Monday 10 August 2015

ಮೂವರಲ್ಲಿ ಯಾರು ಉತ್ತಮ?


ಆಟ ಅಂದ್ರೆ ತುಂಬ ಇಷ್ಟವಿದ್ದ ಮುದ್ದಾದ ಮೂರು ಮಕ್ಕಳು ಚೆಂಡಾಟ ಆಡುತ್ತಾಯಿದ್ದರು. ಅವರು ಎಸೆದ ಚೆಂಡು ಕಣ್ಣಿಗೆ ಕಾಣದೆ ತುಂಬ ದೂರ ಹೋಗಿಬಿತ್ತು. ಪಾಪ ಎಸೆದವನ ಮುಖ ತುಂಬ ಚಿಕ್ಕದಾಯ್ತು. ಮೂರು ಮಕ್ಕಳು ಚೆಂಡನ್ನು ಹುಡುಕಿಕೊಂಡು ಹೊರಟರು. ಎಲ್ಲಾಕಡೆ ಹುಡುಕಿದರು. ಚೆಂಡು ಕಾಣಲೇ ಇಲ್ಲ. ಆದರೆ ದೂರದಿಂದ ಒಂದು ಅಶರೀರ ವಾಣಿ ಕೇಳಿಸಿತು. ಆ ಧ್ವನಿ ಕೇಳಿದ ಕಡೆಗೆ ಒಂದು ಮಗು ಓಡಿ ಹೋಯಿತು. ಅಲ್ಲಿ ಒಂದು ಗುಂಡಿಯಲ್ಲಿ ಒಂದು ದೀಪ ಹೊಳೆಯುತ್ತಾಯಿತ್ತ್ತು. ತನ್ನ ಹತ್ತಿರಕ್ಕೆ ಬಂದ ಮಗುವನ್ನು ನೋಡಿದ ಆ ದೀಪ ‘ನನ್ನನ್ನು ಯಾರೊ ಕಟ್ಟಿಹಾಕಿದ್ದಾರೆ. ನನ್ನನ್ನು ಬಿಡಿಸು’ ಎಂದಿತು. ಆ ಮಗುವು ಕರುಣೆಯಿಂದ ದೀಪದ ಕಟ್ಟನ್ನು ಬಿಚ್ಚಿತು. ಸಂತೋಷಗೊಂಡ ದೀಪ ‘ನಿನ್ನ ಉಪಕಾರವನ್ನು ನಾನೆಂದೂ ಮರೆಯುವುದಿಲ್ಲ. ನಿನಗೇನು ಬೇಕು ಕೇಳು, ಕೇಳಿದ್ದನ್ನು ಕೊಡುತ್ತೇನೆ ಎಂದಿತು.  
ಆ ಮಗು ಏನನ್ನು ಕೇಳಿರ ಬಹುದು ? 
ನನಗೆ ಆಟ ಆಡಲು ತುಂಬ ಆಟದ ಸಾಮಾನು ಬೇಕು. ಓದಲು ತುಂಬ ಪುಸ್ತಕ ಬೇಕು. ನಾನೂ ಶಾಲೆಗೆ ಹೋಗ ಬೇಕು, ಇವಕ್ಕೆಲ್ಲಾ ಹೆಚ್ಚು ಹಣ ಬೇಕು ಆದರೆ ನಾವು ತುಂಬಾ ಬಡವರು ಎಂದು ಆ ಮಗು ಹೇಳಿತು. ತಕ್ಷಣವೇ ಅವೆಲ್ಲವನ್ನೂ ನಾನು ನಿನಗೆ ಕೊಡುತ್ತೇನೆ ಎಂದು ದೀಪ ಹೇಳಿತು. 
ಅಷ್ಟು ಹೊತ್ತಿಗೆ ಮತ್ತೊಂದು ಮಗು ಅಲ್ಲಿಗೆ ಬಂತು. ಆ ದೀಪ ನಿನಗೆ ಏನು ಬೇಕು ಕೇಳು ನಾನು ನಿನಗೂ ಕೊಡುತ್ತೇನೆ ಎಂದಿತು. ಆಗ ಆ ಮಗು ದೇವಾಲಯಗಳ ಮುಂದೆ ಭಿಕ್ಷೆ ಬೇಡುತ್ತಾ ಇರುವವರಿಗೆಲ್ಲಾ ಸಹಾಯ ಮಾಡಬೇಕು ಎಂದು ನನಗೆ ಆಸೆ ಆದರೆ ನನ್ನ ಬಳಿ ಹಣವೇ ಇಲ್ಲಾ ಎಂದಿತು. ಯೋಚಿಸ ಬೇಡ ನಾನು ನಿನಗೆ ಸಹಾಯ ಮಾಡುತ್ತೇನೆ ಎಲ್ಲಾ ಭಿಕ್ಷುಕರಿಗೂ ನೀನು ಸಹಾಯ ಮಾಡು ಎಂದು ಆ ದೀಪ ಹೇಳಿತು.
ಇಷ್ಟೆಲ್ಲಾ ಆದರೂ ಮೂರನೆ ಮಗು ದೀಪದ ಬಳಿಗೆ ಬರಲೇ ಇಲ್ಲ. ಆಗ ದೀಪವೇ ಆ ಮಗುವನ್ನೂ ಕರೆಯುವಂತೆ ಹೇಳಿತು. ಗೆಳೆಯರ ಕರೆಯ ಮೇರೆಗೆ ಅಲ್ಲಿಗೆ ಬಂದ ಮೂರನೆಯ ಮಗುವನ್ನು ದೀಪ ನಿನಗೆ ಏನು ಬೇಕು ಕೇಳು ನಿನಗೂ ಕೊಡುತ್ತೇನೆ ಎಂದಿತು. 
ನನ್ನಲ್ಲಿ ಶಕ್ತಿಯಿದೆ, ಸಾಮರ್ಥ್ಯವಿದೆ ನನಗೆ ಬೇಕಾದುದನ್ನು ನಾನೇ ಗಳಿಸುತ್ತೇನೆ ನೀನು ಏನನ್ನೂ ನನಗೆ ಕೊಡುವುದು ಬೇಡ ಎಂದು ಆ ಮಗು ಉತ್ತರಿಸಿತು.
ಈ ಮೂವರು ಮಕ್ಕಳಲ್ಲಿ ಯಾರು ಉತ್ತಮರು?
ದೀಪದ ರೀತಿ ನಿಮಗೆ ಸಹಾಯ ಮಾಡಲು ಯಾರದರೂ ಮುಂದೆ ಬಂದರೆ ಮೂರು ಮಕ್ಕಳಲ್ಲಿ ಯಾವ ಮಗುವಿನ ರೀತಿ ಆಗಲು ನೀವು ಬಯಸುವಿರಿ?

No comments:

Post a Comment