Monday 10 August 2015

ಕಾರ್ಯಚತುರೆ ಎಸ್.ಕೆ.

ಕಲಾಭಿಮಾನಿ ಕಲಾಪ್ರೇಮಿ
ಸೃಜನಶೀಲೆ ಕ್ರಿಯಾಲೋಲೆ
ಸಮಚಿತ್ತ ಕಾರ್ಯಚತುರೆ
ಮಂದಗಮನೆ ಮಂದಹಾಸಿನಿ
ಮೃದು ಮಧುರ ಭಾಷಿಣಿ
ಮಮತಾಮಯಿ ಮಾತೃರೂಪಿಣಿ
ಮನೆಯಗೆದ್ದು ಮಾರು ಗೆದ್ದ ಮಾನಿನಿ
ಮಕ್ಕಳ ಮನವ ಗೆದ್ದ ಮನೋನ್ಮಣಿ
ಲಕ್ಷ್ಮಿ ಸರಸ್ವತಿಯರ ಕೃಪಾಕಟಾಕ್ಷಿಣಿ
ಬಹುಭಾಷಾ ವಿಶಾರದೆ
ಸಕಲಕಾರ್ಯಕಾರಿಣಿ
ಸ್ನೇಹಸ್ವರೂಪಿಣಿ
ಸರಳ ಸಜ್ಜನಿಕೆಯ ಸದ್ಗುಣಿ
ಸುವರ್ಣಪುತ್ಥಳಿಯಂತ ನಿಮಗೆ
ಸ್ವರ್ಣಕುಮಾರಿಯೆಂದು ಹೆಸರಿಟ್ಟವರು ಯಾರೋ
ಅದ ಸಾರ್ಥಕವಮಾಡಿರುವಿರಿ ನೀವು
ಹಿರಿಯ ಕಿರಿಯರೆನ್ನದೆ ಗೌರವನೀಡುತ್ತ
ವಂದಿಸುತವಂದಿತಳಾಗಿರುವಿರಿನೀವು
ತಾಳ್ಮೆಯಿಂದಲೆ ಎಲ್ಲಗೆಲ್ಲುತ
ಬಂದುದ ಹಸಾದವೆಂದುಣ್ಣುತ
ನಲವಿನಿಂದಲೇ ನಕ್ಕು ನಗಿಸುತ
ಎಲ್ಲರೊಂದಿಗೆ ಸಹಕರಿಸುತ
ಸಹಕಾರ ಸಹಾಬಾಳ್ವೆಯ ನಂಬುತ
ಸದ್ಗೃಹಿಣಿಯೆನಿಸಿ ಗೃಹಕೃತ್ಯವನೆಸಗುತ
ಸಮಚಿತ್ತದಿಂದ ಸಮಾಜಸೇವೆಗೈಯುತ
ಸಭೆ ಸಮಾರಂಭಗಳ ಏರ್ಪಡಿಸುತ
ಸ್ನೇಹದಿಂದ ಗೆಳಯರೊಡಗೂಡಿ ನಲಿಯುತ
ಕಾಲಹರಣವಾಗದಂತೆ ಕಾರ್ಯಗಳನು ರೂಪಿಸುತ
ತನು ಮನಗಳ ದಣಿಸದೆ ತನ್ನ ಕೆಲಸವನೆಸಗುತ
ಜನಮನವನರಿತು ಸಮಯೋಜಿತ ಸಲಹೆನೀಡುತ
ಕದಡಿದ ವಾತಾವರಣವ ತಿಳಿಗೊಳಿಸುತ
ನಿಧಾನವನೇ ಪ್ರಧಾನವಾಗಿಸುತ
ಪ್ರಧಾನವಾದುದಕೆ ಪ್ರಾಧಾನ್ಯವ ನೀಡುತ
ಸಮರ್ಪಕವಾಗಿ ಸಕಲಕಾರ್ಯವ ಸಕಾಲದಲಿ ಮಾಡುತ
ಮನ್ನಣೆಗೆ ಎಡೆಗೊಡದೆ ರಜತಮಹೋತ್ಸವದ ಹೊಸ್ತಿಲಲಿ
ಸ್ವಯಂ ನಿವೃತ್ತಿಯ ಪಡೆಯುತಿರುವಿರಿಂದು ನೀವು ಪ್ರವೃತ್ತಿಯಿಂದಲ್ಲ

ಭಗವಂತ ನಿಮ್ಮ ಅಭಿಷ್ಟಗಳನೆಲ್ಲಾ ಈಡೇರಿಸಲಿ

No comments:

Post a Comment