Sunday 27 September 2015

ಅಪಠಿತ ಗದ್ಯ ಭಾಗದ ಚಟುವಟಿಕೆ-1

ನೀಲ ನಕ್ಷೆಗೆ ಅನುಗುಣವಾಗಿ ಅಪಠಿತ ಗದ್ಯಭಾಗವನ್ನು ಓದಿ ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ಎಂಬ ಪ್ರಶ್ನೆಯು 8, 9, ಮತ್ತು 10ನೆಯ  ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತಿಯ ಭಾಷೆಯ ಮೂರು ಪ್ರಶ್ನೆಪತ್ರಿಕೆಯಲ್ಲೂ ನಾಲ್ಕು ಅಂಕಗಳಿಗೆ ಇದೆ. ಆ ನಾಲ್ಕೂ ಅಂಕಗಳನ್ನು ಎಲ್ಲಾ ವಿದ್ಯಾರ್ಥಿಗಳೂ ಸುಲಭವಾಗಿ ಗಳಿಸುವಂತೆ ಮಾಡಲು ಅಭ್ಯಾಸಕ್ಕಾಗಿ ಈ ಕೆಳಗಿನ ಚಟುವಟಿಕೆಗಳು.
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ನನ್ನ ಹೆಸರು ಅಬ್ದುಲ್ ಕಲಾಂ. ನನ್ನ ಬಾಲ್ಯ ಜೀವನ ಕಳೆದ ರಾಮೇಶ್ವರವು ಒಂದು ಸಣ್ಣ ದ್ವೀಪ. ಅಲ್ಲಿನ ಅತಿ ಎತ್ತರದ ಭೂಭಾಗವೆಂದರೆ ಗಂಧಮಾದನ ಪರ್ವತ. ಎಲ್ಲೆಡೆ ತಲೆದೂಗುತ್ತಿರುವ ಹಸಿರು-ಹಸಿರಾದ ತೆಂಗಿನ ತೋಟಗಳು. ದೂರದಲ್ಲಿ ಸಮುದ್ರ, ಇವುಗಳ ನಡುವೆ ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿ ನಿಂತಿರುವ ರಾಮನಾಥ ಸ್ವಾಮಿ ದೇವಸ್ಥಾನದ ಗೋಪುರ. ಆಗ ರಾಮೇಶ್ವರ ಒಂದು ಶಾಂತವಾದ ಪುಟ್ಟ ಪಟ್ಟಣವಾಗಿತ್ತು. ದೇವಸ್ಥಾನ ಹಾಗೂ ಅಕ್ಕಪಕ್ಕದ ಬೀದಿಗಳು ಸದಾ ಯಾತ್ರಾರ್ಥಿಗಳಿಂದ ತುಂಬಿರುತ್ತಿದ್ದವು.
ರಾಮೇಶ್ವರದ ನಾಗರಿಕರಲ್ಲಿ ಹೆಚ್ಚಿನವರು ಹಿಂದುಗಳು. ಕೆಲವು ಮಂದಿ ನಮ್ಮಂತಹ ಮುಸ್ಲಿಮರು. ಅಂತೆಯೇ ಕೆಲವು ಜನ ಕ್ರೈಸ್ತರೂ ಇದ್ದಾರೆ. ಪ್ರತಿ ಸಮುದಾಯವೂ ಇತರ ಸಮುದಾಯಗಳ ಜತೆ ಸ್ನೇಹದಿಂದಲೂ ನೆಮ್ಮದಿಯಿಂದಲೂ ಜೀವನ ಮಾಡುತ್ತಿದ್ದವು. ಹೊರ ಜಗತ್ತಿನ ಒಡಕುಗಳು ರಾಮೇಶ್ವರದ ಒಳಕ್ಕೆ ಬಂದದ್ದೇ ಇಲ್ಲ. ಸದ್ದುಗದ್ದಲವಿಲ್ಲದ ಈ ಸೌಹಾರ್ದ ಅನೇಕ ತಲೆಮಾರುಗಳಿಂದ ನಡೆದು ಬಂದಿದೆ.
ಕನ್ನಡ ಪ್ರಥಮ ಭಾಷೆಗಾಗಿ
I                                                                                          2X2=4
1.      ರಾಮೇಶ್ವರವು ಪ್ರಶಾಂತವಾದ ಪುಟ್ಟ ಪಟ್ಟಣವಾಗಿತ್ತೆಂದು ಹೇಳಲು ಕಾರಣವೇನು?
2.     ರಾಮೇಶ್ವರವು ಸೌಹಾರ್ದ ಜೀವನಕ್ಕೆ ಹೇಗೆ ಹೆಸರಾಗಿತ್ತು?
II                                                                                         2X2=4                                                                                                                            
1.     ರಾಮೇಶ್ಚರದ ಪ್ರಾಕೃತಿಕ ಸನ್ನಿವೇಶವನ್ನು ವರ್ಣಿಸಿರಿ.
2.    ರಾಮೇಶ್ದರದಲ್ಲಿದ್ದ ಕೋಮು ಸೌಹಾರ್ದತೆಯನ್ನು ಕುರಿತು ಬರೆಯಿರಿ.
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                         1X4=4
1.     ಅಬ್ದುಲ್ ಕಲಾಂ ತಮ್ಮ ಬಾಲ್ಯವನ್ನು ಎಲ್ಲಿ ಕಳೆದರು?
2.    ರಾಮೇಶ್ವರದಲ್ಲಿರುವ ಅತಿ ಎತ್ತರದ ಭೂಭಾಗ ಯಾವುದು?
3.    ಆಕಾಶವನ್ನು ಆಳುತ್ತಿರುವೆನೋ ಎಂಬಂತೆ ತಲೆ ಎತ್ತಿನಿಂತಿರುವುದು ಯಾವುದು?
4.    ರಾಮೇಶ್ವರದಲ್ಲಿ ಯಾವ ಯಾವ ಸಮುದಾಯದವರಿದ್ದಾರೆ?
II                                                                                        1X4=4
1.     ರಾಮೇಶ್ವರದಲ್ಲಿರುವ ದೇವಾಲಯ ಯಾವುದು?
2.    ಗಂಧಮಾದನ ಪರ್ವತದ ವಿಶೇಷತೆ ಏನು?
3.    ರಾಮೇಶ್ವರದ ಜನ ಯಾವ ರೀತಿ ಜೀವನ ಮಾಡುತ್ತಿದ್ದಾರೆ?
4.    ದೇವಾಲಯದ ಅಕ್ಕ ಪಕ್ಕದ ಬೀದಿ ಯಾವರೀತಿ ಇರುತ್ತಿತ್ತು?
**************************

ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ನನ್ನ ಹೆಸರು ಅಬ್ದುಲ್ ಕಲಾಂ. ನಾನು ಬೆಳೆದ ರಾಮೇಶ್ವರ ಕೋಮು ಸಾಮರಸ್ಯಯಿಂದ ಪ್ರಶಾಂತವಾಗಿತ್ತು. ನಮ್ಮ ಮುತ್ತಾತ ರಾಮನಾಥ ಸ್ವಾಮಿ ದೇವಾಲಯದ ವಿಗ್ರಹ ಕಾಪಾಡಿದ ಘಟನೆಯನ್ನು ನಮ್ಮ ತಂದೆ ಹೇಳುತ್ತಿದ್ದರು. ಉತ್ಸವಗಳ ಸಂದರ್ಭ ದೇವಸ್ಥಾನದ ಉತ್ಸವ ಮೂರ್ತಿಯನ್ನು ಅಲಂಕಾರ ಮಾಡಿ ದೇವಾಲಯದ ಪ್ರದಕ್ಷಿಣೆಯಲ್ಲಿ ಒಯ್ಯುತ್ತಾರೆ. ರಾಮೇಶ್ವರದ ಎಲ್ಲರೂ ಜಾತಿ-ಧರ್ಮ ಭೇದವಿಲ್ಲದೆ ಇದರಲ್ಲಿ ಭಾಗವಹಿಸುತ್ತಾರೆ. ಅಂಥ ಒಂದು ಮೆರವಣಿಗೆ ಸಂದರ್ಭ ಉತ್ಸವ ಮೂರ್ತಿ ಆಕಸ್ಮಿಕವಾಗಿ ಕೆರೆಗೆ ಬಿತ್ತು. ಅಲ್ಲಿದ್ದವರೆಲ್ಲ ದಿಗ್ಭ್ರಾಂತರಾದರು. ಅದೊಂದು ಅಪಶಕುನ, ಏನು ಗಂಡಾಂತರ ಕಾದಿದೆಯೋ ಎಂದು ಅರ್ಚಕರೂ ಜನರೂ ಭಯಪಟ್ಟರು. ನನ್ನ ಮುತ್ತಾತ ಧೈರ್ಯ ಕಳೆದುಕೊಳ್ಳಲಿಲ್ಲ. ತಕ್ಷಣ ಕೆರೆಗೆ ಜಿಗಿದು ಜಾಲಾಡಿ ವಿಗ್ರಹ ಎತ್ತಿಕೊಂಡು ಮೇಲೆ ಬಂದರು. ಮುಸ್ಲಿಮನೊಬ್ಬ ಹಿಂದೂ ವಿಗ್ರಹವನ್ನು ಮುಟ್ಟಿದನೆಂಬ ಮಾತನ್ನು ಯಾರೂ ಆಡಲಿಲ್ಲ. ಅರ್ಚಕರು ತುಂಬಾ ಸಂತೋಷಗೊಂಡು ಭಾವುಕರಾಗಿ ನನ್ನ ಮುತ್ತಾತನಿಗೆ ಕೃತಜ್ಞತೆ ಹೇಳಿದರು. ಉತ್ಸವ ಸಾಂಗವಾಗಿ ನಡೆಯಿತು. ನನ್ನ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದರು. ಆ ಉತ್ಸವದಲ್ಲಿ ಪ್ರತಿವರ್ಷದ ಮೊದಲ ಮರ್ಯಾದೆ ನನ್ನ ಮುತ್ತಾತನಿಗೆ ಸಲ್ಲತಕ್ಕದ್ದು ಎಂದು ದೇವಸ್ಥಾನದ ಆಡಳಿತದವರು ಘೋಷಿಸಿದರು. ನಂತರ, ಇದು ನಮ್ಮ ಕುಟುಂಬದ ಮುಂದಿನ ಪೀಳಿಗೆಗೂ ಮುಂದುವರೆಯಿತು.
ಕನ್ನಡ ಪ್ರಥಮ ಭಾಷೆಗಾಗಿ
I                                                                                           2X2=4
1.      ರಾಮೇಶ್ವರದ ಅರ್ಚಕರು  ಭಯಭೀತರಾಗಲು ಕಾರಣವೇನು?ವಿವರಿಸಿ.
2.     ಅಬ್ದುಲ್ ಕಲಾಂ ಮುತ್ತಾತ ರಾಮೇಶ್ವರದ ಜನರಿಗೆ ಹೀರೋ ಆದುದು ಹೇಗೆ?
II                                                                                           2X2=4
1.      ಉತ್ಸವದ ಸಂದರ್ಭದಲ್ಲಿ ರಾಮೇಶ್ವರದಲ್ಲಿ ನಡೆದ ಆಕಸ್ಮಕ ಘಟನೆಯನ್ನು ಕುರಿತಿ ಬರೆಯಿರಿ.
2.     ರಾಮೇಶ್ವರದ ಒಂದು ಉತ್ಸವದಲ್ಲಿ ಮೊದಲ ಮರ್ಯಾದೆ ಅಬ್ದುಲ್ ಕಲಾಂ ಮನೆಯವರಿಗೆ ಸಲ್ಲುತ್ತದೆ ಏಕೆ?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                              1X4=4
1.      ಅಬ್ದುಲ್ ಕಲಾಂ ತಂದೆ ಯಾವ ಘಟನೆಯನ್ನು ಹೇಳುತ್ತಿದ್ದರು?
2.     ಉತ್ಸವದ ಸಮಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆ ಯಾವುದು?
3.     ಕೆರೆಯಿಂದ ವಿಗ್ರಹವನ್ನು ಮೇಲೆತ್ತಿ ತಂದವರು ಯಾರು?
4.    ದೇವಸ್ಥಾನದ ಆಡಳಿತದವರು ಏನೆಂದು ಘೋಷಿಸಿದರು?
II                                                                                        1X4=4
1.      ಉತ್ಸವದ ಸಂದರ್ಭದಲ್ಲಿ ಜನರು ದಿಗ್ಬ್ರಾಂತರಾಗಲು ಕಾರಣವೇನು
2.     ರಾಮೇಶ್ವರದ ಜನರಿಗೆ ಹೀರೋ ಆದವರು ಯಾರು?
3.     ಅರ್ಚಕರು ಭಾವುಕರಾಗಲು ಕಾರಣವೇನು?
4.    ರಾಮೇಶ್ವರದಲ್ಲಿ ನಡೆಯುವ ಉತ್ಸವದ ಮೊದಲ ಮರ್ಯಾದೆ ಯಾರಿಗೆ ಸಲ್ಲುತ್ತದೆ?
**********************
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಭಗತ್ ಸಿಂಗ್ ವರ್ಷದ ಬಾಲಕನಾಗಿದ್ದಾಗ ಅವನ ತಂದೆ ತಮ್ಮ ಮಿತ್ರರೊಡನೆ ಸುತ್ತಾಡಲು ಹೊರಟರು. ಭಗತ್ ಸಿಂಗ್ ಸಹ ಅವರೊಂದಿಗೆ ಹೊರಟನು. ಹಿರಿಯರು ಮಾತಾಡುತ್ತ ಮುಂದೆ ಮುಂದೆ ಹೋಗಿದರು. ಊರಿನಾಚೆ ಹೊಲ ಗದ್ದೆಗಳನ್ನು ದಾಟಿ  ಹೋಗುತ್ತಿದ್ದ  ಹಿರಿಯರಿಗೆ ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದುದು ಕಂಡು ಬಂದಿತು. ಕುತೂಹಲದಿಂದ ಅವನ ಬಳಿಗೆ ಬಂದು 'ಏನು ಮಾಡುತ್ತಿದ್ದೀಯಾ?' ಎಂದು ಅವರು ಕೇಳಿದರು. ಆಗ ಬಾಲಕ ಭಗತ್ ಸಿಂಗ್ ' ಹೊಲದ ತುಂಬಾ ನಾನು ಬಂದೂಕುಗಳನ್ನು ಬೆಳೆಯಲು ಸಿದ್ಧಮಾಡುತ್ತಿದ್ದೇನೆ' ಎಂದು ಮುಗ್ಧವಾಗಿ ಉತ್ತರಿಸಿದನು. ಮಾತು ಹೇಳುವಾಗ ಅವನ ಕಣ್ಣಿನಲ್ಲಿ 'ನೆಡುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ' ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಬಂದೂಕುಗಳನ್ನು ಏಕೆ ಬೆಳೆಯುವೆ ಎಂದು ಪ್ರಶ್ನಿಸಿದಕ್ಕೆ ' ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸುತ್ತೇನೆ' ಎಂದು ಉತ್ತರ ಕೊಟ್ಟನು! ಇದನ್ನು ಕೇಳುತ್ತಿದ್ದ ಹಿರಿಯರು ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.
ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೂ ತನ್ನ ಸಹಪಾಠಿಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡುತ್ತಿದ್ದರು. ಒಮ್ಮೆ ತರಗತಿಯಲ್ಲಿ ಎಲ್ಲರನ್ನು ಸಂಬೋಧಿಸಿ 'ದೊಡ್ಡವರಾದ ಮೇಲೆ ಏನು ಆಗಲು ಇಚ್ಚಿಸುವಿರಿ?' ಎಂದು ಕೇಳಿದನು. ಪ್ರತಿಯೊಬ್ಬರು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸಿದರು. ಒಬ್ಬನಂತು ನಾನು 'ಮದುವೆ ಯಾಗುತ್ತೇನೆ' ಎಂದು ಹೇಳಿದನು! ಅದನ್ನು ಕೇಳಿದ ಬಾಲಕ ಭಗತ್, 'ಮದುವೆ ಮಾಡಿಕೊಳ್ಳುವುದು ಒಂದು ಸಾಧನೆಯೇ? ನಾನು ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಉದ್ಗರಿಸಿದನು!

ಕನ್ನಡ ಪ್ರಥಮ ಭಾಷೆಗಾಗಿ
I                                                                                           2X2=4
1.      ಹಿರಿಯರ ಜೊತೆ ಹೊರಗೆ ಹೊರಟ ಭಗತ್ ಸಿಂಗ್ ಹಿಂದೆ ಉಳಿಯಲು ಕಾರಣವೇನು?
2.     ಭಗತ್ ಸಿಂಗ್ ಮತ್ತು ಆತನ ಸ್ನೇಹಿತರ ನಡುವೆ ಶಾಲೆಯಲ್ಲಿ ನಡೆದ ಸಂಭಾಷಣೆಯನ್ನು ಬರೆಯಿರಿ.
II                                                                                           2X2=4
1.  ಬಾಲಕ ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡಿತ್ತಿದ್ದನು? ಏಕೆ?
2. ಆಂಗ್ಲರನ್ನು ನಮ್ಮ ದೇಶದಿಂದ ಒದ್ದು ಓಡಿಸುತ್ತೇನೆ' ಎಂದು ಬಾಲಕ ಭಗತ್ ಸಿಂಗ್ ಉದ್ಗರಿಸಿದ ಸನ್ನಿವೇಶವನ್ನು ವಿವರಿಸಿರಿ.
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
I                                                                                             1X4=4
1.      ಭಗತ್ ಸಿಂಗ್ ಗದ್ದೆಯಲ್ಲಿ ಕುಳಿತು ಏನು ಮಾಡುತ್ತಿರುವುದಾಗಿ ಹೇಳಿದನು?
2.     ಹಿರಿಯರು ಆಶ್ಚರ್ಯಚಕಿತರಾದುದೇಕೆ?
3.     ಭಗತ್ ಸಿಂಗನ ಕಣ್ಣಿನಲ್ಲಿ ಯಾವ ನಂಬಿಕೆ ಕಾಣುತ್ತಿತ್ತು?
4.    ದೊಡ್ಡವನಾದ ಮೇಲೆ ತಾನು ಏನು ಮಾಡುತ್ತೇನೆಂದು ಭಗತ್ ಸಿಂಗ್ ಹೇಳಿದನು
II                                                                                       1X4=4
1.      ಬಾಲಕ ಭಗತ್ ಸಿಂಗ್ ಯಾರೊಡನೆ ಹೊರಟನು?
2.     ಹಿರಿಯರು ಕುತೂಹಲದಿಂದ ಬಾಲಕನ ಬಳಿಗೆ ಬಂದುದೇಕೆ?
3.     ಬಂದೂಕುಗಳನ್ನು ಏಕೆ ಬೆಳೆಯುತ್ತಿರುವೆ ಎಂಬ ಪ್ರಶ್ನೆಗೆ ಭಗತ್ ಸಿಂಗ್ ಕೊಟ್ಟ ಉತ್ತರವೇನು?
4.    ಭಗತ್ ಸಿಂಗ್ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಏನು ಮಾಡುತ್ತಿದ್ದನು?
**********************
ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ಸ್ಥಳಕ್ಕೆ ಶಾಲೆಯಿಂದ ತಪ್ಪಿಸಿಕೊಂಡ ಹೋದ ಬಾಲಕ ಭಗತ್ ಸಿಂಗ್ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಪ್ರತಿದಿನವೂ ಪೂಜಿಸುತ್ತಿದ್ದನು. ಮಣ್ಣು ರಕ್ತಸಿಕ್ತವಾಗಲು ಕಾರಣರಾದರ ವಿರುದ್ಧ ಸೇಡು ತೀರಿಸಿಕೊಳ್ಳದ ಹೊರತು ವಿಶ್ರಮಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಸ್ವದೇಶಿ ಚಳುವಳಿಯ ವೇಳೆ ತಮ್ಮ ಮತ್ತು ತಮ್ಮ ವಠಾರದ ಎಲ್ಲಾ ಮನೆಗಳಲ್ಲಿದ್ದ ವಿದೇಶಿ ಬಟ್ಟೆ ಮತ್ತು ವಸ್ತುಗಳನ್ನು ತಂದು ಬೆಂಕಿಗೆ ಆಹುತಿ ನೀಡುತ್ತಿದ್ದರು! ಕೊನೆಯ ಉಸಿರಿರುವವರೆಗೂ ಬ್ರಿಟಿಷರನ್ನು ದೇಶದಿಂದ ಹೊಡೆದೋಡಿಸುವ ಕಾರ್ಯದಲ್ಲೇ ನಿರತರಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಾರ್ಪಣೆಮಾಡಿದರು.
ಕನ್ನಡ ಪ್ರಥಮ ಭಾಷೆಗಾಗಿ
1.      ಜಲಿಯನ್ ವಾಲಾ ಬಾಗ್ ದುರಂತಕ್ಕೆ ಭಗತ್ ಸಿಂಗ್ ಹೇಗೆ ಪ್ರತಿಕ್ರಿಯಿಸಿದನು?
2.     ಸ್ವದೇಶಿ ಚಳುಚಳಿಯಲ್ಲಿ ಭಗತ್ ಸಿಂಗ್ ಹೇಗೆ ಭಾಗವಹಿಸಿದನು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
                                                                                             1X4=4
1.      ಏಪ್ರಿಲ್ 13, 1919ರಂದು ನಡೆದ ಘಟನೆಯಾವುದು?
2.     ಬಾಲಕ ಭಗತ್ ಸಿಂಗ್ ಶಾಲೆಯಿಂದ ತಪ್ಪಿಸಿಕೊಂಡು ಹೋಗಲು ಕಾರಣವೇನು?
3.     ಬಾಲಕ ಭಗತ್ ಸಿಂಗ್ ಏನೆಂದು ಪ್ರತಿಜ್ಞೆ ಮಾಡಿದನು?
4.    ಸ್ವದೇಶೀ ಚಳುವಳಿಯಲ್ಲಿ ಭಗತ್ ಸಿಂಗ್ ಮಾಡಿದ ಕೆಲಸವೇನು?

************************

No comments:

Post a Comment