Tuesday 12 May 2015

ಭಾಷಾಬೋಧಕರಿಗೆ ವರವಾದ ಬಹುಮಾಧ್ಯಮ ತಂತ್ರ ಜ್ಞಾನ

 ಭಾಷೆಸಂವಹನ ಮಾಧ್ಯಮವಾಗಿರುವಂತೆ ಭಾವನಾವಾಹಕವೂ ಆಗಿದೆ. ಭಾಷೆಯಿಲ್ಲದ ಪ್ರಪಂಚವನ್ನು ಊಹಿಸಲೂ ಸಾಧ್ಯವಿಲ್ಲ. ಭಾಷೆಯು ಭಾವನೆ, ಆಲೋಚನೆ, ಕಲ್ಪನೆ, ಅನಿಸಿಕೆ ಮತ್ತು ಅನುಭವಗಳನ್ನು ಅಭಿವ್ಯಕ್ತಪಡಿಸುವ ಸಾಧನ. ವ್ಯಕ್ತಿತ್ವವಿಕಾಸನಕ್ಕೆ ಪೂರಕವಾಗಿರುವ ಭಾಷೆಯು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ವೈಜ್ಞಾನಿಕ ಹಾಗೂ ಭಾವನಾತ್ಮಕ ವಿಕಾಸಕ್ಕೆ ಸಾಧನವಾಗಿದೆ, ಎಲ್ಲಾ ಕ್ಷೇತ್ರಗಳಿಗೂ ಭಾಷೆ ಅವಶ್ಯಕ. ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವ ಭಾಷೆಯನ್ನು ಹುಟ್ಟಿದ ಪರಿಸರದಲ್ಲೇ ಮಗು ಕಲಿತಿರುತ್ತದೆಯಾದರೂ, ಓದುವ, ಬರೆಯುವ, ಸಮಾಲೋಚಿಸುವ, ಗ್ರಹಿಸುವ, ಅಭಿವ್ಯಕ್ತಪಡಿಸುವ ಕೌಶಲಗಳನ್ನು ಬೆಳೆಸಿ ಸಾಕ್ಷರರನ್ನಾಗಿಮಾಡುವುದು ಪ್ರಾಥಮಿಕ ಶಿಕ್ಷಕರ ಹೆಗಲಮೇಲಿದ್ದರೆ. ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಿ, ಸಾಹಿತ್ಯಾಸಕ್ತಿಯನ್ನು ಬೆಳೆಸಿ ಉನ್ನತ ಶಿಕ್ಷಣ ಪಡೆಯಲು ಸಮರ್ಥರನ್ನಾಗಿ ಮಾಡುವ ಜವಾಬ್ದಾರಿ ಪ್ರೌಢಶಾಲಾ ಶಿಕ್ಷಕರದ್ದಾಗಿದೆ. 
 ಶಾಲಾ ಶಿಕ್ಷಣದ ಕೊನೆಯ ಹಂತಕ್ಕೆ ಬಂದರೂ ತಪ್ಪಿಲ್ಲದೆ ಓದುವ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸಾಹಿತ್ಯ ಪ್ರಕಾರಗಳನ್ನು ಪರಿಚಯಿಸಿ, ಸಾಹಿತ್ಯಾಸಕ್ತಿಯನ್ನು ಬೆಳೆಸುವುದು ದೂರದ ವಿಷಯವಾಗುತ್ತಿದೆ. ಹೀಗಾಗಿ ಇಂದಿನ ದಿನಗಳಲ್ಲಿ ಭಾಷಾಬೋಧನೆ ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಈ ಸವಾಲನ್ನು ಸಮರ್ಪಕವಾಗಿ ಸ್ವೀಕರಿಸಲು ಬಹುಮಾಧ್ಯಮ ತಂತ್ರಜ್ಞಾನ ಭಾಷಾಶಿಕ್ಷಕರಿಗೆ ವರದಾನವಾಗಿದೆ.  
 ಭಾಷೆ ಒಂದು ವ್ಯವಸ್ಥೆ; ಕೌಶಲ ಹಾಗೂ ಕಲೆ. ವ್ಯಾಪಕವಾದ ವ್ಯವಸ್ಥಿತ ಪರಿಕಲ್ಪನೆ. ಜೀವಂತ ಆಲೋಚನಾಕ್ರಿಯೆ. ಹಲವು ಮೂಲಗಳಿಂದ ಜ್ಞಾನವನ್ನು ಪಡೆಯುವ ಸಾಧನ ಹಾಗೂ ಜ್ಞಾನವನ್ನು ಉತ್ಪಾದಿಸುವ ಸಾಧನ. ಅನುಕರಣೆಯಿಂದ ಭಾಷೆಯನ್ನು ಕಲಿಯಬಹುದಾದರೂ, ಸೂಕ್ತ ತರಬೇತಿ, ಶಾಸ್ತ್ರೀಯ ಅಭ್ಯಾಸ ಮತ್ತು ಸರಿಯಾದ ಬಳಕೆಯಿಂದ ಮಾತ್ರ ಭಾಷಾ ಸಾಮರ್ಥ್ಯವನ್ನು ಬೆಳೆಸಲು ಸಾಧ್ಯ. ಇದಕ್ಕೆ ಬಹುಮಾಧ್ಯಮ ತಂತ್ರಜ್ಞಾನ ಬಳಕೆ ಪೂರಕವಾಗಿದೆ.
 ಭಾಷಾ ಬೋಧನೆಯ ಪ್ರಧಾನ ಗುರಿ ಮೌಖಿಕ ಮತ್ತು ಲಿಖಿತ ಸಾಮರ್ಥ್ಯವನ್ನು ಬೆಳೆಸುವುದು. ಈ ಗುರಿಯನ್ನು ಸಾಧಿಸಲು ಭಾಷಾ ಬೋಧಕರು ವಿದ್ಯಾರ್ಥಿಗಳಿಗೆ ಕಲಿಸಬೇಕಾದ ಅರ್ಥಾತ್ ವಿದ್ಯಾರ್ಥಿಗಳು ಕಲಿಯಲೇ ಬೇಕಾದ ಪ್ರಧಾನವಾದ ನಾಲ್ಕು ಕೌಶಲಗಳೆಂದರೆ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು. ಈ ನಾಲ್ಕೂ ಕೌಶಲಗಳ ಪರಿಣಾಮಕಾರಿ ಬೆಳವಣಿಗೆಗೆ ಬಹುಮಾಧ್ಯಮ ತಂತ್ರಜ್ಞಾನ ಸಹಾಯಕವಾಗಿದೆ.
 ಬಹುಮಾಧ್ಯಮ ತಂತ್ರಜ್ಞಾನವನ್ನು ಭಾಷಾ ಬೋಧನೆಯಲ್ಲಿ ಬಳಸುವುದರಿಂದ ತಾರ್ಕಿಕ ಶಕ್ತಿ ಹೆಚ್ಚುತ್ತದೆ. ಕ್ರಿಯಾಶೀಲತೆ ಬೆಳೆಯುತ್ತದೆ. ಸ್ವಯಂ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚುತ್ತದೆ. ಕಲ್ಪನಾ ಶಕ್ತಿ ಹರಳುಗಟ್ಟುತ್ತದೆ. ಮಾನಸಿಕ ವಿಕಾಸಕ್ಕೆ ರಸಭಾವಗಳ ಬೆಳವಣಿಗೆಗೆ ಸಹಾಯಕವಾಗುತ್ತದೆ. ರಸಾಸ್ವಾದನಾ ಗುಣ ಮತ್ತು ರಚನಾತ್ಮಕ ಶಕ್ತಿ ಬೆಳೆಯುತ್ತದೆ. ಬೋಧನಾಕಾರ್ಯ ಸುಗಮವಾಗುತ್ತದೆ. ಕಲಾತ್ಮಕವಾದ ನಿರ್ದಿಷ್ಟವಾದ ಕೌಶಲ್ಯಪೂರ್ಣವಾದ ಭಾಷೆಯನ್ನು ಬಳಸುವ ಸಾಮರ್ಥ್ಯವನ್ನು ಬೆಳೆಸುತ್ತದೆ.
 ಬಹುಮಾಧ್ಯಮದ ಸೂಕ್ತ ಬಳಕೆಯ ಫಲವಾಗಿ ಬೌದ್ಧಿಕ ವಿಕಾಸಕ್ಕೆ ಉತ್ಕೃಷ್ಟವಾದ ಮನೋಭೂಮಿಕೆ ನಿರ್ಮಿತವಾಗಲು ಸಹಾಯಕವಾಗುತ್ತದೆ.
 ಬಹುಮಾಧ್ಯಮ ತಂತ್ರಜ್ಞಾನದ ಸೂಕ್ತ ಬಳಕೆಯಿಂದ ಪ್ರಧಾನ ಕೌಶಲಗಳಾದ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದನ್ನು ಸುಲಭವಾಗಿ ಕಲಿಸಬಹುದು.
ಆಲಿಸುವುದು :
ಉದ್ದೇಶಪೂರ್ವಕವಾಗಿ ಪ್ರಚೋದನೆಗೊಳಿಸಿ ಆಲೈಸುವಂತೆಮಾಡಲು ಸಹಾಯಕವಾಗುತ್ತದೆ. ಇದರಿಂದ ಏಕಾಗ್ರತೆಯಿಂದ ಕೇಳುವಂತೆಯೂ, ಧ್ವನಿಗಳನ್ನು, ಧ್ವನಿಯ ಏರಿಳಿಗಳನ್ನು ಸ್ಪಷ್ಟವಾಗಿ ಗುರುತಿಸುವಂತೆಯೂ, ಧ್ವನಿಯ ವ್ಯತ್ಯಾಸಗಳಿಂದಾಗುವ ಅರ್ಥವ್ಯತ್ಯಾಸಗಳನ್ನು ಗುರುತಿಸುವಂತೆಯೂ, ವಿಷಯಗಳನ್ನು ಆಲೈಸಿ ಆಸ್ವಾದಿಸಿ ಪ್ರತಿಕ್ರಿಯಿಸುವಂತೆಯೂ, ವಿಷಯಗಳ ಸಾರವನ್ನು ಸಂಗ್ರಹಿಸಿ ಅರ್ಥಗ್ರಹಿಸುವಂತೆಯೂ, ಮುಖ್ಯಾಂಶಗಳನ್ನು ಗುರುತಿಸುವಂತೆಯೂ, ಸಾಮಾನ್ಯೀಕರಿಸಿಕೊಳ್ಳುವಂತೆಯೂ ಮಾಡಬಹುದು.  
ಮಾತುಗಾರಿಕೆ:
ಸುಸ್ಪಷ್ಟವಾಗಿ, ಅರ್ಥಪೂರ್ಣವಾಗಿ ಧ್ವನಿಗಳನ್ನು, ಪದಗಳನ್ನು ಮತ್ತು ವಾಕ್ಯಗಳನ್ನು ಉಚ್ಚರಿಸುವಂತೆಯೂ, ಅರ್ಥಕ್ಕೆ ಅನುಗುಣವಾಗಿ ಧ್ವನಿಯ ಏರಿಳಿತಗಳನ್ನು ಮಾಡುವಂತೆಯೂ, ಅರ್ಥ ಮತ್ತು ಭಾವಪೂರ್ಣವಾಗಿ ಮಾತನಾಡುವಂತೆಯೂ, ವಿಷಯಗಳನ್ನು ಕ್ರಮಬದ್ಧವಾಗಿ ಹೇಳುವಂತೆಯೂ, ಸರಳವಾಗಿ, ನೇರವಾಗಿ ಮತ್ತು ನಿರರ್ಗಳವಾಗಿ, ಸ್ವರಾಘಾತಗಳೊಂದಿಗೆ ಮಾತನಾಡುವಂತೆಯೂ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳನ್ನು ಸ್ಪಷ್ಟವಾಗಿ ಬಳಸುವಂತೆಯೂ ಕಲಿಸಲು ಸಹಾಯವಾಗುತ್ತದೆ. 
ಓದುಗಾರಿಕೆ:
ವಿಷಯಗಳನ್ನು ಅರ್ಥಮಾಡಿಕೊಂಡು ಸ್ಪಷ್ಟವಾದ ಉಚ್ಚಾರದೊಂದಿಗೆ, ಲೇಖನ ಚಿಹ್ನೆಗಳನ್ನು ಅಳವಡಿಸಿಕೊಂಡು, ನಿಲುಗಡೆ ತಾಣಗಳನ್ನು ಅನುಸರಿಸಿ, ಧ್ವನಿ ಬದಲಿಸಿ, ನಿರರ್ಗಳವಾಗಿ ಓದಿ ಸನ್ನಿವೇಶದ ಮಹತ್ವವನ್ನು ಹೆಚ್ಚಿಸಿ, ಶ್ರೋತೃಗಳಿಗೆ ಅರ್ಥವಾಗುವಂತೆ ಸ್ವರಾಘಾತಗಳೊಂದಿಗೆ ಓದುವುದನ್ನು ಕಲಿಸ ಬಹುದು.
ಬರವಣಿಗೆ:
ಕನ್ನಡ ಅಕ್ಷರಗಳ ಸ್ವರೂಪಕ್ಕನುಗುಣವಾದ ಸ್ಫುಟವಾದ, ಅಂದವಾದ ಬರೆಹವನ್ನೂ, ಅಕ್ಷರಗಳ ರೂಪ ಮತ್ತು ರಚನಾಕ್ರಮದ ಜ್ಞಾನವನ್ನೂ, ಕಾಗುಣಿತದ ರೇಖಾವಿನ್ಯಾಸಗಳನ್ನೂ ಕ್ರಮವಾದ ಜೋಡಣೆಯನ್ನೂ, ಬರವಣಿಗೆಯಲ್ಲಿ ಸಮತೆಯನ್ನೂ, ನಿರಂತರತೆಯನ್ನೂ, ಅಂದವಾಗಿ ಒಂದೇ ಪ್ರಮಾಣದಲ್ಲಿ ಬರೆಯುವುದನ್ನು ಕಲಿಸಲು ಸಹಾಯಕವಾಗುತ್ತದೆ.
ಅಕ್ಷರಗಳ ಸ್ವರೂಪವನ್ನು ಮನದಟ್ಟಾಗುವಂತೆ ಸ್ಪಷ್ಟಪಡಿಸ ಬಹುದು.


ಕಾಗುಣಿತದ ಪರಿಕಲ್ಪನೆಯನ್ನು ಮೂಡಿಸಲು ಸಹಾಯವಾಗುತ್ತದೆ,



ಬಹುಮಾಧ್ಯಮ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸುವುದರಿಂದ ಕಲ್ಪನಾ ಸಾಮರ್ಥ್ಯ ಅಧಿಕಗೊಳ್ಳವುದರ ಜೊತೆಗೆ ಅಮೂರ್ತ ಭಾವನೆಗಳಿಗೆ ಮೂರ್ತರೂಪ ಕೊಡಲು ಸಾಧ್ಯವಾಗುತ್ತದೆ. ಗುಂಪಿನ ಚಟುವಟಿಕೆಗಳಿಗೆ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಭಾವನೆಗಳ ವಿನಿಮಯಕ್ಕೆ ಹೆಚ್ಚು ಅವಕಾಶ ಒದಗಿಸುತ್ತದೆ. ಇದರಿಂದಾಗಿ ಸಹನೆ, ಸಹಕಾರ ಗುಣ, ನಿರೂಪಣಾ ಸಾಮರ್ಥ್ಯವನ್ನು ಮತ್ತು ಸನ್ನಿವೇಶವನ್ನು ಅರ್ಥೈಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಹೊಸ ಪ್ರತಿಭೆಗಳನ್ನು ಗುರುತಿಸಲು ಸಹಾಯವಾಗುತ್ತದೆ. ಬೋಧನೆಯ ಏಕತಾನತೆಯನ್ನು ತಪ್ಪಿಸಿ ಮನಸ್ಸನ್ನು ಹರ್ಷಗೊಳಿಸುತ್ತದೆ.
ಒಟ್ಟಾರೆ ಬಹುಮಾಧ್ಯಮ ತಂತ್ರಜ್ಞಾನದ ಬಳಕೆಯಿಂದ ಭಾಷಾ ಬೋಧನೆ ಪರಿಣಾಮಕಾರಿಯಾಗಿ, ಕಲಿಕೆಯ ಫಲ ಉತ್ತಮವಾಗುತ್ತದೆ.





No comments:

Post a Comment