Wednesday 23 January 2019

ಭಾರದ ಬದುಕು

ಬಾರದಿರುವುದ ಬಯಸಿ ಬೇಕೆಂದನರಸಿ 
ಭರವಸೆಯ ಬೆಳಕ ಅನುದಿನವು ತಾ ಬಯಸಿ
ಬರಲೆಂದು ಹಂಬಲಿಸುತ ಹಪಹಪಿಸಿ ಶಪಿಸಿ
ಭಾರದ ಬದುಕಿಗೆಡೆಕೊಡದಿರು-ನನಕಂದ||                                        

Tuesday 15 January 2019

ಋಣಾನುಬಂಧರೂಪ

ಎಲ್ಲೋ ಹುಟ್ಟಿ ಎಲ್ಲೋ ಹೇಗೋ ಬೆಳೆದಿಹೆವು
ಎಲ್ಲೋ ಯಾರೊಡನೆಯೋ ಸೇರುವೆವು
ಎಲ್ಲೋ ಕಲೆತು ಕೆಲಸಗಳ ಮಾಡುತಿಹೆವು
ಎಲ್ಲಾ ಋಣಾನುಬಂಧರೂಪಗಳು ನನಕಂದ||

ಒಂದು ಪುಟ ಆರು ಅಂಕ

ಕವಿಪರಿಚಯ ಆರು ಅಂಕಗಳನ್ನು ಸುಲಭವಾಗಿ ಪಡೆಯಲು ಸಿದ್ಧರಾಗಿ.
1. ಸಾರಾ ಅಬೂಬಕ್ಕರ್ : ಶ್ರೀಮತಿ ಸಾರಾ ಅಬೂಬಕ್ಕರ್ ಅವರು ಕ್ರಿ. ಶ. 1936 ರಲ್ಲಿ ಕಾಸರಗೋಡಿನಲ್ಲಿ ಜನಿಸಿದರು. ಇವರು ಚಪ್ಪಲಿಗಳು, ಖೆಡ್ಡಾ, ಪಯಣ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಚಂದ್ರಗಿರಿಯ ತೀರದಲ್ಲಿ, ಕದನವಿರಾಮ, ವಜ್ರಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ನೃಪತುಂಗ ಪ್ರಶಸಿಯು ಇವರಿಗೆ ಲಭಿಸಿದೆ.
2. ಪು. ತಿ. ನರಸಿಂಹಾಚಾರ್ : ಶ್ರೀ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರು ಕ್ರಿ. ಶ. 1905 ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿ ವಿಜಯ, ಹಂಸ ದಮಯಂತಿ, ‘ಶ್ರೀ ಹರಿಚರಿತೆ’ ಮೊದಲಾದ ಕೃತಿಗಳನ್ನೂ ರಚಿಸಿದ್ದಾರೆ. ಶ್ರೀಯುತರಿಗೆ ‘ಪಂಪ ಪ್ರಶಸ್ತಿ’ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
3. ವಿ. ಕೃ. ಗೋಕಾಕ್ : ‘ವಿನಾಯಕ’ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರು ಕ್ರಿ. ಶ. 1909 ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಇವರು ಸಮುದ್ರದಾಚೆಯಿಂದ, ಜೀವನಪಾಠಗಳು, ಭಾರತ ಸಿಂಧು ರಶ್ಮಿ, ಸಮುದ್ರಗೀತೆಗಳು, ಪಯಣ, ಉಗಮ, ಇಜ್ಜೋಡು, ದ್ಯಾವಾಪೃಥಿವೀ, ಸಮರಸವೇ ಜೀವನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
4. ಡಿ. ಎಸ್. ಜಯಪ್ಪಗೌಡ : ಶ್ರೀ ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಅವರು ಕ್ರಿ. ಶ. 1947ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯಲ್ಲಿ ಜನಿಸಿದರು. ಇವರು ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು, ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸಿಯು ಲಭಿಸಿದೆ.
5. ದೇವನೂರು ಮಹಾದೇವ : ಶ್ರೀ ದೇವನೂರು ಮಹಾದೇವ ಅವರು ಕ್ರಿ. ಶ. 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದ ಅಕ್ಷರ. ಕುಸುಮ ಬಾಲೆ, ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೋ, ನಂಬಿಕೆಯ ನಂಟ, ನೋಡು ಮತ್ತು ಕೂಡು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸಿಯು ಲಭಿಸಿದೆ.
6. ಎ. ಎನ್. ಮೂರ್ತಿರಾವ್ : ಶ್ರೀ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಅವರು ಕ್ರಿ. ಶ. 1900 ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ಇವರು ಸಮಗ್ರ ಲಲಿತಪ್ರಬಂಧಗಳು, ದೇವರು, ಹಗಲುಗನಸು, ಅಲೆಯುವ ಮನ, ಅಪರವಯಸ್ಕನ ಅಮೆರಿಕಾ ಯಾತ್ರೆ, ಚಂಡಮಾರುತ, ಮಿನುಗು ಮಿಂಚು, ಪೂರ್ವಸೂರಿಗಳೊಡನೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಪ್ರಶಸ್ತಿಗಳು ಲಭಿಸಿವೆ.
7. ದುರ್ಗಸಿಂಹ : ಶ್ರೀ ದುರ್ಗಸಿಂಹನು ಕ್ರಿ. ಶ. ಸುಮಾರು 1031 ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು. ಇವನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. ಮತಧರ್ಮ ಸಮನ್ವಯನಾದ ಈತ ಸಯ್ಯಡಿಯಲ್ಲಿ ಹಲವಾರು ಹರಿಹರ ಭವನಗಳನ್ನು ನಿರ್ಮಿಸಿದ್ದಾನೆ. ಈತನು ‘ಕರ್ಣಾಟಕ ಪಂಚತಂತ್ರ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ.
8. ಶಿವಕೋಟ್ಯಾಚಾರ್ಯ : ಶ್ರೀ ಶಿವಕೋಟ್ಯಾಚಾರ್ಯ ಅವರು ಕ್ರಿ. ಶ. ಸುಮಾರು 10 ನೇ ಶತಮಾನದ ಆದಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ಹಾಗೂ ಹೂವಿನ ಹಡಗಲಿ ತಾಲ್ಲೋಕುಗಳನ್ನು ಒಳಗೊಂಡ ಕೋಗಳಿನಾಡು ಎಂಬಲ್ಲಿ ಜೀವಿಸಿದ್ದರು. ಇವರು ಹಳಗನ್ನಡ ಕಾಲದ ಅಪೂರ್ವ ಹಾಗೂ ಉಪಲಬ್ಧ ಮೊದಲ ಗದ್ಯಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ವಡ್ಡಾರಾಧನೆ’ ಎಂಬ ಗದ್ಯಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ ಜೈನಧರ್ಮಕ್ಕೆ ಸೇರಿದ 19 ಕಥೆಗಳಿದ್ದು, ಅನೇಕ ಉಪಕಥೆಗಳಿವೆ.
9. ಜಿ. ಎಸ್. ಶಿವರುದ್ರಪ್ಪ : ಸಮನ್ವಯ ಕವಿ ಎಂದು ಪ್ರಸಿದ್ಧರಾದ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ಕ್ರಿ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಎದೆತುಂಬಿ ಹಾಡಿದೆನು, ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವ ಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ರಾಷ್ಟ್ರಕವಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಿ. ಲಿಟ್ ಪದವಿಗಳು ಲಭಿಸಿವೆ.
10. ದ. ರಾ. ಬೇಂದ್ರೆ : ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ. 1896 ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರು ಗರಿ, ನಾಕುತಂತಿ, ನಾದಲೀಲೆ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ಮೇಘದೂತ, ಗಂಗಾವತರಣ, ಅರಳು ಮರಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
11. ಕುಮಾರವ್ಯಾಸ: ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪ ಅವರು ಕ್ರಿ. ಶ. ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು. ಇವರು ವ್ಯಾಸರ ಸಂಸ್ಕøತ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿ ಕುಮಾರವ್ಯಾಸ ಎಂಬ ಅಭಿದಾನಕ್ಕೆ ಪಾತ್ರರಾದರು. ಇವರು ‘ಕರ್ನಾಟ ಭಾರತ ಕಥಾ ಮಂಜರಿ’ (ಕುಮಾರವ್ಯಾಸ ಭಾರತ, ಗದುಗಿನ ಭಾರತ) ಮತ್ತು ‘ಐರಾವತ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದು ಲಭಿಸಿದೆ.
12. ಕೆ. ವಿ. ಪುಟ್ಟಪ್ಪ : ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕ್ರಿ. ಶ. 1904 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೋಕಿನ ಕುಪ್ಪಳಿ ಎಂಬಲ್ಲಿ ಜನಿಸಿದರು. ಇವರು ಮಲೆನಾಡಿನ ಚಿತ್ರಗಳು, ಕೊಳಲು, ಪಾಂಚಜನ್ಯ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಬೊಮ್ಮನ ಹಳ್ಳಿಯ ಕಿಂದರಿಜೋಗಿ, ಜಲಗಾರ, ನೆನಪಿನ ದೋಣಿಯಲ್ಲಿ, ಶ್ರೀರಾಮಾಯಣ ದರ್ಶನಂ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಭಾರತೀಯ ಜ್ಞಾನಪೀಠಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳು ಲಭಿಸಿವೆ.
13. ಕವಿ ರನ್ನ : ಕನ್ನಡ ‘ರತ್ನತ್ರಯ’ರಲ್ಲಿ ಒಬ್ಬನಾದ ಮಹಾಕವಿ ರನ್ನನು ಕ್ರಿ. ಶ. ಸುಮಾರು 949 ರಲ್ಲಿ (ಹತ್ತನೆಯ ಶತಮಾನದಲ್ಲಿ) ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಈಗಿನ ಮುಧೋಳ) ಎಂಬ ಗ್ರಾಮದಲ್ಲಿ ಜನಿಸಿದನು. ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು. ಇವನು ‘ಸಾಹಸ ಭೀಮ ವಿಜಯಂ’, ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ಪರಶುರಾಮ ಚರಿತಂ’, ‘ಚಕ್ರೇಶ್ವರ ಚರಿತಂ’ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ‘ರನ್ನ ಕಂದ’ ಎಂಬ ನಿಘಂಟನ್ನು ರಚಿಸಿರುವುದಾಗಿ ತಿಳಿದು ಬರುತ್ತದೆ. ಇವನಿಗೆ ತೈಲಪನು ‘ಕವಿ ಚಕ್ರವರ್ತಿ’ ಎಂಬ ಬಿರುದನ್ನು ನೀಡಿ ಗೌರವಿಸಿದನು.
14. ಲಕ್ಷ್ಮೀಶ : ಕವಿ ಲಕ್ಷ್ಮೀಶನು ಕ್ರಿ. ಶ. ಸುಮಾರು 1550 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಇವರು ‘ಜೈಮಿನಿ ಭಾರತ’ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ. ಈತನಿಗೆ ಉಪಮಾಲೋಲ, ಕರ್ಣಾಟ ಕವಿಚೂತವನ ಚೈತ್ರ ಎಂಬ ಬಿರುದುಗಳು ಲಭಿಸಿವೆ.
15. ಪಂಪ : ಕನ್ನಡದ ಆದಿಮಹಾಕವಿ ಪಂಪನು ಕ್ರಿ. ಶ. ಸುಮಾರು 941 ರಲ್ಲಿ ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ‘ವಿಕ್ರಮಾರ್ಜುನ ವಿಜಯ ಮತ್ತು ಆದಿ ಪುರಾಣ’ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಈತನಿಗೆ ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾ ಗುಣಾರ್ಣವ ಎಂಬ ಬಿರುದುಗಳು ಇದ್ದವು. ಕನ್ನಡದ ರತ್ನತ್ರಯರಲಿ ಒಬ್ಬನಾದ ಕಲಿಯೂ ಕವಿಯೂ ಆಗಿದ್ದ ಪಂಪನು ಚಾಲುಕ್ಯ ದೊರೆ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದನು.

Monday 14 January 2019

ಒಂದು ಪುಟ ನಾಲ್ಕು ಅಂಕ


ಪದ್ಯ/ಪೂರಕ ಅಧ್ಯಯನ ಭಾಗದಿಂದ ನಾಲ್ಕು ಅಂಕಗಳನ್ನು ಸುಲಭವಾಗಿ ಪಡೆಯಲು ಸಿದ್ಧರಾಗಿ
1.   ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲ್ಲಿ ಮನ್ನಡೆಸಬೇಕು.
2.  ನದೀಜಲಗಳು ಏನಾಗಿವೆ?
ಕಲುಷಿತವಾಗಿವೆ.
3.  ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?
ಕಲುಷಿತವಾಗಿರುವ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು.
4.  ಕಾಡುಮೇಡುಗಳ ಸ್ಥಿತಿ ಹೇಗಿದೆ?
ಬರಡಾಗಿವೆ.
5.  ಯಾವ ಎಚ್ಚರದೊಳು ಬದುಕಬೇಕಿದೆ?
ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು ಬದುಕಬೇಕಿದೆ.
6.  ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಹಕ್ಕಿಯು ಎವೆ ತೆರೆದಿಕ್ಕುವ ಹೊತ್ತಿನೊಳಗೆ ಅಂದರೆ ಕಣ್ಣು ರೆಪ್ಪೆ ಮಿಟುಕಿಸುವಷ್ಟು ಸಮಯದಲ್ಲಿ (ನಿಮಿಷದಲ್ಲಿ) ಗಾವುದ ಗಾವುದ ಗಾವುದ ಮುಂದೆ ಹಾರುತ್ತಿದೆ.
7.  ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
ಬಿಳಿಯ ಹೊಳೆಯುವ ಬಣ್ಣಗಳಿವೆ.
8.  ಹಕ್ಕಿಯು ಕಣ್ಣುಗಳು ಯಾವುವು?
ಸೂರ್ಯ ಚಂದ್ರರು
9.  ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ.
10. ಹಕ್ಕಿ ಯಾರನ್ನು ಹರಸಿದೆ?
ಹೊಸಗಾಲದ ಹಸುಮಕ್ಕಳನ್ನು ಹರಸಿದೆ.
11.  ಹಕ್ಕಿಯು ಯಾವುದರ ಸಂಕೇತವಾಗಿದೆ?
ಕಾಲಪಕ್ಷಿಯ ಸಂಕೇತವಾಗಿದೆ.
12. ಹಕ್ಕಿಯ ಚುಂಚಗಳು ಎಲ್ಲಿಯವರೆಗೂ ಚಾಚಿವೆ?--ದಿಙ್ಮಂಡಲಗಳ ಅಂಚಿನ ಆಚೆಯವರೆಗೂ ಚಾಚಿವೆ.
13. ಹಲಗಲಿಯ ಗುರುತು ಉಳಿಯದಂತಾದುದು ಏಕೆ?
ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ, ಬೆಂಕಿ ಹಚ್ಚಿದ್ದರಿಂದ ಹಲಗಲಿಯ ಗುರುತು ಉಳಿಯದಂತಾಯಿತು.
14. ಹಲಗಲಿ ಗ್ರಾಮವು ಎಲ್ಲಿದೆ?
ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಬಾಗಲಕೋಟೆ ಜಿಲ್ಲೆಗೆ ಸೇರಿದೆ.
15. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಹಲಗಲಿಯ ಭಂಟರ ಹತಾರ ಕದನ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ.
16. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ ಈ ನಾಲ್ವರು ಹಲಗಲಿಯ ಪ್ರಮುಖರು.
17. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
ಕುಂಪಣಿ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಆದೇಶವನ್ನು ಹೊರಡಿಸಿತು.
18. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಕೂರಿಸಿಕೊಳ್ಳುವಾಗ ಏನೆಂದು ಕರೆದನು?
ಕರ್ಣ ನಿಮ್ಮಲ್ಲಿ, ಯಾದವರು ಕೌರವರಲ್ಲಿ ಭೇದವಿಲ್ಲ. ಹೇಳುವುದಾದರೆ ವಂಶದಲ್ಲಿ ಮೊದಲೆರಡಿಲ್ಲ ನಿನ್ನಾಣೆ. ರಾಜ ನೀನು, ಮನದಲ್ಲಿ ನಡೆದುದರ ಅರಿವಿಲ್ಲ‛ ಎಂದು ಹೇಳುತ್ತಾ ಕರೆದನು.
19. ಶ್ರೀಕೃಷ್ಣನು ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
ಶ್ರೀಕೃಷ್ಣನು ಕರ್ಣನ ಸಂಗಡ ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು, ತೊಡೆ ತಾಗುವಂತೆ ರಥದ ಪೀಠದಲ್ಲಿ ಕೂರಿಸಿಕೊಂಡನು.
20. ಅಶ್ವಿನೀದೇವತೆಗಳ ವರಬಲದಿಂದ ಜನಿಸಿದವರು ಯಾರು?
ನಕುಲ ಮತ್ತು ಸಹದೇವ.
21. ಆಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತಿದೆ?
ಗಿಳಿ ಹಸುರಿನಂತಿದೆ.
22. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
ಬನದ ಅಂಚಿನಲ್ಲಿದೆ.
23. ‘ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
ಶ್ವಯುಜ ಮಾಸದ ನವರಾತ್ರಿಯ ಪ್ರಕೃತಿಯಲ್ಲಿ ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು ಪ್ರೇರಿತವಾದ ಕವನವಾಗಿದೆ.
24. ಕವಿಗೆ ಹುಲ್ಲಿನ ಹಾಸು ಯಾವ ರೀತಿ ಕಂಡಿದೆ?
ಮಕಮಲ್ಲಿನ ಹೊಸಪಚ್ಚೆಯ ಜಮಖಾನದಂತೆ ಕಂಡಿದೆ.
25. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನನು ಯಾರಿಗೆ ಹೇಳುವನು?
ಭೀಷ್ಮನಿಗೆ ಹೇಳುವನು.
26. ದಿನಪಸುತ ಎಂದರೆ ಯಾರು?
ಕರ್ಣ.
27. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ?
ಅರ್ಜುನ ಮತ್ತು ಭೀಮರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ ದುರ್ಯೋಧನನು ಹೇಳುತ್ತಾನೆ.
28. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
ದುರ್ಯೋಧನ.
29. ಅಂತಕಾತ್ಮಜ ಎಂದರೆ ಯಾರು?
ಧರ್ಮರಾಯ.
30. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಲವ.
31. ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು?
ತನ್ನ ಉತ್ತರೀಯದಿಂದ ಕಟ್ಟಿದನು.
32. ಮುನಿಸುತರು ಹೆದರಲು ಕಾರಣವೇನು?
ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದುದು.
33. ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
ದ್ರವ್ಯಾರ್ಥಿಯಾಗಿ ಬಂದನು.
34. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು.
35. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
ವಾರುಣ, ವಾಯವ್ಯ, ಆಗ್ನೇ, ಐಂದ್ರಾ ಮೊದಲಾವು.
36. ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು?
ದ್ರೋಣನು ಯಾರೆಂದು ನಾನು ತಿಳಿಯೆನು, ಅವನನ್ನು ಹೊರಗೆ ತಳ್ಳು‛ ಎಂದು ಹೇಳಿ ಕಳುಹಿಸಿದನು.
37. ಪುಟ್ಟಪೋರಿ ಏನು ಮಾಡುತ್ತಿದ್ದಾಳೆ?
ಮುಸುರೆ ತಿಕ್ಕುತ್ತಿದ್ದಾಳೆ.
38. ಅಮ್ಮ ಎಲ್ಲಿ ಮಲಗಿದ್ದಾಳೆ?
ಗುಡಿಸಲಿನಲ್ಲಿ ಮಲಗಿದ್ದಾಳೆ.
39. ಯಾರಿಗೆ ವಸಂತ ಮುಖ ತೋರಲಿಲ್ಲ?
ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯ ಮಾರನಿಗೆ ವಸಂತ ಮುಖ ತೋರಲಿಲ್ಲ.
40. ಪುಟ್ಟಿಯ ಪ್ರಶ್ನೆಗಳೇನು?
ಗುಡಿಸಲೊಳಗೆ ಬರಲು ವಸಂತ ಹೆದರಿದನೆ? ಹರಿದ ಚಿಂದಿ ಬಟ್ಟೆಗಳನ್ನು ಕಂಡು ಅವನು ಮರುಗಿದನೆ? ಎಂಬುದು ಪುಟ್ಟಿಯ ಪ್ರಶ್ನೆಗಳು
*******

Sunday 13 January 2019

ಕಳೆದು ಕೊಳ್ಳದಿರು


ಮರೆಮಾಚಿ ನಿಜರೂಪವ ಸುರದ್ರೂಪವಾ ತಳೆದು ಸವಿಯಾಡುತ
ಮರುಳುಗೊಳಿಸುತೆಲ್ಲವನು ಅಪಹರಿಸಲೋಸುಗ ಹವಣಿಸುತಿಹರು
ಮರುಳಾಗಿ ಮನಸೋತು ನೀ ಮಾಯಾಬಲೆಗೆ ಸಿಲುಕಿ ನಲುಗದಿರು
ಮರುಳುತನದಿ ನಿನ್ನೆಲ್ಲವನು ನೀನೇ ಕಳೆದು ಕೊಳ್ಳದಿರು-ನನಕಂದ||

ಒಂದು ಪುಟ ಐದು ಅಂಕ


ರಾಹಿಲನು ಯಾರು?--ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದ ಒಬ್ಬ ಡಾಕ್ಟರ್.

2.  ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದುದು ಏನು?--ಔಷದ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ

3.  ಗಡಿ ಪ್ರದೇಶದಲ್ಲಿ ಬ್ಲಾಕ್‍ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?--ರಾತ್ರಿ ವೇಳೆ ಶತ್ರು ಸೈನಿಕರು ವೈಮಾನಿಕ ದಾಳಿ ಮಾಡಲು ಅವಕಾಶವಾಗದಂತೆ ರಕ್ಷಿಸಿಕೊಳ್ಳಲು ಪಾಲಿಸಲಾಗುತ್ತದೆ.

4.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು?--ನಾನು ಯುದ್ಧಮಾಡುವ ಮೂರ್ಖರ ಕಡೆಯವನಲ್ಲ ಸಂಕಟಕ್ಕೆ ಈಡಾದ ಮನುಷ್ಯರ ಕಡೆಯುವನು.

5.  ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?--ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ದ

6.  ಶ್ರೀರಾಮನ ತಂದೆಯ ಹೆಸರು ಏನು?--ದಶರಥ.

7.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? -- ಪರಿಮಳದ ಹೂ, ಮಧುಪರ್ಕ, ರುಚಿಕರ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು.

8.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

9.  ರಾಮಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?--ಧನು (ಕಬಂಧ).

10. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?--ಶಬರಿ.

11.  ಶಬರಿಗೀತನಾಟಕದ ಕರ್ತೃಯಾರು?--ಪು.ತಿ. ನರಸಿಂಹಾಚಾರ್ಯ

12. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ಏನು?-- ವೂಲವರ್ಥ  

13. ನೆಲ್ಸನ್‍ರವರ ಮೂರ್ತಿಯಿರುವ ಸ್ಥಳದ ಹೆಸರು ಏನು?-- ಟ್ರಾಫಲ್ಗಾರ್ ಸ್ಕ್ವೇರ್ (Trafalgar Square)

14. ‘ವೆಸ್ಟ್ ಮಿನ್‍ಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ?— ದಿವಂಗತರಾದ ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ.

15. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?— ‘ಚೇರಿಂಗ್ ಕ್ರಾಸ್’

16. ಟ್ರಾಮ್ ಬಸ್ಸುಗಳು ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆ ಏನು?--ಭೂಗರ್ಭದಲ್ಲಿ ಗಾಡಿಗಳನ್ನು ಓಡಾಡುವಂತೆ ವ್ಯವಸ್ಥೆ ಮಾಡಲಾಗಿದೆ. 

17. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು? -- ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ದಿಗಾಗಿ ಕಂಕಣಬದ್ಧರಾದರು.

18. ಏಷ್ಯ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?—ಯಾವುದೆಂದರೆ ಶಿವನ ಸಮುದ್ರದ ಕಾವೇರಿ ನದಿಯ ಬಳಿಯಲ್ಲಿ ಸ್ಥಾಪಿಸಿದ ಜಲವಿದ್ಯುತ್ ಯೋಜನೆಯಾಗಿದೆ.

19. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?-- ಸರ್ ಪದವಿ ಪದವಿಯನ್ನು ನೀಡಿ ಗೌರವಿಸಿತು.

20. ವೆಂಕಟಲಕ್ಷ್ಮಮ್ಮ ಅವರು ತಮ್ಮ ಕುಟುಂಬವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ?--ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲದಿಂದ

21. ವಿಶ್ವೇಶ್ವರಯ್ಯಯವರ ಹುಟ್ಟುಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?--ಎಂಜಿನಿಯರ್ಸ್ ದಿನಾಚರಣೆಯನ್ನು ಆಚರಿಸಲಾಗುತ್ತದೆ.

22. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು? --ನಾಲ್ವಡಿ ಕೃಷ್ಣರಾಜ ಒಡೆಯರು

23.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?--  ಕ್ರಿ.ಶ 1895ರಲ್ಲಿ ಪಟ್ಟಾಭಿಷಿಕ್ತರಾದರು

24. ವಿಶ್ವೇಶ್ವರಯ್ಯನವರ ಪೂರ್ವಜರ ಸ್ಥಳ ಯಾವುದು?--(ಆಂಧ್ರದ ಕರ್ನೂಲು ಜಿಲ್ಲೆಯ ಗಿಡ್ಡಲೂರು ತಾಲೂಕಿನ) ‘ಮೋಕ್ಷಗುಂಡಂ’ ಅಗ್ರಹಾರ

25. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವವು?--ಎಂದರೆ ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ.

26. ಮನೆ ಮಂಚಮ್ಮ ಯಾರು?--ಕತೆಯಲ್ಲಿನ ಗ್ರಾಮದೇವತೆ.

27. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು?--ಸಿದ್ದಲಿಂಗಯ್ಯ.

28. ಶಿವಾನುಭವ ಶಬ್ದಕೋಶ ಬರೆದವರು ಯಾರು?--ಫ.ಗು.ಹಳಕಟ್ಟಿ.

29. ವಚನಕಾರರಿಗೆ ಯಾವುದು ದೇವರಾಗಿತ್ತು?--ಅವರ ಪ್ರಜ್ಞೆಯೇ ದೇವರಾಗಿತ್ತು.

30. ಅಶೋಕ ಪೈ ಅವರ ವೃತ್ತಿ ಯಾವುದು?--ಮನೋವೈದ್ಯರು.

31. ದೇವನೂರರ ಪ್ರಕಾರ ದೇವರು ಯಾರು? (ದೇವನೂರರ ‘ನನ್ನ ದೇವರು’ ಯಾರೆಂಬುದನ್ನು ಸ್ಪಷ್ಟೀಕರಿಸಿ.) --ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯದ ಸಮತೆಯ ಬುದ್ದನನ್ನು ಇಟ್ಟರೆ ಅದೇ ಅವರ ದೇವರು. 

32. ‘ಮಲೆಗಳಲ್ಲಿ ಮದುಮಗಳು’ ಯಾರು ಬರೆದ ಕಾದಂಬರಿ?--ಕುವೆಂಪುರವರು ಬರೆದ ಕಾದಂಬರಿ.

33. ಭಗವದ್ಗೀತೆಯನ್ನು ರಚಿಸಿದವರು ಯಾರು?--ಮಹರ್ಷಿ ವೇದವ್ಯಾಸರು.

34. ಹುಲಿಗೆ ಪರಮಾನಂದವಾಗಲು ಕಾರಣವೇನು?-ಶಾನುಬೋಗರ ದುಂಡು ದುಂಡಾದ ಶರೀರವನ್ನು ನೋಡಿದ್ದು.

35. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?--ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳುವಂತೆ ಮಾಡಿದ ದೊಂಬರಾಟ.

36. ಶಾನುಭೋಗರಿಗೆ ಬ್ರಹ್ಮಾಸ್ತ್ರ ಯಾವುದು?-- ಖಿರ್ದಿಪುಸ್ತಕ.

37. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?--ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.

38. ‘ವೃಕ್ಷ ಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?-- ದುರ್ಗಸಿಂಹನ ಕರ್ನಾಟಕ ಪಂಚತಂತ್ರ ಕೃತಿಯಿಂದ ಆರಿಸಲಾಗಿದೆ.

39. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?--ಹೊನ್ನಿನ ಕಳ್ಳತನದ ಆರೋಪವನ್ನು ಹೊರಿಸಿದನು.

40. ಧರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?--ಏಕೆಂದರೆ ಧರ್ಮಬುದ್ಧಿಯು ಕದ್ದಿರುವದಕ್ಕೆ ಆಲದ ಮರವೇ ಸಾಕ್ಷಿ ಎಂದು ಹೇಳಿದುದರಿಂದ.

41. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?-- ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.

42. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?-- ದುಷ್ಟಬುದ್ಧಿ ಮತ್ತು ಧರ್ಮಬುದ್ದಿಯ ನಡುವಿನ ವ್ಯಾಜ್ಯವನ್ನು ಪರಿಹರಿಸಲು ಬಂದರು.

43. ಸುಕುಮಾರಸ್ವಾಮಿಯ ತಂದೆತಾಯಿಯಗಳ ಹೆಸರು ಏನು?--ಸೂರದತ್ತ ಮತ್ತು ಯಶೋಭದ್ರೆ.

44. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?-- ಸೆಟ್ಟಿಯ ಪಟ್ಟವನ್ನು ಕಟ್ಟಲಾಯಿತು.

45. ನೈಮಿತ್ತಿಕನು ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?-- ಸುಕುಮಾರ ಸ್ವಾಮಿಯು ಯಾವಾಗ ಋಷಿಗಳನ್ನು ಕಾಣುತ್ತಾನೆಯೋ ಅಂದು ತಪಸ್ಸಿಗೆ ಹೊರಡುತ್ತಾನೆ ಎಂದು.

(ಗದ್ಯಭಾಗಕ್ಕೆ ಸೀಮಿತವಾಗಿರುವ 26 ಅಂಕಗಳಲ್ಲಿ 5 ಅಂಕಗಳನ್ನು ಸುಲಭವಾಗಿ ಗಳಿಸಿರಿ.)

ಮರೆಮಾಡಲಾಗದು



ಮರೆಮಾಚಿಸುತಿಹವು ನಿಜರೂಪಗಳನು ಮುಖವಾಡಗಳು
ಮರೆಸುತಿಹವು ನಿಜ ಸಂಬಂಧಗಳ ಸಹಜ ಒಡನಾಟವನು 
ಮೆರೆಯುತಿಹವು ಅಸಹಜತೆಯೇ ಸಹಜತೆಯೆಂದು ಭ್ರಮಿಸಿ
ಮರೆಮಾಡಲಾಗದೆಂದಿಗೂ ಸಹಜ ಗುಣಗಳ-ನನಕಂದ||