Sunday 19 April 2015

ಸರ್ವಜ್ಞನ ವಚನಗಳ ಮೂಲಕ ಕಾಗುಣಿತ

      ಪ್ರೌಢಶಾಲೆಯ ಹಂತದಲ್ಲಿ ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು, ಸಾಹಿತ್ಯದ ಎಲ್ಲಾ ಮಜಲುಗಳನ್ನು ಪರಿಚಯಮಾಡಿಕೊಳ್ಳಬೇಕು. ಇದಕ್ಕೆ ಪೂರಕವಾಗಿ ಕಲಿಕೆಯ ಪ್ರಕ್ರಿಯೆ ನಡೆಯಬೇಕಾಗುತ್ತದೆ. ದುರಾದೃಷ್ಟವಶಾತ್ ಯಾರ ತಪ್ಪಿಂದಲೋ ಪ್ರೌಢಶಾಲೆಯನ್ನು ದಾಟಿಹೋಗುವಾಗಲೂ ಬಹುತೇಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪರಿಚಯವಿರಲಿ ಅಕ್ಷರಜ್ಞಾನವೇ ಸರಿಯಾಗಿ ಇರುವುದಿಲ್ಲ.
        ಅಕ್ಷರ ಮತ್ತು ಕಾಗುಣಿತದ ಗಂಧವೇ ಇರದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳನ್ನು ಶಿಕ್ಷಕರು ಪರಿಚಯಮಾಡಿಕೊಡಬೇಕಾಗಿದೆ. ಮಕ್ಕಳು ಪ್ರೌಢಶಾಲೆಗೆ ಬಂದೊಡನೆಯೇ ಅಕ್ಷರ ಮತ್ತು ಕಾಗುಣಿತವನ್ನು ಕಲಿಸಲು ಶಿಕ್ಷಕರು ಯುದ್ಧದೋಪಾದಿಯಲ್ಲಿ ಸಜ್ಜಾಗಬೇಕಾಗುತ್ತದೆ. ಜೊತೆ ಜೊತೆಯಲ್ಲಿ ಸಾಹಿತ್ಯವನ್ನೂ ಪರಿಚಯಿಸಲೇ ಬೇಕು. ಸಾಹಿತ್ಯದ ಮೂಲಕವೇ ಅಕ್ಷರ ಜ್ಞಾನವನ್ನು ಸರಿಯಾಗಿ ಮೂಡಿಸುವ ಕಿರು ಪ್ರಯತ್ನ ಇದಾಗಿದೆ.
        ಕೇವಲ ಪಠ್ಯ ಪುಸ್ತಕ ಬೋಧನೆಯಿಂದ ವಿದ್ಯಾರ್ಥಿಗಳು ಅಂಕಗಳಿಸಬಹುದಷ್ಟೇ ಹೊರತು, ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಉದ್ದೇಶದಿಂದಲೇ ಚಟುವಟಿಕೆ ಆಧಾರಿತ ಬೋಧನಾ ಕ್ರಮವನ್ನು ಇಂದು ಶಿಕ್ಷಣದಲ್ಲಿ ಅಳವಡಿಸಿರುವುದು. ಭಾಷಾ ಕಲಿಕೆಯೊಂದಿಗೆ ಸಾಹಿತ್ಯವನ್ನು ಪರಿಚಯಿಸಲು ಸಹಾಯವಾಗುವಂತೆ ಚಟುವಟಿಕೆಗಳನ್ನು ರೂಪಿಸುವುದು ಸವಾಲೇ ಆಗಿದೆ.
       ಎನ್.ಸಿ.ಎಫ್ಮುಖ್ಯ ಉದ್ದೇಶವೇ ಗುಣಾತ್ಮಕ ಶಿಕ್ಷಣವನ್ನು ನೀಡುವುದಾಗಿದೆ. ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಭಾಷಾ ಬೋಧಕರ ಪಾತ್ರ ಗುರುತರವಾದುದುಭಾಷಾ ಬಳಕೆಯ ವಿವಿಧ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸವಾಲೇ ಆಗಿದೆಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಪ್ರಮುಖ ಭಾಷಾ ಕೌಶಲಗಳ ಜೊತೆಗೆ ಪ್ರೌಢಶಾಲಾ ಹಂತದಲ್ಲಿ ಚಿಂತನೆಮಾಡುವುದನ್ನೂ, ಅಭ್ಯಾಸ ಕೌಶಲ ಅಂದರೆ ಅಧ್ಯಯನ ಶೀಲತೆಯನ್ನೂ  ಕಲಿಸಬೇಕಾಗುತ್ತದೆವ್ಯಾಕರಣಾಂಶಗಳ, ಛಂದಸ್ಸು ಅಲಂಕಾರಗಳ ತಿಳುವಳಿಕೆಯನ್ನು ನೀಡುವುದರ ಜೊತೆಗೆ ರಚನಾ ಸಾಮರ್ಥ್ಯ, ಸ್ವಯಂ ಅಭಿವ್ಯಕ್ತಿ ಸಾಮರ್ಥ್ಯ, ಸಂವಹನ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ  ಶಿಕ್ಷಕರು ಅವಕಾಶಗಳನ್ನು ಕಲ್ಪಿಸಿಕೊಡಬೇಕಾಗುತ್ತದೆ.
         ಸಾಹಿತ್ಯಾಭ್ಯಾಸದೊಂದಿಗೆ ಕಾಗುಣಿತವನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾದರೆ ನನ್ನ ಪ್ರಯತ್ನ ಸಾರ್ಥಕವಾದಂತೆ. ನಿಮ್ಮ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ತುಂಬು ಮನದ ಸ್ವಾಗತ. 
        ರೆಯದಲೆ ಬರುವವನ | ಬರೆಯದಲೆ ಓದುವವನ
ಬರಗಾಲಿನಿಂದ ನಡೆವವನ | ಕರೆತಂದು |
ಕೆರೆದಿ ಹೊಡೆಯೆಂದ ಸರ್ವಜ್ಞ ||
ಕಾಯಕವು ಉಳ್ಳವಕ | ನಾಯಕನು ಎನಿಸಿಪ್ಪ |
ಕಾಯಕವು ತೀರ್ದ ಮರುದಿನವೆ, ಸುಡುಗಾಡ |
ನಾಯಕನು ಎನಿಪ ಸರ್ವಜ್ಞ
ಕಿಚ್ಚುಂಟು ಕೆಸರುಂಟು | ಬೆಚ್ಚನಾ ಮನೆಯುಂಟು |
ಇಚ್ಛೆಗೇ ಬರುವ ಸತಿಯುಂಟು |
ಮಲೆನಾಡ ಮೆಚ್ಚ ನೋಡೆಂದ ಸರ್ವಜ್ಞ ||
ಕೀತಿರುವ ವ್ರಣ ಹೊಲ್ಲ | ಶೀತದಲ್ಲಿ ಹಿಮ ಹೊಲ್ಲ |
ಪಾತಕನ ನೆರೆಯಲಿರ ಹೊಲ್ಲ, ಬಡವ ತಾ |
ಕೂತಿರಲು ಹೊಲ್ಲ ಸರ್ವಜ್ಞ ||
ಕುಲಗೆಟ್ಟವರು ಚಿಂತೆಯೊಳಗಿಪ್ಪರಂತಲ್ಲ|
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ|
ಕುಲಗೋತ್ರವುಂಟೆ? ಸರ್ವಜ್ಞ||
ಕೂಳಿಂದ ಕುಲ ಬೆಳೆದು | ಬಾಳಿಂದ ಬಲ ಬೆಳೆದು |
ಕೂಳು - ನೀರುಗಳು ಕಳೆದರಾ ಕುಲಗಳನ್ನು |
ಕೇಳಬೇಡೆಂದ ಸರ್ವಜ್ಞ ||
ಕೃಷಿಕ ನೋಡದಲೆ ಕೆಟ್ಟ| ಬೇಡ ಕಾಯದೇ ತಾ ಕೆಟ್ಟ |
ಜೇಡಿ ನೇಯದೆ ಕೆಟ್ಟ | ಸತಿಯ ಬಿಟ್ಟಾಡಿದವ
ಕೆಟ್ಟ ಸರ್ವಜ್ಞ ||
ಕೆರೆ - ಭಾವಿ ತುಂಬುವವು | ಕುಂಭಕ್ಕೆ ಗುರು ಬರಲು |
ಅಂಬರದ ತನಕ ಬೆಳೆಯಕ್ಕು ಲೋಕಕ್ಕೆ |
ಸಂಭ್ರಮಕ್ಕು ಸರ್ವಜ್ಞ ||
  ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ
ಕೈಲಾಸದಲಿ ಮುನ್ನ ಪನ್ನಗಾಧರನಾಳು|
ಎನ್ನಯ ಹೆಸರು ಪುಷ್ಪದತ್ತನು ಎ೦ದು|
ಮನ್ನಿಪರು ದಯದಿ ಸರ್ವಜ್ಞ II
ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ|
ಹುಟ್ಟಿಕ್ಕಿ ಜೇನು ಅನುಮಾಡಿ – ಪರರಿಗೆ|
ಕೊಟ್ಟು ಹೋದಂತೆ ಸರ್ವಜ್ಞ||
ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ |
ದಾಟವೇ ಕೆಡಕು | ಸರ್ವಜ್ಞ ||
ಕೌರವನು ಲೋಭದಿಂ | ಲಾಭವನು ಪಡೆದಿಹನೆ ? |
ನಾಭಿಯಿಂ ಕೆಳಗೆ ಎರಡೂರ ಕೊಂದಾಗ |
ಲಾಭ ಬಂದಿಹುದೆ ಸರ್ವಜ್ಞ ||
ಕಂಡಂತೆ ಹೇಳಿದರೆ | ಕೆಂಡ ಉರಿಯುವುದು ಭೂ |
ಮಂಡಲವ ಒಳಗೆ ಖಂಡಿತನಾಡುವರ |
ಕಂಡಿಹುದೆ ಕಷ್ಟ ಸರ್ವಜ್ಞ ||
ಕಃ

3 comments:

  1. ಗುರುಮಾತೆ, ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ.. ಇನ್ನಷ್ಟು ಸೃಜನಶೀಲ ಆಲೋಚನೆಗಳು ನಿಮ್ಮಿಂದ ಹೊರಬರಲಿ ಎಂದು ಬಯಸುತ್ತೇವೆ.
    ತುಂಬಾ ಚನ್ನಾಗಿದೆ,

    ReplyDelete
    Replies
    1. ಆತ್ಮೀಯ ವೆಂಕಟೇಶ್
      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು

      Delete
  2. nimma prayatnakke dhanyavaadglu madam

    ReplyDelete