Friday 8 April 2016

ಯುಗಾದಿ

1.  ಚೈತ್ರೋಲ್ಲಾಸವ ತುಳುಕಿಸುತ
ಮಾಂದಳಿರ ಶುಭವ ಸಾರುತ
ಬೇವು ಬೆಲ್ಲ ಬೆರೆಸಿ ನೀಡುತ
ಕಹಿ ನೆನಪ ಮರೆಸಿ
ಸವಿ ನೆನಪ ಉಳಿಸೆ
ಮತ್ತೆ ಬಂತು ಯುಗಾದಿಯು
‘ಮನ್ಮಥನ’ ಹಿಂದೆ ಸರಿಸಿ
‘ದುರ್ಮುಖಿ’ಯನೊಡಗೂಡಿ
ಸುವದನಗಳ ದರ್ಶನಕೆ
ಮತ್ತೆ ಬಂತು ಯುಗಾದಿಯು
ಪ್ರಕೃತಿ ನವ ಚಲುವಿನಲಿ
ಬೇವಿನ ನರುಗಂಪಿನಲಿ
ಕೋಗಿಲೆಯ ಕೂಜನದಲಿ
ದುಂಬಿಗಳ ಝೇಂಕಾರದಲಿ
ನವ ಚೈತನ್ಯವ ತುಂಬುತಲಿ
ನಮ್ಮೆಲ್ಲರೊಳಿತ ಬಯಸುತಲಿ
ನಲಿಯುತ ಮತ್ತೆ ಬಂತು ಯುಗಾದಿಯು
ಹಳೆಯ ನೋವ ಮರೆಸಲು
ಹೊಸ ಕನಸುಗಳ ಬಿತ್ತಲು
ಹರೆಯದ ಚೈತನ್ಯವ ನೀಡಲು
ಹಸನುಗೊಳಿಸೆ ಬಾಳನು
ಹರುಷದಿಂದ ಮತ್ತೆ ಬಂತು ಯುಗಾದಿಯು
ನವ ನವೋಲ್ಲಾಸದಲಿ
ನವ ನವೀನ ಭಾವದಲಿ
ನವ ಜೀವನವನರಸುತಲಿ
ನವ ಸಂಪದದ ನಿರೀಕ್ಷೆಯಲಿ
ನವ ಚೈತನ್ಯವ ಬಯಸುತಲಿ
ನವ ಸಂವತ್ಸರ ‘ದುರ್ಮುಖಿ’ಯಲಿ
ನವ ನಿರೀಕ್ಷೆಗಳನಿರಿಸುತಲಿ
ನವ ಸಂತಸದಿ ಮತ್ತೆ ಬಂತು ಯುಗಾದಿಯು
ಬೇವು ಬೆಲ್ಲದ ಸವಿಯ ಸವಿದು
ಕಷ್ಟ ಸುಖವ ಸಮದಿ ಕಂಡ
ಸಾಮರಸ್ಯದಿಂದ ಎಲ್ಲ ಕಲೆತು
ಯುಗಾದಿಯ ಸವಿಯ ಸವಿಯೋಣ
ಜಯದ ಹಾದಿಯಲಿ ಸಾಗೋಣ
ನಾವೆಲ್ಲರೊಂದಾಗಿ ನವೋತ್ಸಾಹದಿ  ‘ದುರ್ಮುಖಿ’ಯ ಸ್ವಾಗತಿಸೋಣ

   2. ‘ದುರ್ಮುಖಿ’ ಸಂವತ್ಸರವ ಸ್ವಾಗತಿಸುತ
ನಾವೆಲ್ಲರೊಂದಾಗಿ ಬೇವು ಬೆಲ್ಲ ಸವಿದು
ಹಬ್ಬದೂಟವುಂಡು ಹೊಸವುಡುಗೆಯುಟ್ಟು
ಸಂಭ್ರಮದಿ ಯುಗಾದಿಯ ಆಚರಿಸೋಣ
3 ದ್ವೇಷಾಸೂಯೆಸಂಶಯಗಳ ಬಿಟ್ಟು
ಸುಖ ಸಂತಸ ಸಂಭ್ರಮಗಳ ತಳೆದು
ಬೇವಿನೊಡನೆ ಮಾವಿನ ತೋರಣವ ಕಟ್ಟಿ
ಎಲ್ಲಕೂಡಿ ಸಮಚಿತ್ತದಿಂದ ಸುಮುಖವ ತಳೆದು
‘ದುರ್ಮುಖಿ’ಯ ಸ್ವಾಗತಿಸೋಣ ಯುಗಾದಿಯನಾಚರಿಸೋಣ
4. ಚಿಗುರ ಚೆಲುವ ಚೆಲ್ಲುತೆಲ್ಲೆಡೆ
ನಸುಗಂಪನು ಸೂಸುತೆಲ್ಲೆಡೆ
ಕೂಜನದ ಇಂಪ ಹರಡುತೆಲ್ಲೆಡೆ
ಶೃಂಗಾರ ಮಾಸ ಬಂತು ಸಂಭ್ರಮಿಸುತ
ಹೊಸ ಹರುಷವ ತರಲು ಎಲ್ಲೆಡೆ
‘ದುರ್ಮುಖಿ’ಯ ಹೆಸರಹೊತ್ತು
ಸುಮುಖಗಳ ಕಾಣಲೆಂದು ಯುಗಾದಿ ಬರುತಿದೆ
ಎಲ್ಲ ಕೂಡಿ ಬೇವು ಬೆಲ್ಲ ಮೆದ್ದು
ಕಹಿಯ ಮರೆತು ಸಿಹಿಯ ನುಂಡು
ಹೊಸ ಆಸೆ ಆಕಾಂಕ್ಷೆಗಳನೀಡೇರಿಸೆನುತ ಬೇಡಿ
ಹೊಸ ಹುಮ್ಮಸ್ಸಿನಲಿ ಯುಗಾದಿಯ ಆಚರಿಸುವ ಬನ್ನಿ.
5 ಒಣ ಮರಗಳಿಗೆ ಜೀವ ಕಳೆಯತುಂಬಿ
ರೆಂಬೆ ಕೊಂಬೆಗಳಿಗೆ ಹಸರುಡುಗೆಯುಡಿಸಿ
ಬಣ್ಣ ಬಣ್ಣದ ಹೂಗೊಂಚಲಿಂದಲಂಕರಿಸಿ
ಹಕ್ಕಿಗಳಾ ಮಧುರ ಚಿಲಿಪಿಲಿ ನಾದವನಿರಿಸಿ
ಭೃಂಗಗಾನದಿಂದ ಮನಗಳ ತಣಿಸಿ
ಮತ್ತೆ ಬಂದಿತಿದೋ ಯುಗಾದಿಯು.

************

ಯುಗಾದಿ ಶುಭಾಶಯಗಳು