ಕಡಿಮೆಯಾಗುತ್ತಾ ಹೋಗುತ್ತದೆ.


ಈ ಭಾವ ಚಿತ್ರದಲ್ಲಿರುವ ಸಾಹಿತಿಗಳು ಯಾರು?
1. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಕೆನಡಾದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ್ದರು.

2.  ಚೆನ್ನಬಸಪ್ಪ ಮತ್ತು ಬಸಮ್ಮ ದಂಪತಿಗಳ ಪುತ್ರರಾದ ಇವರು ಸಮಾಜಶಾಸ್ತ್ರಜ್ಞರು ಹಾಗೂ ಅಂತಾರಾಷ್ಟ್ರೀಯ ಪುರಸ್ಕೃತ ಸಾಹಿತಿಗಳು.

3. ‘ಹರಿಹರನ ಕೃತಿಗಳು ಒಂದು ಸಂಖ್ಯಾನಿರ್ಣಯ’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
4.ಋಜುಮಾರ್ಗದಲ್ಲಿ ನಡೆಯುವ ಮಹನೀಯರಿಗೆ ಪ್ರದಾನಮಾಡಲು ಶ್ರೀ ಮುರುಘಾಮಠದವರು ಸ್ಥಾಪಿಸಿರುವ ಬಸವಶ್ರೀ ಪ್ರಶಸ್ತಿ ವಿಜೇತರು.
5.  ‘ಹಾಲಾಹಲ’, ‘ರಾಜಾರಾಣಿ ದೇಖೋ’, ‘ವಿಷನಿಮಿಷಗಳು’, ‘ಶಿವನ ಬುಟ್ಟಿ’ ಕೃತಿಗಳ ಕರ್ತೃ
6. ಇವರ ಇರತ ಪ್ರಮುಖ ಕೃತಿಗಳು ‘ಭಾರತದ ಹಳ್ಳಿಗಳು’, ‘ವಲಸೆ ಹೋದ ಕನ್ನಡಿಗನ ಕತೆ,’ ‘ತಾಯಿನೋಟ’ ಮುಂತಾದವು

7. ಇವರ ಕಾಲ 1922 ರಿಂದ 1998
8.‘ಕವಿಕಂಡನಾಡು’ ಇವರ ಪ್ರವಾಸ ಕಥನ
9. ಇವರು ಹಾವೇರಿ ಜಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರಿನರು.
10. ‘ತಲಕಾಡಿನ ಶಿಲ್ಪವೈಭವ’ ಗದ್ಯಭಾಗದ ಕರ್ತೃ

ಮೇಲಿನ ಎಲ್ಲಾ ಸುಳುಹುಗಳನ್ನೂ ಸೇರಿಸಿ ಹಿರೇಮಲ್ಲೂರು ಈಶ್ವರನ್ ಇವರ ಪರಿಚಯ ಮಾಡಿಕೊಡಿ.                                                                                                  5 ಅಂಕಗಳು
ಎರಡನೆಯ ಗುಂಪಿನವರಿಗೆ                                                            ಒಟ್ಟು-15 ಅಂಕಗಳು
1)  ಹಿರೇಮಲ್ಲೂರು ಈಶ್ವರನ್ ಇವರು ಬರೆದಿರುವ ಪ್ರವಾಸ ಕಥನ ಯಾವುದು?                                1

2) ಹಿರೇಮಲ್ಲೂರು ಈಶ್ವರನ್ ಇವರು ಬರೆದಿರುವ ಪ್ರವಾಸ ಕಥನದಿಂದ ಆರಿಸಿಕೊಂಡಿರುವ ಗದ್ಯಭಾಗ ಯಾವುದು?             1

3)  ಹಿರೇಮಲ್ಲೂರು ಈಶ್ವರನ್ ಇವರ ಸ್ಥಳ ಯಾವುದು?                                                         1
    
4) ಹಿರೇಮಲ್ಲೂರು ಈಶ್ವರನ್ ಇವರ ಕಾಲವನ್ನು ತಿಳಿಸಿರಿ.                                                      1

5) ಹಿರೇಮಲ್ಲೂರು ಈಶ್ವರನ್ ಇವರ ತಂದೆ ತಾಯಿಯಾರು?                                                    1
6) ಹಿರೇಮಲ್ಲೂರು ಈಶ್ವರನ್ ಇವರ ಯಾವುದಾದರು ನಾಲ್ಕು ಪ್ರಮುಖ  ಕೃತಿಗಳನ್ನು ಹೆಸರಿರಿ.               2
7) ಹಿರೇಮಲ್ಲೂರು ಈಶ್ವರನ್ ಇವರ ಮಹಾಪ್ರಬಂಧ ಯಾವುದು?                                               1
8) ಹಿರೇಮಲ್ಲೂರು ಈಶ್ವರನ್ ಇವರಿಗೆ ದೊರಕಿರುವ ಪ್ರಶಸ್ತಿಯಾವುದು?                                        1
9) ಹಿರೇಮಲ್ಲೂರು ಈಶ್ವರನ್ ಇವರು ಯಾವ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದರು?1     

ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ಆ ಉತ್ತರಗಳನ್ನು ಬಳಸಿಕೊಂಡು ಹಿರೇಮಲ್ಲೂರು ಈಶ್ವರನ್ ಇವರ ಪರಿಚಯ ಮಾಡಿಕೊಡಿ.

ಮೂರನೆಯ ಗುಂಪಿನವರಿಗೆ                                                      ಒಟ್ಟು ಅಂಕಗಳು 15

ಎ ಮತ್ತು ಬಿ ಪಟ್ಟಿಯಲ್ಲಿ ಹಿರೇಮಲ್ಲೂರು ಈಶ್ವರನ್ ಇವರನ್ನು ಕುರಿತ ಮಾಹಿತಿಗಳಿಮೆ ಸೂಕ್ತರೀತಿಯಲ್ಲಿ ಹೊಂದಿಸಿ ಬರೆಯಿರಿ                                                                        10 ಅಂಕಗಳು

                   ‘ಎ’                                                   ‘ಬಿ’
1. ‘ತಲಕಾಡಿನ ಶಿಲ್ಪವೈಭವ’ ಗದ್ಯಭಾಗದ ಕರ್ತೃ                    ಅ) ಹಾಲಾಹಲ, ವಿಷನಿಮಿಷಗಳು, ಭಾರತದ ಹಳ್ಳಿಗಳು
2. ‘ತಲಕಾಡಿನ ಶಿಲ್ಪವೈಭವ’ ಗದ್ಯಭಾಗದ ಆಕರಕೃತಿ               ಆ) ಜನನ 1922 - ಮರಣ 1998
3. ಹಿರೇಮಲ್ಲೂರು ಈಶ್ವರನ್ ಇವರ ಸ್ಥಳ                            ಇ) ಆಕ್ಸ್ ಫರ್ಡ್ ವಿಶ್ವವಿದ್ಯಾಲಯ
4.ಹಿರೇಮಲ್ಲೂರು ಈಶ್ವರನ್ ಇವರ ಕಾಲ                           ಈ) ಕೆನಡಾದ ಯಾರ್ಕ್ ವಿಶ್ವವಿದ್ಯಾಲಯ
5. ಹಿರೇಮಲ್ಲೂರು ಈಶ್ವರನ್ ಇವರ ತಂದೆ ತಾಯಿ                  ಉ) ಹರಿಹರನ ಕೃತಿಗಳು ಒಂದು ಸಂಖ್ಯಾನಿರ್ಣಯ
6. ಹಿರೇಮಲ್ಲೂರು ಈಶ್ವರನ್ ಇವರಿಗೆ ಸಂದ ಪ್ರಶಸ್ತಿ                 ಊ) ಹಾವೇರಿ ಜಲ್ಲೆಯ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು       
7. ಹಿರೇಮಲ್ಲೂರು ಈಶ್ವರನ್ ಇವರ ಪ್ರಮುಖ ಕೃತಿಗಳು             ಋ) ಕವಿಕಂಡ ನಾಡು
8. ಹಿ.ಈ ಇವರು ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದ ವಿಶ್ವವಿದ್ಯಾನಿಲಯ              ಎ) ಹಿರೇಮಲ್ಲೂರು ಈಶ್ವರನ್
9. ಹಿ.ಈ ಇವರಿಗೆ ಡಾಕ್ಟರೇಟ್ ಪದವಿ ನೀಡಿದ ವಿಶ್ವವಿದ್ಯಾನಿಲಯ   ಏ) ಚೆನ್ನಬಸಪ್ಪ ಮತ್ತು ಬಸಮ್ಮ       
10. ಹಿರೇಮಲ್ಲೂರು ಈಶ್ವರನ್ ಮಹಾಪ್ರಬಂಧ                        ಐ) ಬಸವಶ್ರೀ
‘ಎ’ ಮತ್ತು ‘ಬಿ’ ಪಟ್ಟಿಯನ್ನು ಹೊಂದಿಸಿ ಬರೆದು, ಅಲ್ಲಿರು ವಿಷಯಗಳನ್ನು ಬಳಸಿಕೊಂಡು ಹಿರೇಮಲ್ಲೂರು ಈಶ್ವರನ್ ಇವರ ಪರಿಚಯ ಮಾಡಿಕೊಡಿ.
************

Monday 27 April 2015

ತಲಕಾಡಿನ ಶಿಲ್ಪ ವೈಭವ - ದ್ವಾರಪಾಲಕರು

   ಧಾರ್ಮಿಕವಾಗಿ, ಪುರಾಣೋಕ್ತವಾಗಿ,  ಐತಿಹಾಸಿಕವಾಗಿ, ರಾಜಕೀಯವಾಗಿ, ಸಾಹಿತ್ಯಕವಾಗಿ, ಕಲಾತ್ಮಕವಾಗಿ ಪ್ರಾಮುಖ್ಯತೆಯನ್ನು ಪಡೆದ ಪುಣ್ಯಭೂಮಿ ತಲಕಾಡು. ಪೂರ್ವದಲ್ಲಿ 30 ದೇವಾಲಯಗಳಿಂದ ಕೂಡಿದ ಭವ್ಯ ನಗರವಾಗಿತ್ತು. ಪ್ರಾಕೃತಿಕ ವಿಕೋಪದಿಂದಾಗಿ 16ನೇ ಶತಮಾನದಲ್ಲಿ ಬಹುತೇಕ ತಲಕಾಡು ಭಾಗ ಮರಳಿನಲ್ಲಿ ಮುಚ್ಚಿ ಹೋಯಿತು. ಈಗಿರುವ ದೇವಾಲಯಗಳಲ್ಲಿ ಅತ್ಯಂತ ಪ್ರಖ್ಯಾತವಾದ ದೇಗುಲವೆಂದರೆ ವೈದ್ಯನಾಥ ಸ್ವಾಮಿ ದೇವಸ್ಥಾನ. ಇದನ್ನು ಮಾಧವ ಮಂತ್ರಿ ಕಟ್ಟಿಸಿದನೆಂದು ಪ್ರತೀತಿ ಇದೆ.
    ಈ ದೇವಸ್ಥಾನವು ಪೂರ್ವಾಭಿಮುಖವಾಗಿದ್ದು ಮುಖ್ಯದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆಯ ೧೦ ಅಡಿ ಎತ್ತರದ ದ್ವಾರಪಾಲರ ಮೂರ್ತಿಗಳಿವೆ. ಇಷ್ಟು ಎತ್ತರವಾದ ದ್ವಾರಪಾಲಕ ಮೂರ್ತಿಗಳನ್ನು ಮತ್ತಾವ ದೇವಾಲಯದಲ್ಲೂ ನಾವು ಕಾಣುವುದಿಲ್ಲ.
                              
  ದ್ವಾರಪಾಲಕರಲ್ಲಿ ನಂದಿ ದೇವಗಣಕ್ಕೆ ಸಂಬಂಧಿಸಿದವನಾದರೆ, ಮಹಾಕಾಳ ರಾಕ್ಷಸಗಣದವನಾಗಿದ್ದಾನೆ. ವಿಗ್ರಹದ ಪ್ರತಿ ಬೆರಳುಗಳು, ಅದರಲ್ಲಿ ಹಾಕಿಕೊಂಡಿರುವ ಉಂಗುರಗಳನ್ನು ಬಲು ಸೂಕ್ಷ್ಮವಾಗಿ ಕೆತ್ತಲಾಗಿದೆ.  ಹೊಟ್ಟೆಯಿಂದ ಎದೆಯ ಭಾಗದವರೆಗೆ ಸೂಕ್ಷ್ಮವಾಗಿ ಗಮನಿಸಿದಾಗ ನಂದಿಯ ಮುಖವು ಗೋಚರಿಸುತ್ತದೆ.
ಕೈಬೆರಳುಗಳು 
       
                       ನಂದಿಯ ಮುಖದಂತೆ ಕಾಣುವ ಎದೆ ಮತ್ತು ಹೊಟ್ಟೆಯ ಭಾಗ
      
     ಭಾಷಾ ಕೌಶಲ್ಯವನ್ನು ಬೆಳೆಸಲು ಕನ್ನಡ ಪ್ರಥಮಭಾಷೆ ಎಂಟನೆಯ ತರಗತಿಯ ‘ತಲಕಾಡಿನ ವೈಭವ’ ಗದ್ಯ ಭಾಗಕ್ಕೆ ಸಂಬಂಧಿಸಿದಂತೆ ನೀಡ ಬಹುದಾದ ಚಟುವಟಿಕೆಗಳು.
ತಲಕಾಡಿನ ಸುಪ್ರಸಿದ್ಧವಾದ ದೇವಾಲಯಗಳಾವುವು?
ವೈದ್ಯನಾಥೇಶ್ವರ ದೇವಾಲಯದಲ್ಲಿರುವ ದ್ವಾರಪಾಲಕರ ವೈಶಿಷ್ಟ್ಯವೇನು?
ತಲಕಾಡಿನ ಬಹುಭಾಗ ಮರಳಿನಿಂದ ಮುಚ್ಚಿಹೋಗಲು ಕಾರಣವೇನು?
ವೈದ್ಯನಾಥೇಶ್ವರ ದೇವಾಲಯದ ದ್ವಾರಪಾಲಕರ ಶಿಲ್ಪನ್ನು ನೋಡಿ ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.
ತಲಕಾಡನ್ನು ದೇವಾಲಯಗಳ ನಗರಿ ಎಂದು ಏಕೆ ಕರೆಯುತ್ತಾರೆ?
ವೈದ್ಯನಾಥೇಶ್ವರ ದೇವಾಲಯದ ದ್ವಾರಪಾಲಕರ ಎದೆಯ ಭಾಗವನ್ನು ವೀಕ್ಷಿಸಿದಾಗ ಕಂಡುಬರುವ ಕೌತುಕವೇನು?



Sunday 26 April 2015

ತಲಕಾಡಿನ ಶಿಲ್ಪ ವೈಭವ - ಮೂರು ಮುಖದ ಧೇನು

ಕ್ಷೀರಾಭಿಷೇಕದಲ್ಲಿ ಲೀನವಾಗಿರುವ ಮೂರು ಮುಖದ ಧೇನು
ಪುರಾತನ ಹಾಗೂ ಕಲಾತ್ಮಕವಾದ  ದೇವಾಲಯಗಳಿರುವ ತಲಕಾಡು ಕರ್ನಾಟಕದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದು. ದಕ್ಷಿಣಕಾಶಿ ಎಂದು ಕರೆಸಿಕೊಳ್ಳುತ್ತಿರುವ ತಲಕಾಡು ಪುಣ್ಯಕ್ಷೇತ್ರವಾಗಿರುವಂತೆ ಪ್ರೇಕ್ಷಣೀಯ ತಾಣವೂ ಆಗಿದೆ.

ಗಂಗರು, ಚೋಳರು, ಹೊಯ್ಸಳರ ಕಾಲಕ್ಕೆ ಸೇರಿದ ಸುಂದರ ದೇವಾಲಯಗಳು ಇಲ್ಲಿವೆ. ವೈದ್ಯನಾಥೇಶ್ವರ ದೇವಾಲಯ ಇಲ್ಲಿರುವ ಪ್ರಮುಖ ಹಾಗೂ ಭವ್ಯ ದೇಗುಲ. 

ಕಣಶಿಲೆಯಿಂದ ನಿರ್ಮಿಸಿರುವ ಈ ದೇಗುಲವು ಶಿಲ್ಪಾಲಂಕಾರದಿಂದ ಸುಂದರವಾಗಿದೆ. ಹೊರಬಿತ್ತಿಯ ಅಡ್ಡ ಪಟ್ಟಿಕೆಗಳಲ್ಲಿ ಹಲವು ಸುಂದರ ಶಿಲ್ಪಗಳಿವೆ. ಎಲ್ಲರ ಗಮನವನ್ನು ತನ್ನತ್ತ ಸೆಳೆಯುತ್ತಿರುವುದು ಒಂದೇ ದೇಹದ ಮೂರು ಮುಖವುಳ್ಳ ಮೂರು ಭಂಗಿಯ ಕಾಮಧೇನು. ಶಿವನಿಗೆ ಕ್ಷೀರಾಭಿಷೇಕಮಾಡುವುದರಲ್ಲಿ ತಲ್ಲೀನವಾಗಿ ಕಲಾಪ್ರೇಮಿಗಳ ಮನಸ್ಸನ್ನೂ ಸೂರೆಗೊಳ್ಳುತ್ತಿದೆ.


ಹಸುವಿನ  ಮೂರುಮುಖಗಳಲ್ಲಿ ಯಾವುದಾದರೂ ಎರಡು ಮುಖಗಳನ್ನು ಮುಚ್ಚಿ ಒಂದು ಹಸುವನ್ನು ನೋಡಿದಾಗ ಪವಿತ್ರ ಕಾರ್ಯದಲ್ಲಿ ತನ್ನನ್ನು ಅದು ತೊಡಗಿಸಿಕೊಂಡಿರುವುದು ಸುಲಭವಾಗಿ ಗೊತ್ತಾಗುತ್ತದೆ. ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಒಂದು ಹಸು ಒಂದೆಡೆ ಕ್ಷೀರಾಭಿಷೇಕಮಾಡುತ್ತ ಮತ್ತೊಂದೆಡೆ ಶಿವಲಿಂಗವನ್ನು ಶುಚಿಗೊಳಿಸುತ್ತಿದ್ದರೆ, 

ಮತ್ತೊಂದು ಕ್ಷೀರಾಭಿಷೇಕ ಮಾಡುವುದರಲ್ಲಿ ಮಘ್ನವಾಗಿರುವಂತೆಯೂ, 

ಮಗದೊಂದು ಅಭಿಷೇಕವನ್ನು ಮಾಡುತ್ತಾ ಅದನ್ನು ವೀಕ್ಷಿಸುತ್ತಿರುವಂತೆಯೂ ಗೋಚರವಾಗುತ್ತದೆ.

ನಾವು ನೋಡುವ ನೋಟಕ್ಕೆ ಅನುಗುಣವಾಗಿ ನಾನಾ ಭಾವನೆಗಳು ನಮ್ಮ ಮನಸ್ಸಿನಲ್ಲಿ ಮೂಡುತ್ತವೆ. ನೋಡುಗನ ಮನಸ್ಥಿತಿ, ಮನೋಭಾವಕ್ಕೆ ಅನುಗುಣವಾಗಿ ಭಾವನೆಗಳೂ ಬೇರೆಯೇ ಆಗುತ್ತವೆ.
ಡಿವಿಜಿ ಅವರು ಕಗ್ಗದಲ್ಲಿ ಹೇಳಿರುವಂತೆ –
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ|
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ ||
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ|
ಬಿಡಿಗಾಸು ಹೂವೊಳಗೆ – ಮಂಕುತಿಮ್ಮ||
‘ದೃಷ್ಟಿಯಂತೆ ಸೃಷ್ಟಿ.’ ‘ಯದ್ಭಾವಂ ತದ್ಭವತಿ.’ ಈ ಧೇನುವನ್ನು ಸೂಕ್ಷ್ಮವಾಗಿ ವೀಕ್ಷಿಸಿ ನಿಮ್ಮ ನೋಟಕ್ಕೆ ನಿಲುಕುವ, ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಪದಗಳಲ್ಲಿ ಸೆರೆಹಿಡಿದು ನಿಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳಿ.

ಕನ್ನಡ ಪ್ರಥಮಭಾಷೆ ಎಂಟನೆಯ ತರಗತಿಯ ‘ತಲಕಾಡಿನ ವೈಭವ’ ಗದ್ಯ ಭಾಗಕ್ಕೆ ಸಂಬಂಧಿಸಿದಂತೆ ನೀಡ ಬಹುದಾದ ಚಟುವಟಿಕೆಗಳು.

ಚಟುವಟಿಕೆಗಳು:
1)   ಮೂರುಮುಖದ  ಹಸುವಿನ ಶಿಲ್ಪವನ್ನು ಗಮನಿಸಿ  ನಿಮ್ಮ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು 8-10 ಸಾಲುಗಳಲ್ಲಿ ಬರೆಯಿರಿ.
2)  ನಿಮ್ಮ ಊರಿನ ದೇವಾಲಯಗಳಿಗೆ ಭೇಟಿ ನೀಡಿ ಅಲ್ಲಿರುವ ಸೋಜಿಗಗಳನ್ನು ವೀಕ್ಷಿಸಿ. ಅವುಗಳನ್ನು ಕುರಿತು 10-15 ವಾಕ್ಯಗಳಲ್ಲಿ ವಿವರಿಸಿ. (ಸಾಧ್ಯವಾದರೆ ಛಾಯಾಚಿತ್ರ ಸಹಿತ).
3)  ಗುರು ಹಿರಿಯರ ಮಾರ್ಗದರ್ಶನದಲ್ಲಿ ಅಂತರ್ಜಾಲ ತಾಣಗಳಿಗೆ ಭೇಟಿ ನೀಡಿ ವೈದ್ಯನಾಥೇಶ್ವರ ದೇವಾಲಯದ ವಿಶೇಷತೆಗಳನ್ನು ಕುರಿತು ಒಂದು ಪ್ರಬಂಧವನ್ನು ಬರೆಯಿರಿ.
4)    ತಲಕಾಡು ವೈಭವವನ್ನು ತಿಳಿಸುವ ಲೇಖನಗಳನ್ನು ಓದಿ ಒಂದು ಪ್ರಬಂಧವನ್ನು ರಚಿಸಿರಿ.
5)  ಶಾಲೆಯಿಂದ ತಲಕಾಡಿಗೆ ಪ್ರವಾಸವನ್ನು ಏರ್ಪಡಿಸುವಂತೆ  ಕೋರಿ, ನಿಮ್ಮ ಮುಖ್ಯೋಪಾಧ್ಯಾಯರಿಗೆ ಒಂದು ಪತ್ರಬರೆಯಿರಿ.
6)   ನಿಮ್ಮ ಶಾಲೆಯಲ್ಲಿ ಏರ್ಪಡಿಸಿರುವ ತಲಕಾಡು ಪ್ರವಾಸಕ್ಕೆ ಹೋಗಲು ಅನುಮತಿ ಕೋರಿ ನಿಮ್ಮ ತಂದೆಯವರಿಗೆ ಒಂದು ಪತ್ರ ಬರೆಯಿರಿ.
7)   ತಲಕಾಡಿನ ವೈಭವಗಳನ್ನು ತಿಳಿಸುತ್ತಾ ನಿಮ್ಮ ಗೆಳತಿಗೆ ಒಂದು ಪತ್ರ ಬರೆಯಿರಿ.
8)   ವಿವಿಧ ಭಂಗಿಯ ಗೋವಿನ ಚಿತ್ರವನ್ನು ಬಿಡಿಸಿ. ಸೂಕ್ತ ಶೀರ್ಷಿಕೆಗಳನ್ನು ನೀಡಿರಿ.
9)  ನಿಮ್ಮ ಊರಿನ ದೇವಾಲಯಗಳಿಗೆ ಭೇಟಿನೀಡಿ ಛಾಯಾಚಿತ್ರಗಳನ್ನು ತೆಗೆದು, ಪ್ರತಿಯೊಂದು ಫೋಟೋವಿಗೂ ಸೂಕ್ತ ತಲೆಬರಹವನ್ನು ನೀಡಿ ಒಂದು ಆಲ್ಬಮ್ ತಯಾರಿಸಿರಿ.
10) ಪುಸ್ತಕ ಮತ್ತು ಅಂತರ್ಜಾಲದ ಸಹಾಯದಿಂದ ಸಂಗ್ರಹಿಸಿರುವ ವಿಷಯಗಳನ್ನಾಧರಿಸಿ ಒಂದು ಪ್ರವಾಸ ಕಥನವನ್ನು ಬರೆಯಿರಿ.


Friday 24 April 2015

ಒಂದ್ಹೆಜ್ಜೆ

ತಪ್ಪಿನಿಂದಿಟ್ಟ ಒಂದ್ಹೆಜ್ಜೆ ತರತರದ ತೊಡಕುಗಳ ತರದೆ ಬಿಡದು
ದುಡುಕಿನಿಂದಿಟ್ಟ ಒಂದ್ಹೆಜ್ಜೆ ದುರಿತಗಳೆಡೆಗೆ ಕರೆದೊಯ್ಯದೆ ಬಿಡದು
ದುರಹಂಕಾರದ ಹೆಜ್ಜೆಯದು ದುರ್ಗತಿಗೆ ಕೊಂಡೊಯ್ಯದೆ ಬಿಡದು
ವಿವೇಕದೊಂದ್ಹೆಜ್ಜೆ ಯಶಸಿನೆಡೆಗೆ  ಕೊಂಡೊಯ್ಯುದೆ ಬಿಡದು ನನ ಕಂದ|

ನೀನಿರಲಿಲ್ಲ ನಿನ್ನೆ

ನಾನು ನನ್ನಿಂದಲೇ ನಾನಿಲ್ಲದಿರೆ ಇಲ್ಲೆಂಬ ಬಿಂಕ ನಿನಗೇಕೆ
ನೀನಿರಲಿಲ್ಲ ನಿನ್ನೆ ನಾಳೆ ಇರುವುದೂ ಇಲ್ಲೆಂಬರಿವಿರಲಿ ನಿನಗೆ
ಯಾರಿರಲಿ ಇಲ್ಲದಿರಲಿ ನಿಲ್ಲದೆಯೆ ಮುಂದೆ ಸಾಗುವುದು ಜಗ
ನಿನ್ನ ಪ್ರತಿ ನಡೆ ನುಡಿಯಲ್ಲೂ ಆ ಅರಿವಿರಲಿ ನಿನಗೆ ನನ ಕಂದ||

Thursday 23 April 2015

ದಾರಿ ತೋರುವುದು

ನಿನ್ನೆಯ ಸಂಗತಿಯೇ ಇಂದಿನಾ ಇತಿಹಾಸವೂ
ಇಂದಿನ ವಿದ್ಯಮಾನಗಳೇ  ನಾಳಿನ  ಇತಿಹಾಸ
ವಿವೇಕದಿಂದ ನಡೆದೊಡೆ ಉತ್ತಮವು ಇತಿಹಾಸ 
ದಾರಿ ತೋರುವುದೆಮಗೆ ತಿಹಾಸವೇ - ನನ ಕಂದ||

ಅನ್ನದಾಸೋಹ

ಬಿಸಿ ಊಟಮಾಡಿ ಆಟವಾಡಿ ಪಾಠವ ಮರೆಯದಿರು
ಅನ್ನ ದೈವಸ್ವರೂಪ ಅದನೆಂದೂ ನೀನು ಚೆಲ್ಲದಿರು
ಚೆಲ್ಲಿದನ್ನ ಮೆಣಸು ಕರಿಬೇವನಲ್ಲೇ ಬಿಟ್ಟು ಏಳದಿರು
ಅನ್ನದಾಸೋಹವ ನೀ ಮರೆಯದಿರು-ನನ ಕಂದ

Wednesday 22 April 2015

ಮಾತೃಭಾಷೆ

ಜಗದ ಎಲ್ಲಾ ಭಾಷೆಗಳು ಸಂವಹನ ಮಾಧ್ಯಮವು
ಎಲ್ಲಾ ಭಾಷೆಗಳಿಗಿದೆ ಘನತೆ ಗೌರವ ಪರಂಪರೆಯು
ಹಲವು ಭಾಷೆಗಳ ಕಲಿಯೆ ಹಿಗ್ಗುವುದು ಜ್ಞಾನದಹರವು
ಮಾತೃಭಾಷೆ ಅಮೃತವ ಉಣಿಸುವುದು-ನನ ಕಂದ||

Tuesday 21 April 2015

ಎಚ್ಚರದಿ ಧರಿಸು

ಅನರ್ಘ್ಯ ರತ್ನಗಳ ಹೊಂದಿಹಳು ವಸುಂಧರೆ
ಮಕ್ಕಳನು ಸಿಂಗರಿಸಿ ಸೌಖ್ಯದಲಿ ಪೊರೆಯೆ
ನಿನಗೆ ಒಪ್ಪುವುದನು ಎಚ್ಚರದಿ ಆರಿಸಿ ಧರಿಸೆ
ನಿಶ್ಚಯದಿ ಯಶವು ನಿನಗೆ - ನನಕಂದ ||

ಶಿವ-ಲಿಂಗದ ಮಹತ್ವವನ್ನು ಸಾರುವ ಸರ್ವಜ್ಞನ ವಚನಗಳು

ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು|
ಲಿಂಗದಾ ನೆನಹು ಘನವಾಗೆ ಶಿವಲಿಂಗ|
ಹಿಂಗಿರದು ಅವನ ಸರ್ವಜ್ಞ||

ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ

ಅಡವಿಯಲಿ ತಪದಲ್ಲಿ | ದೃಢತನದೊಳಿದ್ದರೂ|
ನುಡಿಯಲ್ಲಿ ಶಿವನ ಮರೆಯುವಡೆ ಗುಡವಿಲ್ಲ |
ದಡಗೆಯುಂಡಂತೆ ಸರ್ವಜ್ಞ ||

ಆವಾವ ಜೀವವನು | ಹೇವವಿಲ್ಲದೆ ಕೊಂದು |
ಸಾವಾಗ ಶಿವನ ನೆನೆಯುವಡೆ | ಅವ ಬಂದು |
ಕಾವನೇ ಹೇಳು ಸರ್ವಜ್ಞ ||

ಅರ್ಪಿತದ ಭೇದವನು ತಪ್ಪದೆಲೆ ತಿಳಿದಾತ
ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ

ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ

ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ|
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ|
ದೇಗುಲವೆ ಇಲ್ಲ ಸರ್ವಜ್ಞ||

ಆಗುಹೋಗುಗಳ ನೆರೆ | ರಾಗ ಭೋಗಗಳು |
ಸ-ರಾಗವಾಗಿಕ್ಕು ಶಿವನೊಲಿದೊಡಲ್ಲದಿರೆ |
ಹೋಗಿಕ್ಕು ಕಾಣೊ ಸರ್ವಜ್ಞ ||

ಆತುಮದ ಲಿಂಗವನು ಪ್ರೀತಿಯಲಿ ಪೂಜಿಪಗೆ
ಆತಂಕವಿಲ್ಲ ಭಯವಿಲ್ಲ ದಶವಿಧದ
ಪಾತಕಗಳಿಲ್ಲ ಸರ್ವಜ್ಞ||

ಆನೆ ಕನ್ನಡಿಯಲ್ಲಿ | ತಾನಡಗಿ ಇಪ್ಪಂತೆ |
ಜ್ಞಾನವುಳ್ಳವರ ಹೃದಯದಲಿ ಪರಶಿವನು |
ತಾನಡಗಿ ಇಹನು ಸರ್ವಜ್ಞ ||

ಇಂದ್ರನಾನೆಯನೇರಿ ಒಂದನೂ ಕೊಡಲರಿಯ|
ಚಂದ್ರಶೇಖರನು ಮುದಿಯೆತ್ತನೇರಿ|
ಬೇಕೆಂದುದನು ಕೊಡುವ ಸರ್ವಜ್ಞ||

ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ|
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ|
ಬಟ್ಟೆಗೆ ಹೋಹ ಸರ್ವಜ್ಞ||

ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ|
ಕಂಡು ಲಿಂಗವನು ಪೂಜಿಸಿದವಗೆ ಯಮ|
ದಂಡ ಕಾಣಯ್ಯ ಸರ್ವಜ್ಞ||

ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ|
ನಂಬುವನೇ ಹೆಡ್ಡ ಸರ್ವಜ್ಞ||

ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ|
ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ|
ಬಣಗುಗಳ ನೋಡ ಸರ್ವಜ್ಞ||

ಎಂಜಲೂ ಅಶೌಚ ಸಂಜೆಯೆಂದೆನಬೇಡ
ಕುಂಜರವು ವನವ ನೆನವಂತೆ ಬಿಡದೆ
ನಿರಂಜನನ ನೆನೆಯೊ ಸರ್ವಜ್ಞ||

ಎಲ್ಲವರು ಬಯ್ದರೂ | ಕಲ್ಲು ಕೊಂಡೊಗೆದರೂ |
ಅಲ್ಲದಾ ಮಾತು ನುಡಿದರೂ ಶಿವನಲ್ಲಿ |
ತಲ್ಲಣಿಸು ಬೇಡ ಸರ್ವಜ್ಞ ||

ಎಲ್ಲರನು ಬೇಡಿ | ಹಲ್ಲು ಬಾಯಾರುವು ದೆ
ಬಲ್ಲಂತೆ ಶಿವನ ಭಜಿಸಿದೊಡೆ –
ಶಿವ ದಾನಿ ಇಲ್ಲನ್ನಲರೆಯ ಸರ್ವಜ್ಞ

ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು|
ಇಲ್ಲೆನ್ನಲರಿಯನು ಸರ್ವಜ್ಞ||

ಎಲ್ಲರೂ ಶಿವನೆಂದ | ರೆಲ್ಲಿಹುದು ಭಯವಯ್ಯಾ |
ಎಲ್ಲರೂ ಶಿವನ ನೆನೆಯುವಡೆ ಕೈಲಾಸ |
ಎಲ್ಲಿಯೇ ಇಹುದು ಸರ್ವಜ್ಞ ||

ಎಲ್ಲರೂ ಶಿವನೆಂದಿರಿಲ್ಲಿಯೇ ಹಾಳಕ್ಕು |
ಎಲ್ಲರೂ ಶಿವನ ಮರೆದಿಹರೆ ಕೈಲಾಸ |
ದಲ್ಲಿ ಹಾಳಕ್ಕು ಸರ್ವಜ್ಞ ||

ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ ಸರ್ವಜ್ಞ

ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ?
ಲಿಂಗದ ನೆಪ್ಪನರಿದವಗೆ ಸರ್ವಜ್ಞ||

ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು|
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು|
ಸರಿಮ್ಮನೇ ಕೆಡಗು ಸರ್ವಜ್ಞ||

ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿಯದಲೆ ಸರ್ವಜ್ಞ||

ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ|
ಕೊಂಡಾಡಲರಿಯದಧಮಂಗೆ ಲಿಂಗವದು|
ಕೆಂಡದಂತಿಹುದು ಸರ್ವಜ್ಞ||

ಕಂಡವರು ಕೆರಳುವರು | ಹೆಂಡತಿಯು ಕನಲುವಳು |
ಖಂಡಿತದ ಲಕ್ಶ್ಮಿ ತೊಲಗುವಳು ಶಿವನೊಲುಮೆ |
ಕಂಡಕೊಳ್ದಿರಕು ಸರ್ವಜ್ಞ||

ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ

ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ|
ಕಟ್ಟಲೂ ಬೇಡ ಬಿಡಲೂ ಬೇಡ| ಕಣ್ಣು
ಮನ ನಟ್ಟರೆ ಸಾಕು ಸರ್ವಜ್ಞ||

ಕಲ್ಲಿನಲಿ ಮಣ್ಣಿನಲಿ | ಮುಳ್ಳಿನಾ ಮೊನಯಲಿ
ಎಲ್ಲ ನೆನೆದಲ್ಲಿ ಶಿವನಿರ್ಪ ಅವನೀ |
ನಿದ್ದಲ್ಲಿಯೇ ಇರ್ಪ ಸರ್ವಜ್ಞ ||

ಕಳ್ಳಿಯೊಳು ಹಾಲು, ಮುಳುಗಳ್ಳಿಯೊಳು ಹೆಜ್ಜೇನು|
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ|
ಸುಳ್ಳೆನ್ನಬಹುದೆ? ಸರ್ವಜ್ಞ||

ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ|
ಭವ ಪುಶ್ಪದಿಂ ಶಿವಪೂಜೆ ಮಾಡುವರ|
ದೇವರೆಂದೆಂಬೆ ಸರ್ವಜ್ಞ||

ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ

ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ

ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ||.

 ಕ್ಷೀರದಲಿ ಘ್ರತ, ವಿಮಲ | ನೀರಿನೊಳು ಶಿಖಿಯಿರ್ದು
ಅರಿಗೂ ತೋರದಿರದಂತೆ ಎನ್ನೊಳಗೆ |
ಸೇರಿಹನು ಶಿವನು ಸರ್ವಜ್ಞ ||

ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ ಸರ್ವಜ್ಞ

ಜಂಗಮಕೆ ವಂಚಿಸನು | ಹಿಂಗಿರಲು ಲಿಂಗವನು |
ಭಕ್ತರೊಳು ಪರಸತಿಗೆ ಒಲೆಯದಗೆ |
ಭಂಗವೇ ಇಲ್ಲ ಸರ್ವಜ್ಞ ||

ಜಂಗಮನು ಭಕ್ತತಾ | ಲಿಂಗದಂತಿರಬೇಕು |
ಭಂಸುತ ಪರರ ನಳಿವ ಜಂಗಮನೊಂದು |
ಮಂಗನೆಂದರಿಗು ಸರ್ವಜ್ಞ ||

ಜ್ವರ ಬನ್ದ ಮನುಜಂಗೆ | ನೊರೆವಾಲು ವಿಷಕ್ಕು |
ನರಕದಲಿ ಬೀಳ್ವ ಅಧಮಂಗ ಶಿವಭಕ್ತಿ |
ಹಿರಿದು ವಿಷಪಕ್ಕು ಸರ್ವಜ್ಞ ||

ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರಿವಂತೆ - ಶಿವನ ಗುರು
ನಾಥನಿಂದರಿಗು ಸರ್ವಜ್ಞ

ತತ್ವದಾ ಜ್ಞಾನತಾ | ನುತ್ತಮವು ಎನಬೇಕು |
ಮತ್ತೆ ಶಿವಧ್ಯಾನ ಬೆರೆದರದು | ಶಿವಗಿರಿಂ |
ದತ್ತಲೆನಬೇಕು ಸರ್ವಜ್ಞ ||

ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ|
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ|
ಅನ್ಯಾಯ ನೋಡು ಸರ್ವಜ್ಞ||

ತೆರೆದ ಹಸ್ತವು ಲೇಸು | ಹರಿಯ ಪೂಜ್ಯವು ಲೇಸು |
ಅರ ಸೊಲಿಮೇ ಲೇಸು ಸರ್ವಕ್ಕೂ ಶಿವನಿಗೆ |
ಶರಣನೇ ಲೇಸು ಸರ್ವಜ್ಞ ||

ದೇಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ||

ದೇಹ ದೇವಾಲಯವು | ಜೀವವೇ ಶಿವಲಿಂಗ |
ಬಾಹ್ಯಾಂಗಳಳಿದು ಭಜಿಪಂಗೆ ಮುಕ್ತಿಸಂ
ದೇಹವಿಲ್ಲೆಂದು ಸರ್ವಜ್ಞ ||

ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
ಕಾಣಯ್ಯ ಸರ್ವಜ್ಞ||

ಧಾರುಣಿ ನಡುಗುವುದು | ಮೇರುವಲ್ಲಾಡುವುದು
ವಾರಿಧಿ ಬತ್ತಿ ಬರೆವುದು – ಶಿವಭಕ್ತಿ
ಯೋರೆಯಾದಂದು ಸರ್ವಜ್ಞ||

ನಂದಿಯನು ಏರಿದನ ಚಂದಿರನ ಮುಡಿದವನ
ಕಂದನಂ ಬೇಡಿ ನೆನೆವುತ್ತ ಮುಂದೆ
ಹೇಳುವೆನು ಸರ್ವಜ್ಞ||

ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ – ಅದನರಿ
ಹರನನೆ ಬೇಡು ಸರ್ವಜ್ಞ

ನಾಟ ರಾಗವು ಲೇಸು | ತೋಟ ಮಲ್ಲಿಗೆ ಲೇಸು |
ಕೂಟವದು ಲೇಸು ಹಿರಿಯರೊಳು ಶಿವನ ಅರಿ |
ದಾಟವೇ ಲೇಸು ಸರ್ವಜ್ಞ ||

ನಾನು-ನೀನುಗಳಿದು, ತಾನು ಲಿಂಗದಿ ಉಳಿದು|
ನಾನಾ ಭ್ರಮೆಗಳ ಅತಿಗಳೆದು ನಿಂದಾತ|
ತಾನೈಕ್ಯ ನೋಡು ಸರ್ವಜ್ಞ||

ನಿತ್ಯವೂ ಶಿವನ ತಾ | ಹೊತ್ತಾರೆ ನೆನೆದಿಹರೆ |
ಉತ್ತಮದ ಗತಿಯು ಆದಿಲ್ಲದಿಹಪರದಿ |
ಮೃತ್ಯುಕಾಣಯ್ಯ ಸರ್ವಜ್ಞ ||

ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ|
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ|
ಬಿಟ್ಟು ಬಯಲಪ್ಪ ಸರ್ವಜ್ಞ||

ನಿಶ್ಚಯವ ಬಿಡದೊಬ್ಬ|ರಿಚ್ಛೆಯಲಿ ನುಡಿಯದಿರು |
ನೆಚ್ಚಿ ಒಂದೊರೊಳಗಿರದಿರು ಶಿವ ನಿನ್ನ
ಇಚ್ಛೆಯೊಳಗಿಹನು ಸರ್ವಜ್ಞ ||

ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
ಘಾಟವದು ನೋಡ ಸರ್ವಜ್ಞ

ಪವನಪರಿಯರಿದಂಗೆ | ಶಿವನ ಸಾಧಿಸಲಕ್ಕು |
ಭವಮಾಲೆ ಹರಿದು ಸುಖಿಸುವೊಡೆ ಅವ
ಸದಾಶಿವನು ತಾನಕ್ಕು ಸರ್ವಜ್ಞ ||

ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ – ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ

ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ ||

ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ||

ಮನೆಯೇನು ವನವೇನು | ನೆನಹು ಇದ್ದರೆ ಸಾಕು |
ಮನಮುಟ್ಟಿ ಶಿವನ ನೆನೆಯದವನು ಬೆಟ್ಟದಾ |
ಕೊನೆಯಿಲ್ಲಿದ್ದೇನು ಸರ್ವಜ್ಞ ||

ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ

ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘನಕೆ ಘನವಕ್ಕು ಸರ್ವಜ್ಞ.

ಮೂರುಕಣ್ಣೀಶ್ವರನ | ತೋರಿಕೊಡಬಲ್ಲ
ಗುರು ಬೇರರಿವುದೊಂದು ತೆರನಿಲ್ಲ – ಗುರು
ಕರಣ ತೋರಿಸುಗು ಶಿವನ ಸರ್ವಜ್ಞ

ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ||

ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು – ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ||

ಯಾತರ ಹೂವಾದರು | ನಾತರೆ ಸಾಲದೆ
ಜಾತಿ ವಿಜಾತಿಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ||

ರಾತ್ರಿಯೊಳು ಶಿವರಾತ್ರಿ | ಜಾತ್ರೆಯೊಳು ಶ್ರೀಶೈಲ |
ಕ್ಷೇತ್ರದೊಳಗಧಿಕ ಶ್ರೀಕಾಶಿ ಶಿವತತ್ವ |
ಸ್ತೋತ್ರದೊಳಗಧಿಕ ಸರ್ವಜ್ಞ||

ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ|
ಲಿಂಗದೊಳು ಜಗವು ಅಡಗಿಹುದು ಲಿಂಗವನು|
ಹಿಂಗಿದವರುಂಟೆ? ಸರ್ವಜ್ಞ||
.
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ ಜಗವು ಅಡಗಿಹುದು – ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ||

ಲಿಂಗದಾ ಗುಡಿ ಲೇಸು | ಗಂಗೆಯಾ ತಡಿ ಲೇಸು |
ಲಿಂಗ ಸಂಗಿಗಳ ನುಡಿ ಲೇಸು ಭಕ್ತರಾ |
ಸಂಗವೇ ಲೇಸು ಸರ್ವಜ್ಞ ||

ಲಿಂಗದಿಂ ಘನವಿಲ್ಲ | ಗಂಗೆಯಿಂ ಶುಚಿಯಿಲ್ಲ |
ಕಂಗಳಿಂದಧಿಕ ಹಿತರಿಲ್ಲ ಭಕ್ತ ತಾ |
ಜಂಗಮನಿಂದಿಲ್ಲ ಸರ್ವಜ್ಞ ||

ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು|
ಲಿಂಗವುಂಬುವದೆ? ಇದನರಿದು ಕಪಿಯೆ ನೀ|
ಗಮಕೆ ನೀಡು ಸರ್ವಜ್ಞ||

ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ|
ಲಿಂಗದಲಿ ನೋಟ, ನುಡಿಕೂಟವಾದವನು|
ಲಿಂಗವೇ ಅಕ್ಕು ಸರ್ವಜ್ಞ||

ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು|
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ||

ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ|
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ|
ಹಿಂಗದಿರುತಿಹುದು ಸರ್ವಜ್ಞ||

ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಆ ಅಂಗ
ಲಿಂಗವಾಗಿಕ್ಕು ಸರ್ವಜ್ಞ||

ಲಿಂಗಯಲ್ಲಿ | ಸಂಗಿಸಿ ಚರಿಸಲು
ಜಂಘೆಯಲಿ ನಡವ ಸರ್ವ ಜೀವಂಗಳು
ಲಿಂಗದಿಂ ಜನನ ಸರ್ವಜ್ಞ||

ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ||

ಲಿಂಗವನು ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ ಸರ್ವಜ್ಞ||

ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ |
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ|
ವವಗೆ ಕಾಣಯ್ಯ ಸರ್ವಜ್ಞ||

ಶಿವಭಕ್ತಿಯುಳ್ಳಾತ | ಭವಮುಕ್ತನಾದಾತ |
ಶಿವಭಕ್ತಿಯಿರದ ಭಕ್ತಿಂಗೆ ಎಂದೆಂದು |
ಭವಮುಕ್ತಿಯಿಲ್ಲ ಸರ್ವಜ್ಞ ||

ಸಂಗದಿಂ ಕೆಳೆಯಿಲ್ಲಿ | ಭಂಗದಿಂ ವ್ಯಥೆಯಿಲ್ಲ |
ಗಂಗೆಯಿಂದಧಿಕ ನದಿಯಲ್ಲಿ ಪರದೈವ |
ಲಿಂಗದಿಂದಿಲ್ಲ ಸರ್ವಜ್ಞ ||

ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ||

ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ||

ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ||

ಸೋಕಿಡಾ ಸುಖಂಗಳ ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ
ಲೋಕಕ್ಕೆ ಶರಣ ಸರ್ವಜ್ಞ||

ಹರನಾವ ಕರೆಯದಲೆ | ಪರಿಶಿವನ ನೆನೆಯದಲೆ |
ಸ್ಮರಹರನ ಕರುಣವಿಲ್ಲದೆಯೆ ಜಗದೊಳಗೆ
ಇರುವದೇ ಕಷ್ಟ ಸರ್ವಜ್ಞ ||

ಹರಿ ಬೊಮ್ಮನೆಂಬವರು, ಹರನಿಂದಲಾದವರು |
ಅರಸಿಗೆ ಆಳು ಸರಿಯಹನೆ ಶಿವನಿಂದ| 
ಮೆರೆವರಿನ್ನಾರು ಸರ್ವಜ್ಞ ||

ಹಲವನೋದಿದಡೇನು? ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ|
ಒಲುಮೆ ಇಲ್ಲದಲೆ ಸರ್ವಜ್ಞ||