Monday 25 May 2015

ಕೃಷಿ ಮಹತ್ವ ಸಾರುವ ಸರ್ವಜ್ಞನ ವಚನಗಳು

ಕೋಟಿ ವಿದ್ಯೆಗಳಲ್ಲಿ | ಮೇಟಿ ವಿದ್ಯೆಯೇ ಮೇಲು |
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ |
ದಾಟವೇ ಕೆಡಕು | ಸರ್ವಜ್ಞ ||

ಎತ್ತೆಮ್ಮೆ ಹೂಡುವದು | ಉತ್ತೊಮ್ಮೆ ಹರಗುವದು |
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು
ಎತ್ತುಗೈಯುದ್ದ ಸರ್ವಜ್ಞ ||

ಉತ್ತೊಮ್ಮೆ ಹರಗದಲೆ | ಬಿತ್ತೊಮ್ಮೆ ನೋಡದಲೆ|
ಹೊತ್ತೇರಿ ಹೊಲಕೆ ಹೋಗಿಹರೆ ಅವ ತನ್ನ |
ನೆತ್ತರವ ಸುಡುವ ಸರ್ವಜ್ಞ ||

ನಲ್ಲೆತ್ತು ಬಂಡಿ ಬಲ | ವಿಲ್ಲದಾ ಆರಂಭ |
ಕಲ್ಲು ಕಳೆಗಳನು ಬಿಟ್ಟವನು ಹೊಲದೊಳಗೆ |
ಹುಲ್ಲನೇ ಬೆಳೆವ ಸರ್ವಜ್ಞ ||

ಹರಗದ ಎತ್ತಾಗಿ | ಬರಡದ ಹಯನಾಗಿ |
ಹರಟೆ ಹೊಡೆಯುವಾ ಮಗನಾಗಿ ಹೊಲದಲ್ಲಿ |
ಕರಡವೇ ಬೆಳಗು ಸರ್ವಜ್ಞ ||

ದಂಡು ಇಲ್ಲದ ಅರಸು | ಕುಂಡವಿಲ್ಲದ ಹೋಮ |
ಬಂಡಿಯಿಲ್ಲದನ ಬೇಸಾಯ ತಲೆಹೋದ |
ಮುಡದಂತಿಕ್ಕು ಸರ್ವಜ್ಞ ||

ಹದ ಬೆದೆಯಲಾರಂಭ | ಕದನಲಿ ಕೂರಂಬ |
ನದಿ ಹಾಯುವಲಿ ಹರಗೋಲ ಮರೆತು |
ವಿಧಿಯ ಬೈದರೇನು ಫಲ ಸರ್ವಜ್ಞ ||

ಬೆಕ್ಕು ಮನೆಯೊಳು ಲೇಸು | ಮುಕ್ಕು ಕಲ್ಲಿಗೆ ಲೇಸು |
ನಕ್ಕು ನಗಿಸುವಾ ನುಡಿಲೇಸು ಊರಿಂಗೆ |
ಒಕ್ಕಲಿಗ ಲೇಸು ಸರ್ವಜ್ಞ ||

ತರುಕರವು ಇರದೂರು | ನರಕಭಾಜನಮಕ್ಕು |
ತರುಕರುಂಟಾದರುಣಲುಂಟುಜಗವೆಲ್ಲ |
ತರುಕರವೇ ದೈವ ಸರ್ವಜ್ಞ ||

No comments:

Post a Comment