Friday 18 September 2015

ನುಡಿ ನಮನ


ಬದುಕ ಬಯಸಿ ಬವಣೆಯ ಬಂಡಿಯೇರಿ
ಬದುಕಿನುದ್ದಕ್ಕೂ ಕಷ್ಟ ನಷ್ಟವನೇ ಕಂಡುಂಡು
ಬದುಕ ಬವಣೆ ಜಯಿಸಿದಾಕೆ
ಬಯಸಿದುದ ಪಡೆಯಲಾಗದೆ ತವಕಿಸುತ
ಸತ್ತು ಸತ್ತು ಬದುಕದೂಡಿ ಸತ್ತು ಬದುಕಿದಾಕೆ
ತನು ಮನ ಧನವ ಅನ್ಯರ ಸುಖಕೆ ಮೀಸಲಿಟ್ಟು
ಸಂಕಷ್ಟದ ಪರಂಪರೆಯನೇ ನಿರಂತರವು ಎದುರಿಸಿ
ಕಷ್ಟ ನಷ್ಟಗಳಿಗೆ ಎದೆಗುಂದದೆ
ಕನಸು ಮನಸಿನಲ್ಲೂ ಕೇಡೆಣಿಸದೆ
ನೋವಿನಲ್ಲೂ ನಲಿವಕಂಡು
ನಗುನಗುತ ಎಲ್ಲರೊಡನೆ ಕೂಡಿ ಬಾಳಬಯಸಿದಾಕೆ
ಎಲ್ಲರಂತೆ ಬದುಕ ಬಯಸಿ
ಬವಣೆಪಟ್ಟು ಹಸುವಕಟ್ಟಿ ಹಾಲುಕರೆದು 
ಹಣಗಳಿಸಿ ದೇಹದಣಿಸಿ
ಅನ್ಯರ ಸುಖದಲಿ ತನ್ನ ಸುಖವಕಂಡು
ನೋವು ಅವಮಾನಗಳನು ಸಹಿಸಿ
ಅಕ್ಕರೆಯ ಸಕ್ಕರೆಯ ನುಡಿಗಳನೇ ನುಡಿದು
ಎಲ್ಲರಾ ಸುಖ ದುಃಖಗಳಲಿ ಭಾಗಿಯಾಗಿ ಬಾಳಿದಾಕೆ
ಪತಿ ಪರ ದೈವವೆಂದೆಣಿಸಿ
ಮಕ್ಕಳೆನ್ನ ಸರ್ವಸ್ವವೆಂದೆಣಿಸಿ
ಬಂದು ಮಿತ್ರರೆಲ್ಲ ನನ್ನವರೆಂದೆಣಿಸಿ
ಎಲ್ಲರಿಂಗಿತಕೆ ಅನುಗುಣವಾಗಿ
ಬದುಕು ಸವೆಸಿ ಬಾಳಿದಾಕೆ
ನೋವು, ದುಃಖ, ದುಮ್ಮಾನ
ಕಷ್ಟ, ಕಾರ್ಪಣ್ಯ, ಅಪಮಾನ
ಅಪಹಾಸ್ಯಗಳ ನಡುವೆಯೇ
ಬದುಕ ಬಂಡಿಯೆಳೆದು ಬಾಳಿದಾಕೆ
ನೆಮ್ಮದಿಯ ಬಾಳ ಬಯಸಿ
ಸುಖಜೀವನವನರಸಿ
ಭವಿಷ್ಯದಲಿ ಭರವಸೆಯನಿರಿಸಿ
ನಿರಂತರವು ನಿರೀಕ್ಷಣೆಯಲೆ ಬದುಕಿದಾಕೆ
ಹಬ್ಬ ಹರಿದಿನಗಳನಾಚರಿಸಿ
ವ್ರತ ಕಥಾದಿಗಳ ಬಿಡದೆ ಮಾಡಿ
ನೀತಿ ನಿಯಮವ ಹೇಳಿ
ಶುಚಿ ರುಚಿಯ ಖಾದ್ಯವಮಾಡಿ
ಕೊಡುಗೈಯ ದಾನಿಯಾಗಿ
ನಿಸ್ವಾರ್ಥದಿಂ ಎಲ್ಲರಾ ಸೇವೆಯ ಮಾಡಿ
ಸೂಕ್ಷ್ಮಾತಿ ಸೂಕ್ಷ್ಮ ಮನ ದೇಹವ ಹೊಂದಿ
ಕಾಠಿಣ್ಯಾತಿಕಾಠಿಣ್ಯ ಪರಿಸರದಿ ಬಾಳಿ ಬದುಕಿ ಜಯಿಸಿದಾಕೆ
ಧಾರಾಳಿಯಾಗಿ ಧಂದ್ರಾಳಿಯೆನಿಸಿ
ಮನೆಮನಗಳನುಳಿಸೆ ಶ್ರಮಿಸಿ
ಎಲ್ಲರ ಸಮಸ್ಯೆಗಳಿಗೆ ತಾನೇ ಪರಿಹಾರವಾಗಿ
ತನ್ನ ಸಮಸ್ಯೆಗಳಿಗೆ ಪರಿಹಾರ ಕಾಣದಂತಾಗಿ
ಸಮಸ್ಯೆಗಳ ಸುಳಿಗೆ ಸಿಲುಕಿ ನಲುಗಿದಾಕೆ
ಬಾಳಿನಲಿ ಮರಿಚಿಕೆಯಾದ ಸುಖ ಶಾಂತಿ ನೆಮ್ಮದಿಯ
ಭಗವಂತ ಇನ್ನಾದರೂ ಕರುಣಿಸಲಿ
ಚಿರನಿದ್ರೆಯಲ್ಲಿ ಚಿರಶಾಂತಿ ಲಭಿಸಲಿ
ಅವಳಾತ್ಮಕೆ ಮುಕ್ತಿಯ ಕರುಣಿಸೆಂದು
ದೈವವ ಎಲ್ಲರೊಂದಾಗಿ ಪ್ರಾರ್ಥಿಸುವ.

******** * ********

No comments:

Post a Comment