Thursday, 30 September 2021

ಪದ್ಮ ಪ್ರಿಯೆ

 ಎಂಎಲ್ ಎ ‌ ಸಂಸ್ಥೆಗೆ ಪ್ರಶಸ್ತಿಯ ಹುಟ್ಟುಹಾಕಿ

ಸಂಸ್ಥೆಗೆ ಪ್ರಶಸ್ತಿಗಳ ಸರಮಾಲೆ ತೊಡಿಸಿದ

ಚತುರೆ ಪದ್ಮಳಿಗೆ ನಮೋ ನಮೋ

ಕಗ್ಗದ ಪದ್ಯಗಳನರಗಿಸಿಕೊಂಡು

ಸಾಂದರ್ಭಿಕವಾಗಿ ಬಳಸಿ ಬಳಸಿ

ಎಲ್ಲರಲೂ ಕಗ್ಗಪ್ರೇಮವ ಬೆಳೆಸಿದ

ಕನ್ನಡಭಾಷಾಪ್ರೇಮಿಗೆ ನಮೋ ನಮೋ

               ಕನ್ನದ ಕಂಪನು ಎಲ್ಲೆಡೆ ಪಸರಿಸಿ

               ಕನ್ನಡ ಪುಸ್ತಕವ ಕಾಣಿಕೆಯಾಗಿ ನೀಡುತ

              ಭಾಷೆಯ ಕಲಿಸುವುದ ಕರಗತ ಮಾಡಿಕೊಂಡು

             ಕನ್ನಡ ಸಾಹಿತ್ಯಾಭಿರುಚಿ ಬೆಳೆಸಿದವಳಿಗೆ ನಮೋ ನಮೋ       

ಕನ್ನಡ ಡಿಂಡಿಂಮವ ಬಾರಿಸುತ

ವರಕವಿಬೇಂದ್ರೆಯವರ ಪರಿಚಯಕೆ

ಬಹುಮಾಧ್ಯಮನ ಬಳಸಿ ಪ್ರಶಂಸೆಗರ್ಹರಾದ

ಸಕಲಕಲಾ ಪಂಡಿತೆಗೆ ನಮೋ ನಮೋ

           ಏಳುಬೀಳಲೂ ಗುರಿತಲುಪುವ ದಿಟ್ಟೆ

          ಸಹೋದ್ಯೋಗಿಗಳ ಒಲವಿಗೆ ಪಾತ್ರರಾಗಿ

          ಸಹನೆ ಸೌಹಾರ್ದದಲಿ ತಿದ್ದಿ ತೀಡುವ

         ಕಲಿತು ಕಲಿಸಿ ನಲಿಯುವವಳಿಗೆ ನಮೋ ನಮೋ

ಶಾಂತಾಮಣಿ

೧೯.೯.೨೦೧೯                  

 


Friday, 23 July 2021

ಹಾಯ್ಕುಗಳು

 ಓರೆಗಣ್ಣಿನ

ನೋಟದಿ ಸೆಳೆದಳು

ನನ್ನಮನವ


ಕೆಂದುಟಿಯಲಿ

ಮುತ್ತಿಟ್ಟು ಮೋಹಿಸುತ

ಸೆಳೆದಳೆನ್ನ


ಮನವ ಕದ್ದು

ಕಾಡಿಸಿದಳು ಖುದ್ದು

ಹೃದಯ ಗೆದ್ದು


ಬಳ್ಳಿ ಒಯ್ಯಾರ

ಕರಿಮೋಡ ಹೆರಳು

ನನ್ನ ಬೆಡಗಿ


ಹೃದಯೇಶ್ವರಿ

ಸರ್ವೇಶ್ವರಿ ನನ್ನಾಕೆ

ಬೇರೆಯಿನ್ನೇಕೆ


ಭುವನೇಶ್ವರಿ

ಮಮತಾ ಸ್ವರೂಪಿಣಿ

ನನ್ನ ಜನನಿ


ಸ್ವಾರ್ಥವಳಿದು

ಸಾಮರಸ್ಯ ಮೂಡಲು

ಏಳ್ಗೆಕಾಣ್ವುದು


ಬಲೂನಿನಂತೆ

ಊದಿ ಉಬ್ಬದಿರು ನೀ

ಸೂಚಿತಾಕೀತು


ಪ್ರಶಸ್ತಿಗಾಗಿ

ಬರೆದರೆ ಕವನ

ಭಾವಕಾಣದು


ಮನ ಮುದುಡಿ

ಭಾವ ಬರಡಾಗಿರೆ

ಕಾವ್ಯವುಕ್ಕದು


ಸವಿಕಾಣುವೆ

ಹಾಲು ಜೇನಿನಂತಿರೆ

ಸಂಸಾರದಲಿ

ಪದ್ಮಶ್ರೀಧರ

Sunday, 18 July 2021

ಮುಗಿಯದಾಟ

ಏನಿದು ಭ್ರಮೆಯೋ ವಿಭ್ರಮೆಯೋ 
ಅರಿಷಡ್ವರ್ಗಗಳ ಮೇಳೈಸುವಿಕೆಯೋ
ಅಹಮಿಕೆಯ ಅಡಗದಟ್ಟಹಾಸವೋ
ತೀರದಾ ಸ್ವಾರ್ಥದ ಪರಾಕಾಷ್ಠೆಯೋ

ನಾಗರೀಕತೆಯ ಸಮಷ್ಠಿಯ ಫಲವೋ

ವಿಕೃತ ಮನಸಿನ ವಿಪರೀತ ಬುದ್ಧಿಯೋ

ತಾನತಿಶಯನೆಂಬ ಭ್ರಾಂತಿಯ ಫಲವೋ

ಪ್ರಕೃತಿಯು ಮುನಿದು ನೀಡಿರುವ ಶಾಪವೋ


ಊಹೆಗೂ ನಿಲುಕದ ವುಹಾನ್ ವೈರಸ್‌ನಾಟ

ವರುಷಗಳು ಕಳೆದರೂ ಅಡಗಿಲ್ಲವಿನ್ನು ಕಾಟ

ಲಾಕ್ ಡೌನ್ ನಿಂದ ಮನೆಯಲ್ಲೇ ಎಲ್ಲ ನೋಟ

ಮನೆಯೊಳಗೇ ಇದ್ದಿದ್ದೆಲ್ಲರ ತಲೆಕೆಟ್ಟು ಹುಚ್ಚಾಟ


ವಾಟ್ಸಪ್ ಫೇಸ್‌ಬುಕ್‌ನಲ್ಲಿ ತಿಂಡಿಗಳ ಹರಿದಾಟ

ಹೊತ್ತು ಹಿಟ್ಟಿಗೂ ಪರದಾಡುವ ಗೋಳಿನ ನೋಟ

ಎಲ್ಲೆಲ್ಲೋ ಸಿಲುಕಿ ಅತಂತ್ರವಾಗಿಹರ ಪರದಾಟ

ಕೈಯಲ್ಲಿ ಕೆಲಸವಿದ್ದರೂ ಮಾಡಲಾಗದೆ ಒದ್ದಾಟ 


ಆತಂಕ ಅನಿಶ್ಚಿತತೆಯಲಿ ಬೆಂದವರ ತೊಳಲಾಟ

ಜೀವದ ಹಂಗುತೊರೆದು ಸೇವಾನಿರತರ ಹೋರಾಟ

ವಿಶ್ವದುಳಿವಿಗೆ ಉದಾರಿಗಳ ಕೊಡುಗೈಯ ಮೇಲಾಟ

ಕಾಟ ಕೂಟ ನೋಟ ಓ ಬಲ್ಲವರಿಲ್ಲ ಕಾಣದ ದೇವರಾಟ


ಕಪ್ಪು ಬಿಳುಪು ಹಳದಿ ನೀಲಿ ಫಂಗಸ್‌ ಗಳ ದರ್ಶನ

ಆಲ್ಫಾಬೀಟಾಗಾಮಾಡೆಲ್ಟಾ ಡೆಲ್ಟಾ ಪ್ಲಸ್ಗಳಾಗಮನ

ನಿರಂತ ನಡೆದಿದೆ ಕೋವಿಡ್‌ ಲಸಿಕೆಯ ಅಭಿಯಾನ

ಎಚ್ಚರ ತಪ್ಪಿದರೆ ಯಮಪುರಿಗೆ ಸಮೂಹಿಕ ಯಾನ 


ಅಜ್ಜಿಯಡುಗೆ ಔಷಧ ನೇಮನಿಷ್ಠೆ ಮಡಿಯಾಟವನಾಡುತ 

ಕೈಯ ತೊಳೆದು ಅಂತರ ಕಾಯ್ದು ಕಷಾಯ ಕುಡಿಯುತ

ಮನೆಯೊಳಗಿದ್ದು ಆಳುವವರ ಆದೇಶಗಳ ಪಾಲಿಸುತ

ಸಂಯಮದಿ ಮನುಕುಲದುಳಿವಿಗೆ ದೇವರನು ಬೇಡುತ 


ಎಚ್ಚರ ತಪ್ಪಿದರೆ ಗಂಡಾಂತರ

 ಕಪ್ಪು ಬಿಳುಪು ಹಳದಿ ನೀಲಿ ಫಂಗಸ್‌ ಗಳ ದರ್ಶನ
ಆಲ್ಫಾಬೀಟಾಗಾಮಾಡೆಲ್ಟಾ ಡೆಲ್ಟಾ ಪ್ಲಸ್ಗಳಾಗಮನ
ನಿರಂತ ನಡೆದಿದೆ ಕೋವಿಡ್‌ ಲಸಿಕೆಯ ಅಭಿಯಾನ

ಎಚ್ಚರ ತಪ್ಪಿದರೆ ಗಂಡಾಂತರ ತಪ್ಪದು ನನ ಕಂದ


ವೈರಾಣು ಸ್ಥಿರ

ವೈರಾಣುಗಳುದಿಸಿ ಕಾಡುವವು ವೈರಾಣು ಸ್ಥಿರ

ಸೈರಿಸದೆ ಅನ್ಯಮಾರ್ಗವೆಮಗಿಲ್ಲ ರೋಗ ಚಿರ

ಹೋರಾಡುತಿರು ನಡೆಸಿ ಅನ್ವೇಷಣೆ ನಿರಂತರ

ಮೀರದಂತೆ ಬಾಳ್ವೆಯ ಮಾಡು ನನ ಕಂದ||


Wednesday, 28 April 2021

ಪ್ರಕೃತಿ ಬರೆದ ಕಾವ್ಯ

 

ಹೊರ ಹೊಮ್ಮಲಿ ನೈಜ ಭಾವ ಸ್ಫುರಣ.

ನಿರಂತರವಾಗಲಿ ಪ್ರಕೃತಿ ಕಾವ್ಯ ಪಯಣ

ಆಗದು ಎಂದೆಂದು ಛಂದ ಪ್ರಾಸ ಹರಣ

ಪುಳಕಿತವು ನೋಡುವ ಕೇಳುವ ಕರಣ


ಚೈತ್ರ ವೈಶಾಖದಿ ವಸಂತ ಬರೆದ ಕಾವ್ಯ

ಮಧುಮಾಸದ ನಲ್ಮೆಯ ಶೃಂಗಾರ ಕಾವ್ಯ

ಜೇಷ್ಠ ಆಷಾಢದಿ ಗ್ರೀಷ್ಮ ರಚಿಸಿದ ಕಾವ್ಯ

ಶುಷ್ಕ ತರು ಲತೆಯ ಚಿತ್ತ ಚಿತ್ತಾರ ಕಾವ್ಯ


ಶ್ರಾವಣ ಭಾದ್ರಪದ ವರ್ಷವೈಭವ ಕಾವ್ಯ

ಆಶ್ವಯುಜ ಕಾರ್ತಿಕ ಶರತ್ಕಾಲದ ಕಾವ್ಯ

ನಾಡಹಬ್ಬ ದಸರೆಯ ಸಾಂಸ್ಕೃತಿಕ ಕಾವ್ಯ

ಮಾರ್ಗಶಿರ ಪುಷ್ಯಕೆ ಹೇಮಂತನ ಕಾವ್ಯ


ಮಾಘ ಫಾಲ್ಗುಣ ಶಿಶಿರ ತಂದಿಹ ಕಾವ್ಯ

ಚಳಿಯಲಿ ಮೈಮನ ಪುಳಕಿಸುವ ಕಾವ್ಯ

ಋತು ಮಾಸ ವಾರ ದಿನ ಕ್ಷಣದ ಕಾವ್ಯ

ನಿರತವೂ ಕಾಲನದಿ ಪ್ರವಹಿಸುವ ಕಾವ್ಯ


ಖಂಡ ದೇಶ ನಗರ ಹಳ್ಳಿ ವಂಶದ ಕಾವ್ಯ

ಏಳು ಬೀಳುಗಳ ಬಾಳ ಬಂಡಿಯ ಕಾವ್ಯ 

ಅನುರಾಗವರಳಿದ ಒಲುಮೆಯ ಕಾವ್ಯ

ಅಳಿಸಿ ಉಳಿಸಿ ಬೆಳೆಸುವ ಪ್ರಕೃತಿ ಕಾವ್ಯ


Monday, 26 April 2021

ಚೆಲ್ವ ಬಾಳು


ಚೆಲುವೆ ನೀನು

ನಲಿವು ನನಗೆ 

ಗೆಲುವು ನಮ್ಮ ಬದುಕಿಗೆ|

ಒಲವು ಇರಲಿ

ಕಳೆಯು ಬರಲಿ

ಬೆಳೆವ ನಮ್ಮ ಬಾಳಿಗೆ||


ನಿನ್ನ ವಾಣಿ

ನನ್ನ ನುಡಿಯು

ನಿನ್ನ ಮಧುರ ಗೀತೆಯು|

ನಿನ್ನ ನಡೆಯು

ನನ್ನ ನಡಿಗೆ

ನಿನ್ನ ಜೊತೆಯ ಬಾಳ್ವೆಯು||


ಅಂದ ಮೊಗವು

ಚಂದ ನಡುವು

ಕಂದನಂಥ ಮನವದು|

ಗಂಧ ಗಾಳಿ

ಮಂದ ಮರುತ

ಬಂದು ಚೆಲ್ವ ಬಾಳದು||