Sunday 17 May 2020

ನನ್ನ ಬುಟ್ಬುಡೋ ತಮ್ಮ









ನಾ ಏನಾ ಮಾಡಿಲ್ಲೋ ತಮ್ಮ
ಮಂದಿ ನನ್ನ ಕರೆ ತಂದಾರು 
ಕೆಮ್ಮದೆ ಖರೆ ನಾ ಏನು ಮಾಡಿಲ್ಲೋ
ನನಗೇನು ಆಗಿಲ್ಲಂದ್ರ ಕೇಳ್ತಿಲ್ಲೋ 

ಒಬ್ಬರನ್ನೊಬ್ಬರು ಮುಟ್ಟಂಗಿಲಂತಾರ
ಮೂರ್ಹೊತ್ತು ಮೋರೆಗರವಿ ಮುಚ್ಕೊತಾರ
ಮನೆಬಿಟ್ಟು ಹೊರಗ ಬರ್ಬಾರ್ದನ್ತಾರ
ಚಿಕ್ಕೋರು ದೊಡ್ಡೋರಂದೆ ಎಲ್ಲ ಬಂದಾರ
ಬೀದಿಗೆ ಬಂದು ಕಾತರದಿ ತಪಾಸಣೆಗ ನಿಂತಾರ 

ಕಣ್ಣಿಗೆ ಕಾಣ್ದೆ ಯಾರನ್ನು ಬಿಡ್ದೆ ಕಾಡ್ತಿದೆ ಅಂತಾರ
ಕೈತೊಕ್ಕೊತ್ತಾಯಿರು ಬಾಯ್ಮುಚ್ಕೊ ಅಂತಾರ
ಏನ್ದೊಡ್ರೋಗ ಬಂತು ಮಂದೆಲ್ಲ ಕಂಗಾಲಾಗಾರ
ತಿನ್ನಕ್ಕೆ ತಿರುಗೋಕೆ ತರೋಕೆ ಹಿಂದೆ ಮುಂದೆ ನೋಡ್ತಾರ
ತಂದಿದ್ದು ಮುಟ್ಟಿದ್ದ ತೊಳ್ದು ತೊಳ್ದು ಮಂದಿ ಸಾಕಾಗವ್ರ

ಮಾಡ್ಬಾರ್ದ್ಮಾಡಿದ್ರೆ ಸುಮ್ಕೆ ಬಿಟ್ಬಿಟ್ತಾನಾ ನನ್ನಪ್ಪ ಖರೆ
ಮನಸಿಗೆ ಬಂದ್ಹಂಗಾಡ್ತಿದೊರೆಲಾ ಮನ್ಯಾಗ ಕುಂತವ್ರೆ
ನನ್ನಪ್ಪ ಆ ಸಿವನಾಟ ಯಾರ್ಬಲ್ರು ನನ್ನಬಿಡೊ ತಮ್ಮ
ಹಿಂದ್ಮಂದಿ ಕಾಯ್ತಾವ್ರೋ ಅವ್ರನ್ಪರೀಕ್ಸೆ ಮಾಡ್ಕೊ ತಮ್ಮ
ಆ ದ್ಯಾವ್ರೆ ಕಾಪಾಡ್ಲಿ ನನ್ಗೇನಾಗಿಲ್ಲ ಬುಟ್ಬುಡೋ ತಮ್ಮ

Tuesday 12 May 2020

ಮತ್ತೆ ಬಂತು ಯುಗಾದಿ

ಬೇವು ಬೆಲ್ಲ ಬೆರೆಸಿ
ಕಹಿ ನೆನಪ ಮರೆಸಿ
ಸವಿ ನೆನಪ ಉಳಿಸೆ
ಮತ್ತೆ ಬಂತು ಯುಗಾದಿ

ಮಾಂದಳಿರ ಬೆಳೆಸಿ
ಕೋಗಿಲೆಯ ಉಲಿಸಿ
ಚೈತ್ರೋಲ್ಲಾಸವ ತುಳುಕಿಸಿ
ಮತ್ತೆ ಬಂತು ಯುಗಾದಿ

ನವ ನವೋಲ್ಲಾಸದಲಿ
ನವ ನವೀನ ಭಾವದಲಿ
ನವ ಚೈತನ್ಯವ ತುಂಬುತಲಿ
ನವ ಜೀವನವನರಸುತಲಿ
ನವ ಸಂಪದದ ನಿರೀಕ್ಷೆಯಲಿ
ಮತ್ತೆ ಬಂತು ಯುಗಾದಿ

'ತ' ಗುಣಿತ ತಾತನ ಮನೆ

ಡಮಾಡದೆ ಎಲ್ಲ ಬನ್ನಿ
ತಾತನ ಮನೆಗೆ ಹೋಗೋಣ
ತಿಳಿಹೇಳುವ ಅಜ್ಜನ ನುಡಿ ಕೇಳೋಣ
ತೀರ್ಥವ ಕುಡಿದು ದೇವರಿಗೊಂದಿಸಿ
ತುರುಗಳ ಕಾಯಲು ತೋಟಕೆ ಹೋಗೋಣ
ತೂರುತ ಕೇರುತ ಕಣದಲಿ ಆಡೋಣ
ತೃಣವನು ಕೊಯ್ದು ಕರುವಿಗೆ ನೀಡೋಣ
ತೆನೆಗಳ ಸುಟ್ಟು ಬೆಲ್ಲವಬೆರೆಸಿ ಸವಿಯೋಣ
ತೇಲುತ ಮುಳುಗುತ ಈಜುತ ಹೊಳೆಯಲಿ ಆಡೋಣ
ತೈಲವ ಹಾಕಿ ದೀಪವ ಹಚ್ಚಿ ನೀರಲಿ ತೇಲಿ ಬಿಡೋಣ
ತೊಟ್ಟಿಲುಕಟ್ಟಿ ತೂಗುತ ಜೀಕುತ ನಲಿಯೋಣ
ತೋಟದಿ ಸೇರಿ ಎಲ್ಲರು ಹಾಡುತ ಕುಣಿಯೋಣ
ತೌರಿನ ಬಣ್ಣವ ತೊಟ್ಟುಯೋಣ
ತಂಬಿಟ್ಟಿನಾರತಿ ದೇವಿಗೆ ಬೆಳಗಿ ಅಂ
ತಃಸತ್ವವ ಬೆಳೆಸಿ ಬಲಗೊಳಿಸೋಣ.

'ತ' ಗುಣಿತ ತಾಳತಪ್ಪಿದ ಬದುಕು

ತ್ತರಿಸಿ ತಡವರಿಸುತಿದೆ ಜಗವಿಂದು
ತಾಳಲಾಗದ ಕಾಣಲಾಗದ ಸೋಂಕಿನಲಿ
ತಿಳಿಯಲಾಗದೆ ಕಂಗಾಲಾಗಿ ನಡುಗುತಿದೆ
ತೀರದ ಸಂಕಷ್ಟದಲಿ ಸಿಲುಕಿ ನರಳುತಿದೆ 
ತುಕ್ಕುಹಿಡಿದಿದೆ ಮನಕೆ ಮನೆಯೊಳಗೆ 
ತೂಗತ್ತಿಯ ಬದುಕು ಹೋರಾಟಗಾರರಿಗೆ
ತೃಪ್ತಿ ಮರೀಚಿಕೆ ಆಡಳಿತ ವರ್ಗಕೆ
ತೆರೆಯೆಳೆಯ ಬೇಕಿದೆ ಸ್ವೇಚ್ಛಾಚಾರಕೆ
ತೇಗುತಿರುವ ಮಹಾಮಾರಿಯ ಕಾಟಕೆ
ತೈಥಕ ಕುಣಿದು ಕುಣಿಸುತಿದೆ ವೈರಾಣು
ತೊಲಗಿಸಲಿದನು ಜೀವನ ಹೈರಾಣು 
ತೋರಬೇಕು ಬಂದಹಾದಿಯನದಕೆ
ತೌಲನಿಕ ಅಧ್ಯಯನ ಬಲ್ಲವರು ನಡೆಸಿ
ತಂಗುದಾಣವಾಗಲಿ ದೇಶ ಸಂಯಮ ಅಂ-
-ತಃಕರಣ ಸಹನೆ ಸಹಕಾರವೆಲ್ಲವ ಮೆರೆಸಿ

ತ ಗುಣಿತದಲ್ಲಿ 'ಮಹಾಮಹಿಮ,

ನುವು ನಿನ್ನದು ಮನವು ನಿನ್ನದು
ತಾರಕ ಶಕ್ತಿಯು ನಿನ್ನದು
ತಿಳಿಯಲಾಗದ ಸೃಷ್ಟಿ ನಿನ್ನದು
ತೀರದ ಯುಕ್ತಿ ನಿನ್ನದು
ತುಡಿವ ಮಿಡಿವ ಮನವು ನಿನ್ನದು
ತೂಗಲಾಗದ ಸಾಮರ್ಥ್ಯ ನಿನ್ನದು
ತೃಣನು ನಾನು ನಿನ್ನೆದುರಲಿ
ತೆರೆದ ಮನದಲಿ ಬೇಡುತಿರುವೆನು
ತೇನವಿನಾ ತೃಣಮಪಿ ನ ಚಲತಿ
ತೈಲ ಘೃತದ ದೀಪವ ಬೆಳಗಿ ನಾನು
ತೊದಲು ನುಡಿಯಲು ನಿನ್ನ ಸ್ಮರಿಸಿ
ತೋರುತಿರುವೆನು ನನ್ನ ಬಕುತಿ
ತೌರ ಸುಖಕು ಮಿಗಿಲು ನಿನ್ನ ಚರಣ
ತಂಗುದಾಣವಾಗಲೆನಗೆ ಅನವರತ ಅಂ
-ತಃಶಕ್ತಿ ಕರುಣಿಸೆನಗೆ ದೇವ ದೇವ ಮಹಿ

Monday 11 May 2020

ಹಸಿವಾವತಾರ


ಓ ಹಸಿವೇ ಏನಿದು ನಿನ್ನ ಮಾಯೆ
ಕಣ್ಗಳಿಗೆ ಕೈಗಳಿಗೆಟುಕದಾ ಛಾಯೆ
ದಶಾವತಾರವನು ನಾಚಿಸುತಿರುವೆ
ಎಲ್ಲೆ ಮೀರೆಲ್ಲೆಲ್ಲು ಮೆರೆಯುತಿರುವೆ

ಹುಟ್ಟಿದೊಡನೆ ಶುರು ನಿನ್ನ ಲೀಲೆ
ಚಟ್ಟದವರೆಗೆ ಬಿಡದು ನಿನ್ನ ಮಾಯೆ
ಹಗಲಿರುಳೆನದೆ ಬೀಸುತಿರುವೆ ಬಲೆ
ಹೊನ್ನು ಹೆಣ್ಣು ಮಣ್ಣು ಅನ್ನದ ಸೆಲೆ

ಸೀತೆಗಾಗಿ ಲಂಕೆಯ ದಹನ
ದ್ರೌಪತಿಗಾಗಿ ಕೀಚಕನ ದಮನ
ನೆಲಕಾಗಿ ಕುರುವಂಶದ ಹನನ
ದಾಳಿಕೋರ ಅಲೆಕ್ಸಾಂಡರ್ ಪತನ

ಹಿಡಿ ಅನ್ನಕೆ ಒಡಲ ಆವರಸಿರುವೆ
ಕಾಮಕೆ ಕಾಮಿನಿಯ ಹಿಂದಲೆಸುತಿರುವೆ
ಅಧಿಕಾರದಮಲನೇರಿಸಿ ಮೆರೆಸುತಿರುವೆ
ಜ್ಞಾನದಾಹಿಯನು ಅಂಡಲೆಸುತಿರುವೆ
ಪದವಿ ಪ್ರತಿಷ್ಠೆ ಪ್ರಶಸ್ತಿಗೆ ಮರುಳಾಗಿಸುತಿರುವೆ

ಸರ್ವಾಂತರ್ಯಾಮಿ ಸರ್ವಸೂತ್ರಧಾರಿ
ಬಯಸಿದರು ಬಿಡುಗಡೆಗಿದೆಯೆ ದಾರಿ?


  1. *********

Friday 8 May 2020

ಕನಸನರಸಿ


ಹಸಿದ ಹೊಟ್ಟೆ
ಮಾಸಿದ ಬಟ್ಟೆ

ಹೆಗಲ ಚೀಲ
ತುಂಬುವ ಛಲ

ವಿಧಿಯ ತುಳಿತ
ದುಡಿವ ಮಿಡಿತ

ನಡಿಗೆ ಸಲೀಸು
ಕಣ್ಣಲಿ ಕನಸು 

ಬಟ್ಟ ಬಯಲು
ಮೇಲೆ ಮುಗಿಲು

ಕಾಯಕದ ನೋಟ
ಹೊಟ್ಟೆಪಾಡಿನಾಟ

ನಿರ್ಜನ ನಿರ್ಭೀತಿ
ಕೊನೆಗಾಣದ ವೀಥಿ

ಗುರಿಯಿಲ್ಲದ ಪಯಣ
ಮುಗಿಯದ ಹುಡುಕಾಟ

ದಾರಿ ಸವೆದೀತೆ
ಪಯಣ ಮುಗಿದೀತೆ

ದಡ ಸೇರಲಾದೀತೆ
ಫಲ ಪಡೆಯಲಾದೀತೆ
**********
*****