Friday 31 July 2015

ಶ್ರದ್ಧಾಂಜಲಿ

ಕೃಷ್ಣನ ಕೈಹಿಡಿದ ಮುದ್ದು ಭಾಮ
ಕೃಷ್ಣನ ಮೋಹದ ಮಡದಿ ಭಾಮ
ಕೃಷ್ಣನ ನಲ್ಮೆಯ ಒಲವಿನ ಭಾಮ
ಕೃಷ್ಣನ ಮನಗೆದ್ದ ಜಾಣೆ ಭಾಮ
ಕೃಷ್ಣನ ಆಣತಿಯಂತೆ ಬಾಳಿದ ಭಾಮ
ಕೃಷ್ಣನ ವಂಶಿಯ ಕರೆಗೆ ಓಗೊಟ್ಟು
ಕೃಷ್ಣನ ಹಿಂಬಾಲಿಸಿದ ಸತ್ಯಭಾಮ
‘ಅಮ್ಮ’ನ ವಾತ್ಸಲ್ಯವ
‘ಅಣ್ಣ’ನ ಮಮತೆಯ
‘ಅತ್ತೆ’ಯ ಮಾರ್ಗದರ್ಶನವ
ಮೈಗೂಡಿಸಿಕೊಂಡು
ಅಮ್ಮ+ಅಣ್ಣ+ಅತ್ತೆಯಾದ
ಸವಿ ನುಡಿಯ ‘ಅಮ್ಮಣ್ಣತ್ತೆ’
ಎಲ್ಲರ ನಕ್ಕು ನಗಿಸಿ
ಸವಿನೆನಪ ಉಳಿಸಿ
ನೋವ ನುಂಗಿ ನಲಿದು
ಬದುಕ ಸಾಗಿಸಿದಾಕೆ
ಸಂಸ್ಕಾರವಂತ ಮಕ್ಕಳ ಸಮಾಜಕ್ಕಿತ್ತು
ದೇವಿಯ ನಂಬಿ ಅವಳನುಗ್ರಹವ ಪಡೆದು
ಭಕ್ತಿ ಭಾವ ಗಾನದಿಂದ ನಿತ್ಯ ಪೂಜೆಗೈದು
ಅಕ್ಕರೆಯಿಂದಲೇ ಎಲ್ಲರ ಹೆಸರಿಟ್ಟು ಕರೆದು
ಸದಾ ಸಮಾಧಾನ ಸಂತೃಪ್ತಿಯಿಂದಲೇ
ಬಾಳ ಹಾದಿಯ ಮುಗಿಸಿದ ಸಿರಿವಂತೆ ಈಕೆ
ಮಕ್ಕಳಿಗೆಲ್ಲಾ ಮಲ್ಲಿಗೆಮೊಗ್ಗಿನಾ ಜಡೆ
ತಿಂಡಿಪೋತರಿಗೆ ಚಕ್ಕುಲಿ ಕೋಡುಬಳೆ
ಮಿಠಾಯಿ....ಸವಿಸವಿಯ ತಿಂಡಿ ತಿನಿಸು
ಅತಿಥಿ ಅಭ್ಯಾಗತರಿಗೆ ಆದರದ ಆತಿಥ್ಯ
ಇದುವೇ ಸತ್ಯಭಾಮಳ ಜೀವನ ತಥ್ಯ
ಮದುಮಂಟಪದಿ ಕೃಷ್ಣಪ್ಪನ ಅಂತರ ಪಟ
ಮದುಮಗಳಿಗೆ ಅಮ್ಮಣ್ಣನ ಗೌರಿ ಪೂಜೆ
ಅವರೀರ್ವರ ತುಂಬಮನದ ಆಶೀರ್ವಾದ
ಅದೆಷ್ಟೋ ದಂಪತಿಗಳಿಗೆ ನೀಡಿದೆ ಮುದ
ಆ ಪುಣ್ಯದ ಫಲದಿಂ ಕೃಷ್ಣನಾತ್ಮದಲಿ
ಸತ್ಯ ಭಾಮೆಯ ಆತ್ಮ ಲೀನವಾಗಲಿ
ಅವರಾತ್ಮಕೆ ಚಿರಶಾಂತಿ ದೊರಕಲಿ
ಅವರಾಶೀರ್ವಾದ ನಮ್ಮೆಲ್ಲರಿಗಿರಲಿ.
                                              -ಪದ್ಮ
***********************

No comments:

Post a Comment