Monday 28 September 2020

ಕಾಮನ ಬಿಲ್ಲು


ಅಂದದಿ ಮೂಡಿದೆ 

ಚಂದದ ಬಿಲ್ಲಿದು

ಕಂದನ ಕರೆಯಿರಿ ತೋರಿಸುವ|

ಬಂಧನ ಇಲ್ಲದ 

ಸುಂದರ ಕಮಾನು

ವಂದಿಸಿ ಎಲ್ಲರು ಹರುಷಿಸುವ||


ಬಣ್ಣಗಳೇಳಿವೆ 

ಚಿಣ್ಣರ ಆಟಕೆ

ತಣ್ಣಗೆ ತನ್ನೆಡೆ ಕರೆಯುತಿದೆ| 

ಅಣ್ಣನು ತಂದಿಹ 

ಹೊನ್ನಿನ ಹೊಳಪಿನ|

ಬಣ್ಣದ ಬಿಲ್ಲನು ಹೋಲುತಿದೆ||


ಎಳೆಯರು ಬಂದರು 

ಗೆಳೆಯರ ಕರೆದರು

ಮಳೆಬಿಲ್ಲಿನ ಸೊಗ ತೋರಿಹರು|

ಇಳೆಗೀಗಲೆ ಬಾ 

ನಲಿಯುತ ಆಡುತ 

ಕಲಿಯುವ ಜೊತೆಯಲಿ ಎಂದಿಹರು||

 

ಏನಿದು ಅಚ್ಚರಿ 

ಸನಿಹದಿ ಮೂಡಿದೆ

ಮನಕದು ಮುದವನೆ ನೀಡುತಿದೆ|

ಭಾನಿನ ಕಿರಣವು 

ಹನಿಯಲಿ ತೂರಿದೆ

ಬಾನಲಿ ಬಣ್ಣವು ಮೆರೆಯುತಿದೆ||


ಕೆಂಪದು ಕಂಡಿದೆ

ಕಿತ್ತಳೆ ಹಳದಿಯು

ಹಸಿರಿನ ನಂತರ ನೀಲಿಯಿದೆ| 

ಊದಾನೀಲಿಯು 

ನೇರಿಳೆ ಮೂಡಿದೆ

ಕಣ್ಣಿಗೆ ಚಂದದಿ ಕಾಣುತಿದೆ||


ಕಾಮನ ಬಿಲ್ಲಿದು 

ಭೂಮಿಗೆ ಕಂಡಿದೆ

ಸೋಮನ ಕಾಂತಿಯ ಮೀರುತಿದೆ|

ಸಾಮದ ನುಡಿಯನು 

ಪ್ರೇಮದಿ ಅರುಹುತ

ಕೋಮಲ ಭಾವವ ತೋರುತಿದೆ||


ಹೊನ್ನು=ಚಿನ್ನ

ಇಳೆ= ಭೂಮಿ

ಸಾಮ =ಚತುರೋಪಾಯಗಳಲ್ಲಿ ಒಂದು, ಚಾತುರ್ಯ, ಗಾನ, ಜ್ಞಾಣ್ಮೆ, ಕೌಶಲ

ಸೋಮ=ಚಂದ್ರ

ಭಾನು=ಸೂರ್ಯ

ಬಾನು=ಆಕಾಶ

Saturday 19 September 2020

ನನ್ನ ಕಂದಾ

 ಪ್ರಕಾರ : ಛೇಕಾನು ಪ್ರಾಸ

ನಿನ್ನ ಮಣ್ಣಿನಲ್ಲೂ ನೋಟವೇ ಚಂದಾ ಚಂದಾ

ಇನಿತು ಕಾಡಿಗೆಯಿಡಲು ಅಂದಾ ಅಂದಾ

ಮನಕೆ ಆಗ ನೀ ತಂಪನೀವೆ ಕಂದಾ ಕಂದಾ

ತಿನಿಸುವೆ ಬಾ ನಿನಗೆ ನಾನು ಕುಂದಾ ಕುಂದಾ


ನೀನೆನ್ನ ಮನೆಯಂಗಳದ ಸುಮಾ ಸುಮಾ 

ಸೂಸುತಿಹೆ ಮನೆ ತುಂಬಾ ಘಮಾ ಘಮಾ 

ಚಿನ್ನ ರನ್ನ ನಾ ಕರೆವೆ ನಿನ್ನ ಹೇಮಾ ಹೇಮಾ

ನಿನಗೆ ಯಾರು ಇಹರು ಹೇಳು ಸಮಾ ಸಮಾ

 

ಚಂದಿರನ ನೋಡಿ ನೋಡಿ ನಲಿವ ಬಾ ಬಾ

ಬೆಳದಿಂಗಳ ಹಚ್ಚಿ ಹಚ್ಚಿ ಹೊಳೆವ ಬಾ ಬಾ

ಕೈ ತುತ್ತು ತುತ್ತು ತಿನಿಸಿ ನಲಿಯುವೆ ಬಾ ಬಾ

ಲಾಲಿ ಹಾಡಿ ಹಾಡಿ ಮಲಗಿಸುವೆ ಬಾ ಬಾ 


ತಿದ್ದಿ ತಿದ್ದಿ ತಿಲಕವಿಟ್ಟು ನೋಡಿ ನೋಡಿ ನಲಿವೆ

ತಿದ್ದಿ ತೀಡಿ ಒಳ್ಳೆ ಒಳ್ಳೆ ಕಥೆಯ ಹೇಳಿ ತಣಿವೆ

ತಿದ್ದಿ ತಿದ್ದಿ ಬರೆಸಿ ಪಾಠ ಹೇಳಿ ಹೇಳಿ ಕಲಿಸುವೆ

ತಿದ್ದಿ ತಿದ್ದಿ ಬುದ್ದಿ ಹೇಳಿ ಹೇಳಿ ನಿನ್ನ ಬೆಳೆಸುವೆ

Friday 18 September 2020

ವಿದ್ಯಾಲಯ


ಶಿಸ್ತು ಶಿಕ್ಷಣ ಶಿಕ್ಷೆ ಶಿಕ್ಷಕರ ಚಿತ್ರಣ
ಓದು ಬರೆಹ ಆಟ ಪಾಠಕೆ ಪ್ರೇರಣ
ಕಲಿತು ನಲಿವ ಸರಸ್ವತಿಯ ಆಲಯ
ಬಾಳ ಯಶಕೆ ಸವಿ ಸಿಹಿಯ ಹೂರಣ

ಜ್ಞಾನಾರ್ಜನೆಗೊಂದು ಗ್ರಂಥಾಲಯ
ವಿಜ್ಞಾನ ಕಲಿಕೆಗೆ ಪ್ರಯೋಗಾಲಯ
ಕಲಿಯಲಿದು ಮಾದರಿ ಶಾಲೆಯು
ಪ್ರತೇಕವಾಗಿಹ ಸ್ವಚ್ಛ ಶೌಚಾಲಯ

ಕಬಡ್ಡಿ, ಖೋ ಖೋ ಹೊರಾಂಗಣಾಟ
ಚೆಸ್ ಕೇರಂ ಹಾವು ಏಣಿ ಒಳಾಂಗಣಾಟ
ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ
ನೃತ್ಯ ನಾಟ್ಯ ವಾರ್ಷಿಕೋತ್ಸವದ ನೋಟ

ಮಧ್ಯಾಹ್ನದೂಟಕೆ ಶುಚಿ ರುಚಿ ಓಗರ
ಹಲವು ಚಟುವಟಿಕೆಗಳ ಆಗರ
ಭವ್ಯ ಭವಿಷ್ಯ ನಿರ್ಮಾಣದ ಕೇಂದ್ರ
ಕಲಿಯಲಿದು ಮೇರೆಯಿಲ್ಲದ ಸಾಗರ 

Wednesday 9 September 2020

ತಪ್ಪುಯಾರದು?

ಏಳು ಹಾಯ್ಕುಗಳು


ಕಣ್ಣೀರಹನಿ

ಒಂದು ಹೇಳುತಿದೆ ತಾ

ಹೊರಗೆ ಬಂದು


ಕಳಕೊಂಡೆನು

ಸೌಂದರ್ಯ ಮುಳುವಾಗಿ

ನಾನೆಲ್ಲವನು


ಅತ್ಯಾಚಾರವ

ಮಾಡಿದರು ಅವರು

ನಾನು ಹೆಣ್ಣೆಂದು


ಬರಸೆಳೆದು

ಹಾಸಿಗೆಗೆ ಎಳೆದು

ಹೀರಿದರೆನ್ನ!


ತೃಷೆತೀರಲು

ಕೊಡವಿಕೊಳ್ಳುತಲಿ

ಹೊರಹೋದರು


ಬಿಟ್ಟು ಹೋದರು

ಬಡತನಕೆ ದೂಡಿ

ದೀನಳಾಗಿಹೆ


ತಪ್ಪುಯಾರದು?

ಲೋಕದಾಕಣ್ಣಿಗೆ

ಜಾರಿಣಿಯಾದೆ!!


*****

Monday 7 September 2020

ಅನ್ನದಾತ


ನೀಲಿ ಬಾನು ಪಚ್ಚೆ ಪೈರು

ನಡುವೆ ದುಡಿವ ರೈತ ಮೇರು

ಇವಗೆ ಹೇಳಿ ಸಾಟಿ ಯಾರು


ಉತ್ತಿ ಬಿತ್ತಿ ಬೆಳೆಯ ಬೆಳೆವ

ಅನ್ನ ನೀಡಿ ಹಸಿವ ಕಳೆವ

ತಾನು ಮಾತ್ರ ಬವಣೆಪಡುವ


ಜೋಡಿ ಎತ್ತು ಇವನ ಮಿತ್ರ

ಬಲ್ಲ ನೀತ ದುಡಿಮೆ ಸೂತ್ರ

ಎಲ್ಲಕು ಮಿಗಿಲಿವನ ಪಾತ್ರ


ಹಗಲು ಇರುಳು ತಾನು ದುಡಿದು

ಕೆಸರು ಗದ್ದೆಯಲ್ಲಿ ದಣಿದು

ಮಾಳ್ಪ ಇವನ ಕೆಲಸ ಹಿರಿದು


ಉದಯ ಕಾಲದಲ್ಲಿ ಎದ್ದು

ದುಡಿಮೆಯಿಂದಲೆಲ್ಲ ಗೆದ್ದು

ಮಾಡನಿವನು ಇನಿತು ಸದ್ದು

 

ಕಷ್ಟ ಜೀವಿ ಕರ್ಮಯೋಗಿ ಈತ

ನಮ್ಮ ಸಲಹುವ ಅನ್ನದಾತ

ದೇಶದ ಬೆನ್ನೆಲುಬು ನಮ್ಮ ರೈತ


ದೇಶದ ಬೆನ್ನೆಲುಬು *ನಮ್ಮ ರೈತ* 

ಕಷ್ಟ ಜೀವಿ ಕರ್ಮಯೋಗಿ ಈತ

ಜಗವ ಸಲಹುತಿರುವ ಅನ್ನದಾತ

*****