ಮಳೆರಾಯನಾಗಮನಕೆ ತವಕದಿ ಕಾದು
ಮಳೆಯಲ್ಲಿ ಕುಣಿದು ಕುಪ್ಪಳಿಸಿ ತೊಯ್ದು
ಅಪಾಳೆ ತಿಪ್ಪಾಳೆಯಾಡಿ ನಲಿಯುತ ಬಿದ್ದೆದ್ದ
ಆ ದಿನಗಳನೆಂತು ಮರೆಯಲಿ ನಾನು
ರಭಸದಲಿ ಹರಿಯುತಿಹ ಮಳೆನೀರಲಿ
ಕಾಗದದ ದೋಣಿಗಳ ತೇಲಿಬಿಟ್ಟು
ಗಲ್ಲಕ್ಕೆ ಕೈಕೊಟ್ಟು ಮೈಮರೆತು ಕುಳಿತು
ದೋಣಿಯೊಡನೆ ತೇಲಿ ತೇಲಿ ಹೋದ
ಆ ದಿನಗಳನೆಂತು ಮರೆಯಲಿ ನಾನು
ಬಣ್ಣ ಬಣ್ಣದ ಚಿಟ್ಟೆಹಿಡಿದು ಬೆರಳಿಗದರ
ರಂಗಮೆತ್ತಿ
ಜೀರುಡೆ ಹಿಡಿದು ಬೆಂಕಿ ಪೊಟ್ಟಣದಲದನುಯಿರಿಸಿ
ಬೆಳಕಿನ ಹುಳುವ ಸೀಸೆಯೊಳಿರಿಸಿ ಬೆಳಕ
ಕಂಡು
ಬಸವನ ಹುಳುವ ಗೆಳೆಯನ ಚಡ್ಡಿ ಜೋಬೊಳ್ಹಾಕಿ
ಕೆರಳಿಸಿದ ಆ ದಿನಗಳನೆಂತು ಮರೆಯಲಿ
ನಾನು
ಮರಳರಾಶಿಯಲಿ ಕಾಲನಿಟ್ಟು ಒತ್ತಿ
ಕಪ್ಪೆಗೂಡುಗಳ ಪೈಪೋಟಿಯಲಿ ಕಟ್ಟಿ
ಹೂವು ಎಲೆಗಳಿಂದಲದನಲಂಕರಿಸಿ
ಎಲ್ಲರೊಂದಾಗಿ ಕುಣಿದು ಕುಪ್ಪಳಿಸಿದ
ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ
ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ಮಾವಿನಕಾಯಿ ಹುಣಿಸೆ ಬೋಟಿಗೆಂದು
ಕಲ್ಲತೂರಿ
ಕೆಳಗೆಬಿದ್ದ ಹೀಚನಾಯ್ದು ತಿಂದು
ಮುಖವ ಕಿವುಚಿ
ಉಪ್ಪುಖಾರ ಹಚ್ಚಿನೆಕ್ಕಿ ನೆಕ್ಕಿ
ಆನಂದಿಸಿದ
ಸಂತಸದಾ ದಿನಗಳನೆಂತು ಮರೆಯಲಿ ನಾನು
ಹುಲ್ಲಿನಲ್ಲಿ ಒತ್ತೆಹಾಕಿದ ಮಾವಿನರಾಶಿಮುಂದೆ
ಕುಳಿತು
ಸವಿಸವಿಯ ಹಣ್ಣನಾಯ್ದು ಬುಟ್ಟಿತುಂಬ ತುಂಬಿ
ತಂದು
ಹೊಟ್ಟೆಬಿರೆಯೆ ತಿದ್ದು ಓಟೆ ಸಿಪ್ಪೆ ತಿಪ್ಪೆಗೆಸೆಯೆ
ಹೋಗಿ
ಯಾರ ಯಾರಮೇಲೊ ಹಾಕಿ ಬೆಂಗುಳ ಪೆಟ್ಟುತಿಂದ
ಕತ್ತಲೆಯ ಕೋಣೆಯಸೇರಿ ಅಪಮಾನದಿಂದ ದುಃಖಿಸಿದ
ಆ ದಿನಗಳನೆಂತು ಮರೆಯಲಿ ನಾನು
ಹುಣಿಸೆಹಣ್ಣ ನಾರಬಿಡಿಸಿ ಉಪ್ಪು
ಬೆಲ್ಲವದಕೆ ಬೆರೆಸಿ
ಕೆಂಪುಮೆಣಸು ಜೀರಿಗೆಯ ಹದದಿ ಅದಕೆ
ಹಾಕಿ
ಕುಟ್ಟಿ ಕುಟ್ಟಿ ಉಂಡೆಮಾಡಿ ಕಡ್ಡಿಯತುದಿಗೆ
ಚುಚ್ಚಿ
ಬಾಯೊಳಿಟ್ಟು ಚೀಪುತದರ ಸವಿಯ ನಾವು
ಸವಿದ
ಸವಿಯಾದ ಆ ದಿನಗಳನೆಂತು ಮರೆಯಲಿ
ನಾನು
ಅಣ್ಣನಾ ಕಾಡಿ ಅಜ್ಜಿತಾತನ ಕಣ್ತಪ್ಪಿಸಿ
ಕಳ್ಳ ಹೆಜ್ಜೆಯಿಟ್ಟು
ಆಳಿನೊಡಗೂಡಿ ಅವರೆಹೊಲವ ಕಾಯಲು ಹೊರಟು
ಚಳಿಯ ಕಾಸೆ ಬೆಂಕಿ ಹಚ್ಚಿ, ಸುತ್ತ
ಮೂರು ಕಲ್ಲನಿಟ್ಟು
ಅದರಮೇಲೆ ಹಂಡೆಯಿಟ್ಟು ಹೊಳೆನೀರತಂದು
ತುಂಬಿ
ಉರಿಯಮಾಡಿ ನೀರು ಕುದಿಸಿ ಹಿಡಿಯುಪ್ಪನದಕೆಹಾಕಿ
ಸೊಗಡು ಅವರೆ ಗಿಡದಿ ತರೆದುತಂದು
ಹಾಕಿ ಬೇಯಿಸಿ
ಬೆಲ್ಲನೆಂಚಿ ಬೆಳಗಾಗುವರೆಗೂ ಸುತ್ತ
ಕುಳಿತೆಲ್ಲ ತಿಂದದರ
ಸವಿಯ ಸವಿದ ಆ ದಿನಗಳನೆಂತು ಮರೆಯಲಿ
ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ
ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ಹಂಡೆ ಓಲೆಯ ಊದಿ ಉರಿಸಿ ಕೆಂಡ
ಕೆದರಿ
ಅವರೆಕಾಯಿ, ಹಲಸು, ಕಡಲೆ ಬೀಜಗಳನು ಹಾಕಿ
ಕೆಂಡಮುಚ್ಚಿ ಹದದಿ ಸುಟ್ಟು,
ಬೆಲ್ಲದೊಡನೆ ಮೆದ್ದು
ಕೆಂಡರೊಟ್ಟಿ ಮಾಡಿ ಕಾಯಿಚಟ್ನಿ
ಮೊಸರಿನೊಡನೆ
ಎಲ್ಲರೊಡನೆ ಕೂಡಿತಿಂದು ತೇಗಿದಾ
ಕ್ಷಣಗಳನು
ಎಂತು ಮರೆಯಲಿ ನಾನು ಆ ದಿನಗಳನು
ನಾ ಮರೆಯಲಾಗದಾ ದಿನ ಮತ್ತೊಮ್ಮೆ
ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ಹೊಳೆಯ ದಡದಿ ಕಲ್ಲನಾಯ್ದುತಂದು
ರಾಶಿಹಾಕಿ ಸುತ್ತ ಗೆಳೆಯರೆಲ್ಲ ಕುಳಿತು
ಕಲ್ಲ ಮೇಲೆ ಚಿಮ್ಮಿ ಕೈನೆಲಕೆ ಬಡಿದು
ಕಲ್ಲು ನೆಲೆಕೆ ಬೀಳದಂತೆ ಆತು ಹಿಡದು
ಕಲ್ಲಿನಾಟವಾಡಿ ಕೇಕೆಹಾಕಿ ನಕ್ಕು ನಲಿದ
ಆ ದಿನಗಳನೆಂತು ಮರೆಯಲಿ ನಾನು
ಜಗಲಿಮೇಲೆ
ಪಗಡೆಹಾಸ ಹಾಸಿ ಸುತ್ತ ಕುಳಿತು
ದಾಳಹಾಕಿ
ಮನೆಯನೆಣಿಸಿ ಕಾಯ್ಗಳನೆಡೆಸುತಿಟ್ಟು
ಸೋತೊಡೆ
ಹಾಸಕೆದರಿ ಓಡಿ, ಗೆದ್ದೊಡೆ ಕುಣಿದು
ಸಂಭ್ರಮಿಸಿದ
ಆ ದಿನಗಳನೆಂತು ಮರೆಯಲಿ ನಾನು
ಜಗಳಗಂಟಿ ಕಾಯನಾಯ್ದು ಕಿತ್ತುತಂದು
ಒಂದರಿಂದಿನ್ನೊಂದಕೆ ಜಗಳಹಚ್ಚಿ ಕುಳಿತು
ಒಂದಕ್ಕೊಂದು ಆವೇಶದಿ ಕಾದುಮಡಿದು
ಒಂದೊಂದೆ ತಲೆಯಂತೆ ನೆಲಕೆ ಉರುಳೆ
ವಿಜಯೋತ್ಸವದಿಂ ನಾವು ಮೆರೆಯುತ್ತಿದ್ದ
ಆ ದಿನಗಳನೆಂತು ಮರೆಯಲಿ ನಾನು
ಗುಲಗಂಜಿ, ಗಜ್ಜುಗ, ಹುಣುಸೆಪಿಕ್ಕ,
ಹಾಲವಾಣ
ಬೀಜವನಾಯ್ದುತಂದು
ಕವಡೆಯೆಲ್ಲ
ಹುಡುಕಿ ಒಟ್ಟುಮಾಡಿ
ಮನೆಯ
ಮಕ್ಕಳೆಲ್ಲ ಒಂದೆಡೆ ಸೇರಿ
ಅಂಗಳದಿ
ಅಜ್ಜಿ ಸುತ್ತ ಎಲ್ಲಕೂಡಿ
ಅಟುಗುಳಿ, ಚೌಕಾಬಾರ,
ಹುಲಿ
ಕುರಿ, ಹಾವು ಏಣಿ,
ಕವಡೆಯಾಟವಾಡಿ
ನಾವೇ
ಗೆಲ್ಲ ಬೇಕೆಂಬ ಛಲದಿಂದಾಡಿ
ಸೋಲಿಗೊಪ್ಪದೆ
ಪ್ರತಿಯಾಟ ಹೂಡಿ
ಗೆಲ್ಲುವಗಳಿಪುವವರೆಗೂ
ಬಿಡದೆ ಆಡಿದ
ಆ
ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ಹಾದಿಯಲ್ಲಿ
ಬಿದ್ದ ಹೆಂಚಿಪಿಕ್ಕ ಹುಡುಕಿತಂದು
ಕುಂಟಬಿಲ್ಲೆಗೆಂದು
ಉಜ್ಜಿ ಉಜ್ಜಿ ಬಚ್ಚೆಗೈದು
ಮನೆಯ
ಬರೆದು ಅಚೆ ನಿಂತು ಬಚ್ಚೆ ಚಿಮ್ಮಿ
ಗೆರೆಯ
ತುಳಿಯದಂತೆ ಕುಂಟಿ ಮುಂದೆ ಸಾಗಿ
ಐ ಆಮ್ರೈಟ್
(ಅಮಟೆ ಅಮಟೆ)ಎಂದು ಹೇಳುತ
ಗೆರೆತುಳಿಯೆ
ಔಟೌಟೆನುತಲೆಲ್ಲ ಕೂಗಿಕುಣೆಯಲು
ಗೆರೆತುಳಿಯಲಿಲ್ಲ
ನಾನೆಂದು ಮುಂದೆ ಸಾಗುತ
ಮನೆಗಳನೆಲ್ಲ
ದಾಟಿ ಕೊನೆಯ ಮುಟ್ಟುತ
ಗೆದ್ದೆವೆಂದು
ಕುಣಿದು ಕುಪ್ಪಳಿಸಿ ನಲಿತ
ಎಲ್ಲರೊಡನೆ
ಹರ್ಷಸಿದಿಂದ ನಾನು ಮೆರೆದ
ನಲವಿನಾ
ದಿನಗಳನೆಂತು ಮರೆಯಲಿ ನಾನು
ಚಿಣ್ಣರೊಡನೆ ಕೂಡಿ ಚಿನ್ನಿಕೋಲು, ಬುಗುರಿ,
ಗೋಲಿ, ಮರಕೋತಿಯಾಟವಾಡಿ
ಸಂಜೆ ಕಳೆಯೆ ಮನೆಗೆ ಬಂದು ಶ್ಲೋಕ ಪಠಿಸಿ,
ಎಲ್ಲರೊಡನೆ ಭಜನೆಮಾಡಿ ದೇವಗೊಂದಿಸಿ
ವಾರ, ಮಾಸ, ತಿಥಿ, ನಕ್ಷತ್ರ, ಸಂವತ್ಸರ,
ಮಗ್ಗಿಯೊಂದನು ಬಿಡದೆ ಬಾಯಿ ಪಾಠಹೇಳಿ
ಅಜ್ಜಿ ಸುತ್ತಾ ನಾವು ಕುಳಿತು
ಸವಿಯ ತುತ್ತಿಗಾಗಿ ಕೈಯ ಒಡ್ಡಿ
ಹೊಟ್ಟೆಬಿರಿಯೆ ತಿಂದು ತೇಗಿ
ಕೊನೆಯ ತುತ್ತಿಗಾಗಿ ಕಾದು ಕುಳಿತ
ಆ ದಿನಗಳನೆಂತು ಮರೆಯಲಿ ನಾನು
ರವಿವಾರ
ನಮ್ಮೂರಿನಾ ಸಂತೆ,
ಸೋಮವಾರ
ಆಚೆಯೂರ ಸಂತೆ,
ಗುರುವಾರ
ನೆರೆಯೂರ ಸಂತೆ,
ಶನಿವಾರ
ಮತ್ತೊಂದೂರ ಸಂತೆ,
ಸಂತೆಯೆಂದೊಡನೆ
ಶಾಲೆಬಿಟ್ಟು
ಅಪ್ಪನೊಡನೆ
ಗಾಡಿಯೇರಿ ಸಾಗಿ
ಜನರನಡುವೆ
ನುಸುಳಿ ತೂರಿ
ಅಜ್ಜಿಗೆ, ಅಜ್ಜಗೆ, ಅಮ್ಮಗೆ, ಅಕ್ಕಗೆ,
ಅಣ್ಣಗೆ, ತಮ್ಮಗೆ, ತಂಗಿಗೆಂದು
ಆಯ್ದು
ಆಯ್ದು ಕೊಂಡುತಂದು
ಎಲ್ಲರಿಗೆ
ಕೊಟ್ಟು ತೃಪ್ತಿಪಟ್ಟು ನಲಿದ
ಆ
ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ಸುರಿವ
ಮಳೆಯಲಿ ಎಲ್ಲ ಕೂಡಿ ಆಡಿ ನೆನೆದು
ಸಂಜೆಗತ್ತಲಾಗೆ ಎಲ್ಲ ಓಡೋಡಿ ಮನೆಯಸೇರಿ
ಅಗ್ಗಿಷ್ಟಿಕೆಯ
ಮುಂದೆ ಕುಳಿತು ಕೈಯಿಮೈಯಕಾಸಿ
ಸುಟ್ಹುರುಳಿಹಪ್ಪಳವ ಕೊಬ್ಬರಿ, ತುಪ್ಪದೊಡನೆ ಮೆದ್ದು
ಅಜ್ಜಿಮಾಡಿಟ್ಟ
ಹುರಿಗಾಳು ಹುರುಕಲು ಡಬ್ಬಹುಡುಕಿ
ಕಲ್ಲುಂಡೆ, ನಿಪ್ಪಟ್ಟು, ಕೋಡುಬಳೆ, ಚಕ್ಕಲಿಯ ಸವಿದ
ಸವಿಯಾದ
ಆ ದಿನಗಳನೆಂತು ಮರೆಯಲಿ ನಾನು
ಬಟ್ಟೆ, ಪಾತ್ರೆಬುಟ್ಟಿ ಹೊತ್ತು ಅಮ್ಮ ಕೆರೆಗೆ ಹೊರಡೆ
ಸೆರಗು ಹಿಡಿದು ನಾವು ಅವಳೊಡನೆ ಸಾಗುತ
ದಡದಿ ಕುಳಿತು ಕಲ್ಲುತೂರಿ ಸುಳಿಯ ಎಬ್ಬಿಸುತ
ಪುರಿಯನೆರಚಿ ಕಾದು ಮೀನಿನಾಟ ನೋಡುತ
ಕಾಲುಗಳನು ನೀರಿನಲ್ಲಿ ಇಳಿಬಿಟ್ಟು ಕೂರುತ
ಪಾದಗಳನು ಮೀನು ಸ್ವಚ್ಛಗೊಳಿಸೆ
ಪುಳಕಗೊಳ್ಳುತ
ಸೋರೆ ಬುರುಡೆ ಬಿಗಿದು ಬೆನ್ನಲಿ ನೀರಿಗಿಳಿಯುತ
ಆದಡದಿಂ ಈದಡಕೆ ಈದಡದಿಂ ಆದಡಕೀಜುತ
ಆನಂದಿಸಿದಾ ದಿನಗಳನೆಂತು ಮರೆಯಲಿ ನಾನು
ಊರಕೆರೆಯ
ಸ್ವಚ್ಛಗೊಳಿಸೆ ಊರಮಂದಿಯೆಲ್ಲ ಸೇರಿ
ಗುದ್ದಲಿ, ಹಾರೆ, ಸನಿಕೆ, ಸಲಾಕಿ, ಮಂಕರಿಗಳನೆ ತಂದು
ಕೆರೆಯ
ತಳವನೆಲ್ಲ ಅಗೆದು ಹೂಳನೆತ್ತಿ ದಡಕೆ ಹಾಕಲು
ಜಿಗಟು
ಜೇಡಿಮಣ್ಣು ನಾವು ಹೊತ್ತು ಮನೆಗೆ ತಂದು
ಮಕ್ಕಳೆಲ್ಲ
ಅದನು ತುಳಿದು ತುಳಿದು ಹದವಮಾಡೆ
ಒಂಟೊಲೆ, ಜೋಡೊಲೆ, ಕೋಡೊಲೆ, ಎತ್ತೊಲೆಯ
ಅಂದದಿಂ
ಮಣ್ಣಿನಲಿ ಅಮ್ಮ, ಅಜ್ಜಿ ಸಿದ್ಧಪಡಿಸಲು
ಅವರೊಡನೆ
ನಾವು ಮಕ್ಕಳೆಲ್ಲ ಕುಳಿತು ಮಣ್ಣಮಿದ್ದು
ಮನಬಂದಂತೆ
ಮಣ್ಣಿನಾಟಿಕೆಗಳ ಚೆಂದದಿಂದ ಮಾಡಿ
ಅವನೆ
ಬಳಸಿ ಅಡುಗೆಮಾಡಿ ಎಲ್ಲ ಹಂಚಿತಿಂದು ನಲಿದ
ಮಧುರ
ಕ್ಷಣದ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ ಬರಲಿ ಆ ಮಧುರ ಕ್ಷಣ
ನಾ ಮರೆಯಲಾಗದಾ ದಿನ.
ನಮ್ಮೂರ
ಹೈದರೆಲ್ಲರೊಂದಾಗಿ ಹಿರಿಯರೊಡಗೂಡಿ
ಪೌರಾಣಿಕ, ಐತಿಹಾಸಿಕ ನಾಟಕದ ತಾಲಿಮೂ ನಡೆಸಿ
ರಂಗುರಂಗಿನ
ಉಡುಗೆತೊಟ್ಟು ವಿವಿಧ ವೇಷ ಹಾಕಿ
ಶಸ್ತ್ರಾಸ್ತ್ರವ
ಬಿಡದೆ ಪಿಡಿದು ಪಾತ್ರಗಳ ಧರೆಗೆ ಇಳಿಸಿ
ರಂಗಮಂಟಪವನೇರಿ
ಕೋಳಿ ಕೂಗು ಕೇಳುವರೆಗೂ
ರಂಜಿಸಿದ
ಆ ದಿನಗಳನೆಂತು ಮರೆಯಲಿ ನಾನು
ನಮ್ಮೂರ ಜಾತ್ರೆಗೆ ಸುತ್ತಿಪ್ಪತ್ತು ಹಳ್ಳಿಯ ಜನಸೇರಿ
ನಮ್ಮೂರ ದೇಗುಲಕೆ ಸುಣ್ಣಬಣ್ಣ ಕಾರಣೆಯ ಮಾಡಿ
ನಮ್ಮೂರ ಬೀದಿಗಳ ತಳಿರು ತೋರಣದಿಂ ಅಲಂಕರಿಸಿ
ನಮ್ಮೂರ ತೇರುಮನೆಯ ತೆರೆದು ತೇರನಂದಗೊಳಿಸಿ
ನಮ್ಮೂರ ಸಿರಿ ದೇವಿಯನಿನ್ನಿಲದಂತಲಂಕರಿಸಿ ಸಿಂಗರಿಸಿ
ನಮ್ಮೂರ ದೇವಿಯೊಡನೆ ಸುತ್ತೂರ ದೇವಿಯರು ತೇರನೇರೆ
ನಮ್ಮೂರ ಸುತ್ತಿನವರೆಲ್ಲಾ ಕೂಡಿ ಉಘೇ ಉಘೇ ಎಂದು ಕೂಗಿ
ತೇರನೆಳೆದು ಸಂಭ್ರಮಿಸಿದ ಆ ದಿನಗಳನೆಂತು ಮರೆಯಲಿ ನಾನು
ನಾನೆಂದಿಗೂ
ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ
ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ
ಬರಲಿ ಆ ಮಧುರ ಕ್ಷಣ
ನಾ
ಮರೆಯಲಾಗದಾ ದಿನ.
ಧನುರ್ಮಾಸದಿ ಚಳಿಯ ಲೆಕ್ಕಿಸದೆ ನಾವೆದ್ದು ಮಿಂದು
ಸೂರ್ಯೋದಯದಿ ಗುಡಿಯ ಗಂಟೆಯ ನಾದ ಗೈದು
ಮಂಗಳಾರತಿ ತೀರ್ಥವ ಸ್ವೀಕರಿಸಿ ಪುನೀತರಾಗಿ
ಪ್ರಸಾದವೆಂದೆನುತ ಬಿಸಿ ಬಿಸಿ ಬೆಲ್ಲಾನ್ನವ ಮೆದ್ದ
ಆ ದಿನಗಳನೆಂತು ಮರೆಯಲಿ ನಾನು
ಮಾಘಮಾಸದಿ
ಅಜ್ಜಿಯೊಡನೆ ಬೇಗನೆದ್ದು
ಕೊರೆವ
ಚಳಿಯಲಿ ಕೆರೆಯಲಿ ಮಿಂದೆದ್ದು
ನಡುಗಿ
ನಡುಗಿ ಅಶ್ವತ್ಥವೃಕ್ಷವ ಸುತ್ತಿಬಂದು
ಅಜ್ಜಿಕೊಟ್ಟಾ
ಪ್ರಸಾದವ ತಿನ್ನುತಾನಂದಿಸಿದ
ಆ
ದಿನಗಳನೆಂತು ಮರೆಯಲಿ ನಾನು
ಯುಗಾದಿಯ ಹೋಳಿಗೆಯೂಟ
ರಾಮನವಮಿಯ ಪಾನಕ ಕೋಸಂಬರಿ
ಕೃಷ್ಣಾಷ್ಟಮಿಯ ಬಗೆಬಗೆಯ ತಿನಿಸು
ಗಣೇಶ ಚೌತಿಯ ಕರಿಗಡುಬು
ನಾಗರ ಪಂಚಮಿಯ ಕಾಯಿಕಡುಬು
ಸಂಕ್ರಾಂತಿಯ ಎಲ್ಲಬೆಲ್ಲ ಸಕ್ಕರೆ ಅಚ್ಚು
ಶಿವರಾತ್ರಿಯ ಕಲ್ಲುಂಡೆ ಕೋಡುಬಳೆ
ಮುನ್ನೂರ್ರ್ವತೈದು ದಿನವೂ ಹಬ್ಬಹರಿದಿನ
ನೇಮ ನಿಷ್ಠೆ ಪೂಜೆ ಪುನಸ್ಕಾರ ನೇವೇದ್ಯ
ನಮಗೆಲ್ಲ ಶುಚಿ ರುಚಿಯ ಊಟ ಉಪಚಾರ
ನಾನೆಂದಿಗೂ
ಮರೆಯಲಾಗದ ಆ ದಿನ ಇಂದಿಲ್ಲವಲ್ಲ
ನಾ
ಮರೆಯಲಾಗದಾ ದಿನ ಮತ್ತೊಮ್ಮೆ ಬರುವುದೇ?
ಬೇಗ
ಬರಲಿ ಆ ಮಧುರ ಕ್ಷಣ
ನಾ
ಮರೆಯಲಾಗದಾ ದಿನ.
No comments:
Post a Comment