Friday 17 April 2015

ಮಾತಿನ ಮಹತ್ವ ಸಾರುವ ಸರ್ವಜ್ಞನ ವಚನಗಳು


ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ |
ಹೊತ್ತಾಗಿ ನುಡಿದ ಮಾತು ಕೈಜಾರಿದಾ |
ಮುತ್ತಿನಂತಿಹುದು ಸರ್ವಜ್ಞ ||

ಮಾತಿಂಗೆ ಮಾತುಗಳು | ಓತು ಸಾಸಿರವುಂಟು |
ಮಾತಾಡಿದಂತೆ ನಡೆದರಾ ಕೈಲಾಸ |
ಕಾತನೇ ಒಡೆಯ ಸರ್ವಜ್ಞ ||

ಮಾತಿನಿಂ ನಗೆ-ನುಡಿಯು | ಮಾತಿನಿಂ ಹಗೆ ಕೊಲೆಯು |
ಮಾತಿನಿಂ ಸರ್ವ ಸಂಪದವು ಲೋಕಕ್ಕೆ |
ಮಾತೆ ಮಾಣಿಕವು ಸರ್ವಜ್ಞ ||

ಮಾತು ಬಲ್ಲಾತಂಗೆ | ಮಾತೊಂದು ಮಾಣಿಕವು |
ಮಾತ ತಾನರಿಯದ ಅಧಮಗೆ ಮಾಣಿಕವು |
ತೂತು ಬಿದ್ದಂತೆ ಸರ್ವಜ್ಞ ||

ಮಾತು ಬಲ್ಲಾತಂಗೆ | ಯಾತವದು ಸುರಿದಂತೆ |
ಮಾತಾಡಲರಿಯದಾತಂಗೆ ಬರಿ ಯಾತ |
ನೇತಾಡಿದಂತೆ ಸರ್ವಜ್ಞ ||

ಮಾತು ಮಾಣಿಕ ಮುತ್ತು | ಮಾತೆ ತಾ ಸದನವು |
ಮಾತಾಡಿದಂತೆ ನಡೆದಾತ ಜಗವನ್ನು|
ಕೂತಲ್ಲಿ ಆಳ್ವ ಸರ್ವಜ್ಞ ||
    
ಮಾತು ಮಾತಿಗೆ ತಕ್ಕ | ಮಾತು ಕೋಟಿಗಳುಂಟು |
ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ |
ಸೋತವನೆ ಜಾಣ ಸರ್ವಜ್ಞ ||
    
ರಸಿಕನಾಡಿದ ಮಾತು | ಶಶಿಯುದಿಸಿ ಬಂದಂತೆ |
ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು|
ಬಡಿದಂತೆ ಸರ್ವಜ್ಞ ||
       
ಕಾದ ಕಬ್ಬುನವು ತಾ | ಹೊಯ್ದೊಡನೆ ಕೂಡುವದು |
ಹೋದಲ್ಲಿ ಮಾತು ಮರೆದರಾ ಕಬ್ಬುನವು |
ಕಾದಾರಿದಂತೆ ಸರ್ವಜ್ಞ ||


No comments:

Post a Comment