Friday 12 June 2020

ಸೌಭಾಗ್ಯದ ಕಂಕಣ

ಬಳೆಗಾರ ಚೆನ್ನಯ್ಯ ಇಂದಿಲ್ಲ
ಬಳೆತೊಡುವುದಂತು ನಿಂತಿಲ್ಲ
ಭಾಗ್ಯದ ಸಂಕೇತವಾಗಿಹುದಲ್ಲ
ಸೌಂದರ್ಯಕಿದಕಿಂತ ಮಿಗಿಲಿಲ್ಲ

ಅರಿಶಿನ ಕುಂಕುಮವನಿಟ್ಟು
ಹಸಿರು ಕೆಂಪು ಬಳೆಗಳ ತೊಟ್ಟು
ಮಲ್ಲಿಗೆಯ ದಂಡೆ ಮುಡಿಗಿಟ್ಟು
ತವರ ಬಣ್ಣದುಡುಗೆಯ ಉಟ್ಟು

ನಮಗಿದು ಸಂಸ್ಕೃತಿಯ ಪಾಠ
ಹಸಿರು ಕೆಂಪು ಬಳೆಗಳ ನೋಟ
ಹೆಂಗೆಳೆಯರ ಕೈಗಳಿಗೆ ಮಾಟ
ಯುವಕರ ಮನಸೆಳೆವ ಆಟ

ಕಾಮನಬಿಲ್ಲಿನ ನೋಟ
ಕೈತುಂಬ ತೊಟ್ಟ ಬಳೆಯಾಟ
ಮನೆಯಲ್ಲಿ ಹಬ್ಬದ ಊಟ
ಜಾತ್ರೆಯ ಬಳೆಗಳ ಮಾಟ

ಘಲ್ ಘಲ್ ಬಳೆಯ ನಾದ
ಕರ್ಣಗಳಿಗಿದು ಇಂಪು ನಿನಾದ
ಕಂದಗಮ್ಮಗೆ ಜೋಗುದ ಪದ
ತಾರುಣ್ಯದಲಿ ಪುಳಕದುನ್ಮಾದ

ಮಕ್ಕಳ ಕಂಕಣ ಸೌಭಾಗ್ಯ
ಮನೆ ಮಂದಿಗೆ ಹರ್ಷದ ಭಾಗ್ಯ
ಬಳೆತೊಡಿಸುವ ತೊಡುವ ಭಾಗ್ಯ
ಚಿರಕಾಲವಿರಲೀ ಸಂಸ್ಕೃತಿ ಸೌಭಾಗ್ಯ
*******

No comments:

Post a Comment