Wednesday 2 September 2015

ನುಡಿ ನಮನ

ವೈದ್ಯ ನಾರಾಯಣನಿಗೆ ನುಡಿ ನಮನ
ಮಂದಹಾಸ ಸೂಸುವ ಮೊಗವು
ಅಟ್ಟಹಾಸದ ನಗುವು
ಏರುಧ್ವನಿಯಾ ನುಡಿಯು
ಊಟದಲಿ ಆಟದಲಿ ರಸಿಕತೆಯು
ಮನದಲ್ಲೇ ಲೆಕ್ಕಿಸುವ ನಿಲುವು
ತನ್ನಂತೆ ನಡೆಯಬೇಕೆಂಬ ಛಲವು
ನಿರುಪದ್ರವಿ ನಿರಹಂಕಾರಿ
ಮಿತವ್ಯಯದ ಸಂಸಾರಿ
ಕಷ್ಟಕ್ಕೆ ಆಳಲ್ಲ ಸೋಮಾರಿ ಅವರಲ್ಲ.
ಸಾಯಿ ಬಾಬಾನ ನಂಬಿ
ಸಾಯಿ ಕೃಪವ ಕಟ್ಟಿ
ಸಾಯಿ ಧ್ಯಾನದಲ್ಲಿ ಅನುಗಾಲವಿದ್ದು
ಬಾಬಾನನುಗ್ರಹಕೆ ಹಾತೊರೆದು
ಭಾವಾತೀತನಂತೆ ಭಾವಪರವಶನಾಗಿ
ಬಾಳ್ವೆಯುದ್ದಕ್ಕೂ ಬಾಬಾನ ಜಪಿಸುತ್ತಿದ್ದಾತ.
ಜಪ ತಪ ಧ್ಯಾನ ಪ್ರಾಣಾಯಾಮಗಳಲಿ ಕೈಯಾಡಿಸುತ
ಇಸ್ಪೀಟಾಟಕೆ ಎಲ್ಲರನು ಹುರಿದುಂಬಿಸಿ ಸಂಘಟಿಸುತ
ಹಸ್ತ ಸಾಮುದ್ರಿಕೆಯಿಂದ ಆಬಾಲವೃದ್ಧರ ತನ್ನತ್ತ ಸೆಳೆಯುತ
ಹೋಮಿಯೋ ಪತಿಯಲ್ಲಿ ಸಿದ್ಧಹಸ್ತರಾಗುತ
ತನ್ನ ಸಿದ್ಧಿಯಾ ಸತ್ವವ ರಹಸ್ಯವಾಗಿರಿಸುತ
ತನ್ನನುಭವದ, ಸಾರವ ತನ್ನೊಂದಿಗೇ ಕೊಂಡೊಯ್ದಾತ.
ವೇದಾಂತಿಯಂತೆ ವೇದಾಂತವ ಹೇಳುತ
ತೀರ್ಪುಗಾರನಂತೆ ಅಂತಿಮ ತೀರ್ಪುನೀಡುತ
ವ್ಯವಹಾರ ಕುಶಲಿಯಂತೆ ವ್ಯವಹರಿಸುತ
ಮಾರ್ಗದರ್ಶಕನಂತೆ ಮಾರ್ಗದರ್ಶನವ ಮಾಡುತ
ಯಾರಿಗೂ ನಿಲುಕದೆ ಯಾವುದಕೂ ಸಿಲುಕದೆ
ಸರ್ವ ವಿಷಯದಲೂ ನಿರ್ಲಿಪ್ತತೆಯ ತೋರುತ
ಲಾಭ, ನಷ್ಟ, ಗಳಿಕೆ ಉಳಿಕೆಯ ಲೆಕ್ಕಾಚಾರವ ಮಾಡುತ
ಬೇಗುದಿಯಲೇ ಬದುಕ ಬಂಡಿದೂಡಿದಾತ
ಮನವನರಿತು ನಡೆವ ಅಕ್ಕರೆಯ ಸಕ್ಕರೆಯಂತ ಮಡದಿ
ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ
ಕರ್ತವ್ಯಕೆ ಲೋಪಬಾರದಂತೆ ನಡೆವ ಜಾಮಾತೃ
ಮಮತೆಯೇ ಸಾಕಾರವೆತ್ತಂತಿರುವ ಮೊಮ್ಮಕ್ಕಳು
ಕಷ್ಟ ಸುಖಗಳಲಿ ಭಾಗಿಯಾಗುವ ಬಂಧು, ಬಳಗ, ಸಖರು
ವಾಸಕ್ಕೆ ಬೆಚ್ಚನಾ ಮನೆಯ ಪಡೆದು ಸುಖಿಸಿದಾ ಸುಖಿ.
ಅವರೆ ಡಾ|| ಅಶ್ವತ್ಥನಾರಾಯಣ್ ಹಿರಿಯರ ನೆಚ್ಚಿನ ನಾಣಿ.
ಕಿರಿಯರ ನಾಣಿ ಚಿಕ್ಕಪ್ಪ, ಮಾವ, ಭಾವ, ತಾತ ... ...

***********

No comments:

Post a Comment