Saturday 15 October 2016

ಮನಸ್ಸು ಮುಗ್ದ

ಮನಸ್ಸೆಂಬುದು ಮುಗ್ದಶಿಶುವಿನವೊಲ್
ಮನದೊಡೆಯ ಬೆಳೆಸಿದವೊಲ್  ಬೆಳೆವುದು  
ಮನಸ್ಸಿನೊಡಯ ನೀನೆಂಬರಿವಿರಲಿ   
ಮನವನೆಚ್ಚರದಿ ನಡೆಸು-ನನ ಕಂದ||

Thursday 13 October 2016

ಅಂದು ಇಂದು

ಮಮತೆಯ ಬೀಜವ ಬಿತ್ತಿ
ನಿಸ್ವಾರ್ಥದ ಕಟ್ಟೆಯ ಕಟ್ಟಿ
ಪ್ರೀತಿ ವಿಶ್ವಾಸದ ನೀರನೆರದು
ಸಹಕಾರ ಸಹಾನುಭೂತಿ ಗೊಬ್ಬರವ ಹಾಕಿ
ಅಕ್ಕರೆಯ ಸಕ್ಕರೆಯ ಸವಿ ಫಲವನೀಡುವ
ಬೃಹತ್ ವೃಕ್ಷಗಳ ಬೆಳೆದರು ನಮ್ಮ ಪೂರ್ವಿಕರು
ನಿಷ್ಕಾಮನೆಯ ಫಲವನುಂಡು
ವಸುಧೈವಕುಟುಂಬಕಂ ಎಂದು
ಎಲ್ಲರೊಂದಾಗಿ ಸಹಬಾಳ್ವೆಯಿಂದ
ಶಾಶ್ವತ ಕಾರ್ಯವ ಮಾಡ ಬಯಸಿದರು
ಮುಂದಿನವರ ಬಾಳ ಹಸನುಗೊಳಿಸುತ
ಸಾರ್ಥಕ ಬದುಕ ಬದುಕಿ ತೋರಿಸಿದರು
ಪ್ರೇಮಸೌಧ ತಾಜಮಹಲ್
ಆಡಳಿತಕೇಂದ್ರ ವಿಧಾನ ಸೌಧ
ಕಲೆಯ ಬೀಡು ಬೇಲೂರು ಹಳೆಬೀಡು
ಸಸ್ಯಕಾಶಿಯೇ ಆಗಿಹ ಲಾಲ್ ಬಾಗ್
ಜೀವಜಲಕಾಸರೆ ಕೆರೆ ಕಟ್ಟೆ ಕೊಳ ಬಾವಿಗಳು
ಜೀವನ ಚೈತನ್ಯ ಕನ್ನಂಬಾಡಿಯ ಕಟ್ಟಿದರು
ಪ್ರಕೃತಿಯಾರಾಧಕರಾಗಿ ಸುಖಿಸಿ
ದೈವವನ ನಾಗವನವ ಉಳಿಸಿ
ಕಾಡು ಉಳಿಸಿ ನಾಡ ಬೆಳೆಸಿ
ತೋಪು ತೋಟ ಗದ್ದೆ ಹೊಲದಿ ಶ್ರಮಿಸಿ
ಕಾಯಕವೇ ಕೈಲಾಸವೆಂದು ಸಂಭ್ರಮಿಸಿ
ಬದುಕ ಉಳಿಸಿ ಬೆಳೆಸÀಲು ಶ್ರಮಿಸಿದರು ಅಂದು 
ವಿಷದ ಬೀಜವ ಬಿತ್ತಿ
ಸ್ವಾರ್ಥತದ ಕಟ್ಟೆಯನೇ ಕಟ್ಟಿ
ಕಾಮ ಕ್ರೋದದ ನೀರನೆರೆದು
ಮದ ಮತ್ಸರದ ಗೊಬ್ಬರವ ಹಾಕಿ
ದ್ವೇಷ ಅಸೂಯೆಯ ಫಲವನೀವ
ಬೃಹತ್ ವೃಕ್ಷಗಳ ಬೆಳೆಸಿಹರು ಇಂದಿನವರು
ಕಾಮನೆಯ ಫಲವನುಂಡು
ಜಗದ ಸೊಬಗು ತನಗೇ ಎಂದು
ತಾನು Àನ್ನ ಕಣ್ಣಬೊಂಬೆ ಮಾತ್ರವೆಂದು
ಕ್ಷಣಿಕ ಸುಖದ ಸೊಗಕೆ ಮಾರು ಹೋಗಿ
ತನ್ನವರ ದೂರಸರಿಸಿ ಒಂಟಿ ಬಾಳ ಬಯಸಿ
ನೋವಿನ ಬದುಕ ಬದುಕೆ ಮುನ್ನುಗ್ಗುತಿಹರು
ಹೊಂಡ ಗುಂಡಿಗಳಾಗಿಹ ರಸ್ತೆ
ಕಸದ ಆಗರವೇ ಆಗಿಹ ನಗರ
ಕಣ್ಮರೆಯಾಗುತಿಹ ಕೆರೆ ಗದ್ದೆ ತೋಟ
ತಲೆಎತ್ತಿ ನಿಂತಹ ಗಗನ ಚುಂಬಿಕಟ್ಟಡ
ತಿನ್ನುವನ್ನಕೆ ಸಂಚುಕಾರವಾಗಿಹ ಬಾಳು
ಅಪರಿಚಿತ ಅಪನಂಬಿಕೆಯ ಬದುಕು
ಕುಲಾಂತರಿ ತಳಿಗಳ ಮೇಲಾಟ
ಭಯೋತ್ಪಾದಕರ ಅಟ್ಟಹಾಸದಾಟ
ಬರಡಾಗಿಸುತಿಹ ಭ್ರಷ್ಟರಾ ಕೂಟ
ಲಂಚಕೋರರಾ ಸ್ವಾರ್ಥದಾಟ
ಭದ್ರತೆಯ ಕಾಣದ ಭೀತಿಯಾಟ
ಸುಖ ಬಾಳ ನೆಲಸಮವಾಗಿಸುವಾಟ
ದುಡಿಮೆಯ ಬೆನ್ನಹತ್ತಿಹ ಬರಿ ಒತ್ತಡದ ಬದುಕು
ಎಲ್ಲವಿದ್ದೂ ಏನೂ ಇಲ್ಲದ ನವನವೀನ ಬದುಕು 
ಸುಖವೆಂದು ಭ್ರಮಿಸುತ್ತಿರುವ ವೀಕೆಂಡ್ ಬದುಕು
ಅಹಂಮಿನ ಹಮ್ಮಿನಲಿ ಕಳೆದು ಹೋಗಿಹ ಬದುಕು
ಮಿತಿಯಿಲ್ಲದೆ ಬೆಳೆಯುತಿಹ ವೃದ್ಧಾಶ್ರಮ ಬದುಕು
ಮುಂದಿನಾ ಬದುಕ ಬರಿದಾಗಿಸುತ್ತಿಹರು ಇಂದು

ಕಾಟದಾಟ

ಬೆಳೆಗೆ ಕಂಟಕವಾಗಿಹ ಕುಲಾಂತರಿ ತಳಿಗಳ ಕಾಟ
ಭ್ರಷ್ಟರಾ ಕೂಟ ಲಂಚಕೋರರಾ ಕೊನೆಯಿಲ್ಲದಾಟ
ಭಯೋತ್ಪಾದಕರ ಕೊನೆಯಿಲ್ಲದಟ್ಟಹಾಸದ ಕಾಟ
ಬಾಳ ಸುಖವ ನೆಲಸಮವಾಗಿಸುವಾಟ-ನನ ಕಂದ

ಇಂದಿನಾ ಬದುಕು

ದುಡಿಮೆಯ ಬೆನ್ನಹತ್ತಿಹ ಬರಿ ಒತ್ತಡದ ಬದುಕು
ಎಲ್ಲವಿದ್ದೂ ಏನೂ ಇಲ್ಲದ ನವನವೀನ ಬದುಕು
ಸುಖವೆಂದು ಭ್ರಮಿಸುತಿಹ ವೀಕೆಂಡ್ ಬದುಕು
ಸೊಬಗ ಕಾಣದ ಹಮ್ಮಿನಾ ಬದುಕು-ನನ ಕಂದ 

Tuesday 11 October 2016

ಅರಿವೆಮಗೆ ಬೇಕು

ಬೆಣ್ಣೆಯಲಿ ಅಡಗಿಹುದು ಹಸನಾದ ತುಪ್ಪ
ಮೃಗದೊಡಲೊಳಗಿಹುದು ಕಸ್ತೂರಿ ಸುಗಂಧ
ರಸಗಬ್ಬಿನೊಳಡಗಿಹುದು ಸವಿಯಾದ ಸಿಹಿಯು
ಪಡೆವ ಪರಿಯರಿವೆಮಗೆ ಬೇಕು-ನನಕಂದ||