Wednesday 1 April 2015

ಕಥನ ಕವನಗಳ ಸಾಮ್ರಾಟ ಸು ರಂ ಎಕ್ಕುಂಡಿ


ಸು. ರಂ ಎಕ್ಕುಂಡಿ (1923-1995)

 ಕಥನ ಕವನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವ ಕನ್ನಡದ ಪ್ರಮುಖ ಕವಿ ‘ಕಥನ ಕವನಗಳ ಸಾಮ್ರಾಟ ಸು. ರಂ ಎಕ್ಕುಂಡಿ’. ಇವರ ಪೂರ್ಣ ಹೆಸರು  ಸುಬ್ಬಣ್ಣ ರಂಗನಾಥ ಎಕ್ಕುಂಡಿ.  ಸರ್ವಜ್ಞ, ಕನಕದಾಸ, ಪ್ರಪ್ರಥಮ ಕಾದಂಬರಿಕಾರರಾದ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕ ಮೊದಲಾದ ಮಹನೀಯರ ತವರು ಜಿಲ್ಲೆಯಾದ  ಹಾವೇರಿಯ ರಾಣೆಬೆನ್ನೂರಿನಲ್ಲಿ 20 ನೇ  ಜನವರಿ 1923ರಲ್ಲಿ ಜನಿಸಿದರು. ತಂದೆ ರಂಗಾಚಾರ್ಯ ವೃತ್ತಿಯಿಂದ ಶಿಕ್ಷಕರು, ತಾಯಿ ರಾಜಕ್ಕ. ಇವರ ಬಾಳಸಂಗಾತಿ ಇಂದಿರಾ. ಟೆನಿಸನ್, ವರ್ಡ್ಸವರ್ತ್ ಮುಂತಾದವರ  ಸಾಹಿತ್ಯವನ್ನು ಪರಿಚಯ ಮಾಡಿಸಿಕೊಟ್ಟ ಬಿ.ಎಂ.ಶ್ರೀಯವರು ಇವರ ಗುರುಗಳು
ಪ್ರೌಢಶಾಲಾ ಹಂತದಲ್ಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮ ಹದಿನೈದನೇ ವಯಸ್ಸಿನಲ್ಲೇ ಸಾಹಿತ್ಯ ಕೃಷಿಯನ್ನು ಆರಂಭಿಸಿದರು. ಸದಾಕಾಲ ಸಾಹಿತ್ಯಾಸಕ್ತರ ಒಡನಾಟದಲ್ಲಿದ್ದು ಸಾಹಿತ್ಯದ ವಿಚಾರವಾಗಿ ಚರ್ಚೆಮಾಡುತ್ತಿದ್ದರು. ಇದರ ಫಲವಾಗಿಯೇ ‘ಉನ್ನತಿ’ ಎಂಬ ಕೈಬರಹ ಪತ್ರಿಕೆಯನ್ನೂ ವಿದ್ಯಾರ್ಥಿ ದೆಸೆಯಲ್ಲೇ ಸಂಪಾದಿಸಲು ಸಾಧ್ಯವಾಯಿತು. ಜಗದೀಶಚಂದ್ರ ಬೋಸರ ಸಾವು ಎಕ್ಕುಂಡಿಯವರ ಕವಿತೆ ಅರಳಲು ಪ್ರೇರಣೆಯಾಯಿತು. ಎಕ್ಕುಂಡಿಯವರೇ ಹೇಳಿರುವಂತೆ ‘ಒಬ್ಬ ವಿಜ್ಞಾನಿಯ ಸಾವು ಒಬ್ಬ ಕವಿಯ ಹುಟ್ಟಿಗೆ ಕಾರಣವಾದದ್ದು ವಿಚಿತ್ರ ಸಂಗತಿ’. ಎಕ್ಕುಂಡಿಯವರ ಕವಿತಾಶಕ್ತಿ ಹೊರಗೆ ಪ್ರಕಟವಾಗಲು ‘ನಾಡಹಬ್ಬ’ನೆರವಾಯಿತು. ನಾಡಹಬ್ಬದ ಸಲುವಾಗಿ ಹುಬ್ಬಳ್ಳಿಗೆ ಬರುತ್ತಿದ್ದ ವಿ.ಕೃ. ಗೋಕಾಕ, ಬೇಂದ್ರೆ, ಬೆಟಗೇರಿಕೃಷ್ಣಶರ್ಮ, ಶಂ. ಬಾ. ಜೋಶಿ, ಶ್ರೀರಂಗ ಮುಂತಾದವರು ಇವರ ಸಾಹಿತ್ಯಾಸಕ್ತಿಯನ್ನು ವರ್ಧಿಸಿದರು.
ಎಕ್ಕುಂಡಿಯವರು ಕಾಲೇಜಿನಲ್ಲಿದ್ದಾಗಲೇ ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾಯ ಧಾರವಾಡಕರ, ವಿ.ಜಿ. ಭಟ್ ಇವರೊಂದಿಗೆ ಸೇರಿ  ‘ವರುಣ ಕುಂಜ’ ಎಂಬ ಬರಹಗಾರರ ಬಳಗವನ್ನು ಆರಂಭಿಸಿದರು. ಪ್ರತಿವಾರ ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ ಬರೆದು ಚರ್ಚೆ ನಡೆಸುತ್ತಿದ್ದರು. ವಿ.ಕೃ. ಗೋಕಾಕ್, ರಂ.ಶ್ರೀ. ಮುಗುಳಿಯವರ ಮಾರ್ಗದರ್ಶನವೂ ಈ ಬಳಗಕ್ಕೆ ಲಭಿಸಿ, ಎಕ್ಕುಂಡಿಯವರ ‘ಮಾತು ಮಥಿಸಿ’ ಕವನ ಸಂಗ್ರಹಕ್ಕೆ ದಾರಿಮಾಡಿಕೊಟ್ಟಿತು.     
ಎಕ್ಕುಂಡಿಯವರು ತಮ್ಮ ಕಾವ್ಯದ ಮೂಲಕ, ಸ್ವತಃ ಅದನ್ನು ಓದುವ ವೈಖರಿಯ ಮೂಲಕ ಮನುಷ್ಯನ ನಿಟ್ಟುಸಿರನ್ನೂ, ಪ್ರೀತಿ ಸ್ನೇಹಗಳ ಬೆಚ್ಚನೆಯ ಭಾವವನ್ನೂ ನಮಗೆ ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲವರಾಗಿದ್ದರು. ಕಥೆ, ಕವನ, ಅನುವಾದ, ವಿಮರ್ಶೆಗಳಲ್ಲೆಲ್ಲಾ ಕೈಯಾಡಿಸಿರುವ ಎಕ್ಕುಂಡಿಯವರು ಸಹಜ ಕವಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಇವರ ಕಾವ್ಯಗಳಲ್ಲಿ ಮಾರ್ಕ್ಸ್ನ ವಿಚಾರ ಧಾರೆ, ಮಧ್ವರ ಸಿದ್ಧಾಂತ, ಪೌರಾಣಿಕ ಐತಿಹಾಸಿಕ ವ್ಯಕ್ತಿಗಳ ವಿಚಾರಗಳನ್ನೂ ಕಾಣಬಹುದು. ಇವರ ಕವನಗಳಲ್ಲಿ ಗೇಯತೆ, ವರ್ಣನಾ ಕೌಶಲ್ಯವಿದೆ. ಹಾಗಾಗಿಯೇ  ಇವರ ಕಾವ್ಯಗಳು ಎಲ್ಲರ ಗಮನ ಸೆಳೆದಿವೆ. ಮರೆಯಲಾಗದ ಇವರ ಮುಗ್ಧ ನಗೆಯಂತೂ ಎಲ್ಲರ ಮನವನ್ನು ಗೆದ್ದಿದೆ.  ಸಜ್ಜನಿಕೆಯ ಸಂಭಾಷಣೆಯು ಸಜ್ಜನ ಕವಿಯನ್ನಾಗಿಸಿದೆ.
ಕವನದ ಕುಸುರಿ ಕೆಲಸಕ್ಕೆ ಸಾಮಾಜಿಕ ಆಶಯದ ನಂಟು ಇರಬೇಕು ಎಂದು ಹಂಬಲಿಸುವ ಸದಾ ಪ್ರಯೋಗಶೀಲರಾಗಿದ್ದ ಎಕ್ಕುಂಡಿಯವರ ಎದೆಯಾಳದಲ್ಲಿ ನಿಸರ್ಗ, ಜನರ ಮುಗ್ದಮನಸ್ಸು, ಹಾಡು ಕುಣಿತಗಳು, ನೋವುಗಳು ನೆಲೆಯೂರಿ ಮನಸ್ಸನ್ನು ತಾಕಿ ಕಾವ್ಯರೂಪದಲ್ಲಿ ಹೊರಹೊಮ್ಮಿದೆ.
ಕವಿವಾಣಿ ಜನವಾಣಿಯಾದಾಗ ಮಾತ್ರವೇ ಸರ್ವಸ್ತರಗಳ ಜನರನ್ನೂ ತಲುಪಲು ಸಾಧ್ಯ, ಕಾವ್ಯವಾಗಲೀ ಸಾಹಿತ್ಯವಾಗಲೀ ಸಾಮಾನ್ಯರ ಬದುಕನ್ನು ಅಡಿಪಾಯವಾಗಿರಿಸಿಕೊಂಡು ರಚಿತವಾದಾಗ ಮಾತ್ರ ಅದು ಜೀವಂತವಾಗಿರುತ್ತದೆ ಎಂಬುದು ಎಕ್ಕುಂಡಿಯವರ ಅಭಿಪ್ರಾಯವಾಗಿತ್ತು. ಜನರ ಬದುಕಿನ ಕಥೆಯನ್ನು ಬಿಚ್ಚಿಡುವ ಎಕ್ಕುಂಡಿಯವರು ಮನುಷ್ಯನನ್ನು ವಿಶಾಲಗೊಳಿಸುವ ಎಲ್ಲವನ್ನೂ ಸ್ವೀಕರಿಸಿ ಸಂಕುಚಿತಗೊಳಿಸುವುದನ್ನು ಬಿಟ್ಟುಬಿಡಬೇಕೆಂಬ ನಿಲುವಿಗೆ ಬದ್ಧರಾದವರು. “ಸಫಲವಾಗಲಿ. ವಿಫಲವಾಗಲಿ ಮನುಷ್ಯ ಕನಸುಗಳನ್ನು ಹೊಂದಿರಬೇಕು. ಕನಸುಗಳು ಜೀವನವನ್ನು ಶ್ರೀಮಂತಗೊಳಿಸುತ್ತವೆ” ಎನ್ನುವ ಕನಸುಗಾರರು ಎಕ್ಕುಂಡಿ ಎಂದರೆ ತಪ್ಪಾಗಲಾರದು.
ಅವರೇ ಹೇಳಿರುವಂತೆ ನಮ್ಮ ಮಹಾಕವಿಗಳ ನುಡಿಗಳಲ್ಲಿ ಅದ್ಭುತವಾದ ಶಬ್ದ ಸಂಪತ್ತಿದ್ದರೂ, ಅಲಂಕಾರಗಳಿದ್ದರೂ ‘ಗುಡಿಸಲು’ಗಳವರೆಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಏನು ಬರೆದರು, ಎಷ್ಟು ಬರೆದರು, ಹೇಗೆ ಬರೆದರು ಎನ್ನುವುದಕ್ಕಿಂತ ಯಾರನ್ನು ಅದು ತಲುಪಿತು, ಯಾರಮನವನ್ನು ಮುಟ್ಟಿತು, ತಟ್ಟಿತು ಎನ್ನುವುದು ಮುಖ್ಯವಾಗುತ್ತದೆ. ಎಕ್ಕುಂಡಿಯವರು ಜನರ ನೋವಿಗೆ ಕಾವ್ಯದ ಗರಿ ತೊಡಿಸಿ ಜನಸಾಮಾನ್ಯರ ಮನಸ್ಸಿನಲ್ಲೆ ನೆಲೆಪಡೆದವರು.
ಜಿ. ಎನ್. ಮೋಹನ್ ಸಂಪಾದಿಸಿರುವ  ‘ಎಕ್ಕುಂಡಿ ನಮನ’ ಕೃತಿಯು. ಎಕ್ಕುಂಡಿಯವರನ್ನು ಕುರಿತು ಪ್ರಕಟವಾಗಿರುವ ಎಲ್ಲ ಲೇಖನಗಳನ್ನೂ, ಸಂದರ್ಶನಗಳನ್ನೂ. ಎಕ್ಕುಂಡಿಯವರೇ ತಮ್ಮ ಕಾವ್ಯದ ಬಗ್ಗೆ ಬರೆದ ಬರಹಗಳನ್ನೂ ಒಳಗೊಂಡಿದೆ. ಒಟ್ಟಾರೆಯಾಗಿ ಈ ಕೃತಿಯು ಎಕ್ಕುಂಡಿಯವರ ಕುರಿತ ಅಧ್ಯಯನಕ್ಕೆ ಮುಖ್ಯವಾದ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು.
ಜೀವನ
  •   ಎಕ್ಕುಂಡಿಯವರ ಆರಂಭದ ಶಿಕ್ಷಣವು ಹುಬ್ಬಳ್ಳಿಯಲ್ಲಿ ನಡೆಯಿತು.
  • ಬೇಂದ್ರೆ, ಗೋಕಾಕ್, ಶಂ.ಬಾ.ಜೋಶಿ, ಶ್ರೀರಂಗ, ಆನಂದಕಂದ ಮೊದಲಾದ ಮಹನೀಯರ  ಪರಿಚಯವಾಗಿ ಕಾವ್ಯದಲ್ಲಿ ಆಸಕ್ತಿ ಬೆಳೆಯಿತು. ಇದರಿಂದಾಗಿ ತಮ್ಮ ಹದಿನೈದನೆಯ ವಯಸ್ಸಿನಲ್ಲಿಯೇ ಸಾಹಿತ್ಯ ಕೃಷಿಯನ್ನು ಆರಂಭಿಸಲು ಸಾಧ್ಯವಾಯಿತು.
  • ಸಾಂಗ್ಲಿಯ ವಿಲ್ಲಿಂಗ್ಡನ್. ಕಾಲೇಜಿನಲ್ಲಿ ಮತ್ತು ಹೈದರಾಬಾದಿನಲ್ಲಿ ಉನ್ನತ ಶಿಕ್ಷಣವನ್ನು ಮುಗಿಸಿ  ಪದವಿಯನ್ನು ಪಡೆದರು.
  • ಬಂಕಿಕೊಡ್ಲಿನ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದರು.
  •  ರೋಮನ್ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
  • 1995ರ ಆಗಸ್ಟ್ 20 ರಂದು ನಿಧನರಾದರು.
ಮುಕ್ತ ಪ್ರಶಂಸೆ
  ಬಿ. ದಾಮೋದರ ರಾವ್ ಅವರ ಅಭಿಪ್ರಾಯದಂತೆ ಎಕ್ಕುಂಡಿಯವರದ್ದು, ಸಂಘರ್ಷಶೀಲವಾದ ಮನಸ್ಸಲ್ಲ. ಭಿನ್ನ ಭಿನ್ನ ಮೂಲಗಳಿಂದ ತಮಗೆ ಬೇಕಾದ್ದನ್ನು ಆರಿಸಿಕೊಂಡು ಬರೆಯುವಂತಹ ಮನೋಧರ್ಮ. ಆ ಮೂಲಗಳಲ್ಲೇನಾದರೂ ಸಂಘರ್ಷವಿದ್ದರೆ ಅದು ಅಲ್ಲೇ ಇದ್ದುಕೊಳ್ಳಲಿ, ನನಗೆ ಬೇಕಾದ್ದನ್ನು ನಾನು ಆರಿಸಿಕೊಳ್ಳುತ್ತೇನೆ ಎಂಬ ಭಾವನೆ ಅವರದು ಆದ್ದರಿಂದ ಅವರು ಅನೇಕ ಕವನಗಳನ್ನು ಮಾರ್ಕ್ಸ್ ಬಗ್ಗೆ, ಮಧ್ವರ ಬಗ್ಗೆ ಪೌರಾಣಿಕ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಬರೆಯುವುದಕ್ಕೆ ಸಾಧ್ಯವಾಗುತ್ತದೆ.
ಎಚ್. ಎಸ್. ವೆಂಕಟೇಶ್ ಮೂರ್ತಿಯವರು ಗುರುತಿಸಿರುವಂತೆ ಎಕ್ಕುಂಡಿಯವರು ‘ಜನರನ್ನು ನಿರಂಜನರನ್ನಾಗಿಸುವ ಕವಿ’  ನಾ. ಮೊಗಸಾಲೆಯವರು ಕರೆದಿರುವಂತೆ ಎಕ್ಕುಂಡಿಯವರು ‘ಸಂಸಾರದ ನಡುವೆ ಅರಳಿದ ಸಂತ’.
ಪು.ತಿ.ನ ಅವರ ಹೇಳಿರುವಂತೆ ಎಕ್ಕುಂಡಿಯವರಂಥ ಕವಿಗಳಿಂದ  ಭಾಷೆಗೆ ಮೆರುಗು ಬರುತ್ತದೆ; ಜನಪದ ಆತ್ಮಗೌರವ ಸಂಪನ್ನವಾಗುತ್ತದೆ.
ಕೆ ವಿ ನಾರಾಯಣ ಹೇಳುವಂತೆ “ಕಥನ ಕವನ”ದ ಪಾರಂಪರಿಕ ವ್ಯಾಖ್ಯೆ ಶ್ರೀ ಎಕ್ಕುಂಡಿಯವರಲ್ಲಿ ಬದಲಾಗಿದೆ. ‘ಕಥೆಯುಳ್ಳ ಕವನ’ವೆಂಬುದಕ್ಕೆ ಸೀಮಿತಗೊಳ್ಳದೆ ‘ಕಥನವುಳ್ಳ ಕವನ’ ಎಂಬ ಅರ್ಥಕ್ಕೆ ಹೊರಳಿದೆ. 
ವೈದೇಹಿಯವರು ತಮ್ಮ ಲೇಖನದಲ್ಲಿ ವಿವರಿಸಿರುವಂತೆ ಎಕ್ಕುಂಡಿಯವರು ತಮ್ಮ ಕಾವ್ಯದ ಮೂಲಕ, ಸ್ವತಃ ಅದನ್ನು ಓದುವ ವೈಖರಿಯ ಮೂಲಕ ಮನುಷ್ಯನ ನಿಟ್ಟುಸಿರನ್ನೂ, ಪ್ರೀತಿ ಸ್ನೇಹಗಳ ಬೆಚ್ಚನೆಯ ಭಾವವನ್ನೂ ನಮಗೆ ಪರಿಣಾಮಕಾರಿಯಾಗಿ ಮುಟ್ಟಿಸಬಲ್ಲವರಾಗಿದ್ದರು. 
ಸ್ವತಃ ಎಕ್ಕುಂಡಿಯವರೇ ಹೇಳಿರುವಂತೆ “ನನ್ನ ಇಡೀ ಸಾಹಿತ್ಯದ ಎರಡು ಧ್ವನಿಗಳನ್ನು ನಾನು ಇಲ್ಲಿ ಪ್ರಸ್ತಾಪಿಸಿರುವುದು ಅಗತ್ಯ. ಅವುಗಳಲ್ಲೊಂದು ಮಧ್ವ ಮುನಿಗಳ ಚಿಂತನಧಾರೆ. ಇನ್ನೊಂದು ಮಾರ್ಕ್ಸ್ನ ಸಾಮಾಜಿಕ ವಿಪ್ಲವದ ಧ್ವನಿ. ಇವೆರಡರ ಸಮನ್ವಯ ಸಾಮರಸ್ಯಗಳೇ ಪ್ರಪಂಚವು ಕಾಣಲಿರುವ ಹೊಸ ಸಂಸ್ಕೃತಿಯ ತಳಹದಿ ಆಗಿದೆ. ಅಲೌಕಿಕದ ತುಡಿತ ಕರುಣೆ ಹಾಗೂ ಶ್ರದ್ಧೆಗಳಿಲ್ಲದೆ, ಸಮಾಜವಾದ ಕಟ್ಟಿದ ಹಂದರಗಳೆಲ್ಲ ಒಂದೊಂದಾಗಿ ಕುಸಿದು ಬಿದ್ದುದನ್ನೂ ನಾವು ಕಣ್ಣಾರೆ ಕಂಡಿದ್ದೇವೆ. ಸಮಾಜದ ಹಸಿವು, ನೋವು, ಅನ್ಯಾಯಗಳಿಗೆ ಕುರುಡಾದ, ಕಿವುಡಾದ ಶ್ರದ್ಧೆಯ ಪೀಠಗಳೂ ಗಾಳಿಗೊಡ್ಡಿದ ತರಗೆಲೆಗಳಂತೆ ಚದುರಿ ಚಲ್ಲಾಪಿಲ್ಲಿಯಾದ ಚರಿತ್ರೆ ಎಲ್ಲವೂ ಹರಿದಾಸರ ಶಿವಶರಣರ ಉಡಿಯಿಂದ ಬಂದವು. ಹಾಗೆಯೇ ಮಾರ್ಕ್ಸ್ನ ನೊಂದ ಕಣ್ಣಿನಿಂದಲೂ ಸಿಡಿದವು.”
ಸು.ರಂ. ಎಕ್ಕುಂಡಿ ಅವರ ಕೃತಿಗಳು
·         ರಂ.ಶ್ರೀ. ಮುಗಳಿಯವರು ಪ್ರಕಟಿಸಿದ ‘ಸಂತಾನ’ ಇವರ ಮೊದಲ ಕವನ ಸಂಕಲನ 1953
       ಪ್ರಮುಖ  ಕವನ ಸಂಕಲನಗಳು
  • ಪಯಣ
  • ಹಾವಾಡಿಗರ ಹುಡುಗ: 1967
  •  ‘ಮಾತು ಮಥಿಸಿ’
  •  ಮತ್ಸ್ಯಗಂಧಿ: 1975
  •  ಬೆಳ್ಳಕ್ಕಿಗಳು: 198
  •  ಕಥನ ಕವನ: 1985
  •  ‘ಬಕುಲದ ಹೂವುಗಳು’ 1991
  • ಗೋಧಿಯ ತೆನೆಗಳು
ಖಂಡಕಾವ್ಯ :
·  ‘ಆನಂದ ತೀರ್ಥರು’ 1953
ಕಥಾಸಂಕಲನ,
· ‘ನೆರಳು’ 1960
· ಲೆನಿನ್ನರ ನೆನಪಿಗಾಗಿ,
ಅನುವಾದ
· ರಶಿಯನ್ ಎರಡು ಕಾದಂಬರಿಗಳು,
·  ಪ್ರತಿಬಿಂಬ
ವಿಮರ್ಶೆ
· ಪು. ತಿ. ನರಸಿಂಹಾಚಾರ್
ಕಾದಂಬರಿ
·ವರುಣ ಕುಂಜ,
· ತಾಳ-ತಂಬೂರಿ
ಜೀವನ ಚರಿತ್ರೆ
·ಮಧ್ವಮುನಿಗಳು

ಕ್ರಮ ಸಂಖ್ಯೆ
ಪ್ರಶಸ್ತಿ/ಪುರಸ್ಕಾರ
ವರ್ಷ
1
"ಲೆನಿನ್ನರ ನೆನಪಿಗೆ" ಎನ್ನುವ ಕೃತಿಗೆ ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ
1970
2
ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ
1974
3
"ಮತ್ಸ್ಯಗಂಧಿ" ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ
1975
4
"ಬೆಳ್ಳಕ್ಕಿಗಳು" ಹಸ್ತಪ್ರತಿಗೆ ಮುದ್ದಣ ಸ್ಮಾರಕ ಕಾವ್ಯ ಬಹುಮಾನ .
1982
5
ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
1982
6
ರೋಮ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಆಹ್ವಾನ
1984
7
‘ಬಕುಲದ ಹೂಗಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1992

ಇಳೆಯ ಜಾಣರು ತಿಳಿಯುವಂತೆ ಕುಮಾರವ್ಯಾಸನು ಕೃಷ್ಣನ ವಿಚಾರವನ್ನು ಅರುಹಲು ಬಳಸಿದ ಕತೆಯ ತಂತ್ರಗಾರಿಕೆಯನ್ನೇ ಎಕ್ಕುಂಡಿಯವರು ತಮ್ಮ ವಿಚಾರಧಾರೆಯನ್ನು ತಿಳಿಸಲು ಬಳಸಿಕೊಂಡಿದ್ದಾರೆ. ಮೂಲತಃ ಎಕ್ಕುಂಡಿಯವರು ಕವಿಗಳಾಗಿರುವುದರಿಂದ ಇವರು ಹೇಳುವ ಕತೆ ‘ಕಥನ ಕವನ’ಗಳಾಗಿವೆ. ಕಥನ ಕವನಗಳನ್ನೇ ಪ್ರಮುಖ ಕಾವ್ಯ ಮಾಧ್ಯಮವನ್ನಾಗಿ ಆರಿಸಿಕೊಂಡಿರುವ ಎಕ್ಕುಂಡಿಯವರು ವಿಶೇಷವಾಗಿ ಕಥನ ಕವನಗಳ ಕವಿಗಳಾಗಿದ್ದಾರೆ.  ಸ್ವಚ್ಛ ದೇಸೀ ಕವನ ‘ಪಾರಿವಾಳಗಳು’ ಕಥನ ಕೌಶಲ್ಯದ ಕಥನ ಕವನವಾಗಿದೆ.
ಪಾರಿವಾಳಗಳು
1 ದಟ್ಟಕಾಡಿನಲೊಂದು ಹೆಮ್ಮರದ ಹೊದರಿನಲಿ              
ಇರುತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿ ಪಾರಿವಾಳಗಳ ಜೋಡಿ
2 ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ,
ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು
3 ಇಟ್ಟಮೊಟ್ಟೆಯನೊಡೆದು ಹಿಗ್ಗಿತವುಗಳ ಪ್ರೀತಿ
ಮುದ್ದು ಮರಿಗಳ ಮಧುರ ಸದ್ದು ಕೇಳಿ
ದಿನ ಕಳೆದವಾನಂದದಿಂದ ಬಾಳಿ
4 ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ
ಪುಟ್ಟ ಮರಿಗಳು ಬಲೆಗೆ ಸಿಲುಕಿ ಸೆರೆಗೆ
ಚೀತ್ಕರಿಸತೊಡಗಿದವು  ಬರಲು ಹೊರಗೆ
5 ಕಂಡು ಮರಿಗಳ ಪಾಡು ತಾಯಿ ಧುಮುಕಿತು ಬಲೆಗೆ
ಹೆಂಡತಿಯನಗಲಿರದ ಗಂಡು ಹಕ್ಕಿ
ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ
6 ಕುರುಡು ವಾತ್ಸಲ್ಯದಲಿ ಕಳೆದುಕೊಂಡು ವಿವೇಕ
ಬಲೆಗೆ ನುಗ್ಗಿದ ಪಾರಿವಾಳ ಹಿಂಡು
ಹಸಿದ ಬೇಡನು ನಡೆದ ಹೊತ್ತು ಕೊಂಡು
7 ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ
ವ್ಯಾಮೋಹವನು ತೊರೆದು ಬಾಳಬೇಕು
ಏನು ಬಂದರು ಕೂಡ ಬಾಳಬೇಕು
ಸು. ರಂ. ಎಕ್ಕುಂಡಿಯವರ  'ಪಾರಿವಾಳಗಳು' ಕಥನ ಕವನ ಆಧಾರಿತ  ವಿಡಿಯೋ ನೋಡಲು ಈ  ಲಿಂಕನ್ನು ನೋಡಿರಿ 

ವಿಚಾರ ಮಾಡಿದಷ್ಟು ನಾನಾ ಅರ್ಥವನ್ನು ಈ ಪದ್ಯ ಕೊಡುತ್ತಾ ಹೋಗುತ್ತದೆ. ಎಲ್ಲ ವಯೋಮಾನದವರ ಮನಸ್ಸನ್ನು ಮಟ್ಟುತ್ತದೆ. ಲಯದೊಂದಿಗೆ ಗೇಯವೂ ಇರುವುದರಿಂದ ಒಮ್ಮೆ ಕೇಳಿದರೆ ಸಾಕು ನಮಗೇ ಅರಿವಿಲ್ಲದಂತೆ ಮನಸ್ಸಿನಲ್ಲಿ ಪದ್ಯದ ಸಾಲುಗಳು ಹಾಗೂ ಭಾವ ಪ್ರತಿಧ್ವನಿತವಾಗುತ್ತಲೇ ಇರುತ್ತದೆ. ಪಾರಿವಾಳಗಳ ವ್ಯಥೆಯ ಕತೆಯ ಮೂಲಕ ಮನುಷ್ಯನ ಜೀವನದ ನಿರಂತರ ದುರಂತದ ದರ್ಶನವನ್ನು ಎಕ್ಕುಂಡಿಯವರು ನಮಗೆ ಮಾಡಿಸಿದ್ದಾರೆ.

ಮೂರು ಸಾಲಿನ ಏಳು ಪದ್ಯಗಳನ್ನು ಒಳಗೊಂಡ ಸುರಂ ಎಕ್ಕುಂಡಿಯವರ ಕಥನ ಕವನ ‘ಪಾರಿವಾಳಗಳು’ ಕಥೆಯನ್ನಾಧರಿಸಿ ರಚಿತವಾಗಿದೆ. ಏಳೂ ಪದ್ಯಗಳ ಮೊದಲನೆಯ ಸಾಲಿನಲ್ಲಿ 20 ಮಾತ್ರೆಗಳ ಹಾಗೂ ಉಳಿದೆರಡು ಸಾಲುಗಳಲ್ಲಿ 16 ಮಾತ್ರೆಗಳ ಲಯವಿರವುದನ್ನು ಕಾಣುತ್ತೇವೆ.
ದಟ್ಟ ಕಾಡು ಸಮೃದ್ಧಿಯನ್ನೂ ಹೆಮ್ಮರದ ಹೊದರು ಸುರಕ್ಷಿತ ವಾತಾವರಣನ್ನೂ ಸೂಚಿಸುವಂತಿವೆ. ಸಂಸಾರ ಹೂಡಿ, ಪಾರಿವಾಳಗಳ ಜೋಡಿ ಎನ್ನುವುದು ಕೂಡಿ ಬಾಳುವುದರ ದ್ಯೋತಕವಾಗಿದೆ. ಮುದ್ದಾದ ಬಿಳಿಯ ಪಾರಿವಾಳಗಳು ಪ್ರೀತಿ ಸಹನೆ ಶಾಂತಿಯ ಸಂಕೇತಗಳಾಗಿವೆ. ಎಂದೆಂದಿಗೂ ಒಂದನ್ನೊಂದು ಅಗಲಿರಲಾಗದೆ ಹಗಲಿರುಳೆನ್ನದೆ ಜೊತೆಯಾಗಿ ಬಾಳುತ್ತಿದ್ದವು ಎಂಬ ಮಾತಿನಲ್ಲಿ ಬಾಂಧವ್ಯದ ಬೆಸುಗೆಯ ಧ್ವನಿಯೇ ಧ್ವನಿತವಾಗಿರುವುದನ್ನು ಕಾಣ ಬಹುದು.
ದಾಂಪತ್ಯದ ಸಾರ್ಥಕತೆ ಇರುವುದೇ ಸಂತಾನಾಭಿವೃದ್ಧಿಯಲ್ಲಿ. ಅದಕ್ಕೆ ಮಿಗಿಲಾದ ಸಂತಸ ಮತ್ತೊಂದಿಲ್ಲ. ತನ್ನ ಕರುಳಿನ ಕುಡಿಗಳ ಸುಮಧುರ ಇಂಚರವನ್ನು ಆಲಿಸಿ ಆನಂದಿಸುವುದಂತೂ ಬಾಳಿನ ಅವಿಸ್ಮರಣೀಯ ಕ್ಷಣಗಳು. ದಿನಗಳು ಉರುಳುವುದೂ ತಿಳಿಯದಷ್ಟು ಹರ್ಷದ ಕ್ಷಣಗಳವು. ತನ್ನ ಕುಡಿಗಳ ಮೇಲಿನ ಪ್ರೀತಿ ವಾತ್ಸಲ್ಯ ಮಮಕಾರಗಳು ಮೋಹದ ಪಾಶವಾಗಿ ಬಂಧಿಸುತ್ತವೆ. ಮೋಹಪಾಶದ ಬಂಧನದ ಬಿಗಿ ಸಂತೋಷದಲ್ಲಿ ಮೈವರೆಯುವಂತೆ ಮಾಡುತ್ತದೆ. ವಿವೇಕವನ್ನು ಕಳೆಯುತ್ತವೆ. ಮಾರಣಾಂತಿಕ ವಿಪತ್ತಿಗೆ ಹಾದಿಯಾಗುತ್ತದೆ. ಎಂಬ ಧ್ವನಿ ಪಾರಿವಾಳಗಳು ಕವನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಬಾಳಿನಲ್ಲಿ ಸುಖ, ಸಂತೋಷ, ಸಂತೃಪ್ತಿಗಳೆಲ್ಲವೂ ಕ್ಷಣಿಕ. ಸದಾಕಾಲ ವಿಪತ್ತು ಬೆನ್ನಹಿಂದೆಯೇ ಹೊಂಚು ಹಾಕುತ್ತಲೇ ಇರುತ್ತದೆ. ಯಾವ ಕ್ಷಣದಲ್ಲಿ ಸಂತಸವನ್ನು ಕಿತ್ತುಕೊಳ್ಳುತ್ತದೆಯೋ ಯಾರೂ ಅರಿಯರು. ಸಂಕಷ್ಟ ಎದುರಾದಾಗ ವಿವೇಕವನ್ನು ಕಳೆದುಕೊಂಡರೆ ಸರ್ವನಾಶಕ್ಕೆ ಹಾದಿಯಾಗುತ್ತದೆ. ಎನ್ನುವ ಸತ್ಯದ ನುಡಿಗಳನ್ನು ಈ ಪದ್ಯದಲ್ಲಿ ಮನ ಮಿಡಿಯುವಂತೆ ಪ್ರಸ್ತುತ ಪಡಿಸಲಾಗಿದೆ.
ಸಂತೋಷದಿಂದ ಬಾಳುತ್ತಿದ್ದ ಪಾರಿವಾಳಗಳ ಜೀವನದಲ್ಲಿ ಬಿರುಗಾಳಿಯಂತೆ ಬೇಡನು ಬರುತ್ತಾನೆ. ಅವನು ಬಿಸಿದ ಬಲೆ, ಎರಚಿದ ಕಾಳುಗಳು ಪಾರಿವಾಳಗಳ ವಿನಾಶಕ್ಕೆ ಕಾರಣವಾಗುತ್ತವೆ. ಯಾವ ಅರಿವೂ ಇಲ್ಲದ ಮರಿಗಳು ಬಲೆಯ ಒಳಗಿನ ಕಾಳಿಗೆ ಆಕರ್ಷಿತವಾಗಿ ಬೇಡನ ತಂತ್ರಕ್ಕೆ ಬಲಿಯಾಗಿ ಬಲೆಗೆ ಸಿಲುಕಿ ಹೊರಬರಲಾಗದೆ ಚೀತ್ಕರಿಸಿದರೆ, ಮಾತೃವಾತ್ಸಲ್ಯ, ತಾಯಿಯ ಕರುಳು ತನ್ನ ಪುಟ್ಟ ಮರಿಗಳ ಸಂಕಷ್ಟವನ್ನು ನೋಡಲಾಗದೆ ಹಿಂದೆ ಮುಂದೆ ಯೋಚಿಸದೆ ಏನು ಮಾಡುತ್ತಿದ್ದೇನೆ? ಮುಂದೇನಾಗುತ್ತದೆ? ಎಂದೂ ಚಿಂತಿಸದೆ ಕ್ಷಣ ಮಾತ್ರದಲ್ಲಿ ತಾಯಿ ಪಾರಿವಾಳ ಮರಿಗಳ ರಕ್ಷಣೆಗೆ ಮುಂದಾಗಿ ತಾನೂ ಬಲೆಗೆ ಧುಮುಕಿ ಬಂಧಿತವಾಗುತ್ತದೆ. ಹೆಂಡತಿಯನ್ನು ಬಿಟ್ಟಿರಲಾಗದ ಗಂಡು ಪಾರಿವಾಳ ಅತೀವ ದುಃಖದಿಂದ ಬಲೆಯೊಳಗೆ ಪ್ರವೇಶಿಸಿ ಬೇಡನಿಗೆ ತನ್ನ ಸಂಸಾರದೊಂದಿಗೆ ಆಹಾರವಾಗಿ ಬಿಡುತ್ತದೆ. ಕ್ಷಣದ ಕಾಲದ ಅವಿವೇಕ ವಿನಾಶಕ್ಕೆ ಕಾರಣವಾಗುತ್ತದೆ.
‘ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ’ ಎಂಬ ನಾಣ್ನುಡಿಯೊಂದಿಗೆ ‘ವ್ಯಾಮೋಹವನು ತೊರೆದು ಬಾಳಬೇಕು’ ಎಂಬ ಕಿವಿಮಾತಿನೊಂದಿಗೆ ‘ಏನು ಬಂದರು ಕೂಡ ಬಾಳಬೇಕು’ ಎಂಬ ಸಂದೇಶವನ್ನು ನೀಡುತ್ತಾ ಪದ್ಯ ಅಂತ್ಯವಾಗುತ್ತದೆ.  ಮೋಹ ಪ್ರಬಲವಾದಾಗ ಬುದ್ಧಿ ಮುಸುಕಾಗುತ್ತದೆ. ವಿವೇಕವನ್ನು ಕಳೆಯತ್ತದೆ, ವಿನಾಶಕ್ಕೆ ಕಾರಣವಾಗುತ್ತದೆ ಎಂಬ ಭಾವನೆ ಚಿತ್ರಿತವಾಗಿದೆ.
ಸಂಸಾರದಲ್ಲಿ ಕಂಡು ಬರುವ ಜೀವನೋತ್ಸಾಹದ ಚಿತ್ರಣವನ್ನೂ ನಾವು ಇಲ್ಲಿ ಗಮನಿಸ ಬಹುದು. ಮೋಹವೇ ಪಾಶದಿಂದಾಗುವ ದುರಂತವು ನಿದರ್ಶನದ ಮೂಲಕ ನಿರೂಪಿತವಾಗಿರುವುದನ್ನು ಕಾಣಬಹುದು. ಕೆಲವು ಸಾಲುಗಳಲ್ಲಿ ಅಡಗಿರುವ ನಾದಶಕ್ತಿ ಕರ್ಣಾನಂದವನ್ನುಂಟು ಮಾಡಿದರೆ ವಾಗ್ಚಿತ್ರಣ ಕಣ್ಣಿಗೆ ಕಟ್ಟುತ್ತದೆ. ಕೆಲವು ಸಾಲುಗಳಂತು ಓದುಗರನ್ನು ವಿವಿಧ ರೀತಿಯ ಚಿಂತನೆಗೆ ಒಳಗುಮಾಡುತ್ತದೆ. ಮೋಹವೇ ಪಾಶವಾಗುವುದು ಜೀವನದ ದುರಂತ ಎನ್ನುವುದನ್ನು ಸಾಬೀತು ಪಡಿಸುವಲ್ಲಿ ಸಫಲವಾಗಿದೆ. ಮೋಹಕ್ಕೆ ಒಳಗಾಗದೆ ಎಚ್ಚರದಿಂದ ಹೆಜ್ಜೆ ಇಡಬೇಕೆಂಬುದೇ ಕವಿಯ ಸಂದೇಶವಾಗಿದೆ ಎನ್ನುವಲ್ಲಿ ಯಾವ ಸಂದೇಹವೂ ಇಲ್ಲ.

ಆಭಾರಿ:








































































































No comments:

Post a Comment