Monday 16 October 2017

ಮನಸ್ಥಿತಿ ಮುಳುವಾದೀತು

ಮಾನಿನಿಯ ಸೆರೆಯೊಳಿಟ್ಟ ರಾವಣನ ಗತಿಯೇ ನಾಯ್ತು?
ಶ್ರೀಮುಡಿಗೆ ಕೈಯಿಟ್ಟ ದುಶ್ಯಾಸನನ ಸ್ಥಿತಿಯೇನಾಯ್ತು?
ಮೋಹಿನಿಯ ರೂಪಕ್ಕೆ ಮರುಳಾದ ತಪಸಿಯೇನಾದ?
ನಮ್ಮ ಮನಸ್ಥಿತಿ ನಮಗೇ ಮುಳುವಾದೀತು ನನ ಕಂದ||

Wednesday 4 October 2017

ಕನ್ನಡನಾಡಿನ ಬಿರುದಾಂಕಿತರು

1.      ಅನ್ಯದೇವ ಕೋಲಾಹಲ            -       ಪಾಲ್ಕುರಿಕೆ ಸೋಮ
2.     ಅಭಿನವ ಕಾಳಿದಾಸ                -       ಬಸವಪ್ಪಶಾಸ್ತ್ರಿ
3.     ಅಭಿನವ ಪಂಪ                     -       ನಾಗಚಂದ್ರ
4.    ಅಭಿನವ ಭೋಜರಾಜ              -       ಮುಮ್ಮಡಿ ಕೃಷ್ಣರಾಜ ಒಡೆಯರು
5.     ಅಭಿನವ ಸರ್ವಜ್ಞ                   -       ರೆ. ಉತ್ತಂಗಿ ಚೆನ್ನಪ್ಪ
6.     ಅಮರ ಶಿಲ್ಪಿ                        -       ಜಕಣಾಚಾರಿ
7.     ಆದಿಕವಿ                            -       ಪಂಪ
8.     ಉಪಮಾ ಲೋಲ                  -       ಲಕ್ಷ್ಮೀಶ
9.     ಉಭಯ ಕವಿ                       -       ರನ್ನ
10.   ಉಭಯ ಗಾನ ವದನಾಚಾರ್ಯ    -       ಪಂಡಿತ ಪುಟ್ಟರಾಜ ಗವಾಯಿ
11.    ಉಭಯ ಚಕ್ರವರ್ತಿ                -       ಪೊನ್ನ
12.   ಕಡಲತೀರದ ಭಾರ್ಗವ             -       ಕೆ.ಶಿವರಾಮಕಾರಂತ
13.   ಕನ್ನಡ ಕುಲಪುರೋಹಿತ            -       ಆಲೂರು ವೆಂಕಟರಾಯ
14.   ಕನ್ನಡದ ಆಧುನಿಕ ಸರ್ವಜ್ಞ         -       ಡಿ ವಿ ಜಿ
15.   ಕನ್ನಡದ ಆಸ್ತಿ                      -       ಮಾಸ್ತಿ ವೆಂಕಟೇಶ ಅಯ್ಯಂಗಾರ್
16.   ಕನ್ನಡದ ಕಣ್ವ                      -       ಬಿ.ಎಂ.ಶ್ರೀ
17.    ಕನ್ನಡದ ಕಬೀರ                    -       ಶಿಶುನಾಳ ಷರೀಫ
18.   ಕನ್ನಡದ ಕವಿರತ್ನ                  -       ಕಾಳಿದಾಸ
19.   ಕನ್ನಡದ ಕಾಳಿದಾಸ                -       ಎಸ್.ವಿ.ಪರಮೇಶ್ವರ ಭಟ್ಟ
20.  ಕನ್ನಡ ಕುಲಪುರೋಹಿತ            -       ಆಲೂರು ವೆಂಕಟರಾಯರು
21.   ಕನ್ನಡದ ಕೋಗಿಲೆ                  -       ಪಿ.ಕಾಳಿಂಗರಾವ್
22.  ಕನ್ನಡದ ದಾಸಯ್ಯ                 -       ಶಾಂತಕವಿ
23.  ಕನ್ನಡದ ನಾಡೋಜ                -       ಮುಳಿಯ ತಿಮ್ಮಪ್ಪಯ್ಯ
24.  ಕನ್ನಡದ ವರ್ಡ್ಸ್ವರ್ತ್               -       ಕುವೆಂಪು
25.  ಕನ್ನಡದ ಶೇಕ್ಸ್ಪಿಯರ್              -       ಕಂದಗಲ್ ಹನುಮಂತರಾಯ
26.  ಕನ್ನಡದ ಸೇನಾನಿ                  -       ಎ.ಆರ್.ಕೃಷ್ಣಾಶಾಸ್ತ್ರಿ
27.   ಕರ್ನಾಟಕ ಕವಿ ಚೂತವನ ಚೈತ್ರ -       ಲಕ್ಷ್ಮೀಶ
28.  ಕರ್ನಾಟಕ ಪ್ರಹಸನ ಪಿತಾಮಹ    -       ಟಿ.ಪಿ.ಕೈಲಾಸಂ
29.  ಕರ್ನಾಟಕ ಶಾಸನಗಳ ಪಿತಾಮಹ         -         ಬಿ.ಎಲ್.ರೈಸ್
30.  ಕರ್ನಾಟಕ ಸಂಗೀತ                -       ಪಿತಾಮಹ ಪುರಂದರ ದಾಸ
31.   ಕರ್ನಾಟಕದ ಉಕ್ಕಿನ ಮನುಷ್ಯ     -       ಹಳ್ಳಿಕೇರಿ ಗುದ್ಲೆಪ್ಪ
32.  ಕರ್ನಾಟಕದ ಕಬೀರ               -       ಶಿಶುನಾಳ ಷರೀಫ
33.  ಕರ್ನಾಟಕದ ಕೇಸರಿ               -       ಗಂಗಾಧರರಾವ್ ದೇಶಪಾಂಡೆ
34.  ಕರ್ನಾಟಕದ ಗಾಂಧಿ               -       ಹರ್ಡೇಕರ್ ಮಂಜಪ್ಪ
35.  ಕರ್ನಾಟಕದ ಮಾರ್ಟಿನ್ ಲೂಥರ್ -       ಬಸವಣ್ಣ
36.  ಕರಾವಳಿಯ ಜ್ಞಾನಭೀಷ್ಮ           -       ಸೇಡಿಯಾಪು ಕೃಷ್ಣಭಟ್ಟ
37.   ಕವಿ ಚತುರ್ಮುಖ                  -       ರನ್ನ
38.  ಕವಿಕುಲಚಕ್ರವರ್ತಿ                 -       ರತ್ನ
39.  ಕವಿಚಕ್ರವರ್ತಿ                      -       ರನ್ನ / ಜನ್ನ
40. ಕವಿಜನಚೂಡಾರತ್ನ                -       ರತ್ನ     
41.   ಕವಿತಾಗುಣಾರ್ಣವ                 -       ಪಂಪ
42.  ಕವಿತಾಸಾರ                       -       ಪಾಲ್ಕುರಿಕೆ ಸೋಮ
43.  ಕವಿತಿಲಕ                          -       ರತ್ನ
44. ಕವಿಮುಖ ಚಂದ್ರ                   -       ರನ್ನ
45.  ಕವಿರತ್ನ                            -       ರನ್ನ
46.  ಕವಿರಾಜಶೇಖರ                   -       ರನ್ನ
47.  ಕವಿರಾಜಹಂಸ                     -       ಕುಮಾರ ವಾಲ್ಮೀಕಿ
48.  ಕಾದಂಬರಿ ಪಿತಾಮಹ             -       ಗಳಗನಾಥ
49.  ಕಾದಂಬರಿ ಸಾರ್ವಭೌಮ           -       ಅ.ನ.ಕೃಷ್ನರಾಯ
50.  ಕುಂದರ ನಾಡಿನ ಕಂದ             -       ಬಸವರಾಜ ಕಟ್ಟೀಮನಿ
51.   ಕುರುಳ್ಗಳ ಸವಣ                   -       ಪೊನ್ನ
52.  ಗಾನಯೋಗಿ                       -       ಪಂಡಿತ ಪುಟ್ಟರಾಜ ಗವಾಯಿ
53.  ಚಲಿಸುವ ನಿಘಂಟು                 -       ಡಿ.ಎಲ್.ನರಸಿಂಹಾಚಾರ್
54.  ಚಲಿಸುವ ವಿಶ್ವಕೋಶ              -       ಕೆ.ಶಿವರಾಮಕಾರಂತ
55.   ಚುಟುಕು ಬ್ರಹ್ಮ                     -       ದಿನಕರ ದೇಸಾಯಿ
56.  ಜಿನಧರ್ಮಪಾತಕೆ                  -       ಅತ್ತಿಮಬ್ಬೆ
57.   ತ್ರಿಪದಿ ಚಕ್ರವರ್ತಿ                  -       ಸರ್ವಙ್ಞ
58.  ತತ್ವ ವಿದ್ಯಾಕಲಾಪ                 -       ಪಾಲ್ಕುರಿಕೆ ಸೋಮ
59.  ದಕ್ಷಿಣ ಭಾರತದ ಮೀರಾದೇವಿ      -       ಅಕ್ಕ ಮಹಾದೇವಿ
60.  ದಲಿತಕವಿ                          -       ಸಿದ್ದಲಿಂಗಯ್ಯ
61.   ದಾನ ಚಿಂತಾಮಣಿ                 -       ಅತ್ತಿಮಬ್ಬೆ
62.  ದಾಸ ಸಾಹಿತ್ಯದ ಅಶ್ವಿನಿದೇವತೆಗಳು-     ಪುರಂದರದಾಸ ಮತ್ತು ಕನಕದಾಸ
63.  ನಟಸಾರ್ವಭೌಮ                  -       ಡಾ. ರಾಜಕುಮಾರ
64.  ನಡೆದಾಡುವ ವಿಶ್ವಕೋಶ           -       ಕೆ.ಶಿವರಾಮಕಾರಂತ
65.  ನವ್ಯ ಕಾವ್ಯದ ಆದ್ಯ ಪ್ರವರ್ತಕ     -       ವಿ.ಕೃ.ಗೋಕಾಕ್
66.  ನಾಟಕರತ್ನ                        -       ಗುಬ್ಬಿ ವೀರಣ್ಣ
67.   ನಾಡಪ್ರಭು                         -       ಕೆಂಪೇಗೌಡ
68.  ನಾದಲೋಲ                       -       ಲಕ್ಷ್ಮೀಶ
69.  ನಿತ್ಯೋತ್ಸವದ ಕವಿ                -       ಪ್ರೊ.ಕೆ.ಎಸ್.ನಿಸಾರ್ ಅಹಮದ್
70.  ಪ್ರಾಕ್ತನ ವಿಮರ್ಶಕ ವಿಚಕ್ಷಣ        -       ಆರ್.ನರಸಿಂಹಾಚಾರ್
71.    ಪ್ರಾಚ್ಯ ವಿದ್ಯಾ ವೈಭವ             -       ಆರ್.ನರಸಿಂಹಾಚಾರ್
72.   ಪ್ರೇಮಕವಿ                         -       ಕೆ.ಎಸ್.ನರಸಿಂಹಸ್ವಾಮಿ
73.   ಭಕ್ತಕವಿ                            -       ಹರಿಹರ
74.  ಭಕ್ತಿ ಭಂಡಾರಿ                      -       ಬಸವಣ್ಣ
75.   ಭಾರತ ರತ್ನ                       -       ಸರ್ ಎಂ ವಿಶ್ವೇಶ್ವರಯ್ಯ
76.   ರಗಳೆಯ ಕವಿ                      -       ಹರಿಹರ
77.   ರಸಋಷಿ                           -       ಕುವೆಂಪು
78.   ರಸಕವಿ                            -       ಕುವೆಂಪು
79.   ರಾಜ ಸೇವಾಸಕ್ತ                   -       ಬಿ.ಎಂ.ಶ್ರೀ.
80.  ರಾಷ್ಟ್ರಕವಿ                          -       ಎಂ ಗೋವಿಂದ ಪೈ/ ಕುವೆಂಪು/ ಜಿ.ಎಸ್.ಶಿವರುದ್ರಪ್ಪ
81.   ರೂಪಕ ಸಾಮ್ರಾಜ್ಯ ಚಕ್ರವರ್ತಿ     -       ಕುಮಾರವ್ಯಾಸ
82.  ವಚನಶಾಸ್ತ್ರ ಪಿತಾಮಹ            -       ಫ.ಗು.ಹಳಕಟ್ಟಿ
83.  ವರಕವಿ                            -       ಬೇಂದ್ರೆ
84.  ವಿಡಂಬನಾ ಕವಿ                    -       ನಯನಸೇನ
85.  ವೀರ ಮಾರ್ತಾಂಡ ದೇವ          -       ಚಾವುಂಡರಾಯ
86.  ಶಿವ ಕವಿ                           -       ಹರಿಹರ
87.   ಶೃಂಗಾರ ಕವಿ                      -       ರತ್ನಾಕರವರ್ಣಿ
88.  ಷಟ್ಪದಿ ಬ್ರಹ್ಮ                      -       ರಾಘವಾಂಕ
89.  ಸಂಗೀತ ಗಂಗಾದೇವಿ              -       ಗಂಗೂಬಾಯಿ ಹಾನಗಲ್
90.  ಸಂತಕವಿ                          -       ಪು.ತಿ.ನ.
91.   ಸಣ್ಣ ಕತೆಗಳ ಜನಕ                -       ಮಾಸ್ತಿ ವೆಂಕಟೇಶ ಅಯ್ಯಂಗಾರ್
92.  ಸಮ್ಯಕ್ತ್ವ ರತ್ನಾಕರ                 -       ಚಾವುಂಡರಾಯ
93.  ಸಮನ್ವಯ ಕವಿ                    -       ಜಿ.ಎಸ್.ಶಿವರುದ್ರಪ್ಪ/ ಚನ್ನವೀರ ಕಣವಿ
94.  ಸರಸ ಸಾಹಿತ್ಯದ ವರದೇವತೆ      -       ಸಂಚಿಯಹೊನ್ನಮ್ಮ
95.  ಸರಸ್ವತಿ ಮಣಿಹಾರ                -       ಪಂಪ
96.  ಸಾವಿರ ಹಾಡುಗಳ ಸರದಾರ       -       ಬಾಳಪ್ಪ ಹುಕ್ಕೇರಿ
97.   ಹರಿದಾಸ ಪಿತಾಮಹ               -       ಶ್ರೀಪಾದರಾಯ 

Tuesday 3 October 2017

ಗಾದೆಯ ವಿಸ್ತರಣೆ: ತಾಳಿದವನು ಬಾಳಿಯಾನು

  ಗಾದೆಗಳು ವೇದಗಳಿಗೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದೆಂಬ ಮಾತು ಜನಜನಿತವಾಗಿದೆ. ಹಿರಿಯರ ಅನುಭವದ ನುಡಿಮುತ್ತುಗಳಾದ ಗಾದೆಗಳು ಬಾಳಿಗೆ ಮಾರ್ಗದರ್ಶನ ನೀಡಿ ಬಾಳನ್ನು ಹಸನುಗೊಳಿಸುತ್ತವೆ. ಅಮೂಲ್ಯವಾದ ಅಗಣಿತ ಗಾದೆ ಮಾತುಗಳಲ್ಲಿತಾಳಿದವನು ಬಾಳಿಯಾನುಎಂಬ ಗಾದೆಯೂ ಒಂದಾಗಿದೆ. ದುಡುಕು, ಕೋಪ, ಆತುರ ಮುಂತಾದವು ಅನರ್ಥಸಾಧನಗಳುಜೀವನದಲ್ಲಿ ಏಳು ಬೀಳುಗಳು, ಕಷ್ಟ ಕಾರ್ಪಣ್ಯ, ಸುಖ ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ, ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು ತಾಳ್ಮೆಯಿಂದಿರಬೇಕು. ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು. ದಾಸರ ನುಡಿಯಂತೆತಾಳುವಿಕೆಗಿಂತ ತಪವಿಲ್ಲ’. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳುವಂತೆ ''ಈಸಬೇಕು, ಇದ್ದು ಜಯಿಸಬೇಕು'' ಪ್ರವಾಹ ಎದುರಾದರೂ ಈಜಿ ಆಚೆಯ ದಡವನ್ನು ಸೇರುವ ಮನೋಭಾವ ಇರಬೇಕು. ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು. ಅದು ಜೀವನವನ್ನು ಬಲಿತೆಗೆದುಕೊಳ್ಳುತ್ತದೆ. ಬಂದ ಪರಿಸ್ಥಿತಿಯನ್ನು ತಾಳ್ಮೆಯಿಂದ ಧೈರ್ಯದಿಂದ ಎದುರಿಸಿದಾಗ ಬದುಕು ಗಟ್ಟಿಯಾಗುತ್ತಾ ಮುಂದೆ ಸಾಗುತ್ತದೆ. ಯಾವುದೇ ಭಾವನೆ, ಮಾತು, ಕೆಲಸವಿರಲಿ ಅದನ್ನು ಯೋಚಿಸಿ, ಪರಾಮರ್ಶಿಸಿ ನೋಡಬೇಕೇ ವಿನಃ ಯಾವುದೇ ಕಾರಣಕ್ಕೂ ದುಡುಕಬಾರದು. ಏನೇ ಮಾಡಿದರೂ ಎರಡೆರಡು ಸಲ ಯೋಚನೆ ಮಾಡಿ ಮಾಡಬೇಕು. ಇದಕ್ಕೆ ತಾಳ್ಮೆಬೇಕು ದುಡುಕಿನ ನಿರ್ಧಾರ ಬೇರೊಬ್ಬರ ಅಥವ ನಮ್ಮ ಜೀವನದ ಮೇಲೆಯೇ ಭಾರಿ ಪರಿಣಾಮ ಉಂಟುಮಾಡಬಹುದು. ತಾಳ್ಮೆಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆಯಿದೆ. ಇಂದಿನ ಜೀವನ ಶೈಲಿಯಲ್ಲಂತು ಹೆಚ್ಚು ಬೇಡಿಕೆಯೂ ಇದೆ ಎಂದರೆ ತಪ್ಪಾಗಲಾರದು. ತಾಳ್ಮೆಗಾಗಿ ತೀವ್ರ ಹಂಬಲಿಸುವವರಿಗೆ ಹೆಚ್ಚಿನ ತಾಳ್ಮೆ ಬೇಕು. ತಾಳ್ಮೆ ಎಂದರೆ ಕೇವಲ ಕಾಯುವಿಕೆಯಲ್ಲ. ಕಾಯುವಿಕೆಯ ಪ್ರಕ್ರಿಯೆಯಲ್ಲಿ ನಾವು ತೋರುವ ಉತ್ತಮ ನಡವಳಿಕೆಯೇ ನಿಜವಾದ ತಾಳ್ಮೆ. ಮೇಲ್ನೋಟಕ್ಕೆ ತಾಳ್ಮೆಯು ಅತಿ ಕಷ್ಟವೆಂದು ಕಂಡರೂ, ಅದು ನೀಡುವ ಫಲಮಾತ್ರ ಸದಾ ಸಿಹಿಯಿಂದ ಕೂಡಿರುತ್ತದೆ. ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು. ತಾಳ್ಮೆಯಿದ್ದಲ್ಲಿ ಪ್ರೀತಿಯು ಜನಿಸುತ್ತದೆ. ತಾಳ್ಮೆಯಿದ್ದಲ್ಲಿಭರವಸೆಯು  ಬೆಳೆಯುತ್ತದೆ. ತಾಳ್ಮೆಯಿಂದಿದ್ದರೆ ಅಲ್ಲಿ ನಂಬಿಕೆಯು ನೆಲೆಸುತ್ತದೆ. ಪ್ರೀತಿ, ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಯನ್ನು ಲೋಕವೇ ಮನ್ನಿಸಿ, ಗೌರವಿಸಿ, ನಮಿಸುತ್ತದೆ. ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ, ಅದೊಂದು ಬಗೆಯ ಜ್ಞಾನವೂ ಹೌದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲಾ ಒಂದು ಪರಿಹಾರವಿದ್ದೇ ಇದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲೇ ಬೇಕು. ತಾಳ್ಮೆಯು ಇದನ್ನು ಪ್ರತಿಪಾದಿಸುತ್ತದೆ. ಕೆಸರು ತುಂಬಿ ರಾಡಿಯಾಗಿರುವ ಕೊಳದಲ್ಲಿನ ನೀರನ್ನು ಹಾಗೇ ಬಿಟ್ಟರೆ ನಿಧಾನವಾಗಿ ಮಣ್ಣೆಲ್ಲಾ ತಳಭಾಗವನ್ನು ಸೇರಿ ನೀರು ತಿಳಿಯಾಗುತ್ತದೆ. ಹರಿಯಲು ಬಿಟ್ಟರೆ ಪರಿಶುದ್ಧವೂ ಆದೀತು. ಹಾಗೆಯೇ ಬದುಕಿನಲ್ಲೂ ಕೆಲವೊಂದು ಕಷ್ಟಗಳು ನಮ್ಮಲ್ಲಿ ಆತಂಕ, ತಳಮಳ ಕಳವಳಗಳನ್ನುಂಟು ಮಾಡುತ್ತವೆ, ನಾವು ಸಂಕಷ್ಟಗಳಿಗೆ ನಲುಗದೆ ತಾಳ್ಮೆಯಿಂದ ಕಾದದ್ದೇ ಆದರೆ ಮುಂದೊಂದು ದಿನ ಕಷ್ಟಗಳೇ ಕಾಣದಂತೆ ಕಮರಿಹೋಗುತ್ತವೆ. ತಾಳ್ಮೆಯ ಕೊರತೆಯಿಂದ ತಲೆದೋರುವ ತಾಪತ್ರಯಗಳು ಊಹಿಸಲಸಾಧ್ಯ. ತಾಳ್ಮೆಯ ಅನುಪಸ್ಥಿತಿಯಿಂದ ಸುಮಧುರ ಸಂಬಂಧಗಳು ಹಾಳಾಗುತ್ತವೆ. ಗೆಲುವ ಪಡೆವ ಜಾಗದಲ್ಲಿ ನಾವು ಸೋಲನ್ನು ಕಂಡದ್ದೇ ಆದರೆ ತಾಳ್ಮೆಯನ್ನು ಮರೆತದ್ದೇ ಅದಕ್ಕೆ ಕಾರಣವಾಗಿರಬಹುದು. ಶೃತಿಬದ್ಧ ಹಾಡುಗಾರಿಕೆ ಹಾಗೂ ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳುವುದು ಬದುಕಿನಲ್ಲಿ ತಾಳ್ಮೆಬೇಕು. ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ. ಮಾಡುವ ಕೆಲಸ ಸಣ್ಣದೇ ಇರಲಿ, ದೊಡ್ಡದೇ ಆಗಿರಲಿ, ಸಹನೆಯಿಂದ ವಿವೇಚನೆಯೊಂದಿಗೆ ಮಾಡಿದರೆ ಅದರ ಫಲ ನಿಜಕ್ಕೂ ಅತ್ಯುತ್ತಮವಾಗಿರುತ್ತದೆ. ತಾಳ್ಮೆಗೆ ಕಾಯುವ ಗುಣ ಬೇಕು. ‘ಆತುರಗಾರನಿಗೆ ಬುದ್ಧಿಮಟ್ಟ' ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಪಡೆಯಬೇಕೆಂದರೆ ಕಾಯಬೇಕು. ಕಾಯುವಂಥ ಸಹನೆ ಬೇಕು. ತಾಳ್ಮೆಯಿಂದ ತಪಸ್ಸು ಮಾಡಿದಾಗ ಸಿಗುವ ಫಲ ತುಂಬ ರುಚಿಯಾಗಿರುತ್ತದೆ, ಮಹತ್ವದ್ದಾಗಿರುತ್ತದೆ ಎಂಬಮಾತು ಸಾರ್ವಕಾಲಿಕ ಸತ್ಯ. ಗುಣ ಇಲ್ಲದವರು ತಮ್ಮದೇ ಭ್ರಮಾಲೋಕದಲ್ಲಿ ಮುಳುಗಿ ಹೋಗುತ್ತಾರೆ. ನಾವು ಎಷ್ಟೇ ಒಳ್ಳೆಯ ಗುಣಗಳನ್ನು ಹೊಂದಿದ್ದರೂ ತಾಳ್ಮೆಯೊಂದಿಲ್ಲದಿದ್ದರೆ ಒಳ್ಳೆಯ ಗುಣಗಳಿಗೆ ಬೆಲೆ ಸಿಗುವುದು ದುಸ್ತರ. ಹಿರಿಯರು ಹೇಳುವಂತೆ ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ.