Sunday 12 July 2015

ಕನ್ನಡ ನಾಡಿನ ಹಿರಿಮೆ.

 ಸತ್ಯವಿಠಲರ ಕಾವ್ಯಸಂಗಮ ಪದ್ಯದ ವಿಡಿಯೊ
ರಾಷ್ಟ್ರಕವಿ ಕುವೆಂಪುರವರು ಸಂಬೋಧಿಸಿರುವಂತೆ  ಭಾರತಜನನಿಯ ತನುಜಾತೆ ಯಾದ ಕನ್ನಡಮ್ಮನಿಗೆ ವಿಶಿಷ್ಟವಾದ ಸಾಂಸ್ಕೃತಿಕ ಮಹತ್ವವಿದೆ. ನಾಡು ನುಡಿಯ ಪರಂಪರೆಯಿದೆ. ಸಂಗೀತ ಸಾಹಿತ್ಯ, ಕಲೆಗಳ ವೈಭವವಿದೆ. ಎಲ್ಲರ ಮನಸ್ಸನ್ನು ಸೂರೆಗೊಳ್ಳುವ ನಯನ ಮನೋಹರವಾದ ನೈಸರ್ಗಿಕ ಪ್ರದೇಶಗಳೂ, ಗತವೈಭವವನ್ನು ಬಿಂಬಿಸುವ ಐತಿಹಾಸಿಕ ಸ್ಥಳಗಳೂ ಕನ್ನಡತಾಯಿಯ ಸೊಬಗನ್ನು ಇಮ್ಮಡಿಗೊಳಿಸುವಂತಿವೆ.
ಶ್ರೀಸಾಮಾನ್ಯರು, ರಾಜ ಮಹಾರಾಜರು, ಕವಿಗಳು, ಸಾಧು ಸಂತರು, ಆಚಾರ್ಯವರ್ಯರು, ಗುರುವರೇಣ್ಯರು, ಚಿಂತಕರು, ಕಲಾವಿಧರು, ಶಿಲ್ಪಿಗಳು, ಗಾಯಕರು ಹೀಗೆ ಅನೇಕರು ಅಧ್ಯಾತ್ಮ, ಸಂಗೀತ, ಸಾಹಿತ್ಯ, ಕಲೆ, ವಾಸ್ತುಶಿಲ್ಪವನ್ನೊಳಗೊಂಡಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವವಾದ ಕೊಡುಗೆಗಳನ್ನು ನೀಡಿದ್ದಾರೆ. ಸಾಂಸ್ಕೃತಿಕವಾಗಿ ಬೆಳೆಸಿದ್ದಾರೆ. ಇವೆಲ್ಲವೂ ಕನ್ನಡನಾಡಿಗೆ ಅನನ್ಯತೆಯನ್ನು ತಂದುಕೊಟ್ಟಿದೆ. ಈ ಅನನ್ಯತೆಯೇ ಕನ್ನಡದ ಮೊಟ್ಟಮೊದಲ ಕೃತಿಯ ಕವಿರಾಜಮಾರ್ಗಕಾರರಿಂದ ಇಂದಿನವರೆಗೂ ಎಲ್ಲ ಕವಿಗಳ ಮನಸ್ಸನ್ನು ಸೂರೆಗೊಂಡಿದೆ. ಆದಿಯಿಂದ ಇಂದಿನವರೆಗಿನ ಬಹುತೇಕ ಕೃತಿಗಳಲ್ಲಿ ಅನುಪಮವಾದ ಸ್ಥಾನವನ್ನು ಪಡೆದಿದೆ. ಕವಿಗಳು ಕನ್ನಡಮ್ಮನನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ಅವಳ ವೈಭವವನ್ನು ಕೊಂಡಾಡಿದ್ದಾರೆ.
          ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯನ್ನು ಅಭ್ಯಸಿಸುವುದರಿಂದ ಭವಿಷ್ಯ ಉಜ್ವಲವಾಗುತ್ತದೆ.  ಕನ್ನಡ ತಾಯಿಯ ಭವ್ಯತೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಎಲ್ಲಾ ಹಿರಿಯರ ಕರ್ತವ್ಯವೂ ಆಗಿದೆ. ಶ್ರವಣ ಮಾಧ್ಯಮಕ್ಕಿಂತಲೂ ದೃಶ್ಯಮಾಧ್ಯಮ ಹೆಚ್ಚು ಪರಿಣಾಮಕಾರಿಯಾದುದು. ದೃಕ್ ಶ್ರವಣಮಾಧ್ಯಗಳೆರಡನ್ನೂ ಬಳಸಿ ಪರಿಚಯಿಸುವುದು ಇನ್ನೂ ಹೆಚ್ಚು ಪರಿಣಾಮವನ್ನುಂಟು ಮಾಡುತ್ತದೆ.
          ‘ಸತ್ಯ ವಿಠಲ’ ಅಂಕಿತದಿಂದ ಪರಿಚಿತರಾಗಿರುವ ಬಿ. ವಿ. ಸತ್ಯನಾರಾಯಣ ರಾವ್ ಅವರ ‘ಸಂಪೂರ್ಣ ದೇವಿಮಹಾತ್ಮೆ’ಯ ಪ್ರಾರಂಭದಲ್ಲಿ ಬರುವ ಕನ್ನಡ ನಾಡಿನ ಸಂಸ್ಕೃತಿ, ಪ್ರಕೃತಿ ಸಂಪತ್ತು, ಐತಿಹಾಸಿಕ ದಾಖಲೆ, ಕನ್ನಡದ ಹಿರಿಮೆ ಗರಿಮೆಯ ನುಡಿಗಳನ್ನು ಬಹುಮಾಧ್ಯಮ ತಂತ್ರಜ್ಞಾನದ ಮೂಲಕ ಚಟುವಟಿಕೆ ಆಧಾರಿತವಾಗಿ ಪರಿಚಯಿಸಲು ಈ ಪ್ರಯತ್ನಮಾಡಲಾಗಿದೆ. ವಿವಿರಣೆಗಾಗಿ ಈ ಲಿಂಕನ್ನು ನೋಡಿ.


ಕನ್ನಡವು ಹಿರಿದೊಂದು ಸಂಸ್ಕೃತಿ
ಕನ್ನಡವು ಹಿರಿದೊಂದು ಜ್ಞಾನವು
ಕನ್ನಡದ ಕಸ್ತೂರಿ ಸೌರಭ ಲೋಕತುಂಬಿಹುದು|
ಕನ್ನಡದ ನುಡಿಕಿವಿಗೆ ಮಧುರವು
ಕನ್ನಡದ ನುಡಿ ಮಧುರ ಜೇನುವು
ಕನ್ನಡದ ಸಿರಿ ಸೊಬಗ ವರ್ಣಿಪರಾರು ಲೋಕದಲಿ |1|

ಅಲ್ಲಿಗಲ್ಲಿಗೆ ಕಮಲ ಕೊಳಗಳು
ಅಲ್ಲಿಗಲ್ಲಿಗೆ ಹರಿವ ತೊರೆಗಳು
ಅಲ್ಲಿಗಲ್ಲಿಗೆ ಮೆರೆವ ಸುಂದರ ಭವ್ಯ ಕಲ್ಯಾಣಿ|
ಅಲ್ಲಿಗಲ್ಲಿಗೆ ಮೆರೆವ ತಪವನ
ಅಲ್ಲಿಗಲ್ಲಿಗೆ ಪುಣ್ಯ ನದಿಗಳು
ಅಲ್ಲಿಗಲ್ಲಿಗೆ ಆತ್ಮದರ್ಶಿತ ದಿವ್ಯ ಗುರುವರರು |2|

ಎಲ್ಲಿ ನೋಡಲಿ ವೀರಗಲ್ಲುಗ
ಳೆಲ್ಲಿ ನೋಡಲಿ ರಕ್ತಕೊಡುಗೆಗ
ಳೆಲ್ಲಿ ನೋಡಲಿ ಸತ್ಯಪಥಿಗಳ ದಾನ ಶಾಸನವು|
ಳೆಲ್ಲಿ ನೋಡಲಿ ಭವ್ಯ ಶಿಲ್ಪಗ
ಳೆಲ್ಲಿ ನೋಡಲಿ ಕಲೆಯ ಬಲೆಗಳು
ಎಲ್ಲಿ ನೋಡಲಿ ಜಗವೆ ಬೆಚ್ಚುವ ಭವ್ಯ ವಾಸ್ತುಗಳು |3|

ಹರಿವ ನದಿ ಭೋರ್ಗರೆತ ಕನ್ನಡ
ಸರಸ ಪಕ್ಷಿಗಳುಲಿಯು ಕನ್ನಡ
ಗರುವಿಕೆಯ ವರಕೇಸರಿಯ ಗರ್ಜನೆಯು ಕನ್ನಡವು
ಶರಣ ತೋರಿದ ವಚನ ಕನ್ನಡ
ಮೆರೆದ ದಾಸರ ಹೃದಯ ಕನ್ನಡ
ಧೀರ ವೀರರ ಲೋಕಗುರುಗಳ ನೆಲವೆ ಕನ್ನಡ |4|
****************

No comments:

Post a Comment