Wednesday 22 April 2020

ಗೃಹ ಕೃತ್ಯ

ಒಂದು ದಿವಸದಲ್ಲ ಒಂದು ಹೊತ್ತಿನದಲ್ಲ ಗೃಹ ಕೃತ್ಯ
ನಿತ್ಯ ನಿರಂತರ ಮುಗಿಯದ ಕಾಯಕವು ಇದು ಸತ್ಯ
ಕಾಯಕ ನಿಷ್ಠೆಯಿಂದಲಿ ಮಾಡುತಿರೆ ಅದೇ ಕೈಲಾಸ
ಅನುಗಾಲ ಕರ್ಮಯೋಗಿಯಾಗು ನೀ ನನ ಕಂದ||

ರಕ್ಷಿಸು

ಕಾಣುವ ಪ್ರಕೃತಿಯ ಕಾಡುತಲಿರುವೆಯೋ ನೀ ಮನುಜ
ಕಾಣದ ವೈರಸ್ ಕಾಡುತಲಿರುವುದು ನಿನ್ನನು ಓ ಮನುಜ
ಕಾಣದ ದೇವರು ಕಾಪಿಡುತಿರೆ ಮನುಕುಲದುಳಿವು ತಿಳಿ ಮನುಜ
ಕಾಣದ ಹಾಗೆ ನಶಿಸುವ ಮೊದಲೆ ಪ್ರಕೃತಿಯ ರಕ್ಷಿಸು ನೀ ನನ ಕಂದ||

Thursday 16 April 2020

ಪ್ರಾಸ ಪದ ಕಸರತ್ತು

೧. ಮಕ್ಕಳಿಗೆ ಇಷ್ಟ ಆಟ
ಹಸಿದಾಗ ಬೇಕು-------

೨. ಶಾಲೆಯಲ್ಲಿ ಆಗುತ್ತೆ ಪಾಠ
ಮನೆಯಲ್ಲಿ ಆಗುತ್ತೆ-------

೩. ಅರಸನ ವಾಸ ಅರಮನೆ
ಕಳ್ಳನ ಬಂಧನ-------

೪. ದೇವಾಲಯದ ಮುಂದೆ ಕಾಣೋದು ಕಂಬ
ಕನ್ಬಡಿ ಒಳಗೆ ಕಾಣುವಿದು-------

೫. ಉಸಿರಾಡಲು ಬೇಕು ಗಾಳಿ
ವಧುವಿನ ಕೊರಳಿಗೆ ಕಟ್ಟಲು ಬೇಕು-------

೬. ಮಡಿಕೆ ಮಾಡಲು ಬೇಕು ಮಣ್ಣು
ನೋಡಲು ಬೇಕು-------

೭. ಬೆಳಕು ಕೊಡುತ್ತಾನೆ ರವಿ
ಕವನ ಬರೆಯುತ್ತಾನೆ-------

೮. ಕಥೆ ಹೇಳಲು ಬೇಕು ಅಜ್ಜಿ
ಕಾಫಿ ಜೊತೆ ತಿನ್ನಲು ಬೇಕು-------

೯. ದಾವಣಗೆರೆ ದೋಸೆಗೆ ಬೇಕು ಬೆಣ್ಣೆ
ಮುದುಕರಿಗೆ ಓಡಾಡಲು ಬೇಕು-------

೧೦. ಚರಡಿ (ಸಾರಣೆ) ತುಂಬ ರಂದ್ರ
ರಾತ್ರೆ ಆಕಾಶ ಬೆಳಗುವವನು-------

೧೧. ರಾಜಾಧಿರಾಜರ ಹಾರದಲ್ಲಿ ಇರುತ್ತಿದ್ದದು ಮಾಣಿಕ್ಯ
ಚಂದ್ರಗುಪ್ರ ಮೌರ್ಯನಿಗೆ ಬೆಂಬಲವಾಗಿದ್ದವನು-------

೧೨. ಮನೆಯನ್ನು ನಿಷ್ಠೆಯಿಂದ ಕಾಯುವುದು ನಾಯಿ
 ಮಕ್ಕಳನ್ನು ಪ್ರೀತಿಯಿಂದ ಪಾಲಿಸುವವಳು-------

೧೩. ಬಲವಿಲ್ಲದವರು ಕಾರ್ಯ ಸಾಧನೆಗೆ ಬಳಸುವುದು ಯುಕ್ತಿ
ಬಲವಿರುವವರು ತಮ್ಮ ಕಾರ್ಯಸಾಧನೆಗೆ ಬಳಸುವುದು -------

೧೪.ವಾಕ್ಯ ರಚನೆಗೆ ಬಳಸುವುದು ಪದ
ಮನೆಯನ್ನು ರಕ್ಷಿಸಿಕೊಳ್ಳಲು ಹಾಕುವುದು -------

೧೫. ಕತ್ತಿ, ಕೊಡಲಿ, ಕೊಡೆ ಮುಂತಾದವುಗಳ ಹಿಡಿ ಕಾವು
ಅಕ್ಕಿ, ರಾಗಿ, ಬೆಳೆ ಮುಂತಾದ ಧಾನ್ಯಗಳನ್ನು ಅಳೆಯಲು ಬಳಸುವುದು (ಸೇರಿನ ನಾಲ್ಕನೇ ಒಂದು ಭಾಗ)-------

೧೬. ಮಳೆಗೆ ಸಮಾನಾರ್ಥಕ ಪದ ವರ್ಷ
ಸಂತೋಷಕ್ಕೆ ಸಮಾನಾರ್ಥಕ ಪದ-------

೧೭. ಸವಿಯಾದ ಜೇನು ಮಧು
ಮದುವೆಯ ಹೆಣ್ಣು-------

೧೮. ದೊಡ್ಡದಾಗಿ ಬೆಳೆದ ಗಿಡ ಮರ
ಮದುವೆಯ ಗಂಡು-------

೧೯. ಕುಡಿಯಲು ಬೇಕು ಹಾಲು
ನಡೆಯಲು ಬೇಕು-------

೨೦. ಸಣ್ಣ ಕೈ ಪೆಟ್ಟಿಗೆ ಭರಣಿ
ಸಗಣಿಯಿಂದ ಮಾಡಿದ ಉರುವಲು------

೨೧. ವಾಕ್ಯ ರಚನೆಗೆ ಬೇಕು ಪದ
ಅಡುಗೆ ಮಾಡಲು ಬೇಕು-------

೨೨. ನಾವು ಮಾಡುವ ಪ್ರತಿಯೊಂದು ಕೆಲಸ ಕರ್ಮ
ಶರೀರವನ್ನು ರಕ್ಷಿಸುವ ಸ್ಪರ್ಶ ಕವಚ -------

೨೩. ಹಾಲು ನೀರನ್ನು ಬೇರೆ ಮಾಡುವ ಪಕ್ಷಿ ಹಂಸ
ವೃತ್ತದ ಪರಿಧಿಯ ಒಂದು ಭಾಗ  -------

೨೪. ಕತ್ತಲೆಯನ್ನು ಕಳೆಯುವುದು ಬೆಳಕು
ಶುಭ್ರತೆಯನ್ನು ಕಳೆಯುವುದು-------

೨೫.ಬೆಳೆಯನ್ನು ಹಾಳು ಮಾಡುವುದು ಕಳೆ
ಬೆಳೆ ಬೆಳೆಯಲು ಪೂರಕವಾದುದು-------

೨೬.ನಮ್ಮನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವುದು ಭರಣಿಯಲ್ಲ ಧರಣಿ
ಇಡೀ ಜಗತ್ತಿಗೆ ಬೆಳಕನ್ನು ಕೊಡುವುದು ತರುಣಿಯಲ್ಲ -------

೨೭. ಸಾಲು ಸಾಲಾಗಿರುವುದು ಸರಣಿ
 ಯೌವ್ವನಕ್ಕೆ ಬಂದ ಹುಡುಗಿ-------

೨೮. ಉತ್ಸಾಹ, ಶಕ್ತಿಯುತ ಹಾಗೂ ನಾಟಕೀಯವಾದ ನಿರೂಪಣೆ ನೃತ್ಯ ಮತ್ತು ಸಂಗೀತ ಪ್ರಕಾರ ಲಾವಣಿ
ಜರಡಿ ಹಿಡಿಯುವ ಸಾಧನ ಸಾರಣಿ------- 

೨೯. ಜಪಮಾಲೆಯಲ್ಲಿ ಇರುವುದು ಮಣಿ
ಕೊರವಂಜಿ ಹೇಳುವುದು-------

೩೦. ಸುಂದರ ಸ್ತ್ರೀಯ ರೂಪವನ್ನು ಧರಿಸುವ ಒಂದು ದುಷ್ಟ ಶಕ್ತಿ ಡಾಕಿಣಿ
ಸುಂದರ ಸ್ತ್ರೀಯ ರೂಪವನ್ನು ಧರಿಸುವ ಒಂದೊಂದು ದುಷ್ಟ ಶಕ್ತಿ------

೩೧. ಕೆಟ್ಟ ಸಲಹೆ ಕೊಡುವವನು ಕಂತ್ರಿ
ರಾಜನಿಗೆ ಸಲಹೆ ಕೊಡುವವನು

Wednesday 15 April 2020

ಕರುನಾಡು

ಕನ್ನಡ ನಾಡು
ಹೊನ್ನಿನ ಬೀಡು 
ಕಲೆ ಸೌಂದರ್ಯದ ಗೂಡು
ಸುಸಂಸ್ಕೃತಿ ನೆಲೆವೀಡು
ಸಾಮರಸ್ಯದ ನಮ್ಮೀ ಕರುನಾಡು

ಚಂದದ ನಾಡು
ಗಂಧದ ಬೀಡು
ಸುಂದರ ನದಿಗಳ ಗೂಡು
ಅಂದದ ಗಿರಿಗಳ ಸೂಡು
ನಂದನವನ ನಮ್ಮೀ ಕರುನಾಡು

ಮಲ್ಲಿಗೆಯ ನಾಡು
ಏಲಕ್ಕಿಯ ಬೀಡು
ರೇಷ್ಮೆಯ ಗೂಡು
ತೆಂಗು ಕೌಂಗಿನ ನೆಲೆವೀಡು
ವೀಳೆಯ ಸವಿ ಕರುನಾಡು

ಕರುಣೆಯ ನಾಡು
ಮಮತೆಯ ಬೀಡು
ಒಲುಮೆಯ ಗೂಡು
ಸ್ವಾಭಿಮಾನದ ನೆಲೆವೀಡು
ಪ್ರೀತಿಯ ನಮ್ಮೀ ಕರುನಾಡು

ವೀರ ಶೂರರ ನಾಡು
ಕವಿಪುಂಗವರ ಬೀಡು
ಗಾನ ಕುಕಿಲಗಳ ಗೂಡು
ಪುಣ್ಯ ಪುರುಷರ ನೆಲೆವೀಡು
ನಮ್ಮೀ ನೆಚ್ಚಿನ ಕರುನಾಡು

ಪಂಪ ರನ್ನ ಪೊನ್ನ ಕುಮಾರವ್ಯಾಸರ ನಾಡು
ಕದಂಬ ಹೊಯ್ಸಳ ತುಳುವರಾಳಿದ ಬೀಡು
ರಸಋಷಿ ಸಂತಪರಂಪರೆಯ ಪುಣ್ಯದ ಗೂಡು
ಹೊನ್ನಮ್ಮ ಅಕ್ಕ ಶಾಂತಲೆ ಶಾಂತಮ್ಮರ ಸೂಡು
ಸರ್ವಧರ್ಮ ಕಲೆಗಳ ಸಮನ್ವಯದ ಕರುನಾಡು

ಕಬ್ಬಿಗರ ನೆಚ್ಚಿನ ನಾಡು
ಕಲಾಕಾರರು ಮೆಚ್ಚಿದ ಬೀಡು
ಶಾಂತಿ ಕ್ರಾಂತಿಯ ಗೂಡು
ಋಷಿ ಮುನಿಗಳ ತ್ಯಾಗದ ಸೂಡು
ರಾಜಾಧಿರಾಜರ ಭೋಗದ ಕರುನಾಡು

ಶಾಂತಿಯ ಪುತ್ಥಳಿ

ಅಟ್ಟ ಅಡಿಗೆಯು ರುಚಿಯು
ತೊಟ್ಟ ತೊಡುಗೆಡಯು ಶುಭ್ರ
ಕೊಟ್ಟ ಕೊಡುಗೆಯು ಶ್ರೇಷ್ಠ
ದಟ್ಟವಾಗಿಹುದಿವಳ ಕೀರ್ತಿ
ಪಟ್ಟ ಕಷ್ಟಕಾರ್ಪಣ್ಯವ ಮರೆತು
ಇಟ್ಟ ಹೆಸರಂತೆ ಶಾಂತವಾಗಿಹಳು

ಇಟ್ಟವರು ಯಾರೋ ಹೆಸರ
ಇಟ್ಟವರ ಇಂಗಿತವ ತಿಳಿದು
ಬೆಟ್ಟು ಮಾಡದಂತೆ ಯಾರು
ಇಟ್ಟ ಹೆಸರಿಗೆ ಅನ್ವರ್ಥವಾಗಿ
ಶಾಂತಿ ರತ್ನವೇ ಆಗಿಹಳು

ಬಹುಭಾಷಾ ವಿಶಾರದೆ
ಸರಳ ಸಜ್ಜನಿಕೆಯ ಗಣಿ
ನಿರಾಡಂಬರ ಸದ್ಗುಣಿ
ನಿರಹಂಕಾರಿ, ನಿರುಪದ್ರವಿ
ನಗುಮೊಗದ ಚೆಲುವೆ
ಶುಭ್ರ ಶ್ವೇತಕೇಶ ಸುಂದರಿ
ಸಾಹಿತ್ಯರಚನಾ ಪಂಡಿತೆ

ನಾಗರಾಜನ ಕೈಹಿಡಿದು
ಸಕ್ಕರೆಗೆ ಅಕ್ಕರೆಯ ಮಗಳಂತಿದ್ದು
ಸೇತುರಾಮನ ಮುದ್ದು ಸತಿಯಾಗಿ
ಬಂಧು ಮಿತ್ರರ ಮನಗೆದ್ದು
ಸದ್ದು ಗದ್ದಲಕೆಡೆಗೊಡದೆ
ಶಾಂತಮೂರ್ತಿಯೆ ತಾನಾಗಿ
ಹೆಸರಿಗನ್ವಯವಾಗಿ ತಾನಿಹಳು

ಉಪ್ಪಿಟ್ಟು ಚಿತ್ರಾನ್ನ
ಮಾವಿನಕಾಯಿ ಚಟ್ನಿ
ಕೋಸುಂಬರಿ ಸಜ್ಜಿಗೆ
ಮಜ್ಜಿಗೆಹುಳಿ ತಿಳಿಸಾರು
ನುಚ್ಚಿನುಂಡೆ ಅಂಬೊಡೆ
ಬೆಳೆಯುವುದು ಪಟ್ಟಿ
ತಿಂದವರಿಗಷ್ಟೆಗೊತ್ತು
ಅವಳ ಕೈರುಚಿಯು
ಹದದಿ ಅಡುಗೆಯಮಾಡಿ
ಪಾಕಪ್ರವೀಣೆಯೆನಿಸಿಹಳು


ಸಾಹಿತ್ಯ ಸಂಗೀತ
ಹಾಡು ಹಸೆ
ಆಟ ಪಾಠ ಪರಿಣತೆ
ದೇಶ ವಿದೇಶಗಳ ಸುತ್ತುತ
ಹಬ್ಬಹರಿದಿನವ ಬಿಡದೆ
ನೇಮದಿಂ ಆಚರಿಸುತ
ಕಥೆ ಕವನಗಳ
ರಚಿಸಿ ಹರ್ಷಿಸುವಳು

ಎಲ್ಲವನು ಮನಸಾರೆ ಮೆಚ್ಚಿ
ಎಲ್ಲರಾ ಒಳಿತನು ತಾ ಬಯಸಿ
ಎಲ್ಲಾ ವಿಷಯಗಳನು ಬೋಧಿಸಿ
ಎಲ್ಲರಾ ಗುಣಗಳನು ತಾ ಗ್ರಹಿಸಿ
ಎಲ್ಲರನು ನಲ್ಮೆಯಿಂ ಒಂದಾಗಿಸಿ
ಎಲ್ಲರೊಡನಿರಲು ಬಯಸುವವಳು

ನೀತಿ ನಿಯಮಪಾಲನೆಯನಿಷ್ಟಪಟ್ಟು
ಕಲಿಕೆಯುವಲಿ ಕಲಿಸುವಲಿ ಬಿಗಿಪಟ್ಟು
ಊಟ ಉಪಚಾರಗಳಲಿ  ಅಚ್ಚುಕಟ್ಟು 
ಉಡುಗೆ ತೊಡುಗೆಯಲಿ ಕಟ್ಟುನಿಟ್ಟು
ಇವೇ ಇವಳ ಬಾಳಿನ ಸಾಧನೆಯಗುಟ್ಟು

ವೈ ಎಂದು ಯಾರನು ಕೇಳಿಲ್ಲ
ವಿರಸಕೆಂದು ಎಡೆಗೊಟ್ಟಿಲ್ಲ
ಶಾಂತಿಯ ಕಳೆದುಕೊಂಡಿಲ್ಲ 
ತಾರತಮ್ಯವನೆಂದೂ ಮಾಡಿಲ್ಲ
ಮಕಾರದ ನುಡಿಯ ಗಿರ್ವಾ- 
-ಣಿ ವಿದ್ಯೆಯಾ ಶಾರದೆ, ಶಾಂತಿಯ ತವನಿಧಿ
ಶಾಂತಿ, ಶಾಂತಿ ಸೇತುರಾಂ, ಶಾಂತಾ ಮಣಿ. 

Saturday 11 April 2020

R R ನುಡಿ ನಮನ



  R R ಅವರ ಯಾರ್ಯಾರು ಬಲ್ಲರೋ
ಅವರೇ ಬಲ್ಲರವರಾತ್ಮೀಯತೆಯ ಪರಿಯ
ಅವರ ಆದರದ ಸವಿಯ ಆತಿಥ್ಯದ ಪರಿಯ
ಅವರ ಅತಿಶಯಗುಣ ಸಾಮರ್ಥ್ಯದ ಪರಿಯ
ಅವರ  ಬಹುಮುಖ‌ ಪ್ರತಿಭೆಯ ಪರಿಯ
ಅವರ ಸವ್ಯಸಾಚಿ ಸಾಮರ್ಥ್ಯದ ಪರಿಯ
ಅವರ ಸೃಜನಶೀಲ ಕೌಶಲ್ಯದ ಪರಿಯ

ಸಂಸಾರಿಯಲ್ಲದ ಸಂಸಾರಿಯ ಪರಿಯ
ನಗುಮೊಗದ ಸವಿನುಡಿಯ ಪರಿಯ
ಮಾತೃ ಹೃದಯದ ಮಮತೆಯ ಪರಿಯ
ಶಿಷ್ಯರಿಗೆ ಮಾರ್ಗದರ್ಶನ ನೀಡುವ ಪರಿಯ
ಭಾವನಾತ್ಮಕ ಸಂಬಂಧವ ಬೆಸೆಯುವ ಪರಿಯ

ಎಲ್ಲವನು ಮನರಾರೆ ಮೆಚ್ಚಿದವರು
ಎಲ್ಲರಾ ಒಳಿತನು ತಾ ಬಯಸಿದವರು
ಎಲ್ಲಾ ವಿಷಯಗಳನು ಬೋಧಿಸಿದವರು
ಎಲ್ಲರಾ ಗುಣಗಳನು ಗ್ರಹಿಸುತ್ತಿದ್ದವರು
ಎಲ್ಲರನು ನಲ್ಮೆಯಿಂ ಒಂದಾಗಿಸಿದವರು
ಎಲ್ಲರೊಡನಿರಲು ಬಯಸುತ್ತಿದ್ದವರು

ಶೈಕ್ಷಣಿಕಾಭಿವೃದ್ಧಿಯಲಿ ಕಾರ್ಯ ಪ್ರವೃತ್ತರಾದವರು
ಪ್ರಾಮಾಣಿಕತೆಯಿಂದ ನಿಷ್ಠೆಯಲಿ ದುಡಿಯುತ್ತಿದ್ದವರು
ಸಾಧನೆಗಳ ಸರಮಾಲೆಯ ಸರದಾರಿಣಿಯಾಗಿದ್ದವರು
ಬಿರುದು ಬಾವುಲಿಯ ಬೆನ್ನನೆಂದೂ ಹತ್ತದವರು
ಫಲಾಫಲಗಳನೆಣಿಸದೆ ತೆರೆಮರೆಗೆ ಸರಿಯುತ್ತಿದ್ದವರು 

ನಗುನಗುತ ತಪ್ಪುಗಳ ಒಳ್ನುಡಿಯಿಂ ತಿದ್ದುತ್ತಿದ್ದವರು
ಶಿಷ್ಯಕೋಟಿಯ ಅಭಿಮಾನಕೆ ಪುಳಕಗೊಂಡವರು
ಗುರುವಾಗಿಯೂ ಶಿಷ್ಯಳಂತೆಯೇ ಕೊನೆತನಕಿದ್ದವರು
ಚ್ಯುತಿಬಾರದಂತೆ ಕರ್ತವ್ಯಗಳ ಪೂರ್ಣಗೊಳಿಸಿದವರು
ವಿಜಯ ಶಿಕ್ಷಕರ ಕಾಲೇಜಿನ ಕೀರ್ತಿಯ ಬೆಳಗಿದವರು

ನೀತಿ ನಿಯಮಪಾಲನೆಯನಿಷ್ಟಪಟ್ಟು
ಕಲಿಕೆಯುವಲಿಕಲಿಸುವಲಿ ಬಿಗಿಪಟ್ಟು
ಊಟ ಉಪಚಾರದಲಿ ಕಚ್ಚುನಿಟ್ಟು 
ಉಡುಗೆ ತೊಡುಗೆಯಲಿ ಅಟ್ಟುಕಟ್ಟು
ಇವೇ ಇವರ ಬಾಳಿನ ಸಾಧನೆಯಗುಟ್ಟು

ಬಹುಭಾಷಾ ವಿಶಾರದೆ ಸರಳ ಸಜ್ಜನಿಕೆಯ ಗಣಿ
ನಿರಾಡಂಬರ ಸದ್ಗುಣಿ ನಿರಹಂಕಾರಿ, ನಿರುಪದ್ರವಿ
ಮೃದು ಮಧುರ ಭಾಷಿಣಿ ನಗುಮೊಗದ ಸುಂದರಿ
ಕಲಾಭಿಮಾನಿ ಕಲಾಪ್ರೇಮಿ ಸರ್ವ ಕಾರ್ಯಕಾರಿಣಿ
ಮಮತಾಮಯಿ ಮಾತೃರೂಪಿಣಿ ಸಮಚಿತ್ತದ ರಾಜೇಶ್ವರಿ 

 ರಾರಾಜಿಸುವ ಶೈಕ್ಷಣಿಕ ಸುಧಾರಣೆಗಳ ಮಾಡುತ
 ಜೇವೊಡೆದ ಸೃಜನಶೀಲ ಶರಗಳು ಗುರಿತಪ್ಪದೆ ಶಾ-
 -ಶ್ವತ ಸ್ಥಾನವನು ಎಲ್ಲರ ಮನದಲಿ ಪಡೆದವರು 
 ರಿಸಿ ಮುನಿಗಳಂತೆ ನಿರ್ಲಿಪ್ತತೆಯಿಂ ಬಾಳಿದವರು
 ಆರ್ ಆರ್ ಎಂದೆಲ್ಲರ ಮನದಿ ಉಳಿದಿರುವವರು

Friday 3 April 2020


ಬಿಡುಗಡೆ ಬೇಕಿದೆ

ಜಾತಿಮತ ಧರ್ಮಮರೆತೊಂದಾಗಬೇಕಿದೆ
ಸಮರೋಪಾದಿಯಲಿ ಹೋರಾಡಬೇಕಿದೆ
ಕೋವಿಡ್19ನಿಂದ ಬಿಡುಗಡೆಯುಬೇಕಿದೆ
ಮನುಕುಲವು ಉಳಿಯಬೇಕಿದೆ ನನಕಂದ||

ಕಾದು ಕುಳಿತಿಹಳು

ಹೋಗದಿರಿ ಹೊರಗೆ
ಮಹಾಮಾರಿ ಕರೋನ
ಕಾದು ಕುಳಿತಿರುವಳು
ನಿಮ್ಮ ಕೈಯ ಹಿಡಿಯೆ

                    

Wednesday 1 April 2020

ಬೇಜಾರಾಗುತ್ತಿದೆ

ಕೋವಿಡ್ 19 ಕಾಟ ತಾಳದಂತಾಗಿದೆ
ಕಣ್ಣಿಗೆಕಾಣದಂತೆಲ್ಲೆಡೆಯು ಹರಡುತಿದೆ
ಎಂದಿಗೆ ಬಿಡುಗಡೆಯೆಂದು ತಿಳಿಯದಾಗಿದೆ
ಬೇಜಾರಾಗುತ್ತಿದೆಯಲ್ಲ
      ಹಗಲುರಾತ್ರಿಯೆನದೆ ಸಕ್ರಿಯೆಯಲಿ ಚಲಿಸುತಿದೆ
      ಮುದುಕರು ಮಕ್ಕಳೆಂದೆನದೆ ಎಲ್ಲರನು ಕಾಡುತಿದೆ
      ಏನುಮಾಡದಂತೆ ಎಲ್ಲವನು ಎಲ್ಲರನು ಬಂಧಿಸಿದೆ
      ಬೇಜಾರಾಗುತ್ತಿದೆಯಲ್ಲ
ನೋಡಿದ್ದೇ ನೋಡಿ ನೋಡಿ
ಮಾಡಿದ್ದೇ ಮಾಡಿ ಮಾಡಿ
ಆಡಿದಾಟವನೇ ಆಡಿ ಆಡಿ
ಬೇಜಾರಾಗುತ್ತಿದೆಯಲ್ಲ
     ಮನೆಯೊಳಗೆಇದ್ದಿದ್ದು
     ಕೂತು ಮಲಗಿ ಎದ್ದು
     ಸಿಕ್ಕಿದ್ದು ಸಿಕ್ಕಷ್ಟು ಮೆದ್ದು
     ಬೇಜಾರಾಗುತ್ತಿದೆಯಲ್ಲ
ಮನೆಯೊಳಗೆ ಎಲ್ಲಾ
ಹೊರ ಹೋಗುತ್ತಲೇ ಇಲ್ಲ
ಯಾರೂ ಬರಲಾಗುತ್ತಿಲ್ಲ
ಬೇಜಾರಾಗುತ್ತಿದೆಯಲ್ಲ
    ಮಾರಿಯಾಟವಿನ್ನೂ ನಿಲ್ಲಲಿಲ್ಲ
    ಬಹುತೇಕರಿಗೆ ಅರ್ಥವಾಗುತ್ತಿಲ್ಲ
    ಅತಂಕದಿಂದ ನೆಮ್ಮದಿಯೇ ಇಲ್ಲ
    ಬೇಜಾರಾಗುತ್ತಿದೆಯಲ್ಲ
ಶಾಲೆಯೂ ಇಲ್ಲ 
ಪರೀಕ್ಷೆಯೂ ಇಲ್ಲ
ಪಾಸಾಗಿ ಆಯಿತಲ್ಲ
ಆಟವಾಡುವಂತಿಲ್ಲ
ಬರೆಯಲು ಓದಲು ಬೇಕಿಲ್ಲ
ಮಕ್ಕಳಿಗೆ ಲವಲವಿಕೆಯೇ ಇಲ್ಲ
ಮೈ‌ ಮನಸು ಜಡ್ಡುಹಿಡಿದಿದೆಯೆಲ್ಲ
ಬೇಜಾರಾಗುತ್ತಿದೆಯಲ್ಲ
    ಮನೆಯಿಂದಲೇ ಕೆಲಸವ ಮಾಡಬೇಕಲ್ಲ
    ಮಾಡಲು ಕೂತರೆ ನೆಟ್ವರ್ಕ್ ಸರಿಯಿಲ್ಲ
    ಆಫೀಸಿನ ಪರಿಸರ ಮನೆಯೊಳಗೆಯಲ್ಲ
    ಮಕ್ಕಳು ಮನೆಮಂದಿಯ ಸುಧಾರಿಸಬೇಕಲ್ಲ
    ಬೇಜಾರಾಗುತ್ತಿದೆಯಲ್ಲ
ಕೋವಿಡ್ 19 ಕಾಟ ತಾಳದಂತಾಗಿದೆಯಲ್ಲ
ಕಣ್ಣಿಗೆಕಾಣದಂತೆಲ್ಲೆಡೆಯು ಹರಡುತ್ತಿದೆಯಲ್ಲ
ಎಂದಿಗೆ ಬಿಡುಗಡೆಯೆಂದು ತಿಳಿಯದಾಗಿದೆಯಲ್ಲ
ದೇಶಗಳ ಆರ್ಥಿಕತೆಯೇ ಬುಡಮೇಲಾಗುತ್ತಿದೆಯಲ್ಲ
ಬೇಜಾರಾಗುತ್ತಿದೆಯಲ್ಲ

ಕರೋನ ಹಂ ಕ್ಯಾಕರೇನ

ಶಾಲೆಗೆ ಹೋಗುವಂತಿಲ್ಲ
ಪರೀಕ್ಷೆ ಬರೆಯುವಂತಿಲ್ಲ
ಓದಿ ಬರೆಯಲು ಮನಸಿಲ್ಲ
ಹೊರಗೆ ಆಡುವಂತಿಲ್ಲ
ಕರೋನ ಹಂ ಕ್ಯಾಕರೇನ

ಕೆಮ್ಮುವಂತಿಲ್ಲ
ಸೀನುವಂತಿಲ್ಲ
ನೆಗಡಿಯಾಗುವಂತಿಲ್ಲ
ಕೈತೊಳೆಯುತಿರಲೇ ಬೇಕಲ್ಲ
ಕರೋನ ಹಂ ಕ್ಯಾಕರೇನ

ಮುಟ್ಟುವಂತಿಲ್ಲ
ಮುದ್ದಿಸುವಂತಿಲ್ಲ
ತಬ್ಬಿಕೊಳ್ಳುವಂತಿಲ್ಲ
ಕೈಕುಲುಕುವಂತಿಲ್ಲ
ಕರೋನ ಹಂ ಕ್ಯಾಕರೇನ

ಐಸ್ ಕ್ರೀಮ್ ತಿನ್ನುವಂತಿಲ್ಲ
ಪಾನಿಪೂರಿ ಅಂಗಡಿಗಳಿಲ್ಲ
ಹೊಟೆಲ್ಗಳು ತೆರೆಯುತಿಲ್ಲ
ಚಾಕ್ಲೆಟ್ಬಿಸ್ಕೇಟ್ಗಳು ಸಿಕ್ಕುತ್ತಿಲ್ಲ
ಕರೋನ ಹಂ ಕ್ಯಾಕರೇನ

ಹೊರಗೆ ನಾವು ಹೋಗುವಂತಿಲ್ಲ
ಮನೆಗೆ ಯಾರೂ ಬರುವಂತಿಲ್ಲ
ಬಯಸಿದೊಡನೆ ತರುವಂತಿಲ್ಲ 
ಮನೆಯೊಳಗೆ ಬಂಧಿಗಳು ನಾವೆಲ್ಲ
ಕರೋನ ಹಂ ಕ್ಯಾಕರೇನ

ಅಂಗಡಿಮುಂಗಟ್ಟುಗಳಿಲ್ಲ
ಮಾಲ್ಗಳು ತೆರೆಯುತಿಲ್ಲ
ನಾಟಕ ಸಿನಿಮಾಳು ನಡೆಯುತಿಲ್ಲ
ಪ್ರವಾಸವ ಕೈಗೊಳ್ಳುವಂತಿಲ್ಲ
ಕರೋನ ಹಂ ಕ್ಯಾಕರೇನ

ವಾಕಿಂಗ್ ಹೋಗುವಂತಿಲ್ಲ
ವ್ಯಾಯಾಮ ಮಾಡುತಿಲ್ಲ
ತಿಂದು ಕುಳಿತು ಮಲಗಿ
ಮೈಬೆಳೆಯುತಿಹುದಲ್ಲ
ಕರೋನ ಹಂ ಕ್ಯಾಕರೇನ