Monday 30 July 2018

ಈಗಿನ ಶಿಕ್ಷಣ

ಪರೀಕ್ಷೆಗಳ ಹಿಂದೆ ಹಿಂದೆಯೇ ಓಟ ಪಾಠ
ಪಾಸಿಂಗ್ ಪ್ಯಾಕೇಜುಗಳ ಭರದ ಓಡಾಟ   
ಅಂಕಗಳಿಕೆಗಾಗಿಯೇ ಸಕಲರ ಪರದಾಟ                     
ಇದು ಈಗಿನ ಶಿಕ್ಷಣದ ನೋಟ ನನ ಕಂದ||

Wednesday 25 July 2018

ನಿನ್ನ ನೀ ಅರಿ

ನನ್ನವರು ನನ್ನರಿಯಲಾರದೆ ಹೋದರೆನ್ನದಿರು
ನಿನ್ನವರ ನೀನರಿತುದೆಷ್ಟೆಂದು ತಿರುಗಿ ನೋಡು
ನನ್ನನರಿತವರಿಹರಿನ್ನೆಲೋ ಎನುತೋಡದಿರು   
ನಿನ್ನ ನೀ ಅರಿತು ನಡೆವುದನು ಕಲಿ ನನಕಂದ||

ನರರ ನರ್ತನ

ವರ್ತಮಾನದಲಿ ಭೂತವ ಬೆದಕಿ ಭವಿಷ್ಯವನೆದುರು ನೋಡುತ
ಕರ್ತವ್ಯವ ತೂಗುವುಯ್ಯಾಲೆಯಲಿರಿಸಿ ಅನುಗಾಲವೂ ತೂಗುತ
ಮರ್ತ್ಯಲೋಕದ ಸುಖವೆಲ್ಲವೂ ತನಗೆ ಬೇಕೆಂದೆನುತ ಬಯಸುತ
ನರ್ತನವ ಮಾಡುತಿಹರೀ ನರರು ಲೋಕದಲಿ ನಿತ್ಯ - ನನಕಂದ||

Sunday 22 July 2018

ಅವಿಶ್ವಾಸ ವೇ ವಿಶ್ವಾಸ

ಮಾತಿನ ಚಕಮಕಿಯಲಿ ಸಲ್ಲದ ವಾಕ್ಝರಿಯಬ್ಬರ
ಲೋಕಸಭೆಯಲಿ ಅವಿಶ್ವಾಸ ನಿರ್ಣಯದ ಭರ
ಕುಡಿಗಣ್ಣಿನ ನೋಟ ಆತ್ಮೀಯತೆಯ ಆಲಿಂಗನ
ಮೋದಿಯನು ಜನರೆಡೆಗೆ ಕರೆತಂದಿತಲಾ ನನಕಂದ||     

ಒಂದೆಂದು ಕಡೆಗಣಿಸದಿರು

ಒಂದೇ ಒಂದು ಕಿಡಿ ದಳ್ಳುರಿಯಾಗೆಲ್ಲವನು ದಹಿಸುವುದು
ಒಂದೇ ಒಂದು ನುಡಿ ಮನೆಮನಗಳನು ಮುರಿಯುವುದು
ಒಂದೇ ಒಂದು ಆಲೋಚನೆ ಬಾಳಿನಾ ದಿಕ್ಕ ಬದಲಿಪುದು
ಒಂದೇ ಒಂದೆಂದೆನುತ ಕಡೆಗಣಿಸದಿರು ನೀ ನನಕಂದ||

Friday 20 July 2018

ಸುಖವನರಸು


ಸುಖವಿಲ್ಲಿಲ್ಲ ಇಹುದಿನ್ನೆಲ್ಲೆಲ್ಲೋ ಎನುತ ಅರಸಿ
ಸುಖಿಸುವೆನಿನ್ನೆಲ್ಲೆಲ್ಲೋ ಎನುತನುಗಾಲ ಭ್ರಮಿಸಿ
ಸುಖವನರಸರಸಿ ಅಂಡಲೆಯುತ ಕುದಿಯದಿರು
ಸುಖವಿಹುದು ನಿನ್ನೊಳಗದನರಸು ನನಕಂದ|| 

Friday 13 July 2018

ಹಾಸ್ಯದೌತಣ


ರಾಶಿಯ ಕೊರವಂಜಿ ಅವಳತಂಗಿ ಅಪರಂಜಿಯ ಹಾಸ್ಯದ ಹೊನಲು
ಬೀchi, ಕೈಲಾಸಂ, ನಾ ಕಸ್ತೂರಿಯವರ ಚತುರೋಕ್ತಿಯ ನಗೆಗಡಲು
ನಗೆರಾಯಭಾರಿ ತುಮಕೂರಿನ  ಮುಗುಳು ನಗೆಯ ನಗೆಮುಗುಳು’ 
ನಗೆ ಸಾಹಿತ್ಯೋ ಪಾಸಕರಿಗೆ ಹಾಸ್ಯದೌತಣವ ಬಡಿಸಿಹುದು-ನನಕಂದ||

Thursday 12 July 2018

ನರರು ನಲುಗುವರು


ಮರಳಿನಲಿ ಮನೆಕಟ್ಟಿ ಸಿಂಗರಿಸಿ ಸಂತಸದಿ ನಲಿಯುತಿರೆ                
ಸುರಿವ ಮಳೆಗೆ ಕಣ್ಣೆದುರೆ ಮನೆಯು ಕೊಚ್ಚಿಹೋಗುತ್ತಿರೆ
ಕರ ಹಿಸುಕಿಗೊಳುತ ದುಃಖಿಸುವ ಮುಗ್ಧ ಬಾಲಕರವೊಲ್
ನರರು ನಲುಗುವರು ಬಾಳಿನಾಟವು ಕುಸಿಯೆ  ನನಕಂದ||

Sunday 8 July 2018

ಭಾವಪೂರ್ವಕ ಶ್ರದ್ಧಾಂಜಲಿ



ಕಾಯಕದಲಿ ಕಾಯವ ಗಟ್ಟಿಗೊಳಿಸಿ
ಕರ್ಮಯೋಗವ ತಾ ನಂಬಿ
ತನ್ನೆಲ್ಲ ಕಾರ್ಯವ ತಾನೇ ಎಸಗುತ
ಕರ್ಮ ಯೋಗಿಯಂತೆ ಬದುಕಿದಾಕೆ;
ತನ್ನ ಸಿದ್ಧಾಂತಗಳಿಗೆ ತಾ ಬದ್ಧರಾಗಿ
ತನ್ನಂತೆ ತಾನಿದ್ದು ಕೊನೆವರೆಗೂ
ತನ್ನ ತನುಮನವನು ಅದಕೆ ಅಣಿಗೊಳಿಸಿ
ತನ್ನತನದೊಡನೆ ಸದಾ ಬದುಕಿದಾಕೆ;
ಮಕ್ಕಳು ಮರಿಗಳ ಅಕ್ಕರೆಯಿಂದ ಸಲಹುತ
ಬಸುರಿ ಬಾಣಂತಿಯರ ಆರೈಕೆ ಮಾಡುತ
ಅನಾರೋಗ್ಯದಿಂದ ಬಳಲುವವರ ಸಂತೈಸುತ
ತನ್ನವರ ಸೇವೆಗೆ ಮುಂದಾಗಿ ಬದುಕಿದಾಕೆ;
ತನ್ನೊಲವಿನ ಬಂಧು ಮಿತ್ರರ ತಪ್ಪು ಒಪ್ಪುಗಳ ಮನ್ನಿಸುತ
ಅವರ ಯೋಗಕ್ಷೇಮಕೆ ಕಟಿಬದ್ಧಳಾಗಿ ಅನವರತ ನಿಂತು
ಕಿಂಚಿತ್ತು ಚ್ಯುತಿ ಬಾರದಂತೆ ಎಚ್ಚರದಿ ಕಾರ್ಯ ನಿರತಳಾಗಿ
ಬದಕ ಹಸನಗೊಳಿಸೆ ತುಡುಕಿ ಬದುಕಿದಾಕೆ;
ಸೋದರಿಯ ಮಕ್ಕಳ ಅಕ್ಕರೆಯಿಂದ ಸಾಕಿ ಸಲಹಿ
ಸೋದರನಿಗೆ ತನ್ನೆಲ್ಲವನೂ ಧಾರೆಯೆರೆದು
ತವರು ಮನೆಯೇಳ್ಗೆಯ ಮನಸಾರೆ ಬಯಸುತ
ಭ್ರಾತೃ ಪ್ರೇಮದಿ ಪರಾಕಾμÉ್ಠಯ ಮೀರಿದಾಕೆ;
ಕೌತುಕಗಳಲಿ ಕುತೂಹಲವ ತಳೆದು
ವಿಸ್ಮಯಗಳನು ವಿಸ್ಮಯದಿಂದ ನೋಡಿ
ಹಾಡು ಹಸೆಯ ಮನಸಾರೆ ಮೆಚ್ಚುತ
ಹಬ್ಬ ಹರಿದಿನವ ಬಿಡದೆ ಮಾಡಿದಾಕೆ;
ಚಸ್ಮದ ಮೊರೆಯಿಲ್ಲದೆ ಕೊನೆಯವರೆಗು ಓದಿಬರೆದು
ಆರೋಗ್ಯ ಸಲಹೆಗಳ ಕಾಳಜಿಯಿಂದ ಸಂಗ್ರಹಿಸುತ
ಬಿಡದೆ ಆರೋಗ್ಯದ ಕಡೆಗೆ ಗಮನನೀಡಿ
ಜತನದಿಂದ ತನ್ನಾರೋಗ್ಯವ ತಾ ಕಾಯ್ದುಕೊಂಡಾಕೆ;
ಒಡವೆ ವಸ್ತ್ರ ಆಸ್ತಿ ಮೋಹ ಕಿಂಚಿತ್ತಿಲ್ಲದೆ
ಒಡನಾಡಿಗಳಲಂಕಾರವ ಮನಸಾರೆ ಮೆಚ್ಚಿ
ಒಡಹುಟ್ಟಿದವರ ಒಳಿತನೇ ತಾ ನಿತ್ಯ ಬಯಸಿ
ಒಡಲ ಸಂಕಟವ ಮರೆಮಾಚಿ ಬಾಳದೂಡಿದಾಕೆ;
ಸ್ವಚ್ಛತೆಗೆ ಕೊನೆಯವರೆಗು ಆದ್ಯತೆಯ ನೀಡಿ
ವಸ್ತು ವಾಸ್ತವ್ಯಗಳನು ಒಪ್ಪಗೊಳಿಸಿ
ಚಿಂದಿ ಬಟ್ಟೆ-ಬರಿಯನು ಬಿಡದೆ ಸ್ವಚ್ಛಗೊಳಿಸಿ
ಶುಭ್ರತೆಗೆ ಮತ್ತೊಂದು ಹೆಸರಾದಾಕೆ;
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬಾಳಕವ ಸಿದ್ಧಗೊಳಿಸಿ
ಬೋಂಡ ಪಕೋಡ ಚಕ್ಕುಲಿ ಕೋಡುಬಳೆಗಳನು ಇಚ್ಛಿಸಿ
ಒಳ್ಳೆಣ್ಣೆಯೊಂದಿಗೆ ಉಪ್ಪಿನಕಾಯಿ ಚಟ್ನಿಪುಡಿ ಗೊಜ್ಜಮಿದ್ದು
ಕಾಳುಹುಳಿ ಹಾಲುಬಾಯಿ ಸವಿಯ ಬಯಸಿದಾಕೆ;
ಶ್ರೀನಿವಾಸಜೋಯಿಸರ ಮಡದಿಯಾಗಿ
ಪುರಾಣಿಕರ ಆಸರೆಯಲಿ ಬಾಳಿ ಬದುಕಿ
ನಿಂಗು, ಅಮ್ಮ, ಅಜ್ಜಿ, ಗಿಂಡಿಅಜ್ಜಿ, ನಾಗರತ್ನಳಾಗಿ
ಯಾರಿಗೂ ಯಾವುದಕು ಎಂದೆಂದೂ ತಲೆಬಾಗದೆ
ಯಾರಿಗೂ ಯಾವುದಕು ಹೊರೆಯಾಗದಂತೆ ಬದುಕಿದ
ಅವರಾತ್ಮಕೆ ಚಿರ ಶಾಂತಿ ದೊರಕಲಿ
ಅವರು ಬಯಸಿದ ಮುಕ್ತಿ ಸಿಗಲಿ.
  *************

ಕಾರ್ಯಗಳ ಫಲ


ಹಿಟ್ಟೊಂದೆ ಹದವೊಂದೆ ಬಳಪ ಕರಣಗಳೊಂದೆ
ಅಟ್ಟಡುಗೆಗಳ ವಿಧಿವಿಧಾನಗಳೆಲ್ಲವೂ ತಾನೊಂದೆ
ಕಟ್ಟಕಡೆಗೆ ಪರಿಮಳವು ತಾನೊಂದೆ ರುಚಿಮಾತ್ರ ಬೇರೆ
ಕಾರ್ಯಗಳ ಫಲವು ಮನಸ್ಸಿನ ಸ್ಥತಿಯಂತೆ ನನಕಂದ||

‘ಬೆಕ್ಕು ಹಾರುತಿದೆ ನೋಡಿದಿರಾ?’


ಬೇಂದ್ರೆಯವರು ‘ಹಕ್ಕಿ ಹಾರುತಿದೆ ನೋಡಿದಿರಾ?’ ಎಂಬ ತಮ್ಮ ಕವನವನ್ನು ಅಣಗಿಸಿ ‘ಬೆಕ್ಕು ಹಾರುತಿದೆ ನೋಡಿದಿರಾ?’ ಎನ್ನುವ ‘ಅಣಕುವಾಡು’ ಕವನವನ್ನು ಬರೆದರು.

ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||

ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||

ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||

ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||

ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||

ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||

ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||


ಚಿತ್ರ : ಗೂಗಲ್ ಕೃಪೆ


Saturday 7 July 2018

ವಿಧಿಯಿಚ್ಛೆಯ ಮೀರಲಾದೀತೆ


ವಿಧವಿಧದಾಟಗಳನು ಹೂಡುತ ಮಾಯಾ ಮುಸುಕೆಳೆದು
ವಿಧವಿಧ ಆಲೋಚನೆಗಳನು ಮನದೊಳಗೆ ಕೆರಳಿಸುತ
ವಿಧೇಯರಂತಾತನಾಣತಿಯ ಪಾಲಕರನ್ನಾಗಿಸುವನು
ವಿಧಿರಾಯನಿಚ್ಛೆಯನೆಂತು ಮೀರಲಾದೀತು ನನಕಂದ||

Wednesday 4 July 2018

ತಡೆವುದತೆಂತು


ಮೋಹದಾ ಪಾಶ ಬಿಗಿ ಬಿಗಿದು ಉರುಳಾಗಿ ಸುತ್ತುತಿರೆ
ಮೋಡಿಗೊಳಿಪ ಸವಿಸವಿಯ ನುಡಿಗಳು ಕಟ್ಟಿಹಾಕುತಿರೆ
ಮಾಟದ ಕಾಟ ಕಾಣದಂತೆ ಬೆಂಬಿಡದೆ ಸೆಳೆದು ಕಾಡುತಿರೆ
ಜೌವನದ ಸೊಕ್ಕಿನುದ್ವೇಗವ ತಡೆವುದತೆಂತು ನನಕಂದ||