ಜ್ಞಾನ ಉಳ್ಳವನೊಡಲು | ಭಾನುವಿನಂತಿಹುದು
ಜ್ಞಾನವಿಲ್ಲದವನ ಬರಿಯೊಡಲು_ಹಾಳೂರ
ಶ್ವಾನನಂತಿಹುದು ಸರ್ವಜ್ಞ||
ಒಂದೊಂದು ಹನಿಬಿದ್ದು | ನಿಂದಲ್ಲಿ ಮಡುವಕ್ಕು
ಸಂದ ಜ್ಞಾನಿಗಳ ಒಡನಾಡೆ_ಪರಬೊಮ್ಮ
ಮುಂದೆ ಬಂದಿಕ್ಕು ಸರ್ವಜ್ಞ||
ಅನ್ನವನ್ನಿಕ್ಕುವುದು | ನನ್ನಿಯ ನುಡಿವುದು
ತನ್ನಂತೆ ಪರರ ಬಗೆವುದು-ಸ್ವರ್ಗತಾ
ಬಿನ್ನಾಣವೆಲ್ಲ ಸರ್ವಜ್ಞ||
ಗುರುವ ನಿಂದಿಸ ಬೇಡ | ಪರವ ಹಳಿಯಲು ಬೇಡ
ಬರೆವರ ಕೂಡೆ ಹಗೆ ಬೇಡ_ಬಂಗಾರ
ದೆರವು ಬೇಡೆಂದ ಸರ್ವಜ್ಞ||
ಕೇಡು ಬಹ ಕಾಲಕ್ಕೆ |ಕೊಡುವವೆ ಬುದ್ಧಿಗಳು ?
ಕೋಡಗ ಲಂಕೆಯು ಸುಡುವಾಗ-ರಾವಣ-
ನಾಡ ಕಾಯ್ದಿಹನೆ ಸರ್ವಜ್ಞ||
ಪಾಪ ಹೋದಿತೆಂದು | ಸೋಪಾನ ಇಳಿವರು
ಪಾಪವ ಕಳೆದೆನೆಬೇಡ_ಆ ಪಾಪ
ಲೇಪದಂತಕ್ಕು ಸರ್ವಜ್ಞ||
ಕೊಟ್ಟು ಕುದಿಯಲು ಬೇಡ ಕೊಟ್ಟು ಮರುಗಲುಬೇಡ
ಕೊಟ್ಟು ನಾ ಕೆಟ್ಟೆನೆನಬೇಡ_ಶಿವನಲ್ಲಿ
ಕಟ್ಟಿಹುದು ಬುತ್ತಿ ಸರ್ವಜ್ಞ||
ವಿದ್ಯೆಕಲಿತಡೆ ಇಲ್ಲ | ಬುದ್ಧಿ ಕಲಿತಡೆ ಇಲ್ಲ |
ಉದ್ಯೋಗ ಮಾಡಿದಡೆ ಇಲ್ಲ, ಗುರುಮುಖವು
ಇದ್ದಲ್ಲದಿಲ್ಲ ಸರ್ವಜ್ಞ ||
ತಂತ್ರಿ ವಾದ್ಯವು ಲೇಸು | ಮಂತ್ರಿಯ ಗೆಳೆ ಲೇಸು
ಯಂತ್ರ ವಾಹಕನ ಕೃಪೆ ಲೇಸು_ಯೋಗಿಗೆ ಸ್ವ
ತಂತ್ರವೇ ಲೇಸು ಸರ್ವಜ್ಞ||
ಅನ್ನ ದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ_ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ||
ಮಾತಿಂದ ನಗೆನುಡಿಯು | ಮಾತಿಂದ ಕೊಲೆಹಗೆಯು
ಮಾತಿಂದೆ ಸರ್ವರಿಗೆಯುಪಚಾರ_ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ||
ಇದ್ದುದನು ಬಚ್ಚಿಟ್ಟು | ಹೊಯ್ದವನು ಬಯಸುವನು
ಇದ್ದುಣ್ಣದವನ ಬಾಯಲ್ಲಿ_ಮಣ್ಣಿನ
ಮಣ್ಣಿನ ಮುದ್ದೆ ಸರ್ವಜ್ಞ||
ಮಾತು ಮಾಣಿಕವೈಸೆ | ಮಾತು ತಾ ಸದರವೆ
ಮಾತು ತ್ರೈ ಜಗವನು ಪಡೆದಿಹುದು_ಲೋಕಕ್ಕೆ
ಮಾತೆ ತಾ ದೈವ ಸರ್ವಜ್ಞ||
ಸಿರಿ ಬಂದ ಕಾಲದಲಿ | ಕರದಲಿ ಧರ್ಮವು ಬೇಕು
ಸ್ಥಿರ ಚಿತ್ತ ಉಳ್ಳ ಮನಬೇಕು_ಇಹಪರಕೆ
ಅರಸು ತಾನಪ್ಪ ಸರ್ವಜ್ಞ||
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶದಿಂ-ಮುಕ್ತಿ
ಕಾಣಿಸುತಿಹುದು ಸರ್ವಜ್ಞ||
ಓರ್ವನಲ್ಲದೆ ಜಗಕೆ | ಇರ್ವನುಂಟೇ ಮತ್ತೆ
ಓರ್ವನಲ್ಲದೆ ಜಗಕೆ | ಇರ್ವನುಂಟೇ ಮತ್ತೆ
ಸರ್ವಜ್ಞ ನೊರ್ವ ಜಗಕೆಲ್ಲ್ಲ-ಕರ್ತಾರ
ನೊರ್ವನೆ ದೈವ ಸರ್ವಜ್ಞ
ಬಲ್ಲಿದ ನುಡಿದರೆ | ಬೆಲ್ಲವ ಮೆದ್ದಂತೆ
ಇಲ್ಲದ ಬಡವ ನುಡಿದರೆ_ಬಾಯೊಳಗೆ
ಜಳ್ಳು ಬಿದ್ದಂತೆ ಸರ್ವಜ್ಞ||
ಗುರುವಿಂದ ದೈವಗಳು | ಗುರುವಿಂದ ಬಂಧುಗಳು
ಗುರುವಿಂದಲವು ತಾ ಪುಣ್ಯ_ಲೋಕಕ್ಕೆ
ಗುರುವೀಗ ದೈವ ಸರ್ವಜ್ಞ,
ಗುರುವಚನ ಉಪದೇಶ | ಗುರುವಚನವೇ ಭಕ್ತಿ
ಗುರುವಚನ ಮೋಕ್ಷ ಪರಮಾರ್ಥ-ಇವು ತಾನು
ಪರಮಾರ್ಥ ಕಾಣ ಸರ್ವಜ್ಞ||
ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
ಕಡುರೋಷವೆಂಬ ವಿಷವೇರೆ_ಸಮತೆ ಗಾ
ರುಡಿಗನಂತಕ್ಕು ಸರ್ವಜ್ಞ||
ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸುವವರ ಗಮನಕ್ಕೆ
ಎಂಟನೇ ತರಗತಿಗೆ ಯಾವುದಾದರೂ ಹತ್ತು ಪದ್ಯಗಳು
ಒಂಬತ್ತನೇ ತರಗತಿಗೆ ಹದಿನೈದು ಪದ್ಯಗಳು
ಹತ್ತನೇ ತರಗತಿಗೆ ಎಲ್ಲಾ ಪದ್ಯಗಳನ್ನು ಕಂಠಪಾಠಮಾಡಬೇಕು.
No comments:
Post a Comment