Monday 10 August 2015

ಶುಭಾಶಯ

ನವ್ಯತೆ, ಭವ್ಯತೆಯ ಬಾಳಲಿ ಬಯಸುತ
ಸಾರ್ಥಕ ಜೀವನಕೆ ಮನವನನುಗೊಳಿಸುತ
ಸಲ್ಲದ ತುಡಿತ ಮಿಡಿತಗಳ ಹತ್ತಿಕ್ಕುತ
ತಾನಂಬಿದ ಸಿದ್ಧಾಂತಗಳಿಗೆ ಸದಾ ಬದ್ಧನಾಗುತ
ಕೋಪ ತಾಪಗಳನು ಕ್ಷಣಾರ್ಧದಲಿ ಶಮನಗೈಯುತ
ರಸಿಕತೆಯನೇ ತನ್ನ ಜೀವನ ಸೂತ್ರವಾಗಿಸುತ
ಪ್ರಾಸಬದ್ಧ ನುಡಿಗಳನು ಸಮಯೋಚಿತ ನುಡಿಯುತ
ನಗು ನಗುತಲಿ ತಾ ಎಲ್ಲರನು ನಗಿಸುತಿರುವಾತ
ಮಾತೃವಾತ್ಸಲ್ಯದಲಿ ಮಿಂದೆದ್ದು
ಮಾತೃವಾಕ್ಯ ಪರಿಪಾಲಕ ತಾನಾಗಿ
ಮಾತೃ ಸಾನ್ನಿಧ್ಯದ ಸವಿಯನುಂಡು
ಮಾತೃಸೇವೆಯಲಿ ಸಾರ್ಥಕ್ಯವ ಬಯಸಿ
ಮಾತೃವಿನ ಚರಣಾರವಿಂದದಲಿ ರಕ್ಷಿತನಾಗಿ
ಮಾತೃ ಸಂರಕ್ಷಣೆಯ ಕೊನೆತನಕ ತಾ ಮಾಡಿ
ಮಾತೃಪ್ರೇಮವ ಬಯಸಿ, ಮಾತೃಪ್ರೇಮವ ತಾ ಮೆರೆಸಿ
ಮಾತೃ ನೆನಪಿನಲೇ ಬಾಳುತಿರುವಾತ
ಶಾಂತಿ ಮೆಚ್ಚಿ ಕರಪಿಡಿದು
ಶಾಂತಿಚಿತ್ತವ ಕಲಕಿ ರಂಜಿಸಿ
ಶಾಂತಿಯನೆ ತನ್ನ ಸರ್ವಸ್ವವನಾಗಿಸಿ
ಶಾಂತಿ ವೃತ್ತಿಯನೆ ತನ್ನದಾಗಿಸಿ
ಶಾಂತಿಯೊಡಗೂಡಿ ಕಾರ್ಪಣ್ಯವ ನೀಚಿ
ಶಾಂತಿನಿಕೇತನವನಾಗಿಸಿ ಮನೆ ಮನವ
ಶಾಂತಿನಿಕೇತನದಿಂದಲೇ ಗೃಹಕೃತ್ಯವ ನಡೆಸಿ
ಶಾಂತಿನಿಕೇತನವ ವಿದ್ಯಾಆಗರ, ಸಾಗರವನಾಗಿಸಿ
ಶಾಂತಿನಿಕೇತನಕೆ ರಜತ ಮಹೋತ್ಸವದ ಸ್ಪರ್ಶವನಿತ್ತಾತ
ಕಾಯಕವೇ ಕೈಲಾಸವೆನುತ
ಕೈಗೆದೊರೆತುಜ್ಜುಗವ ನಿಷ್ಟೆಯಿಂದಪ್ಪಿ
ಕಿರಿದು ಹಿರಿದೆನದೆ ಜನಮನ ಮೆಚ್ಚುವಂತೆ ಮಾಡಿ
ಪ್ರಾಮಾಣಿಕ ಪ್ರಯತ್ನದಲಿ ಯಶವಿಹುದೆಂದು ತೋರಿ
ವೃತ್ತಿ ಪಾವಿತ್ರ್ಯತೆಗೆ ಮೆರಗನೀಡಿ ಆನಂದಿಸಿ
ಮಕ್ಕಳ ಸಾನ್ನಿಧ್ಯದಲಿ ಪುಳಕಿತರಾಗಿ
ನಗುನಗುತ ತಪ್ಪುಗಳ ತಿದ್ದಿ ತೀಡಿ
ಕ್ಲಿಷ್ಟ ವಿಚಾರಗಳ ಸುಲಭದಲಿ ಅರುಹಿ
ಅಕ್ಕರೆಯ, ಅಂಕಲ್, ಮಾಸ್ಟರ್ ತಾನಾದಾತ
ಅನ್ನಪೂರ್ಣೆಶ್ವರಿಯೇ ಮಹಾಪೂರ್ಣೆಯೆಂದು
ಅನ್ನದೈವದಮುಂದೆ ಇನ್ನು ದೇವರಿಲ್ಲವೆಂದು
ಅನ್ನವ ಮನದಣಿಯೆ ಪ್ರೀತಿಸುತ ಮನ್ನಿಸುತ
ಅನ್ನಕೆ ಒಂದಿನಿತು ಅಪಚಾರವಾಗದಂತೆ ಪೂಜಿಸುತ
ಅನ್ನ ಸಂತರ್ಪಣೆಯ ಶಾಂತಿಯೊಡಗೂಡಿ ಮಾಡುತಿರುವಾತ
ಶಾಂತಿಯ ವರಿಸಿ ಸಾಧನಾ ಪಥವನರಸಿ
ಸಾರ್ಥಕದಿ ಸಪ್ತತಿ ವಸಂತಗಳಕಳೆದು
ಮನದನ್ನೆಯೊಡಗೂಡಿ ಶಾಂತಿಯರಸಿಗೆ ನಾಗರಾಜರಸನಾಗಿ
ಅಕ್ಕರೆಯ ಅಣ್ಣ, ತಮ್ಮ, ಮೈದುನ, ಭಾವ, ಚಿಕ್ಕಪ್ಪ, ಮಾವ,
ಕಾಳು, ಸೇತುರಾಮ್, ನಾಗರಾಜ್, ಬೈಯ ನೆನುತ ಬಹುರೂಪಿಯಾಗಿ
ಗೌರವ ಆದರ ಮನ್ನಣೆಗೆ ಪಾತ್ರನಾಗಿಹ ಇವಗೆ
ಸಕಲೈಶ್ವರ್ಯ ಆರೋಗ್ಯಭಾಗ್ಯವ ಸುಖ ಶಾಂತಿಯ ಭಗವಂತ
ಅನುಗಾಲ ನೀಡಲೆನುತ ನಾವೆಲ್ಲರೊಂದಾಗಿ ಪ್ರಾರ್ಥಿಸುತ
ನಾಗರಾಜ್ರವರಿಗೆ ತುಂಬು ಮನದಿಂದ  ಶುಭಾಶಯವ ಕೋರೋಣ.

No comments:

Post a Comment