Saturday 27 July 2019

ಅಮ್ಮ

ಅಮ್ಮಯೆಂಬ ಎರಡಕ್ಷರದಿ ಎಂಥ ಭಾವವಡಗಿದೆ
ಅಮ್ಮಯೆಂಬ ಧ್ವನಿಯಲೆಂಥ ಮಂತ್ರಶಕ್ತಿ ಹುದುಗಿದೆ
ಅವಳ ಕೈಯ ಪ್ರತಿ ತುತ್ತು ಅಮೃತಕ್ಕಿಂತ ಹೆಚ್ಚು
ಅವಳು ನಮಗೆ ಇತ್ತ ಮುತ್ತು ಜೇನಿನಂತೆ ಇತ್ತು
ಅವಳ ಸೆರಗು ಹಿಡಿಯಲೆಂತು ಮನವು ಹಿಗ್ಗುತ್ತಿತ್ತು
ಕಂದಾ ಎಂಬ ಅವಳ ಕೂಗಿನಲೆಂಥ ವಾತ್ಸಲ್ಯವಡಗಿತ್ತು
ಚಿನ್ನರನ್ನವೆಂಬವಳ ನುಡಿಯಲೆಂಥ ಮೋಹತುಂಬಿತ್ತು

ಜಗದ ಪ್ರೇಮವೆಲ್ಲ ಕೂಡಿ ತಾಯ ರೂಪ ತಳೆದಿದೆ
ಅವಳ ಪ್ರೇಮಕುಂಟೆ ಸರಿ ಸಾಟಿ ಈ ಜಗದಲೆನಿಸಿದೆ
ಅವಳಗಿಲ್ಲ ಉಪಮಾ ಅದಕೆ ಅವಳು ಅನುಪಮಾ

Tuesday 9 July 2019

ಕಾಮನಬಿಲ್ಲು

ಅಮ್ಮ ಅಮ್ಮ ಆಗಸದಲ್ಲಿ
ವರ್ಣಗಳಾಟವದೇನಮ್ಮ
ಆಕಾಶದಿ ಮೂಡಿಹ
ಬಣ್ಣದ ಕಮಾನು ಅದೇನಮ್ಮ
ಮಳೆಗಾಲದಿ ಮಾತ್ರವೆ
ಕಾಮನಬಿಲ್ಲದು ಕಾಣುವುದೇಕಮ್ಮ?
ಇಂದ್ರಚಾಪಕೆ ಏಳು ಬಣ್ಣವದೇಕಮ್ಮ?

ಗೋಲಾಕಾರದ ಮಳೆ ಹನಿಯಲಿ
ಸೂರ್ಯನ ಕಿರಣವು ತೂರುವುದು
ಮಳೆಹನಿ ಪಟ್ಟಕದಂದದಿ ವರ್ತಿಪುದು
ಮೊದಲಿಗೆ ಬೆಳಕಿನ ವಕ್ರೀಭವನ
ನಂತರ ಸಪ್ತವರ್ಣದ ವಿಭಜನ
ಅಂತ್ಯದಿ ಅದರದೆ ಪ್ರತಿಫಲನ
ಆಗಸದಿ ವರ್ಣಗಳ ನರ್ತನ

ಸಪ್ತವರ್ಣದ ಚಿತ್ತಾರವದು
ಕೆಂಪು ಕಿತ್ತಳೆ ಹಳದಿ ಹಸಿರು
ನೀಲ ಊದ ನೇರಳೆ ಬಣ್ಣವದು
ಬೆಳಕಿನ ಬಣ್ಣದ ಅಚ್ಚರಿ ಆಟವದು
ಪ್ರಕೃತಿಯು ಕರುಣಿಪ ವರದಾನವದು
ನೋಡುವ ನಯನಕೆ ಹಬ್ಬವದು

ಸೂರ್ಯನು ಮಳೆಗಾಲಕೆ ಕಾಯುವನು
ವರ್ಣಗಳಾಟವನಾಡುತ ಮುದನೀಡುವನು
ಸೂರ್ಯನ ಕಿರಣ ಮಳೆಹನಿ ಸೇರದಿರೆ
ಕಾಮನಬಿಲ್ಲು ಮೂಡದು ತಿಳಿ ಕಂದ
ಅದನೋಡುತ ನೋಡುತ ನಲಿಕಂದ
ವೈಜ್ಞಾನಿಕ ಸತ್ಯವನರಿಯುತ ಬೆಳೆಕಂದ

ಕಾಮನಬಿಲ್ಲಿನಾಟವ ತಿಳಿದೆನು ಅಮ್ಮ
ವಕ್ರೀಭವನ ಪ್ರತಿಫಲನವಕಲಿತೆನು ಅಮ್ಮ
ಸಪ್ತವರ್ಣದ ಮರ್ಮವ ಅರಿತೆನು ಅಮ್ಮ
ಬೆಳಕಿನಾಟವ ನೋಡುತ ನಲಿವೆನು ಅಮ್ಮ
ಪ್ರಕೃತಿಯಾಟಕೆ ಮನಸಾರೆ ವಂದಿಪೆನು ಅಮ್ಮ
ಬಾನಲಿ ಮೂಡಿಹ ಕಮಾನು ನೋಡುವ ಬಾರಮ್ಮ

********************

Wednesday 3 July 2019

ಪ್ರಣತಿಗಳ ಬೆಳಕಲಿ


ಪ್ರಣತಿಗಳ ಬೆಳಕಲಿ ಮೊಗವ ಕಂಡಿರುವೆ
ಪ್ರಣಯವಂಕುರಿಸಿ ಪರಿತಪಿಸುತಿರುವೆ
ಪರಿಪರಿಯ ಕನಸುಗಳ ನೀ ಬಿತ್ತಿರುವೆ
ಪರಮ ಸುಖವ ನೀನೆನಗೆ ನೀಡಿರುವೆ
ಪ್ರಣತಿಗಳ ಬೆಳಕಲಿ ನಾ ಕಂಡ ನಿನ್ನ ಮೊಗದ ಕಾಂತಿ
ಪ್ರಣತಿಗಳ ಬೆಳಕ  ನಾಚಿಸುವ ಆ ನಿನ್ನ ದಿವ್ಯ ಕಾಂತಿ
ಪ್ರಣತಿಗಳ ನಡುವೆ ಮೆರೆದು ತಾ ಮರೆಯಾದ ಕಾಂತಿ
ಪ್ರಣತಿಗಳ ಬೆಳಕಿನಲಿ ನಾ ಅರಸುತಿಹ  ಆ ಕಾಂತಿ
ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ
ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ
ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ
ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆ
ನಿನ್ನ ಧ್ಯಾನದಲಿ ನನ್ನ ನಾನೇ ಮರೆತಿರುವೆ ಬೇಗ ಬಾ
ನೀನಿಲ್ಲದಿನ್ನೊಂದುಕ್ಷಣ ನಾ ನಿರಲಾರೆ ನೀ ಬೇಗ ಬಾ
ನನ್ನ ಆಂತರ್ಯವ ನೀನರಿತು ನನಗನುವಾಗು ಬಾ
ನೀ ಬೇಡಿದುದೆಲ್ಲವಾ ನಿನಗೆ ನಾ ಕೊಡುವೆ ಬೇಗ ಬಾ
ಎಲ್ಲೆಲ್ಲೂ ದರ್ಶನವನೆನಗೆ ನೀಡು ಬಾ
ಎತ್ತೆತ್ತ ನೋಡಲತ್ತತ್ತ ನೀ ತೋರು ಬಾ
ಎಂದೆಂದೂ ಮನೆ ಮನವ ತುಂಬು ಬಾ
ಎಂದೋ ಎನದೆ ಇಂದೇ ಓಡೋಡಿ ಬಾ
ಪ್ರಭಾಕರನಂತೆ ನೀ ಪ್ರಭೆಯ ಬೀರಿ ಬಾ     
ಪ್ರಣತಿಯಾಗಿ ನನ್ನ ಬಾಳ ಬೆಳಗು ಬಾ       
ಪ್ರಣಯ ಭಿಕ್ಷೆಯ ನೀಡೆನ್ನ ತಣಿಸು  ಬಾ         
ಪ್ರಣಯಿನಿಯಾಗಿ ನನ್ನೊಡನೆ ಬಾಳು ಬಾ
*******************

Tuesday 2 July 2019

ಸಹಸ್ರ ಚಂದ್ರ ದರ್ಶಿನಿ ಮಂಗಳೇ

ಮಂಗಳಾಂಬ ಸದಾ ಮಂಗಳೇ
ರಾಮಚಂದ್ರ ಪ್ರಿಯ ವಲ್ಲಭೇ
ಉದಯಭರತಾರವಿಂದ ಜನನಿ
ಸೋಸಲೆವಂಶಾಭಿವರ್ಧಿನಿ||
ನಿತ್ಯಾನಂದ ಸ್ಮಿತ ವದನೆ
ನಿತ್ಯಪೀತಾಂಬರ ಧಾರಿಣಿ
ತ್ರಿಪುರ ಸುಂದರ ಮಾನಿನಿ
ನವನವೋನ್ಮೇಷ ಶಾಲಿನಿ||
ಗುಣವತಿ ಗುಣಗ್ರಾಹಿಣಿ
ಗುಣಾತೀತೆ ಗುಣವರ್ಧಿನಿ
ಸಕಲ ವಿದ್ಯಾ ಪ್ರದಾಯಿನಿ
ಹಿಂದೂ ಸಂಸ್ಕೃತಿ ಪೋಷಿಣಿ||
ವಿದ್ಯಾಶಾರದೆ ವಿದ್ಯಾದಾಯಿನಿ
ಆಧುನಿಕ ವಿದ್ಯಾಭಿಲಾಷಿಣಿ
ಸರಸ್ವತಿ ಕೃಪಾವಲಂಬಿನಿ
ಸುಜ್ಞಾನ, ವೈರಾಗ್ಯ ಧಾರಿಣಿ||
ದೀನ ದಲಿತೋದ್ಧಾರಿಣಿ
ಅಶನ ವಸನ ವಸ್ತ್ರ ದಾಯಿನಿ
ಸಮಸ್ತ ಜನಾನುರಾಗಿಣಿ
ಬಹುಜನ ಸಂಕಷ್ಟ ಹಾರಿಣಿ||
ಸ್ವಾದಿಷ್ಟ ಭೋಜನದಾಯಿನಿ
ಮಾತಾನ್ನಪೂರ್ಣೆ ಅನ್ನದಾಯಿನಿ
ಬಿಸಿಯೂಟ ಕೃಪಾಕಾರಿಣಿ
ಅನ್ನಬ್ರಹ್ಮ ಅನ್ನಪೂರ್ಣೇಶ್ವರಿ||
ನಿರಹಂಕಾರಿ ನಿರೋಗಿ
ಪರಿಸರಾರೋಗ್ಯ ರಕ್ಷಕಿ
ಸಮಾಜಾರೋಗ್ಯ ಪಾಲಕಿ
ಆರೋಗ್ಯ ಭಾಗ್ಯವರ್ಧಕಿ||
ಸಕಲಕಾರ್ಯ ಯಶಸ್ವಿನಿ
ಸಹಸ್ರ ಚಂದ್ರ ದರ್ಶಿನಿ.
ಶಿರಡಿಬಾಬಾ ಪದಪದ್ಮವಾಸಿನಿ
ಮಂಗಳಂ ಕುರು ಮಂಗಳೇ||
*****************

Monday 1 July 2019

ಇಂದಿವಳೆ ಮುಂದು

ಕೈಗಳಲಿ ಬಳೆಗಳ ಸದ್ದಿಲ್ಲ, ಹಣೆಯಲಿ ಕುಂಕುಮವಿಲ್ಲ

ಕೊರಳಲಿ ಮಾಂಗಲ್ಯ ಸರವಿಲ್ಲ, ಸೊಂಟದಲಿ ಡಾಬಿಲ್ಲ

ಪಿಲ್ಲೆ, ಕಾಲುಂಗುರಗಳಿಲ್ಲ, ಗೆಜ್ಜೆಯ ಝಣ ಝಣನಾದವಿಲ್ಲ

ಮೂಗುತಿ, ಬೆಂಡೋಲೆಗಳನೆಂದೂ ಹಾಕಿಯೇ ಇಲ್ಲ

ಸೀರೆಯುಟ್ಟವಳಲ್ಲ, ಕುಪ್ಪಸವ ತೊಟ್ಟವಳೂ ಅಲ್ಲ

ಜೀನ್ಸ್, ಪ್ಯಾಂಟ್, ಟಿ ಶರ್ಟ್ , ಮಿಡಿ, ಟಾಪು, ಹೈಹೀಲ್ಡು, ಗಾಗಲ್ಸ್, ವ್ಯಾನಿಟಿ ಬ್ಯಾಗ್, ಮೊಬೈಲ್, ಬಿಡುವುದಿಲ್ಲ

ಜಡೆಯನೆಂದೂ ಹೆಣೆದೇ ಗೊತ್ತಿಲ್ಲ ಹೂಮುಡಿವುದೆಲ್ಲಿಂದ

ಕೂದಲ ಹಾರಾಡುತ್ತಿಹುದು ಹಿಂದೆ ಮುಂದೆ ಸ್ವಚ್ಛಂದದಿಂದ

ಗೌರಮ್ಮನಂತಹ ಗಾಂಭೀರ್ಯ ಸುಳಿವುದಿನ್ನೆಲ್ಲಿಂದ

ಆದರೂ ಘನತೆ ಗೌರವಗಳಿಗೆ ಕಿಂಚಿತ್ತು ಧಕ್ಕೆ ಬಂದೇ ಇಲ್ಲ

ಲ್ಯಾಪ್ ಟ್ಯಾಪ್ ಮುಂದೆ ಕುಳಿತು ಸದಾ ಕೆಲಸಮಾಡುತಿಹಳಲ್ಲ

ಯಾರಿಗೂ, ಯಾವುದಕೂ ಎಂದೆಂದೂ ಹೆದರುವುದಿಲ್ಲ

ನಾಲ್ಕು ಗೋಡೆಗಳ ನಡುವಿನ ಜೀವನಕೆ ಬಂದಿಯಾಗಿಲ್ಲ

ಯಾವ ಕೆಲಸ ಕಾರ್ಯಗಳಿಗೂ ಹಿಂದೆ ಮುಂದೆನೋಡುವುದಿಲ್ಲ

ಅಂಜದೇ ಅಳುಕದೇ ಮುನ್ನುಗ್ಗಿ ಸಾಧನೆಗಳಮಾಡುತಿಹಳಲ್ಲ

ವೇಷ ಭೂಷಣಗಳಿಂದಲ್ಲ ಸಾಧನೆಯೆಂದುತೋರುತಿಹಳಲ್ಲ

ಎಲ್ಲ ಕ್ಷೇತ್ರಗಳಲೂ, ಎಲ್ಲ ವಿಚಾರಗಳಲೂ ಇಂದಿವಳೆಮುಂದಿಹಳಲ್ಲ.

ಅಹಲ್ಯ, ದ್ರೌಪತಿ, ತಾರಾ, ಮಂಡೋದರಿ, ಸೀತಾ, ಸರಸ್ವತಿ,ಲಕ್ಷ್ಮೀ, ಪಾರ್ವತಿ, ಸಾವಿತ್ರಿ, ಗಾಯಿತ್ರಿ, ಉಮೆ, ರಮೆ, ಚಂಡಿ, ಚಾಮುಂಡಿ,ಕಾಳಿ, ದುರ್ಗಿ, ಗಾರ್ಗಿ….

ಎಲ್ಲರೂ ತಾನಾಗಿ ಸಾಧನೆಯ ಪಥದಲಿ ಸಾಗುತ ಇಂದಿವಳೆ ಮುಂದಿಹಳಲಾ…..!
ಇಂದಿನ ಇವಳೆ ಮುಂದಿನವಳೆಲ್ಲ.