Monday 28 September 2020

ಕಾಮನ ಬಿಲ್ಲು


ಅಂದದಿ ಮೂಡಿದೆ 

ಚಂದದ ಬಿಲ್ಲಿದು

ಕಂದನ ಕರೆಯಿರಿ ತೋರಿಸುವ|

ಬಂಧನ ಇಲ್ಲದ 

ಸುಂದರ ಕಮಾನು

ವಂದಿಸಿ ಎಲ್ಲರು ಹರುಷಿಸುವ||


ಬಣ್ಣಗಳೇಳಿವೆ 

ಚಿಣ್ಣರ ಆಟಕೆ

ತಣ್ಣಗೆ ತನ್ನೆಡೆ ಕರೆಯುತಿದೆ| 

ಅಣ್ಣನು ತಂದಿಹ 

ಹೊನ್ನಿನ ಹೊಳಪಿನ|

ಬಣ್ಣದ ಬಿಲ್ಲನು ಹೋಲುತಿದೆ||


ಎಳೆಯರು ಬಂದರು 

ಗೆಳೆಯರ ಕರೆದರು

ಮಳೆಬಿಲ್ಲಿನ ಸೊಗ ತೋರಿಹರು|

ಇಳೆಗೀಗಲೆ ಬಾ 

ನಲಿಯುತ ಆಡುತ 

ಕಲಿಯುವ ಜೊತೆಯಲಿ ಎಂದಿಹರು||

 

ಏನಿದು ಅಚ್ಚರಿ 

ಸನಿಹದಿ ಮೂಡಿದೆ

ಮನಕದು ಮುದವನೆ ನೀಡುತಿದೆ|

ಭಾನಿನ ಕಿರಣವು 

ಹನಿಯಲಿ ತೂರಿದೆ

ಬಾನಲಿ ಬಣ್ಣವು ಮೆರೆಯುತಿದೆ||


ಕೆಂಪದು ಕಂಡಿದೆ

ಕಿತ್ತಳೆ ಹಳದಿಯು

ಹಸಿರಿನ ನಂತರ ನೀಲಿಯಿದೆ| 

ಊದಾನೀಲಿಯು 

ನೇರಿಳೆ ಮೂಡಿದೆ

ಕಣ್ಣಿಗೆ ಚಂದದಿ ಕಾಣುತಿದೆ||


ಕಾಮನ ಬಿಲ್ಲಿದು 

ಭೂಮಿಗೆ ಕಂಡಿದೆ

ಸೋಮನ ಕಾಂತಿಯ ಮೀರುತಿದೆ|

ಸಾಮದ ನುಡಿಯನು 

ಪ್ರೇಮದಿ ಅರುಹುತ

ಕೋಮಲ ಭಾವವ ತೋರುತಿದೆ||


ಹೊನ್ನು=ಚಿನ್ನ

ಇಳೆ= ಭೂಮಿ

ಸಾಮ =ಚತುರೋಪಾಯಗಳಲ್ಲಿ ಒಂದು, ಚಾತುರ್ಯ, ಗಾನ, ಜ್ಞಾಣ್ಮೆ, ಕೌಶಲ

ಸೋಮ=ಚಂದ್ರ

ಭಾನು=ಸೂರ್ಯ

ಬಾನು=ಆಕಾಶ

Saturday 19 September 2020

ನನ್ನ ಕಂದಾ

 ಪ್ರಕಾರ : ಛೇಕಾನು ಪ್ರಾಸ

ನಿನ್ನ ಮಣ್ಣಿನಲ್ಲೂ ನೋಟವೇ ಚಂದಾ ಚಂದಾ

ಇನಿತು ಕಾಡಿಗೆಯಿಡಲು ಅಂದಾ ಅಂದಾ

ಮನಕೆ ಆಗ ನೀ ತಂಪನೀವೆ ಕಂದಾ ಕಂದಾ

ತಿನಿಸುವೆ ಬಾ ನಿನಗೆ ನಾನು ಕುಂದಾ ಕುಂದಾ


ನೀನೆನ್ನ ಮನೆಯಂಗಳದ ಸುಮಾ ಸುಮಾ 

ಸೂಸುತಿಹೆ ಮನೆ ತುಂಬಾ ಘಮಾ ಘಮಾ 

ಚಿನ್ನ ರನ್ನ ನಾ ಕರೆವೆ ನಿನ್ನ ಹೇಮಾ ಹೇಮಾ

ನಿನಗೆ ಯಾರು ಇಹರು ಹೇಳು ಸಮಾ ಸಮಾ

 

ಚಂದಿರನ ನೋಡಿ ನೋಡಿ ನಲಿವ ಬಾ ಬಾ

ಬೆಳದಿಂಗಳ ಹಚ್ಚಿ ಹಚ್ಚಿ ಹೊಳೆವ ಬಾ ಬಾ

ಕೈ ತುತ್ತು ತುತ್ತು ತಿನಿಸಿ ನಲಿಯುವೆ ಬಾ ಬಾ

ಲಾಲಿ ಹಾಡಿ ಹಾಡಿ ಮಲಗಿಸುವೆ ಬಾ ಬಾ 


ತಿದ್ದಿ ತಿದ್ದಿ ತಿಲಕವಿಟ್ಟು ನೋಡಿ ನೋಡಿ ನಲಿವೆ

ತಿದ್ದಿ ತೀಡಿ ಒಳ್ಳೆ ಒಳ್ಳೆ ಕಥೆಯ ಹೇಳಿ ತಣಿವೆ

ತಿದ್ದಿ ತಿದ್ದಿ ಬರೆಸಿ ಪಾಠ ಹೇಳಿ ಹೇಳಿ ಕಲಿಸುವೆ

ತಿದ್ದಿ ತಿದ್ದಿ ಬುದ್ದಿ ಹೇಳಿ ಹೇಳಿ ನಿನ್ನ ಬೆಳೆಸುವೆ

Friday 18 September 2020

ವಿದ್ಯಾಲಯ


ಶಿಸ್ತು ಶಿಕ್ಷಣ ಶಿಕ್ಷೆ ಶಿಕ್ಷಕರ ಚಿತ್ರಣ
ಓದು ಬರೆಹ ಆಟ ಪಾಠಕೆ ಪ್ರೇರಣ
ಕಲಿತು ನಲಿವ ಸರಸ್ವತಿಯ ಆಲಯ
ಬಾಳ ಯಶಕೆ ಸವಿ ಸಿಹಿಯ ಹೂರಣ

ಜ್ಞಾನಾರ್ಜನೆಗೊಂದು ಗ್ರಂಥಾಲಯ
ವಿಜ್ಞಾನ ಕಲಿಕೆಗೆ ಪ್ರಯೋಗಾಲಯ
ಕಲಿಯಲಿದು ಮಾದರಿ ಶಾಲೆಯು
ಪ್ರತೇಕವಾಗಿಹ ಸ್ವಚ್ಛ ಶೌಚಾಲಯ

ಕಬಡ್ಡಿ, ಖೋ ಖೋ ಹೊರಾಂಗಣಾಟ
ಚೆಸ್ ಕೇರಂ ಹಾವು ಏಣಿ ಒಳಾಂಗಣಾಟ
ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ
ನೃತ್ಯ ನಾಟ್ಯ ವಾರ್ಷಿಕೋತ್ಸವದ ನೋಟ

ಮಧ್ಯಾಹ್ನದೂಟಕೆ ಶುಚಿ ರುಚಿ ಓಗರ
ಹಲವು ಚಟುವಟಿಕೆಗಳ ಆಗರ
ಭವ್ಯ ಭವಿಷ್ಯ ನಿರ್ಮಾಣದ ಕೇಂದ್ರ
ಕಲಿಯಲಿದು ಮೇರೆಯಿಲ್ಲದ ಸಾಗರ 

Wednesday 9 September 2020

ತಪ್ಪುಯಾರದು?

ಏಳು ಹಾಯ್ಕುಗಳು


ಕಣ್ಣೀರಹನಿ

ಒಂದು ಹೇಳುತಿದೆ ತಾ

ಹೊರಗೆ ಬಂದು


ಕಳಕೊಂಡೆನು

ಸೌಂದರ್ಯ ಮುಳುವಾಗಿ

ನಾನೆಲ್ಲವನು


ಅತ್ಯಾಚಾರವ

ಮಾಡಿದರು ಅವರು

ನಾನು ಹೆಣ್ಣೆಂದು


ಬರಸೆಳೆದು

ಹಾಸಿಗೆಗೆ ಎಳೆದು

ಹೀರಿದರೆನ್ನ!


ತೃಷೆತೀರಲು

ಕೊಡವಿಕೊಳ್ಳುತಲಿ

ಹೊರಹೋದರು


ಬಿಟ್ಟು ಹೋದರು

ಬಡತನಕೆ ದೂಡಿ

ದೀನಳಾಗಿಹೆ


ತಪ್ಪುಯಾರದು?

ಲೋಕದಾಕಣ್ಣಿಗೆ

ಜಾರಿಣಿಯಾದೆ!!


*****

Monday 7 September 2020

ಅನ್ನದಾತ


ನೀಲಿ ಬಾನು ಪಚ್ಚೆ ಪೈರು

ನಡುವೆ ದುಡಿವ ರೈತ ಮೇರು

ಇವಗೆ ಹೇಳಿ ಸಾಟಿ ಯಾರು


ಉತ್ತಿ ಬಿತ್ತಿ ಬೆಳೆಯ ಬೆಳೆವ

ಅನ್ನ ನೀಡಿ ಹಸಿವ ಕಳೆವ

ತಾನು ಮಾತ್ರ ಬವಣೆಪಡುವ


ಜೋಡಿ ಎತ್ತು ಇವನ ಮಿತ್ರ

ಬಲ್ಲ ನೀತ ದುಡಿಮೆ ಸೂತ್ರ

ಎಲ್ಲಕು ಮಿಗಿಲಿವನ ಪಾತ್ರ


ಹಗಲು ಇರುಳು ತಾನು ದುಡಿದು

ಕೆಸರು ಗದ್ದೆಯಲ್ಲಿ ದಣಿದು

ಮಾಳ್ಪ ಇವನ ಕೆಲಸ ಹಿರಿದು


ಉದಯ ಕಾಲದಲ್ಲಿ ಎದ್ದು

ದುಡಿಮೆಯಿಂದಲೆಲ್ಲ ಗೆದ್ದು

ಮಾಡನಿವನು ಇನಿತು ಸದ್ದು

 

ಕಷ್ಟ ಜೀವಿ ಕರ್ಮಯೋಗಿ ಈತ

ನಮ್ಮ ಸಲಹುವ ಅನ್ನದಾತ

ದೇಶದ ಬೆನ್ನೆಲುಬು ನಮ್ಮ ರೈತ


ದೇಶದ ಬೆನ್ನೆಲುಬು *ನಮ್ಮ ರೈತ* 

ಕಷ್ಟ ಜೀವಿ ಕರ್ಮಯೋಗಿ ಈತ

ಜಗವ ಸಲಹುತಿರುವ ಅನ್ನದಾತ

*****


 

Sunday 21 June 2020

ಮುಂಜಾವು

ತಂದಾನಿ ತಾನೊ ತಾನಿ ತಂದಾನೊ…...

ರಂಗು ರಂಗೇರಿದೆ ನೋಡ|
ಮೂಡಲಿನಾಗ ಕೆಂಪ್ಹೆಂಗಿದೆ||
ಸೂರ್ಯನ ಅಂದನೋಡು
ಅಮ್ಮನ ಹಣೆ ಕುಂಕುಮದಂಗಿದೆ…. ತಂದಾನಿ ತಾನೊ ತಾನಿ ತಂದಾನೊ…...||

ಗೂಡಬಿಟ್ಟು ಹಕ್ಕಿ ಹಾರಿದೆ|
ಆಗಸದಾಗ ಚಿತ್ರ ಮೂಡಿದೆ|
ಚಿಲಿಪಿಲಿ ಅಂತ ಗಾನಗೈದಿದೆ|
ಹಕ್ಕಿಹಾಡು ಮನವ ತಣಿಸಿದೆ…. ತಂದಾನಿ ತಾನೊ ತಾನಿ ತಂದಾನೊ……..||

ಅಕ್ಕ ಅಂಗಲ್ದಾಗ ರಂಗೋಲಿ ಬಿಟ್ಯಾಳಾ|
ಅವ್ವ ರಾಗಿ‌ಮುದ್ದೆ ಬಸ್ಸಾರ್ ಮಾಡ್ಯಾಳಾ|
ಅಪ್ಪ ನೇಗಿಲ ಹೊತ್ತು ತೋಟಕ್ಹೊರ್ಟ್ಯಾನಾ|
ಜೋಡೆತ್ತಿನ್ಗಾಡಿಮೇಲೆ ಸಿದ್ದ ಹೊರ್ಟ್ಯಾನಾ……. ತಂದಾನಿ ತಾನೊ ತಾನಿ ತಂದಾನೊ……….||

ಬಾರು ಕೋಲ ಬೀಸಿ ಸಿದ್ದ ಗಾಡಿ ಹೊಡ್ದ್ಯಾನಾ|
ಎತ್ತ ಕೊಳ್ಳಗಂಟಿ ಘಣ ಘಣ ಸದ್ದಮಾಡ್ಯಾವಾ|
ಗಂಟೆ ಸದ್ದಕೇಳಿ ಹಸುಕರ ಅಂಬಯೆಂದ್ಯಾವಾ|
ಅವ್ವ ತಂಬ್ಗಿತುಂಬ ನೊರೆ ಹಾಲು ಕರೆದ್ಯಾಳಾ|
ಬಾರೆ ನಾವು ನೊರಿ ಹಾಲು ಕುಡ್ಯಾವಾ ಹಾಲು ಕುಡ್ಯಾವ…... ತಂದಾನಿ ತಾನೊ ತಾನಿ ತಂದಾನೊ……..||
******"

Saturday 20 June 2020

ಬದುಕು ಬಂಡಿ

ವನಜ ಬಡಕುಟುಂಬದ ಹುಡುಗಿ. ಬಲು ಚೆಲುವೆ. ತಂದೆ ತಾಯಿಯ ಕಷ್ಟವನ್ನು ನೋಡಲಾರದೆ ತನಗಿಂತ ಎರಡು ಪಟ್ಟು ಹಿರಿಯನಾದ ಮಾಲೂರಿನ ಕುಡುಕನನ್ನು ಮದುವೆಯಾಗುತ್ತಾಳೆ. ಸರೀಕರ ಮುಂದೆ ಅನೇಕ ಅವಮಾನಗಳನ್ನು ಎದುರಿಸುತ್ತಾಳೆ. ಇಡೀ ಊರಿನ ಕಾಮುಕರ ದೃಷ್ಟಿಗೆ ಕೇಂದ್ರ ಬಿಂದುವಾಗ ಬೇಕಾಗುತ್ತದೆ. ತನ್ನನ್ನು ಕಾಪಾಡಿ ಕೊಳ್ಳವುದರ ಜೊತೆಗೆ ತನ್ನ ಕರುಳಕುಡಿ ಮೋಹನನಿಗೆ ಯಾವುದರ ತಾಪವೂ ತಾಗದಂತೆ ನೋಡಿಕೊಳ್ಳವ ಜವಾಬ್ದಾರಿಯನ್ನು ಭರಿಸಬೇಕಾಗುತ್ತದೆ. ಅತ್ತೆ ಮಾವನ ಮರಣದ ನಂತರ ಮನೆಯ ನಿರ್ವಹಣೆಯ ಜವಾಬ್ದಾರಿಯೂ ಹೆಗಲಮೇಲೆ ಬೀಳುತ್ತದೆ. ಊರಿನ ಜನರ ಕಾಟದಿಂದ ದೂರಾಗುವುದು ಕಷ್ಟವಾದಾಗ ವನಜ ಊರನ್ನೇ ತೊರೆದು ಕಾಣದ ಊರಿಗೆ ಮಗುವಿನೊಂದಿಗೆ ಹೋಗಬೇಕಾಗುತ್ತದೆ. 
    ಕಾಣದ ಊರಿನಲ್ಲಿ ಒಂಟಿ ಹೆಣ್ಣು ಏನು ಮಾಡುವುದು? ಎಲ್ಲಿ ಹೋಗುವುದು ಎನ್ನುವ ಯೋಚನೆಯಲ್ಲಿದ್ದವಳಿಗೆ ಆಕಸ್ಮಿಕವಾಗಿ ಗಿರಿಜಳ ಪರಿಚಯವಾಗಿ ಆಕೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ತನ್ನ ನಡವಳಿಕೆಯಿಂದ ಬಹಳಬೇಗ ಆತ್ಮೀಯಳೂ ಆಗುತ್ತಾಳೆ. 
    ಗಿರಿಜಳ ಮನೆಕೆಲಸ ಮುಗಿಸಿ ಆಕೆ ಕೆಲಸಕ್ಕೆ ಹೋಗಿ ಮನೆಗೆ ಬರುವುದರೊಳಗೆ ಬೇರೆಕಡೆಗಳಲ್ಲಿ ಕೆಲಸವನ್ನುಮಾಡಿ ಮಗನ ಎಲ್ಲಾ ಆಸಕ್ತಿಗಳಿಗೂ ನೀರೆದು ಅಗತ್ಯಗಳನ್ನು ಪರಿಪೂರ್ಣಗೊಳಿಸುತ್ತಾಳೆ.
    ಮಗ ಮೋಹನನೂ ಅಷ್ಟೇ ಸಂಗೀತ, ಸಾಹಿತ್ಯ, ಕಲೆ, ನೃತ್ಯ, ಆಟ ಪಾಠ ಎಲ್ಲದರಲ್ಲೂ ಮುಂದೆ. ಹೋದೆಡೆಯಲ್ಲೆಲ್ಲಾ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಅಮ್ಮನ ಪರಿಶ್ರಮವನ್ನು ಸಾರ್ಥಕಗೊಳಿಸುತ್ತಾನೆ. ಗಿರಿಜಳಿಗೂ ಅಚ್ಚುಮೆಚ್ಚಾಗುತ್ತಾನೆ. ಮಕ್ಕಳಿಲ್ಲದ ಗಿರಿಜ ಕ್ರಮೇಣ ತನಗೇ ಗೊತ್ತಿಲ್ಲದಂತೆ ಮೋಹನನಿಗೆ ಮಗನಸ್ಥಾನವನ್ನು ನೀಡುತ್ತಾಳೆ. ಮೋಹನನ ಮುಂದಿನ ಓದಿಗೆ ಪ್ರೋತ್ಸಾಹಿಸುತ್ತಾಳೆ. 
     ತನ್ನ ಪರಿಶ್ರಮ ಮತ್ತು ಗಿರಿಜಳ ಸಹಾಯ ಹಸ್ತದಿಂದ ಮೋಹನ ಹೃದಯ ತಜ್ಞನಾಗಿ ಬಹಳ ಬೇಗ ಹೆಸರುಮಾಡುತ್ತಾನೆ. ತನ್ನದೇ ಆಸ್ಪತ್ರೆಯನ್ನೂ ತೆರೆಯುತ್ತಾನೆ. 
    ದಿನಕಳೆದಂತೆ ಗಿರಿಜ ಮತ್ತು ವನಜ ಇಬ್ಬರೂ ಬಹಳ ಹತ್ತಿರವಾಗಿ ತಮ್ಮ ಮನದ ಸಂಕಟವನ್ನು ಸಂದರ್ಭೋಚಿತವಾಗಿ ಹಂಚಿಕೊಳ್ಳುತ್ತಾರೆ. ಗಿರಿಜ ಸಹ ತನಗಿಂತ ಇಪ್ಪತ್ತು ವರ್ಷಗಳಹಿಂದೆ ತನ್ನಂತೆಯೇ ಮನೆಯನ್ನು ಬಿಟ್ಟು ಬಂದವಳು ಎಂಬ ಸತ್ಯ ವನಜಳಿಗೆ ತಿಳಿಯುತ್ತದೆ.
    ಊರು ಬಿಟ್ಟು ಬಂದಾಗ ಮೋಹನ ಇನ್ನೂ ಚಿಕ್ಕ ಹುಡುಗ. ಬಹಳ ಮಸುಕು ಮಸುಕಾಗಿ ತಂದೆಯ ನೆನಪು.  ತನ್ನ ಊರು ತಂದೆ ವಿಚಾರವನ್ನು ತಿಳಿದುಕೊಳ್ಳವ ಕುತೂಹಲ, ತಪಕವಿದ್ದರೂ ತಾಯಿಗೆ ಇದು ಬೇಸರದ ಸಂಗತಿ ಎಂದು ಸುಮ್ಮನಾಗುತ್ತಿದ್ದನು. 
ಒಂದು ದಿನ ಎಷ್ಟು ಹೊತ್ತಾದರೂ ಮೋಹನ ಆಸ್ಪತ್ರೆಯಿಂದ ಮನೆಗೆ ಬರಲಿಲ್ಲ. ಅಂದು ಗಿರಿಜ ಸಹ ಯಾವುದೋ ಕೆಲಸದ ಮೇಲೆ ಹೊರಗೆ ಹೋಗಿದ್ದಳು. ಎಷ್ಟು ಬಾರಿ ಫೋನ್ ಮಾಡಿದರೂ ಫೋನ್ ತೆಗೆಯಲಿಲ್ಲ. ಒಬ್ಬಳೇ ಕುಳಿತು ಬೇಸರಗೊಂಡ ವನಜ ಆಸ್ಪತ್ರೆಗೆ ಹೋದಳು. 
   ಮಗ ಆಗತಾನೆ ಐ ಸಿ ಯುವಿನಿಂದ ಬಂದು ತನ್ನ ಛೇಂಬರ್ ನಲ್ಲಿ ಕುಳಿತಿದ್ದನು. ಬಹಳ ಸುಸ್ತಾಗಿದ್ದನು. ಅಮ್ಮನ ಮುಖ ನೋಡಿದೊಡನೆಯೇ ಓ ನನಗೆ ಫೋನ್ ಮಾಡಲೂ ಆಗಲಿಲ್ಲ. ಒಂದು ಎಮರ್ಜೆನ್ಸಿ ಕೇಸ್ ಎಂದು ಅಮ್ಮನನ್ನೂ ಕರೆದುಕೊಂಡು ಮನೆಗೆ ತೆರಳಿದನು. 
   ಗಿರಿಜ ಬಂದೊಡನೆಯೇ ಎಲ್ಲರೂ ಊಟಕ್ಕೆ ಕುಳಿತರು. ಎಂದಿನಂತೆ ಮಾತಾಡುತ್ತಾ ಅಂದಿನ ಆಸ್ಪತ್ರೆಯಲ್ಲಿ ನಡೆದ ವಿಚಾರವನ್ನೆಲ್ಲಾ ಹೇಳಿದನು. ಯಾರೋ ಮಾಲೂರಿನ ಮುದುಕ ಕುಡಿದು ಕುಡಿದು ತನ್ನ ಆರೋಗ್ಯವನ್ನೆಲ್ಲಾ ಹಾಳುಮಾಡಿಕೊಂಡಿದ್ದಾನೆ. ಇನ್ನೇನು ಸಾಯುವಸ್ಥಿತಿಗೆ ಬಂದಿದ್ದಾನೆ ಎನ್ನುವಾಗ ಯಾರೋ ಅವರ ಊರಿನವರು  ಕರೆದುಕೊಂಡುಬಂದು ಆಸ್ಪತ್ರೆಗೆ ಸೇರಿಸಿದರು. ಆ ಕೇಸ್ ಇವತ್ತು ನನಗೆ ಚಾಲೆಂಜ್ ಆಯಿತು. ಎಂದು ಹೇಳಿ ಕೈ ತೊಳೆಯಲು ಎದ್ದು ಹೋದನು‌. 
   ಮಾಲೂರು ಕುಡುಕ ಮುದುಕ ಎಂದೊಡನೆಯೇ ಗಿರಿಜ ವನಜ ಇಬ್ಬರಿಗೂ ಕುತೂಹಲವೂ ತಡೆಯದಾಯಿತು. ಮನದಲ್ಲಿ ತಳಮಳ ಆರಂಭವಾಯಿತು. ಇಬ್ಬರಿಗೂ ಇಡೀ ರಾತ್ರೆ ನಿದ್ದೆ ಇಲ್ಲ. ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಇಬ್ಬರೂ ಒಬ್ಬರಿಗೊಬ್ಬರು ಹೇಳದೆ ಆಸ್ಪತ್ರೆಗೆ ಹೋದರು. ಮೋಹನ ಇನ್ನೂ ಮನೆಯಲ್ಲೇ ಮಲಗಿದ್ದನು. 
    ಮೊದಲು ಆಸ್ಪತ್ರೆಗೆ ತೆರಳಿದ ಗಿರಿಜ ನರ್ಸನನ್ನು ಕೇಳಿ ಮಾಲೂರು ರೋಗಿಯ ಹಾಸಿಗೆಯ ಬಳಿಗೆ ತೆರಳುತ್ತಾಳೆ. ರೋಗಿಯನ್ನು ಕಂಡೊಡನೆ ಓ ದೇವರೇ ಎಂದು ಉದ್ಗಾರವೆಳೆದಳು. ಕಣ್ಬಿಟ್ಟು ನೋಡಿದ ರೋಗಿ ಕ್ಷೀಣ ಧ್ವನಿಯಲ್ಲಿ ಗಿರಿಜಾ ನೀನು! ಇಲ್ಲಿ ! ನನ್ನನು ಕ್ಷಮಿಸು ಎಂದು ಬಹಳ ಕಷ್ಟದಿಂದ ಕೈ ಹಿಡಿದನು. ಅದೇ ವೇಳೆಗೆ ಅಲ್ಲಿಗೆ ಬಂದ ವನಜ ಈ ದೃಶ್ಯವನ್ನುಕಂಡು ದಂಗಾದಳು. ಇವರು ನಿಮಗೆ ಸಂಬಂಧವೇ ಅಕ್ಕ! …….ಇವರೆ, ಇವರೇ ಮೋಹನನ ತಂದೆ ಎಂದಾಗ ಗಿರಿಜಳಿಗೆ ಎಲ್ಲಾ ಅರ್ಥವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ದುಃಖದ ಕೋಡಿ ಹರಿಸಿದರು. ಇಬ್ಬರೂ ಸಂಸಾರದ ಗುಟ್ಟನ್ನು ಕಾಪಾಡಿಕೊಂಡು ಬದುಕಿನ ಬವಣೆಯನ್ನು ಅನುಭವಿಸಿ ಬದುಕಿನ ಬಂಡಿಯನ್ನು ಎಳೆದದ್ದು ಇಬ್ಬರ ಕಣ್ಮುಂದೆ ಬಂದಿತು. ಮೋಹನನ್ನು ನೋಡಿದೊಡನೆ ತಮ್ಮ ಕಷ್ಟ ಸಾರ್ಥಕವಾಯಿತು ಎಂಬ ಧನ್ಯತಾಭಾವ ಮೂಡಿತು.
   ಹೇಗಾದರೂ ಮಾಡಿ ಮಾಲೂರಿನ ರೋಗಿಯನ್ನು ಉಳಿಸುವಂತೆ ಇಬ್ಬರೂ ಮೋಹನನಲ್ಲಿ ಮೊರೆಹೋದರು

Monday 15 June 2020

ಭಾವ

ಹಾಡಾಗಲಿ ನವ ಭಾವ
ಲುಪ್ತವಾಗದಿರನುಭಾವ
ಜೇನನಂತ ಸವಿಭಾವ
ನುಡಿ ಕುಸುಮ ಭಾವ
ವಿ ಕಲ್ಪನೆಯ ಭಾವ
ವಿಕಸಿತವಾಗಿ ಭಾವ
ತೆರೆ ಕಾಣಲಿ ನವ ಭಾವ
ಹಾಲು ಜೇನಂತೆ ಬೆರೆತ ಭಾವ

ಅನುರಾಗ

ಕುಡಿನೋಟ ಬೀರಿ
ಅನುರಾಗವರಳಿ
ಮನಸುಗಳೊಂದಾಗಿ
ಸವಿಗನಸು ನನಸಾಗಿ
ಹಾಲು ಜೇನಿನಂದದಿ
ಹೃನ್ಮನಗಳೊಂದಾಗಿ
ನವಬಾಳಿಗೆ ನಾಂದಿಯಾಗಲಿ
ದಾಂಪತ್ಯ ಹಾಲುಜೇನಾಗಲಿ

Sunday 14 June 2020

ಚಿಣ್ಣರ ಚಿತ್ತಾರ





ಮೂವರು ಮುಗ್ಧ ಬಾಲಕರು
ತನ್ಮಯದಿ ಚಿತ್ರಿಸುತಿಹರು
ಭಾವಿ ನವ್ಯ ಕಲಾವಿಧರು
ಭಿತ್ತಿಯ ಚಿತ್ರವ ಬಿಡಿಸಿಹರು

ಭಿತ್ತಿಲಿ ಬಿತ್ತಿದೆ ಚಿಣ್ಣರ ಚಿತ್ತಾರ
ಬಾಲ ಭಾಷೆಯ ವರ್ಣದ ಸಾರ
ಮನೆಯೊಡೆಯಗೆ ಇದು ಭಾರ
ಏನೇ ಆದರು ಬಿಡನಿದ ಪೋರ

ಬಣ್ಣ ಬಣ್ಣದ ಬಳಪವ ಪಿಡಿದು
ಗೀಚುತ ಗೀಚುತ ಗೆರೆ ಎಳೆದು
ಮರ ಗಿಡ ಹೂ ಬಳ್ಳಿಯ ಬರೆದು
ಅದ ನೋಡಳು ಸೂರ್ಯನ ಕರೆದು

ವರ್ಣಿಸಲಾಗದ ವರ್ಣಚಿತ್ರವಿದು
ಕೆಂಪು ವರ್ಣದ ಪರದೆಯ ಹಿಡಿದು
ಚಿಟ್ಟೆಯ ಹಾರಿಸಿ ಗೆಳೆಯರ ಕರೆದು
ಸುತ್ತಲು ಹುಲ್ಲಿನ ಹಾಸನು ಬರೆದು

ಚಿತ್ರಿಸಹೊರಟಿಹ ಕುಂಚ ಬ್ರಹ್ಮರು  
ಕಲ್ಪನಾ ಲೋಕದಿ ವಿಹರಿಸುತಿಹರು
ಭಿತ್ತಿಲಿ ಭಾವ ಅನಾವರಣ ಮಾಡಿಹರು 
ಭವಿಷ್ಯದ ಹೆಮ್ಮೆಯ ಕವಿವರ್ಮರಿವರು 

Friday 12 June 2020

ಸೌಭಾಗ್ಯದ ಕಂಕಣ

ಬಳೆಗಾರ ಚೆನ್ನಯ್ಯ ಇಂದಿಲ್ಲ
ಬಳೆತೊಡುವುದಂತು ನಿಂತಿಲ್ಲ
ಭಾಗ್ಯದ ಸಂಕೇತವಾಗಿಹುದಲ್ಲ
ಸೌಂದರ್ಯಕಿದಕಿಂತ ಮಿಗಿಲಿಲ್ಲ

ಅರಿಶಿನ ಕುಂಕುಮವನಿಟ್ಟು
ಹಸಿರು ಕೆಂಪು ಬಳೆಗಳ ತೊಟ್ಟು
ಮಲ್ಲಿಗೆಯ ದಂಡೆ ಮುಡಿಗಿಟ್ಟು
ತವರ ಬಣ್ಣದುಡುಗೆಯ ಉಟ್ಟು

ನಮಗಿದು ಸಂಸ್ಕೃತಿಯ ಪಾಠ
ಹಸಿರು ಕೆಂಪು ಬಳೆಗಳ ನೋಟ
ಹೆಂಗೆಳೆಯರ ಕೈಗಳಿಗೆ ಮಾಟ
ಯುವಕರ ಮನಸೆಳೆವ ಆಟ

ಕಾಮನಬಿಲ್ಲಿನ ನೋಟ
ಕೈತುಂಬ ತೊಟ್ಟ ಬಳೆಯಾಟ
ಮನೆಯಲ್ಲಿ ಹಬ್ಬದ ಊಟ
ಜಾತ್ರೆಯ ಬಳೆಗಳ ಮಾಟ

ಘಲ್ ಘಲ್ ಬಳೆಯ ನಾದ
ಕರ್ಣಗಳಿಗಿದು ಇಂಪು ನಿನಾದ
ಕಂದಗಮ್ಮಗೆ ಜೋಗುದ ಪದ
ತಾರುಣ್ಯದಲಿ ಪುಳಕದುನ್ಮಾದ

ಮಕ್ಕಳ ಕಂಕಣ ಸೌಭಾಗ್ಯ
ಮನೆ ಮಂದಿಗೆ ಹರ್ಷದ ಭಾಗ್ಯ
ಬಳೆತೊಡಿಸುವ ತೊಡುವ ಭಾಗ್ಯ
ಚಿರಕಾಲವಿರಲೀ ಸಂಸ್ಕೃತಿ ಸೌಭಾಗ್ಯ
*******

ನಾ ಕಸ್ತೂರಿಯವರ ನೆನಪು

ಹಾಸ್ಯ ಎಂದೊಡನೆ ನೆನಪಿಗೆ ಬರುವುದು ಬೀಚಿ, ನಾ ಕಸ್ತೂರಿ, ರಾ.ಶಿ ಕೊರವಂಚಿ ಅಪರಂಜಿ ಇತ್ತೀಚಿನ ನಗೆಮುಗುಳು ಮುಂತಾದವು ನಗೆಗಡಲಿನಲ್ಲಿ ತೇಲಿಸುತ್ತವೆ.
ತಮ್ಮನ್ನೇ ಗೇಲಿ ಮಾಡಿಕೊಂಡು ಪರಿಶುದ್ಧ ಹಾಸ್ಯವನ್ನು ಮಾಡುವ ಎಷ್ಟೋ ಪ್ರಕರಣಗಳನ್ನು ಕೇಳಿದ್ದೇವೆ. ನೋಡಿದ್ದೇವೆ. ಓದಿದ್ದೇವೆ. ತಕ್ಷಣಕ್ಕೆ ನೆನಪಾಗುವುದು ನಾ ಕಸ್ತೂರಿಯವರು "ನನಗೆ ತುಂಬಾ ಸಂಕಟವನ್ಬುಂಟುಮಾಡಿದ ಪ್ರಸಂಗ"ವೆಂದು ತಮ್ಮ ಬಗೆಗೆ ಹೇಳಿ ಕೊಂಡಿರುವ ಪ್ರಕರಣಗಳು. 
ಒಮ್ಮೆ ಕಸ್ತೂರಿಯವರು ಅನಾರೋಗ್ಯ ನಿಮೆತ್ತ  ವೈದ್ಯರ ಬಳಿಗೆ ಹೋಗಬೇಕಾದ ಪ್ರಸಂಗ ಬಂದಿತು. ಮಲ, ಮೂತ್ರ. ರಕ್ತವನ್ನು ಪರೀಕ್ಷೆ ಮಾಡಿಸಲು ವೈದ್ಯರು ಸಲಹೆ ಮಾಡಿದರು. 
ಬೆಳಗ್ಗೆ ಎದ್ದೊಡನೆ ಪರೀಕ್ಷೆಯ ಸಲುವಾಗಿ ಡಬ್ಬಿಯಲ್ಲಿ ಮಲವನ್ನು ಸಂಗ್ರಹಿಸಿ ಅದರ ಮೇಲೆ 'ಕಸ್ತೂರಿ' ತಮ್ಮ ಹೆಸರನ್ನು ಬರೆಯ ಬೇಕಾಗಿ ಬಂದ ಸನ್ನಿವೇಶ. 
ಮತ್ತೊಂದು ಪ್ರಕರಣ ಒಂದು ದಿನ ಕಸ್ತೂರಿಯವರು ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ಇಂಗ್ಲಿಷ್ ನೋಟ್ಸ್ ಅನ್ನು ತರಗತಿಯಲ್ಲಿ ವಿದ್ಯಾರ್ಥಿಗಳು ಲಪಟಾಯಿಸಿದ್ದು. ನೋಟ್ಸನ್ನು ವಿದ್ಯಾರ್ಥಿಗಳು ಕದ್ದಿರುವುದನ್ನು ತಿಳಿದ ಸಹೋದ್ಯೋಗಿಗಳು ಕಸ್ತೂರಿಯವರಿಗೆ ಸಾಂತ್ವಾನದ ನುಡಿಗಳನ್ನು ಹೇಳಲು ಮುಂದಾದರು. ಕಸ್ತೂರಿಯವರು ಒಂದು ಮುಗುಳ್ನಗೆ ಬೀರಿ "ವಿದ್ಯಾರ್ಥಿಗಳು ಹಿಂದೆಯೇ ನನಗೆ ಬುದ್ದಿಕಲಿಸಿದ್ದಾರೆ. ಚಿಂತಿಯಿಲ್ಲ ನಾಳೆ ಬೆಳಗಾಗುವುದರೊಳಗೆ ಅದು ನನ್ನ ಮೇಜಿನ ಮೇಲಿರುತ್ತದೆ" ಎಂದರು. ಅವರ ಮಾತು ಹುಸಿಯಾಗಲಿಲ್ಲ. ಎಲ್ಲರಿಗೂ ಆಶ್ಚರ್ಯ ಕುತೂಹಲದಿಂದ ತೆಗೆದು ನೋಡಿದರೆ ಕಸ್ತೂರಿಯವರು ಇಂಗ್ಲಿಷ್ ನೋಟ್ಸನ್ನು ಮಲಯಾಳಿಯಲ್ಲಿ ಬರೆದಿಟ್ಟಿದ್ದರು. ಇಡೀ ಕೋಠಡಿಯೇ ನಗೆಗಡಲಿನಲ್ಲಿ ತೇಲಿಹೋಯಿತು.

Wednesday 3 June 2020

ಮೊದಲ ಮಳೆ

ಇಂದದೇಕೋ ಮನ ಹಗುರಾಗಿದೆ
ಮನದ ಭಾವ ತರಂಗ ಮುಗಿಲ ಕರೆದಿದೆ
ಬಾನ ವರ್ಷ ಧಾರೆ ಮನವ ಕುಣಿಸಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ

ನಭೋ ಮಂಡಲದಿ ಮೋಡ ಕವಿದಿದೆ
ಮುಗಿಲಕಂಡು ಇಳೆ ಪುಳಕಗೊಂಡಿದೆ
ಮೇಘ ಸಂದೇಶ ಧರೆಯ ತಲುಪಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ

ವಾರಿದ ಹರುಷದಿ ಹೂ ಮಳೆಗರೆದಿದೆ
ಬನದೇವಿ ವಸುಂದರೆಯ ಸಿಂಗರಿಸಿದೆ
ಶುಕಪಿಕಭೃಂಗವೃಂದ ಸೋಬಾನೆಹಾಡಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ

ಹಸಿರುಟ್ಟು ಭುವಿ ಸಿಂಗಾರವಾಗಿದೆ
ಕಮಾನು ಕಟ್ಟಿ ಬಾನು ಕರೆದಿದೆ
ರಂಗಿನ ನೋಟ ಮನವ ತಣಿಸಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ

ಹಸಿರು ಬನದಿ ಹೂ ಅರಳಿ ನಗುತಿದೆ
ಆಗಸದಿ ಅಂಬುಧರನ ನೃತ್ಯ ಜರುಗಿದೆ 
ಅಲರು ಅಭ್ರರ ಬೆಡಗು ಮನ ಸೆಳೆದಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ

********
ಅಲರು=ಹೂವು
ಅಭ್ರ=ಮೋಡ, ಮುಗಿಲು.ಆಕಾಶ.

Monday 1 June 2020

ಮಾಯಾವಿ

ಝಗಮಗಿಸುತ್ತಿದೆ
ಘಮಘಮಿಸುತ್ತಿದೆ
ಎತ್ತೆತ್ತಲು ಬೆಡಗ ಸೂಸುತ್ತಿದೆ
ಸಗ್ಗದ ಸಿರಿಯತೋರುತ್ತಿದೆ
ಮಾಯಾಲೋಕವ ಸೃಷ್ಟಿಸಿದೆ

ನೂರು ನೂರು ಕನಸ ಬಿತ್ತುತ್ತಿದೆ
ಹಳ್ಳಿ ಹೈದರ ಮನಸೆಳೆಯುತ್ತಿದೆ
ಹಳ್ಳಿ ಸೊಗಡ ಸೊರಗಿಸುತ್ತಿದೆ
ನೇಗಿಲಯೋಗಿಯ ತುಳಿಯುತ್ತಿದೆ
ಮಹಾನಗರವೆಂಬ ಮಾಯಾವಿ

ಕಂಡ ಕೋಟಿ ಕನಸ ದಹಿಸಿ
ಕಾಯಕಕೆ ಬೆಲೆಯಿಲ್ಲವಾಗಿಸಿ
ಸಕಲರ ಬದುಕ ನುಂಗಿ ತೇಗಿ 
ಹಿಗ್ಗಿ ಹಿಗ್ಗಿ ಬೆಡಗ ತೋರುತಿದೆ
ಮತ್ತಿನ ಲೋಕದ ಮಹಾನಗರಿ

ಗಗನ ಚುಂಬಿ ಬಿಲ್ಡಿಂಗ್
ಮತ್ತುಬರಿಸುವ ಬಾರ್
ಉದರಸೆಳೆವ ರೆಸ್ಟೋರೆಂಟ್
ಬೆಡಗು ಬಿನ್ನಾಣದ ಮಾಲ್
ಯಕ್ಷಿಣಿಯ ಮಾಯಾನಗರಿ

ಕಾಲಿ ಹೊಟ್ಟೆ ಶಯನಕೆ ಕಟ್ಟೆ
ಒಡೆದಿದೆ ಕಟ್ಟಿದ ಕನಸಿನ ಕಟ್ಟೆ
ತುಂಬಿದೆ ಧನಿಕರ ಡೊಳ್ಳು ಹೊಟ್ಟೆ
ಮಾಯಾಲೋಕದ ಸೆಳೆತಕೆ ಕೆಟ್ಟೆ

Sunday 17 May 2020

ನನ್ನ ಬುಟ್ಬುಡೋ ತಮ್ಮ









ನಾ ಏನಾ ಮಾಡಿಲ್ಲೋ ತಮ್ಮ
ಮಂದಿ ನನ್ನ ಕರೆ ತಂದಾರು 
ಕೆಮ್ಮದೆ ಖರೆ ನಾ ಏನು ಮಾಡಿಲ್ಲೋ
ನನಗೇನು ಆಗಿಲ್ಲಂದ್ರ ಕೇಳ್ತಿಲ್ಲೋ 

ಒಬ್ಬರನ್ನೊಬ್ಬರು ಮುಟ್ಟಂಗಿಲಂತಾರ
ಮೂರ್ಹೊತ್ತು ಮೋರೆಗರವಿ ಮುಚ್ಕೊತಾರ
ಮನೆಬಿಟ್ಟು ಹೊರಗ ಬರ್ಬಾರ್ದನ್ತಾರ
ಚಿಕ್ಕೋರು ದೊಡ್ಡೋರಂದೆ ಎಲ್ಲ ಬಂದಾರ
ಬೀದಿಗೆ ಬಂದು ಕಾತರದಿ ತಪಾಸಣೆಗ ನಿಂತಾರ 

ಕಣ್ಣಿಗೆ ಕಾಣ್ದೆ ಯಾರನ್ನು ಬಿಡ್ದೆ ಕಾಡ್ತಿದೆ ಅಂತಾರ
ಕೈತೊಕ್ಕೊತ್ತಾಯಿರು ಬಾಯ್ಮುಚ್ಕೊ ಅಂತಾರ
ಏನ್ದೊಡ್ರೋಗ ಬಂತು ಮಂದೆಲ್ಲ ಕಂಗಾಲಾಗಾರ
ತಿನ್ನಕ್ಕೆ ತಿರುಗೋಕೆ ತರೋಕೆ ಹಿಂದೆ ಮುಂದೆ ನೋಡ್ತಾರ
ತಂದಿದ್ದು ಮುಟ್ಟಿದ್ದ ತೊಳ್ದು ತೊಳ್ದು ಮಂದಿ ಸಾಕಾಗವ್ರ

ಮಾಡ್ಬಾರ್ದ್ಮಾಡಿದ್ರೆ ಸುಮ್ಕೆ ಬಿಟ್ಬಿಟ್ತಾನಾ ನನ್ನಪ್ಪ ಖರೆ
ಮನಸಿಗೆ ಬಂದ್ಹಂಗಾಡ್ತಿದೊರೆಲಾ ಮನ್ಯಾಗ ಕುಂತವ್ರೆ
ನನ್ನಪ್ಪ ಆ ಸಿವನಾಟ ಯಾರ್ಬಲ್ರು ನನ್ನಬಿಡೊ ತಮ್ಮ
ಹಿಂದ್ಮಂದಿ ಕಾಯ್ತಾವ್ರೋ ಅವ್ರನ್ಪರೀಕ್ಸೆ ಮಾಡ್ಕೊ ತಮ್ಮ
ಆ ದ್ಯಾವ್ರೆ ಕಾಪಾಡ್ಲಿ ನನ್ಗೇನಾಗಿಲ್ಲ ಬುಟ್ಬುಡೋ ತಮ್ಮ

Tuesday 12 May 2020

ಮತ್ತೆ ಬಂತು ಯುಗಾದಿ

ಬೇವು ಬೆಲ್ಲ ಬೆರೆಸಿ
ಕಹಿ ನೆನಪ ಮರೆಸಿ
ಸವಿ ನೆನಪ ಉಳಿಸೆ
ಮತ್ತೆ ಬಂತು ಯುಗಾದಿ

ಮಾಂದಳಿರ ಬೆಳೆಸಿ
ಕೋಗಿಲೆಯ ಉಲಿಸಿ
ಚೈತ್ರೋಲ್ಲಾಸವ ತುಳುಕಿಸಿ
ಮತ್ತೆ ಬಂತು ಯುಗಾದಿ

ನವ ನವೋಲ್ಲಾಸದಲಿ
ನವ ನವೀನ ಭಾವದಲಿ
ನವ ಚೈತನ್ಯವ ತುಂಬುತಲಿ
ನವ ಜೀವನವನರಸುತಲಿ
ನವ ಸಂಪದದ ನಿರೀಕ್ಷೆಯಲಿ
ಮತ್ತೆ ಬಂತು ಯುಗಾದಿ

'ತ' ಗುಣಿತ ತಾತನ ಮನೆ

ಡಮಾಡದೆ ಎಲ್ಲ ಬನ್ನಿ
ತಾತನ ಮನೆಗೆ ಹೋಗೋಣ
ತಿಳಿಹೇಳುವ ಅಜ್ಜನ ನುಡಿ ಕೇಳೋಣ
ತೀರ್ಥವ ಕುಡಿದು ದೇವರಿಗೊಂದಿಸಿ
ತುರುಗಳ ಕಾಯಲು ತೋಟಕೆ ಹೋಗೋಣ
ತೂರುತ ಕೇರುತ ಕಣದಲಿ ಆಡೋಣ
ತೃಣವನು ಕೊಯ್ದು ಕರುವಿಗೆ ನೀಡೋಣ
ತೆನೆಗಳ ಸುಟ್ಟು ಬೆಲ್ಲವಬೆರೆಸಿ ಸವಿಯೋಣ
ತೇಲುತ ಮುಳುಗುತ ಈಜುತ ಹೊಳೆಯಲಿ ಆಡೋಣ
ತೈಲವ ಹಾಕಿ ದೀಪವ ಹಚ್ಚಿ ನೀರಲಿ ತೇಲಿ ಬಿಡೋಣ
ತೊಟ್ಟಿಲುಕಟ್ಟಿ ತೂಗುತ ಜೀಕುತ ನಲಿಯೋಣ
ತೋಟದಿ ಸೇರಿ ಎಲ್ಲರು ಹಾಡುತ ಕುಣಿಯೋಣ
ತೌರಿನ ಬಣ್ಣವ ತೊಟ್ಟುಯೋಣ
ತಂಬಿಟ್ಟಿನಾರತಿ ದೇವಿಗೆ ಬೆಳಗಿ ಅಂ
ತಃಸತ್ವವ ಬೆಳೆಸಿ ಬಲಗೊಳಿಸೋಣ.

'ತ' ಗುಣಿತ ತಾಳತಪ್ಪಿದ ಬದುಕು

ತ್ತರಿಸಿ ತಡವರಿಸುತಿದೆ ಜಗವಿಂದು
ತಾಳಲಾಗದ ಕಾಣಲಾಗದ ಸೋಂಕಿನಲಿ
ತಿಳಿಯಲಾಗದೆ ಕಂಗಾಲಾಗಿ ನಡುಗುತಿದೆ
ತೀರದ ಸಂಕಷ್ಟದಲಿ ಸಿಲುಕಿ ನರಳುತಿದೆ 
ತುಕ್ಕುಹಿಡಿದಿದೆ ಮನಕೆ ಮನೆಯೊಳಗೆ 
ತೂಗತ್ತಿಯ ಬದುಕು ಹೋರಾಟಗಾರರಿಗೆ
ತೃಪ್ತಿ ಮರೀಚಿಕೆ ಆಡಳಿತ ವರ್ಗಕೆ
ತೆರೆಯೆಳೆಯ ಬೇಕಿದೆ ಸ್ವೇಚ್ಛಾಚಾರಕೆ
ತೇಗುತಿರುವ ಮಹಾಮಾರಿಯ ಕಾಟಕೆ
ತೈಥಕ ಕುಣಿದು ಕುಣಿಸುತಿದೆ ವೈರಾಣು
ತೊಲಗಿಸಲಿದನು ಜೀವನ ಹೈರಾಣು 
ತೋರಬೇಕು ಬಂದಹಾದಿಯನದಕೆ
ತೌಲನಿಕ ಅಧ್ಯಯನ ಬಲ್ಲವರು ನಡೆಸಿ
ತಂಗುದಾಣವಾಗಲಿ ದೇಶ ಸಂಯಮ ಅಂ-
-ತಃಕರಣ ಸಹನೆ ಸಹಕಾರವೆಲ್ಲವ ಮೆರೆಸಿ

ತ ಗುಣಿತದಲ್ಲಿ 'ಮಹಾಮಹಿಮ,

ನುವು ನಿನ್ನದು ಮನವು ನಿನ್ನದು
ತಾರಕ ಶಕ್ತಿಯು ನಿನ್ನದು
ತಿಳಿಯಲಾಗದ ಸೃಷ್ಟಿ ನಿನ್ನದು
ತೀರದ ಯುಕ್ತಿ ನಿನ್ನದು
ತುಡಿವ ಮಿಡಿವ ಮನವು ನಿನ್ನದು
ತೂಗಲಾಗದ ಸಾಮರ್ಥ್ಯ ನಿನ್ನದು
ತೃಣನು ನಾನು ನಿನ್ನೆದುರಲಿ
ತೆರೆದ ಮನದಲಿ ಬೇಡುತಿರುವೆನು
ತೇನವಿನಾ ತೃಣಮಪಿ ನ ಚಲತಿ
ತೈಲ ಘೃತದ ದೀಪವ ಬೆಳಗಿ ನಾನು
ತೊದಲು ನುಡಿಯಲು ನಿನ್ನ ಸ್ಮರಿಸಿ
ತೋರುತಿರುವೆನು ನನ್ನ ಬಕುತಿ
ತೌರ ಸುಖಕು ಮಿಗಿಲು ನಿನ್ನ ಚರಣ
ತಂಗುದಾಣವಾಗಲೆನಗೆ ಅನವರತ ಅಂ
-ತಃಶಕ್ತಿ ಕರುಣಿಸೆನಗೆ ದೇವ ದೇವ ಮಹಿ

Monday 11 May 2020

ಹಸಿವಾವತಾರ


ಓ ಹಸಿವೇ ಏನಿದು ನಿನ್ನ ಮಾಯೆ
ಕಣ್ಗಳಿಗೆ ಕೈಗಳಿಗೆಟುಕದಾ ಛಾಯೆ
ದಶಾವತಾರವನು ನಾಚಿಸುತಿರುವೆ
ಎಲ್ಲೆ ಮೀರೆಲ್ಲೆಲ್ಲು ಮೆರೆಯುತಿರುವೆ

ಹುಟ್ಟಿದೊಡನೆ ಶುರು ನಿನ್ನ ಲೀಲೆ
ಚಟ್ಟದವರೆಗೆ ಬಿಡದು ನಿನ್ನ ಮಾಯೆ
ಹಗಲಿರುಳೆನದೆ ಬೀಸುತಿರುವೆ ಬಲೆ
ಹೊನ್ನು ಹೆಣ್ಣು ಮಣ್ಣು ಅನ್ನದ ಸೆಲೆ

ಸೀತೆಗಾಗಿ ಲಂಕೆಯ ದಹನ
ದ್ರೌಪತಿಗಾಗಿ ಕೀಚಕನ ದಮನ
ನೆಲಕಾಗಿ ಕುರುವಂಶದ ಹನನ
ದಾಳಿಕೋರ ಅಲೆಕ್ಸಾಂಡರ್ ಪತನ

ಹಿಡಿ ಅನ್ನಕೆ ಒಡಲ ಆವರಸಿರುವೆ
ಕಾಮಕೆ ಕಾಮಿನಿಯ ಹಿಂದಲೆಸುತಿರುವೆ
ಅಧಿಕಾರದಮಲನೇರಿಸಿ ಮೆರೆಸುತಿರುವೆ
ಜ್ಞಾನದಾಹಿಯನು ಅಂಡಲೆಸುತಿರುವೆ
ಪದವಿ ಪ್ರತಿಷ್ಠೆ ಪ್ರಶಸ್ತಿಗೆ ಮರುಳಾಗಿಸುತಿರುವೆ

ಸರ್ವಾಂತರ್ಯಾಮಿ ಸರ್ವಸೂತ್ರಧಾರಿ
ಬಯಸಿದರು ಬಿಡುಗಡೆಗಿದೆಯೆ ದಾರಿ?


  1. *********