Monday 20 April 2015

ನನ್ನಮ್ಮ

ನನ್ನಪ್ಪನೊಡನೆ ಲಗ್ನವಾಗಿ ಕೈಹಿಡಿದಂದೇ
ನನ್ನಮ್ಮ ಕುಟುಂಬದೊಡನೆ ಸಂಲಗ್ನವಾದಳು
ತನ್ನಿಷ್ಟಗಳ ಬದಿಗಿಟ್ಟು ತನ್ನವರೇಳ್ಗೆಗೆ ದುಡಿದಳು
ತರತಮವನೆಣಿಸದೆ ಸಮಭಾವದಿಯೆಲ್ಲರ ಕಂಡಳು
ಹೊತ್ತು ಹೊತ್ತಿಗೆ ಎಲ್ಲವನೆಲ್ಲರಿಗನುಗೊಳಿಸಿದಳು
ಎಲ್ಲರಾ ಸೌಖ್ಯವ ಕಂಡು ತಾ ಧನ್ಯಳಾದಳು

ಹೊತ್ತು ಹೆತ್ತಿದ್ದು ಅದೆಷ್ಟೋ ಸಾಕಿದ್ದು ಉಳಿದಷ್ಟು
ಲಾಲಿಸಿ ಪಾಲಿಸಿದ್ದು ಪೋಷಿಸಿದ್ದು ಲೆಕ್ಕವಿಲ್ಲದಷ್ಟು
ಆಪಾದನೆ, ಅವಳೇಹನ, ಅವಮಾನಗಳ ಸಹಿಸಿ
ಪತಿಯ ಇಷ್ಟಾರ್ಥಗಳನೆಂದೂ ಬಿಡದೆ ಈಡೇರಿಸಿ
ಮಕ್ಕಳಿಗೆ ಕಿಂಚಿತ್ತೂ ಕೊರತೆಯಾಗದಂತಿರಿಸಿ
ಅವರಾನಂದವ ಕಂಡುಂಡು ತಾ ಧನ್ಯಳಾದಳು

ಅರೆ ಹೊಟ್ಟೆತಾನುಂಡು ಮನೆಮಂದಿಗೆಲ್ಲ ಉಣಿಸಿ
ಹಗಲಿರುಳೆನದೆ ತಮ್ಮವರಿಗಾಗಿ ತಾ ಜೀವಸವೆಸಿ
ಹೋಗುವೆಡೆಗೆ ಹೋಗುವಾಗ ತಾ ಹೋಗಲಾಗದೆ
ಬರಬೇಕಾದವರ ತನ್ನ ಮನೆಗೆ ಕರೆಯಲೂ ಆಗದೆ
ತಳಮಳದಲೂ ಕರ್ತವ್ಯಗಳ ಮಾಡಿ ಧನ್ಯಳಾದಳು

ನೆಲವ ಕುಟ್ಟಿ ಕಲ್ಲು ತುಂಬಿ ಬಿಲವ ಮುಚ್ಚಿ
ಮಣ್ಣು ಕಲಸಿ ಗೋಡೆಮೆತ್ತಿ ಬಿರುಕು ಮುಚ್ಚಿ
ತೇಪೆಹಾಕಿ ಬಟ್ಬೆಹೊಲಿದು ಹರುಕು ಮುಚ್ಚಿ
ಸಗಣಿ ಬಾಚಿ ಬೆರಣಿತಟ್ಟಿ ಹಾಲು ಕರೆದು
ಗಿಡವನೆಟ್ಟು ಹಣ್ಣು ಕಾಯಿ ಹೂವು ಬೆಳೆದು
ಭತ್ತ ಹರವಿ ಭತ್ತ ಕುಟ್ಟಿ ಅಕ್ಕಿಮಾಡಿ
ಹಬ್ಬ ಮದುವೆ ನಾಮಕರಣವೆಲ್ಲ ಮಾಡಿ
ಜಾತ್ರೆಯಲ್ಲಿ ಬಿಡದೆ ತಂಬಿಟ್ಟಿನ ಬಾನ ನೀಡಿ
ಕತೆ ಕಾದಂಬರಿಗಳನು ತಾ ಬಿಡದೆ ಓದಿ
ಕಾಲವ್ಯರ್ಥವಾಗದಂತೆ ಕೆಲಸಮಾಡಿ ಧನ್ಯಳಾದಳು

ಜಡೆಯ ಹೆಣೆದು ಹೆಣೆದು ಕೈಸೋತರೇನು
ಬಟ್ಟೆಯೊಗೆದು ಒಗೆದು ರಟ್ಟೆ ಬಿದ್ದುಹೋದರೇನು
ಗುಡಿಸಿ ಒರೆಸಿ ಸೊಂಟ ಹಿಡಿದುಕೊಂಡರೇನು
ನೀರಲಾಡಿ ಕೈಕಾಲು ಸೆಲೆತು ಹೋದರೇನು
ಬಿಡದೆ ಎಲ್ಲ ಕೆಲಸ ತಾ ಮುಗಿಸಿ ಧನ್ಯಳಾದಳು

ಪಟ್ಟೆಸೀರೆ ತಾ ಉಡಲಿಲ್ಲ, ವಜ್ರದೊಡವೆ ತೊಡಲಾಗಲಿಲ್ಲ
ಘಮ ಘಮಿಸುವ ಮಲ್ಲಿಗೆದಂಡೆಯ ತಾ ನಿತ್ಯ ಮುಡಿಯಲಿಲ್ಲ
ಹಾಲುಮೊಸರು ಬೆಣ್ಣೆತುಪ್ಪ ಮನಸಾರೆ ತಿನ್ನಲು ಆಗಲೇ ಇಲ್ಲ
ಇವಕೆಲ್ಲ ಅವಳಿಗೆ, ಅವಕಾಶವಿರಲಿ ಸಮಯವೂ ಇರಲೇ ಇಲ್ಲ
ತೊಡಿಸಿ ಉಡಿಸಿ ಉಣಿಸಿ ನಲಿಸಿ ನಗಿಸಿ ನಲಿದು ಧನ್ಯಳಾದಳು

ಎಲ್ಲರೂ ತಮ್ಮವರೆಂದು ಎಲ್ಲರಿಗೂ ತಾನಾಗಿ
ಎಲ್ಲರೂ ತಮಗಾಗಬೇಕೆನುತ ತಾ  ಬಯಸಿ
ಎಲ್ಲರಾ ಸಹಕಾರವ ಸಮಯದಲಿ ಪಡೆಯುತಲಿ 
ಎಲ್ಲರೊಡನೆ ಕೂಡಿ ಸಹಬಾಳ್ವೆಯ ಮಾಡುತಲಿ
ಎಲ್ಲರ ಕಷ್ಟ ಸುಖದಲಿ ಬಿಡದೆ ತಾ ಭಾಗಿಯಾಗಿ
ಎಲ್ಲರಿಗೂ ಮನಸಾರೆ ಶುಭ ಹಾರೈಸಿ ಹರಸಿ
ಕಷ್ಟ ಕಾರ್ಪಣ್ಯದಲು ಸುಖವ ಕಂಡು ಧನ್ಯಳಾದಳು

ಹಾಲನುಣಿಸಿ ಪ್ರೀತಿಯೆರೆದು
ತಿದ್ದಿ ತೀಡಿ ಬುದ್ಧಿಹೇಳಿ
ಹಟವಹಿಡಿದು ವಿದ್ಯೆಕಲಿಸಿ
ತಾ ಧನ್ಯಳಾದಳು

ಬಾಯಿತುಂಬ ಮಾತನಾಡಿ
ಕೈತುಂಬ ತಾ ಎಲ್ಲನೀಡಿ
ಮನಸಾರೆ ಎಲ್ಲರೊಳಿತ ಬಯಸಿ
ಎಲ್ಲರೊಡನೆ ತಾ ಸುಖಿಸಿ ಧನ್ಯಳಾದಳು

************

No comments:

Post a Comment