Wednesday 1 April 2015

ಮೋಹನ ಮುರಲಿ ಕವನದ ಸ್ವಾರಸ್ಯ

ಓಂ
 ಮೋಹನ ಮುರಲಿ       
                                                                                                                -ಗೋಪಾಲ ಕೃಷ್ಣ ಅಡಿಗ
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ;
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದುಸೋಂಕಿನ ಪಂಜರ;
ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
‘ಎದೆಯನ್ನು ತೆರೆದು ಅವರ ವಿಷಯದಲ್ಲಿ ನನಗೆ ಗೌರವವುಂಟಾಗುವ ಹಾಗೆ ಮಾಡಿದ ಕವಿತೆ ಇದು’ ಎಂದು ಕನ್ನಡ ಸಾರಸ್ವತ ಲೋಕದಲ್ಲಿ ಹೆಸರಾದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ತುಂಬು ಮನಸ್ಸಿನಿಂದ ಮೆಚ್ಚಿದ ಕವನವೇ ‘ಮೋಹನ ಮುರಲಿ’. ಕನ್ನಡ ಸಾಹಿತ್ಯಕ್ಕೆ ಹೊಸ ತಿರುವನ್ನು ಕೊಟ್ಟ ಯುಗ ಪ್ರವರ್ತಕ ಕವಿ ಡಾ| ಮೊಗೇರಿ ಗೋಪಾಲಕೃಷ್ಣ ಅಡಿಗರ ಆಧ್ಯಾತ್ಮಿಕ ಕವನಗಳಲ್ಲಿ ಅತ್ಯಂತಪ್ರಸಿದ್ಧವಾದ ಕವಿತೆಯಿದು.
ನವೋದಯ ಕಾಲದ ಕಾವ್ಯ ಕೃಷಿಯ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ ‘ಕಟ್ಟುವೆವು ನಾವು’ ಕವನ ಸಂಗ್ರಹದ 36 ಬಿಡಿ ಬಿಡಿ ಕವನಗಳಲ್ಲಿ ಒಂದು ‘ಮೋಹನ ಮುರಲಿ’. 16 ಸಾಲುಗಳಿಂದ ಕೂಡಿದ ಈ ಕವನ ಕನ್ನಡದ ಅತ್ಯುತ್ತಮ ಭಾವಗೀತೆಗಳಲ್ಲಿ ಒಂದಾಗಿದೆ. ಕನ್ನಡದ ಶ್ರೇಷ್ಠ ಮತ್ತು ಜನಪ್ರಿಯ ಕವಿತೆ ಎಂದರೂ ತಪ್ಪಾಗದು. ಕವಿತೆಯ ಭಾಷೆ ಸರಳವಾಗಿದೆ. ಅಂತ್ಯಪ್ರಾಸದ ಜೋಡಿಸಾಲುಗಳನ್ನು ಒಳಗೊಂಡಿದೆ. ಪದಗಳ ಜೋಡಣೆ, ಪದಗಳು ವ್ಯಕ್ತ ಪಡಿಸುವ ಭಾವಗಳಿಂದ ಕವಿತೆಯೊಳಗೆ ಅದ್ಭುತವಾದ ಸಂಗೀತ ಸೃಷ್ಟಿಯಾಗಿದೆ. ಗೇಯತೆ, ಲಯ, ಮಾಧುರ್ಯದಿಂದ ಸಂಗೀತಾಸಕ್ತರ ನಾಲಿಗೆಯ ಮೇಲೆ ಸದಾ ನರ್ತಿಸುತ್ತಿದೆ. ರಸಿಕರ ಮನವನ್ನು ಸೂರೆಗೊಂಡಿದೆ. ಶ್ರೇಷ್ಠ ವಿಮರ್ಶಕರ ಗಮನವನ್ನು ಸೆಳೆದಿದೆ. 
ಇಹದ ಸುಖಗಳನ್ನು ಪ್ರಸ್ತಾಪಿಸುತ್ತಲೇ ತನ್ಮಯತೆ, ಜೀವನದಿಂದ ಮುಕ್ತಿ, ಬಿಡುಗಡೆಯ ವಿಶಿಷ್ಟವಾದ ನೆಲೆಯಲ್ಲಿ ಅಧ್ಯಾತ್ಮಿಕ ಪರಿಧಿಯಲ್ಲೇ ರಚಿತವಾಗಿರುವ ಈ ಕವನವು ಅಧ್ಯಾತ್ಮಿಕ ಕರೆಯ ಸಂಕೇತಿಕವಾಗಿದೆ.
ಮೋಹನ ಮುರಳಿ ಮತ್ತು ಬೃಂದಾವನಗಳ ಭಾವಸಾಹಚರ್ಯವು ಕೃಷ್ಣನ ಪ್ರೀತಿ ಮತ್ತು ಭಕ್ತಿಯನ್ನು ಸಾರುತ್ತದೆ. ಲೌಕಿಕದಲ್ಲಿ ಮುಳುಗಿದವರನ್ನು ಅಲೌಕಿಕ ಕರೆ ಎಚ್ಚರಿಸುತ್ತಿರುವಂತಿದೆ. ಯಾವ ಮೋಹನ ಮುರಳಿ ಕರೆಯಿತು? ಯಾವ ಬೃಂದಾವನವು ಸೆಳೆಯಿತು? ಯಾವ ಬೃಂದಾವನವು ಚಾಚಿತು? ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ? ಎಂಬ ಪ್ರಶ್ನೆ ಪರತತ್ವದ ನಿಗೂಢತೆಯನ್ನು ತಿಳಿದುಕೊಳ್ಳುವ ಕಾತರತೆಯನ್ನು ಹುಡುಕಾಟವನ್ನು, ಹೇಳುತ್ತಿರುವಂತಿದೆ. 
ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು?
ಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು?
ಮಧ್ಯಮ ಪುರುಷನ ಸ್ಥಾನದಲ್ಲಿ ನಿಂತು ಸ್ವಗತದಲ್ಲಿ ಮಾತನಾಡುತ್ತಿರುವ ಕವಿತಾ ನಾಯಕನನ್ನು ಕೃಷ್ಣನ ಕೊಳಲಿನ ಮೋಹಕವಾದ ನಾದ ಸಮ್ಮೋಹನಗೊಳಿಸಿದೆ. ಕೃಷ್ಣನ ನೆಲೆಯಾದ ಬೃಂದಾವನವು ಆತನ ಕರ್ಮಭೂಮಿಯೂ ಆಗಿದೆ. ಮೋಹನ, ಮುರಲಿ, ಬೃಂದಾವನ- ಈ ಮೂರೂ ಪ್ರತಿಮೆಗಳು ಭಾರತೀಯ ತತ್ವಜ್ಞಾನದ ಅರ್ಥಾತ್ ಕೃಷ್ಣನ ಉಪದೇಶದಂತಿವೆ. ಆತ ಆಲಿಸುತ್ತಿರುವ ಕೊರಳಿನ ಇಂಚರ ಮೋಹಕವಾಗಿದ್ದು ಇಹದಿಂದ ಪರದೆಡೆಗೆ ಸೆಳೆಯುತ್ತಿದೆ. 
‘ಹೂವು ಹಾಸಿಗೆ, ಚಂದ್ರ, ಚಂದನ, ಬಾಹುಬಂಧನ ಚುಂಬನ’
ಬಯಕೆತೋಟದ ಬೇಲಿಯೊಳಗೆ ಕರಣಗಣದೀ ರಿಂಗಣ;
ಲಯ, ಪ್ರಾಸ, ಅರ್ಥಗಳಿಂದ ಕೂಡಿರುವ ಪದಪುಂಜಗಳು ಒಂದಕ್ಕೊಂದು ಪೂರಕವಾಗಿ ಹೆಣೆದುಕೊಂಡಂತಿವೆ. ಸುಗಂಧಭರಿತ ಕೋಮಲವಾದ ಮೃದು ಸ್ಪರ್ಶದ ಹೂವಿನ ಹಾಸಿಗೆ, ಹುಣ್ಣಿಮೆ ಚಂದ್ರಿಕೆ, ಚಂದನಯುಕ್ತವಾದ ಪರಿಸರ, ಪ್ರಕೃತಿ, ಪುರುಷನ ಮಿಲನಮಹೋತ್ಸದ ಮಹೂರ್ತಕ್ಕೆ ಅಣಿಯಾಗಿದೆ. ಪ್ರಣಯದಾಟದ ಬಾಹುಬಂಧನ ಚುಂಬನದ ಕ್ರಿಯೆ ಮುಂದುವರಿದು ಲೌಕಿಕ ಸುಖದ ಒಲವು, ನಲಿವು, ಸರಸ, ಹಾಸ ಭಾವವನ್ನು ಎತ್ತಿಹಿಡಿಯುತ್ತದೆ. ರತಿ ಕ್ರೀಡೆಯ ಸುಂದರ ಚಿತ್ರಣ ಮನಸ್ಸಿನಲ್ಲಿ ಸೃಷ್ಟಿಯಾಗುತ್ತದೆ. ಪ್ರಣಯದಲ್ಲಿ ಉನ್ಮತ್ತವಾದಂತೆ ಮನಸ್ಸು ಮತ್ತು ದೇಹ ಬೇಲಿಯಿಂದ ಆವೃತ್ತವಾದ ತೋಟದಲ್ಲಿ ಬಂಧಿತವಾಗುತ್ತವೆ. ಜ್ಞಾನೇಂದ್ರಿಯಗಳಲ್ಲಿ ಲೌಕಿಕಸುಖಾಪೇಕ್ಷೆ ಪ್ರತಿಧ್ವನಿಸಿ ಅದರಿಂದ ಹೊರಬರಲಾಗದೆ, ಪುನರಾವರ್ತನೆಗೆ ಹಾತೊರೆದು, ಅದರಲ್ಲೇ ಬಂಧಿಯಾದಂತೆ ಭಾಸವಾಗುತ್ತದೆ. 
ಒಲಿದ ಮಿದುವೆದೆ, ರಕ್ತ ಮಾಂಸದ ಬಿಸಿದುಸೋಂಕಿನ ಪಂಜರ; 
ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?
ಪ್ರೀತಿ ಪ್ರೇಮ, ಪ್ರಣಯವಾಗಿ, ಪ್ರಣಯದ ಪ್ರೇರಣೆ ಹೃದಯವನ್ನು ಮೆದುವಾಗಿಸಿ, ರಕ್ತಕುದಿದು, ಮಾಂಸ ಬಿಸಿಯಾಗಿ, ಮೈಕಾವೇರಿ ಪ್ರಣಯೋನ್ಮಾದ ಪಂಜರದಲ್ಲಿ ಬಂಧಿತರಾಗಿ ಮತ್ತೇನೂ ಬೇಡ ಪ್ರೀತಿ, ಪ್ರಣಯ, ರತಿಕ್ರೀಡೆ ಇಷ್ಟೇ ಸಾಕು ಎಂಬ ಭಾವದಿಂದ ಹೊರಬರಲಾಗದ ಸ್ಥಿತಿಯನ್ನು ತಲುಪುತ್ತದೆ.  
ಲೌಕಿಕದ ಗೋಜಲು, ತೊಡಕುಗಳ ನಡುವೆಯೂ ಬಯಕೆಗಳ ಆಕರ್ಷಣೆ, ಜ್ಞಾನೇಂದ್ರಿಯಗಳ ಪ್ರೇರಣೆ. ಇವುಗಳ ಒಲವು, ಸ್ಪರ್ಶಸುಖವೇ ಬಂಧನವಾಗಿ, ಈ ಬಂಧನದ ಪಂಜರದಿಂದ ದೂರವಾಗುವ ಹಂಬಲ ಮನದಲ್ಲಿ ಮೂಡುತ್ತದೆ. ಬಯಕೆಯ ಬೇಲಿ, ಒಲುಮೆಯ ಪಂಜರದಿಂದ ಹೊರ ಹೋಗಲೊಲ್ಲದ ಯೌವನ ಒಂದು ಹಂತದಲ್ಲಿ ಏಕತಾನತೆಗೆ ಬೇಸರಗೊಂಡಂತೆ ತೋರುತ್ತದೆ. 
ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?
ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?
ಪ್ರಾಪಂಚಿಕ ಸುಖದಲ್ಲಿ ಮುಳುಗಿ ಪಾರಮಾರ್ಥವನ್ನು ಮರೆತು ಗೊಂದಲಕ್ಕೆ ಸಿಲುಕಿ ಬೇಸರದಿಂದ ತೊಳಲಾಡುತ್ತಿರುವ ಪರಿಸ್ಥಿತಿ. ಇಹದ ಬಗೆಗೆ ಗೊಂದಲ, ಬೇಸರ, ಪರದ ಬಗೆಗೆ ತೀವ್ರ ಆಸಕ್ತಿ. ಇಹದ ದೃಷ್ಟಿ ಪರದ ಕಡೆಗೆ ಹೊರಳುತ್ತಿದೆ. ಇಹವನ್ನು ಬಿಡಲಾಗದ, ಪರವನ್ನು ಪಡೆಯಲಾಗದ ಅಸಹಾಯಕ ಸ್ಥಿತಿಯ ಯಾತನೆಯೂ ಸುಮಧುರವಾಗಿದೆ. ಪಡೆಯಲೇ ಬೇಕೆಂಬ ಹಂಬಲ, ಪಡೆಯಲಾಗುವುದೋ ಇಲ್ಲವೋ ಎಂಬ ಗೊಂದಲ, ಅದನ್ನು ಪಡೆಯುವ ಯಾಚನೆಯೂ ದಿವ್ಯವಾಗಿದೆ.
ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರ;
ಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.
ಮರದಲ್ಲಿ ಪ್ರಚ್ಛನ್ನವಾಗಿರುವ ಬೆಂಕಿಯಂತೆ ಮನದೊಳಗೆ ಅಡಗಿದ ಲೌಕಿಕಾಸಕ್ತಿಯ ಉಪೇಕ್ಷೆ, ಅಲೌಕಿಕಾಸಕ್ತಿ ನಿಧಾನವಾಗಿ ಬೆಳೆದು ರಾಸಲೀಲೆಯೇ ಮನಕ್ಕೆ ಬೇಸರವನ್ನುಂಟುಮಾಡುತ್ತದೆ.  ಮರಕ್ಕೆ ಮರ ತೀಡಿ ಕಾಡ್ಗಿಚ್ಚಾಗುವಂತೆ ಬಯಸಿದ್ದೆಲ್ಲಾ ಹತ್ತಿರವಿದ್ದೂ ಮನಸ್ಸು ಬೇಸರಗೊಳ್ಳುತ್ತದೆ.  ಬೇಸರವೇ ಕಾಡ್ಗಿಚ್ಚಾಗಿ ಹೊತ್ತಿ ಉರಿಯುತ್ತದೆ. ಅದೇ ಕಾತರವಾಗುತ್ತದೆ. ಮನದ ಬೇಸರ ಹೊತ್ತಿ ಉರಿಯಲು ಕಾರಣವನ್ನು ಹೇಳಲಾಗದೆ, ತಾಕಿತು ಏನು ಎಂಬುದನ್ನು ಅಕ್ಷರಗಳಲ್ಲಿ ಹಿಡಿದಿಡಲಾಗದೆ, ಊಹಿಸಲಾರದೆ ಏನೋ ತಾಗಲು ಎನ್ನುತ್ತಾ, ಮನದ ಬೇಸರ ಇನ್ಯಾವುದೋ ಕಾತರಕ್ಕೆ ಹೊತ್ತಿ ಉರಿಯುತ್ತದೆ ಎಂದಿದ್ದಾರೆ. ಅತೀತ ಶಕ್ತಿಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ.  
ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ,
ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗು ಹಾಯಿತೆ?
ಮೋಹನ ಮುರಳಿ ಕವಿತಾ ನಾಯಕನನ್ನು ತನ್ನೆಡೆಗೆ ಕರೆದ ತೀರ ದೂರದ ತೀರ.  ಸಪ್ತಸಾಗರದಾಚೆಗಿರುವ ಬಹು ದೂರದ ತೀರವದು. ಗೋಚರವಾಗದಷ್ಟು ಆಳದಲ್ಲಿನ ಸಪ್ತಸಾಗರದ ತೀರವದು. ಆತನಿಗಾಗಿ ಕಾಯುತ್ತಿದೆ. ಆ ಸುಪ್ತಸಾಗರದ ಅಲೆಗಳು ಇನ್ನೂ ಮೊಳೆತಿಲ್ಲ. ಹಾಗಾಗಿ ಅಲೆಗಳ ಭೋರ್ಗರೆತ ಇನ್ನೂ ಮೂಕವಾಗಿದೆ. ಆ ಮೂಕ ಮರ್ಮರ  ಕವಿತಾ ನಾಯಕನಿರುವಲ್ಲಿಗೆ ಬಂದು ತಲುಪಿದೆ. ದೂರ ತೀರಕೆ ಹೋಗುವ ಹಂಬಲವನ್ನುಂಟು ಮಾಡಿವೆ.
ವಿವಶವಾಯಿತು ಪ್ರಾಣ; ಹಾ ಪರವಶವು ನಿನ್ನೀ ಚೇತನ;
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?
ಬೇಕೆಂದೇ ಬಯಸಿದ ಲೌಕಿಕ ಸುಖ ಲೋಲುಪ್ತಿಗಳು ಏಕೆ ಬೇಸರವಾಗುತ್ತಿವೆ? ಮನಸ್ಸು ಏಕೆ ವಿವಶವಾಗುತ್ತದೆ?–ಇದು ಬದುಕಿನ ಅನಿಶ್ಚಿತತೆಯ ಸಂಕೇತ, ಆದರೆ ಇಲ್ಲಿ ಬದುಕಿನ ಧೋರಣೆ ನಿಶ್ಚಿತವಾಗುತ್ತದೆ. ಬೇಲಿ, ಪಂಜರದಂತಿರುವ ಬದುಕಿನೊಂದಿಗೆ  ಚೇತನ/ಪ್ರಾಣ ಕಾಣದ ಶಕ್ತಿಯ ಕೈಗೊಂಬೆಯಾಗಿದೆ, ವಿವಶವಾಗಿದೆ. ‘ವಿವಶ’ವೆಂದರೆ ಅದಮ್ಯವಾದುದು, ದೇಹದ ಸ್ವಾಧೀನ ತಪ್ಪುವುದು, ನಿಯಂತ್ರಣ ಕಳೆದುಕೊಳ್ಳುವು ಎಂಬೆಲ್ಲ ಅರ್ಥವಿದೆ. ವಿಧಿ ಮತ್ತು ಅದೃಷ್ಟದ ಹಿಡಿತದಲ್ಲಿರುವ ಹೃದಯಸ್ಥವಾದ, ದೇಹದ ಎಲ್ಲ ಶಕ್ತಿಯೇ ಆದ ಪ್ರಾಣ/ದಿವ್ಯ ಚೇತನವು ಪರವಶದಲ್ಲಿದೆ. ಇಂದ್ರಿಯ ಗ್ರಾಹ್ಯವಾದುದರ ಬಗೆಗೆ ಭಯ ಗೌರವದಿಂದ ಕೂಡಿದ ಒಲವು, ಬೇಸರ, ಕಾಣದ ಚೈತನ್ಯದ ಬಗೆಗೆ ಕುತೂಹಲ, ಶ್ರದ್ಧೆ, ಅದರ ಮೂಲ ಸಂದೇಶ, ಆ ಚೇತನ ಶಕ್ತಿ ಬಹಿರಂಗವಾದಾಗ ಆಗುವ ವರ್ಣನಾತೀತ ಸಂತೋಷ. ಈ ರೀತಿಯಾಗಿ ಬದುಕು ಎಂದರೆ ಇಷ್ಟೆ ಇರುವುದನ್ನು ಬಿಟ್ಟು ‘ಇಲ್ಲ’ದಿರುವುದರ ಕಡೆಗೆ ತುಡಿಯುವುದೇ ಆಗಿದೆ. ಬದುಕೇ ಒಂದು ದ್ವಂದ್ವಗಳ ಸರಮಾಲೆ ಕೊನೆಯವರೆಗೂ ಅದರ ನಂತರವೂ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ.
ಯಾವ ಮೋಹನ ಮುರಲಿ ಕರೆಯಿತು ಇದ್ದಕಿದ್ದೊಲೆ ನಿನ್ನನು?
ಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು?
ಅಧ್ಯಾತ್ಮಕ, ಅಲೌಕಿಕ ಶಕ್ತಿಯ ಅದೇ ಮೋಹನ, ಅದೇ ಮುರಲಿ, ಅದೇ ಬೃಂದಾವನ ‘ಮಿಂಚಿನ ಕೈ’ಗಳನ್ನು ಚಾಚಿ  ‘ಇದ್ದಕಿದ್ದೊಲೆ’ ಕರೆಯುತ್ತಿದೆ, ಪ್ರೇಮ, ಕಾಮ, ಮೋಹಗಳಿಂದ ಕೂಡಿದ ಲೌಕಿಕ ಸುಖದಿಂದ ದೂರ ಸರಿಯುವಂತೆ ಮಾಡಿದೆ, ಆ ಅಧ್ಯಾತ್ಮಿಕ ಅಲೌಕಿಕ ಕರೆ.
ಯಾತನೆ, ಸಂಶಯ, ಆಶ್ಚರ್ಯದ ಭಾವಗಳು, ‘ಮೋಹನ ಮುರಳಿ’, ‘ಮಿಂಚಿನ ಕೈ’, ‘ಮಣ್ಣಿನ ಕಣ್ಣನು’, ‘ಹೂವು ಹಾಸಿಗೆ’, ‘ಬಾಹುಬಂಧನ ಚುಂಬನ’, ‘ಬಯಕೆತೋಟದ ಬೇಲಿ’, ‘ಕರಣಗಣದೀ ರಿಂಗಣ’, ‘ಒಲಿದ ಮಿದುವೆದೆ’, ‘ರಕ್ತ ಮಾಂಸದ ಬಿಸಿದುಸೋಂಕಿನ ಪಂಜರ’, ‘ಹೊರಳುಗಣ್ಣಿನ ತೇಲುನೋಟದ ಸೂಚನೆ’, ‘ಸುಮಧುರ ಯಾತನೆ’, ‘ದಿವ್ಯ ಯಾಚನೆ’, ‘ಮರದೊಳಡಗಿದ ಬೆಂಕಿ’, ‘ಹೊತ್ತಿ ಉರಿವುದು ಕಾತರ’, ‘ಸುಪ್ತಸಾಗರ ಕಾದಿದೆ’, ‘ಮೊಳೆಯದಲೆ’, ‘ಮೂಕ ಮರ್ಮರ’, ‘ವಿವಶವಾಯಿತು ಪ್ರಾಣ’, ‘ಪರವಶವು ನಿನ್ನೀ ಚೇತನ’ ಮುಂತಾದ ಪದಪುಂಜಗಳಿಗೆ ಪರ್ಯಾಯ ಪದವನ್ನು ಊಹಿಸಲೂ ಆಗದಷ್ಟು ಅನಿವಾರ್ಯವೆಂಬಂತೆ ಪದಗಳ ಪ್ರಯೋಗವಾಗಿವೆ. ಬೌದ್ಧಿಕ ಭಾರವಿಲ್ಲದೆ, ಅರ್ಥದ ಹಂಗೂ ಇಲ್ಲದೆ ನೇರವಾಗಿ ಮನಸ್ಸಿಗೆ ಭಾವವನ್ನು ಮುಟ್ಟಿಸುವ ಶಕ್ತಿಯನ್ನು ಹೊಂದಿವೆ.
ಸ್ವರಗಳ ಏರಿಳಿತ, ಪ್ರಾಸ, ಅನುಪ್ರಾಸ, ಆಂತರಿಕಪ್ರಾಸಗಳಿಂದ ಕೂಡಿರುವ ಪಂಕ್ತಿಗಳು ಸ್ಫುರಿಸುವ ಭಾವನೆ, ಅದರಿಂದುಂಟಾಗುವ ಅನುಭವವನ್ನು ಮೆಲುಕು ಹಾಕುವಂತಿವೆ. ಪ್ರಶ್ನಿಸುವ ಧಾಟಿ, ಬದುಕಿನ ಆಕರ್ಷಣೆ, ಅದರ ಬಗೆಗೆ ಜಿಗುಪ್ಸೆ, ಅದಕ್ಕೆ ಪ್ರತಿಕ್ರಿಯೆಯಂತೆ ಬರುವ ಸಂದೇಶದ ಧ್ವನಿ, ಮಿಂಚಿ ಹೋದ ಅನುಭಾವದ ಸ್ವರೂಪದ ಚಿಂತನೆ ಅಡಿಗರ ‘ಮೋಹನ ಮುರಲಿ’ ಕವನದಲ್ಲಿ ಪ್ರಭಾವಶಾಲಿಯಾಗಿ ಮೂಡಿಬಂದಿದೆ.   
ಪ್ರತಿಬಾರಿ ಓದಿದಾಗಲೂ ‘ಮೋಹನ ಮುರಲಿ’ ಹೊಸ ಅರ್ಥವನ್ನು ಸೃಜಿಸುತ್ತದೆ. ಹೊಸ ಅನುಭವವನ್ನು, ಹೊಸ ಭಾವನೆಯನ್ನು ಮೂಡಿಸುತ್ತದೆ. ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುವ ಅದ್ಭುತ ದಿವ್ಯ ಶಕ್ತಿಯನ್ನು ಹೊಂದಿದೆ. ಓದುಗರನ್ನು ಸಮ್ಮೋಹನಗೊಳಿಸುತ್ತಿದೆ     ‘ಮೋಹನ ಮುರಲಿ’.
**************************

6 comments:

  1. ಪ್ರಿಯಕವನವನ್ನು ಎಷ್ಟು ಚೆಂದದ ವ್ಯಾಖ್ಯಾನದೊಂದಿಗೆ ಓದುವುದು ತುಂಬಾ ಸಂತೋಷ ತಂದಿದೆ. ಧನ್ಯವಾದಗಳು ಪದ್ಮಾಶ್ರೀಧರ್ ಅವರೆ!

    ReplyDelete
  2. ಅರ್ಥಗರ್ಭಿತವಾದ ಅಂತಹ ಸಾಲುಗಳ ಮೂಲಕ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಸರ್ ಧನ್ಯವಾದಗಳು.
    ಇದೇ ರೀತಿ ಇನ್ನೂ ಹಲವಾರು ಕಾವ್ಯಗಳ ಸಾರಾಂಶವನ್ನು ಬರೆದು ಓದುಗರಿಗೆ ಉಣಬಡಿಸಿ.

    ReplyDelete
  3. ಅಭೂತಪೂರ್ವ ವಾಕ್ಯಗಕು 🙏

    ReplyDelete
  4. 🙏 ಸರ್ ತುಂಬಾ ಅರ್ಥ ಪೂರ್ಣ ಆಗಿದ್ಯಾ ಸರ್.

    ReplyDelete