Thursday 30 July 2015

ಅಬ್ದುಲ್ ಕಲಾಂ ಸಹಸ್ರ ಸಲಾಂ

ಬಡತನದ ಬೇಗೆಯಲಿ ತಾ ಬೆಂದು
ಬಡತನದ ಕಷ್ಟ ಸುಖವನುಂಡು
ಬಡತನವ ಸ್ಥೈರ್ಯದಲಿ ಮೆಟ್ಟಿನಿಂದು
ಬಡತನವ ಬಡಿದೋಡಿಸುತ ಬೆಳೆದು
ಸಿರಿ ಸೊಬಗ ಕಂಡು ಶಿಸ್ತಿನಲಿ ಬಾಳಿದಾತ

ವೃತ್ತ ಪತ್ರಿಕೆಯನು ಹಂಚಿ ಬೆಳೆದು
ವೃತ್ತ ಪತ್ರಿಕೆಯ ತುಂಬೆಲ್ಲಾ ತಾನೆ
ಸುದ್ದಿಯಾಗಿ ಜನ ಮನದಲಿ ನೆಲೆಸಿದಾತ

ಕನಸುಗಳ ಹೆಣೆದು  ಕನಸುಗಳ ಹೊತ್ತು
ಕನಸಗಳ ನನಸಾಗಿಸುವ ಪಥದಿ ಸಾಗಿ
ಕರ್ಮಯೋಗಿಯಂತೆ ಕಾರ್ಯವೆಸಗಿ
ಕಾಯಕ ತತ್ವಕೆ ಸದಾ ತಾ ಬದ್ಧನಾಗಿ
ಕಾಯಕದಲೇ ಕೊನೆಯುಸಿರನೆಳೆದಾತ

ಇಳಿಯ ವಯಸಿನಲೂ ತರುಣನಂತೆ ಮಿಂಚಿ
ಭವಿಷ್ಯದ ಭರವಸೆಯಲೇ ಬದುಕ ಕಟ್ಟಿ
ತರುಣರಿಗೆ ದಾರಿದೀಪವಾಗಿ ದಾರಿ ತೋರಿ
ಮಕ್ಕಳೊಡನೆಕೂಡಿ ಮಗುವೇ ತಾನಾಗಿ
ಕನಸ ಬಿತ್ತಿ ನನಸಾಗಿಸುವ ದಾರಿ ತೋರಿದಾತ

ಗುಡಿಸಿಲಿನಿಂದ ರಾಷ್ಟ್ರಪತಿ ಭವನದೆಡೆಗೆ
ದಾಪುಗಾಲು ಹಾಕಿ ಸನ್ನ್ಮಾರ್ಗದಲಿ ಸಾಗಿ
ಅನನ್ಯ ಸಾಧನೆಗಳ ಸರದಾರ ತಾನಾಗಿ
ಸಜ್ಜನಿಕೆಯ ಸಾಕಾರ ಮೂರುತಿಯೆನಿಸಿದಾತ

ವಾಮನನಂತೆ ತಾನಿದ್ದು, ತ್ರಿವಿಕ್ರಮನಂತೆ ಬೆಳೆದು
ವಿದ್ಯಾರ್ಥಿಯಂತೆ ಇದ್ದು, ಶಿಕ್ಷಕರಿಗೆಲ್ಲಾ ಶಿಕ್ಷಕನಾಗಿ
ಕಲಿಸುತ  ಕಲಿಯುತ ಸಾಗಿ, ಜ್ಞಾನದ ಹರವ ವಿಸ್ತರಿಸುತ
ಜ್ಞಾನ ವಿಜ್ಞಾನವ ಬೆಳೆಸುತ, ಕ್ಷಿಪಣಿ ಮಾನವನೇ ಆದಾತ

ಯುಗ ಪುರುಷ, ದಾರ್ಶನಿಕ ಪ್ರಖ್ಯಾತ ಸಾಹಿತಿ
ಶ್ರೇಷ್ಠ ಸಂತ, ಸಂಗೀತ ಪ್ರಿಯ, ಕಲಾ ರಸಿಕ
ಭಾರತಾಂಬೆಯ ಸುಪುತ್ರನಾಗಿ
ಭಾರತದ ಪ್ರಥಮ ಪ್ರಜೆ ತಾನಾಗಿ
ದೇಶ ರಕ್ಷಣೆಯ ಬಲಗೊಳಿಸಿ
ಅನ್ಯ ದೇಶಗಳ ಬೆಚ್ಚಿ ಬೀಳಿಸಿ
ಹಮ್ಮಿನಲಿ ಬೀಗುತ್ತಿದ್ದ ದೇಶಗಳ
ಕನಸುಗಳ ಭಗ್ನಗೊಳಿಸಿ ನಿದ್ದೆಗೆಡಿಸಿ
ತನ್ನ ದೇಶದ ಭವಿಷ್ಯದ ಕನಸ ಕಂಡು
ನನಸಾಗಿಸುವ ತರುಣರ ಪಡೆಯ ಬೆಳೆಸಿದಾತ

ಅವರ ನುಡಿಮುತ್ತುಗಳೆಮಗೆ ದಾರಿ ದೀಪ
ಅವರ ನಡೆ ಯುವಕರಿಗೆ ಸ್ಫೂರ್ತಿಯ ಸೆಲೆ
ನಿಜ ಅರ್ಥದಲಿ ಜಗದ ಸರ್ವರ ಗುರುವಾತ
ಗುರು ಸ್ಮರಣೆಗೆ ಶ್ರೇಷ್ಠವೆನಿಸಿದ  ಗುರು ಪೂರ್ಣಿಮೆಯ ದಿನವಾದ ಇಂದು ಸದ್ಗುರುವೇ ಆಗಿರುವ ಕಲಾಂರವರಿಗೆ  ಹೃದಯಾಂತರಾಳದಿಂದ ನಮಿಸೋಣ. ಕಲಾಂರನ್ನು ಕುರಿತ ಚಟುವಟಿಕೆಯನ್ನು ವಿದ್ಯಾರ್ಥಿಗಳಿಗೆ ನೀಡೋಣ.

No comments:

Post a Comment