Saturday 20 June 2020

ಬದುಕು ಬಂಡಿ

ವನಜ ಬಡಕುಟುಂಬದ ಹುಡುಗಿ. ಬಲು ಚೆಲುವೆ. ತಂದೆ ತಾಯಿಯ ಕಷ್ಟವನ್ನು ನೋಡಲಾರದೆ ತನಗಿಂತ ಎರಡು ಪಟ್ಟು ಹಿರಿಯನಾದ ಮಾಲೂರಿನ ಕುಡುಕನನ್ನು ಮದುವೆಯಾಗುತ್ತಾಳೆ. ಸರೀಕರ ಮುಂದೆ ಅನೇಕ ಅವಮಾನಗಳನ್ನು ಎದುರಿಸುತ್ತಾಳೆ. ಇಡೀ ಊರಿನ ಕಾಮುಕರ ದೃಷ್ಟಿಗೆ ಕೇಂದ್ರ ಬಿಂದುವಾಗ ಬೇಕಾಗುತ್ತದೆ. ತನ್ನನ್ನು ಕಾಪಾಡಿ ಕೊಳ್ಳವುದರ ಜೊತೆಗೆ ತನ್ನ ಕರುಳಕುಡಿ ಮೋಹನನಿಗೆ ಯಾವುದರ ತಾಪವೂ ತಾಗದಂತೆ ನೋಡಿಕೊಳ್ಳವ ಜವಾಬ್ದಾರಿಯನ್ನು ಭರಿಸಬೇಕಾಗುತ್ತದೆ. ಅತ್ತೆ ಮಾವನ ಮರಣದ ನಂತರ ಮನೆಯ ನಿರ್ವಹಣೆಯ ಜವಾಬ್ದಾರಿಯೂ ಹೆಗಲಮೇಲೆ ಬೀಳುತ್ತದೆ. ಊರಿನ ಜನರ ಕಾಟದಿಂದ ದೂರಾಗುವುದು ಕಷ್ಟವಾದಾಗ ವನಜ ಊರನ್ನೇ ತೊರೆದು ಕಾಣದ ಊರಿಗೆ ಮಗುವಿನೊಂದಿಗೆ ಹೋಗಬೇಕಾಗುತ್ತದೆ. 
    ಕಾಣದ ಊರಿನಲ್ಲಿ ಒಂಟಿ ಹೆಣ್ಣು ಏನು ಮಾಡುವುದು? ಎಲ್ಲಿ ಹೋಗುವುದು ಎನ್ನುವ ಯೋಚನೆಯಲ್ಲಿದ್ದವಳಿಗೆ ಆಕಸ್ಮಿಕವಾಗಿ ಗಿರಿಜಳ ಪರಿಚಯವಾಗಿ ಆಕೆಯ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ತನ್ನ ನಡವಳಿಕೆಯಿಂದ ಬಹಳಬೇಗ ಆತ್ಮೀಯಳೂ ಆಗುತ್ತಾಳೆ. 
    ಗಿರಿಜಳ ಮನೆಕೆಲಸ ಮುಗಿಸಿ ಆಕೆ ಕೆಲಸಕ್ಕೆ ಹೋಗಿ ಮನೆಗೆ ಬರುವುದರೊಳಗೆ ಬೇರೆಕಡೆಗಳಲ್ಲಿ ಕೆಲಸವನ್ನುಮಾಡಿ ಮಗನ ಎಲ್ಲಾ ಆಸಕ್ತಿಗಳಿಗೂ ನೀರೆದು ಅಗತ್ಯಗಳನ್ನು ಪರಿಪೂರ್ಣಗೊಳಿಸುತ್ತಾಳೆ.
    ಮಗ ಮೋಹನನೂ ಅಷ್ಟೇ ಸಂಗೀತ, ಸಾಹಿತ್ಯ, ಕಲೆ, ನೃತ್ಯ, ಆಟ ಪಾಠ ಎಲ್ಲದರಲ್ಲೂ ಮುಂದೆ. ಹೋದೆಡೆಯಲ್ಲೆಲ್ಲಾ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಅಮ್ಮನ ಪರಿಶ್ರಮವನ್ನು ಸಾರ್ಥಕಗೊಳಿಸುತ್ತಾನೆ. ಗಿರಿಜಳಿಗೂ ಅಚ್ಚುಮೆಚ್ಚಾಗುತ್ತಾನೆ. ಮಕ್ಕಳಿಲ್ಲದ ಗಿರಿಜ ಕ್ರಮೇಣ ತನಗೇ ಗೊತ್ತಿಲ್ಲದಂತೆ ಮೋಹನನಿಗೆ ಮಗನಸ್ಥಾನವನ್ನು ನೀಡುತ್ತಾಳೆ. ಮೋಹನನ ಮುಂದಿನ ಓದಿಗೆ ಪ್ರೋತ್ಸಾಹಿಸುತ್ತಾಳೆ. 
     ತನ್ನ ಪರಿಶ್ರಮ ಮತ್ತು ಗಿರಿಜಳ ಸಹಾಯ ಹಸ್ತದಿಂದ ಮೋಹನ ಹೃದಯ ತಜ್ಞನಾಗಿ ಬಹಳ ಬೇಗ ಹೆಸರುಮಾಡುತ್ತಾನೆ. ತನ್ನದೇ ಆಸ್ಪತ್ರೆಯನ್ನೂ ತೆರೆಯುತ್ತಾನೆ. 
    ದಿನಕಳೆದಂತೆ ಗಿರಿಜ ಮತ್ತು ವನಜ ಇಬ್ಬರೂ ಬಹಳ ಹತ್ತಿರವಾಗಿ ತಮ್ಮ ಮನದ ಸಂಕಟವನ್ನು ಸಂದರ್ಭೋಚಿತವಾಗಿ ಹಂಚಿಕೊಳ್ಳುತ್ತಾರೆ. ಗಿರಿಜ ಸಹ ತನಗಿಂತ ಇಪ್ಪತ್ತು ವರ್ಷಗಳಹಿಂದೆ ತನ್ನಂತೆಯೇ ಮನೆಯನ್ನು ಬಿಟ್ಟು ಬಂದವಳು ಎಂಬ ಸತ್ಯ ವನಜಳಿಗೆ ತಿಳಿಯುತ್ತದೆ.
    ಊರು ಬಿಟ್ಟು ಬಂದಾಗ ಮೋಹನ ಇನ್ನೂ ಚಿಕ್ಕ ಹುಡುಗ. ಬಹಳ ಮಸುಕು ಮಸುಕಾಗಿ ತಂದೆಯ ನೆನಪು.  ತನ್ನ ಊರು ತಂದೆ ವಿಚಾರವನ್ನು ತಿಳಿದುಕೊಳ್ಳವ ಕುತೂಹಲ, ತಪಕವಿದ್ದರೂ ತಾಯಿಗೆ ಇದು ಬೇಸರದ ಸಂಗತಿ ಎಂದು ಸುಮ್ಮನಾಗುತ್ತಿದ್ದನು. 
ಒಂದು ದಿನ ಎಷ್ಟು ಹೊತ್ತಾದರೂ ಮೋಹನ ಆಸ್ಪತ್ರೆಯಿಂದ ಮನೆಗೆ ಬರಲಿಲ್ಲ. ಅಂದು ಗಿರಿಜ ಸಹ ಯಾವುದೋ ಕೆಲಸದ ಮೇಲೆ ಹೊರಗೆ ಹೋಗಿದ್ದಳು. ಎಷ್ಟು ಬಾರಿ ಫೋನ್ ಮಾಡಿದರೂ ಫೋನ್ ತೆಗೆಯಲಿಲ್ಲ. ಒಬ್ಬಳೇ ಕುಳಿತು ಬೇಸರಗೊಂಡ ವನಜ ಆಸ್ಪತ್ರೆಗೆ ಹೋದಳು. 
   ಮಗ ಆಗತಾನೆ ಐ ಸಿ ಯುವಿನಿಂದ ಬಂದು ತನ್ನ ಛೇಂಬರ್ ನಲ್ಲಿ ಕುಳಿತಿದ್ದನು. ಬಹಳ ಸುಸ್ತಾಗಿದ್ದನು. ಅಮ್ಮನ ಮುಖ ನೋಡಿದೊಡನೆಯೇ ಓ ನನಗೆ ಫೋನ್ ಮಾಡಲೂ ಆಗಲಿಲ್ಲ. ಒಂದು ಎಮರ್ಜೆನ್ಸಿ ಕೇಸ್ ಎಂದು ಅಮ್ಮನನ್ನೂ ಕರೆದುಕೊಂಡು ಮನೆಗೆ ತೆರಳಿದನು. 
   ಗಿರಿಜ ಬಂದೊಡನೆಯೇ ಎಲ್ಲರೂ ಊಟಕ್ಕೆ ಕುಳಿತರು. ಎಂದಿನಂತೆ ಮಾತಾಡುತ್ತಾ ಅಂದಿನ ಆಸ್ಪತ್ರೆಯಲ್ಲಿ ನಡೆದ ವಿಚಾರವನ್ನೆಲ್ಲಾ ಹೇಳಿದನು. ಯಾರೋ ಮಾಲೂರಿನ ಮುದುಕ ಕುಡಿದು ಕುಡಿದು ತನ್ನ ಆರೋಗ್ಯವನ್ನೆಲ್ಲಾ ಹಾಳುಮಾಡಿಕೊಂಡಿದ್ದಾನೆ. ಇನ್ನೇನು ಸಾಯುವಸ್ಥಿತಿಗೆ ಬಂದಿದ್ದಾನೆ ಎನ್ನುವಾಗ ಯಾರೋ ಅವರ ಊರಿನವರು  ಕರೆದುಕೊಂಡುಬಂದು ಆಸ್ಪತ್ರೆಗೆ ಸೇರಿಸಿದರು. ಆ ಕೇಸ್ ಇವತ್ತು ನನಗೆ ಚಾಲೆಂಜ್ ಆಯಿತು. ಎಂದು ಹೇಳಿ ಕೈ ತೊಳೆಯಲು ಎದ್ದು ಹೋದನು‌. 
   ಮಾಲೂರು ಕುಡುಕ ಮುದುಕ ಎಂದೊಡನೆಯೇ ಗಿರಿಜ ವನಜ ಇಬ್ಬರಿಗೂ ಕುತೂಹಲವೂ ತಡೆಯದಾಯಿತು. ಮನದಲ್ಲಿ ತಳಮಳ ಆರಂಭವಾಯಿತು. ಇಬ್ಬರಿಗೂ ಇಡೀ ರಾತ್ರೆ ನಿದ್ದೆ ಇಲ್ಲ. ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಇಬ್ಬರೂ ಒಬ್ಬರಿಗೊಬ್ಬರು ಹೇಳದೆ ಆಸ್ಪತ್ರೆಗೆ ಹೋದರು. ಮೋಹನ ಇನ್ನೂ ಮನೆಯಲ್ಲೇ ಮಲಗಿದ್ದನು. 
    ಮೊದಲು ಆಸ್ಪತ್ರೆಗೆ ತೆರಳಿದ ಗಿರಿಜ ನರ್ಸನನ್ನು ಕೇಳಿ ಮಾಲೂರು ರೋಗಿಯ ಹಾಸಿಗೆಯ ಬಳಿಗೆ ತೆರಳುತ್ತಾಳೆ. ರೋಗಿಯನ್ನು ಕಂಡೊಡನೆ ಓ ದೇವರೇ ಎಂದು ಉದ್ಗಾರವೆಳೆದಳು. ಕಣ್ಬಿಟ್ಟು ನೋಡಿದ ರೋಗಿ ಕ್ಷೀಣ ಧ್ವನಿಯಲ್ಲಿ ಗಿರಿಜಾ ನೀನು! ಇಲ್ಲಿ ! ನನ್ನನು ಕ್ಷಮಿಸು ಎಂದು ಬಹಳ ಕಷ್ಟದಿಂದ ಕೈ ಹಿಡಿದನು. ಅದೇ ವೇಳೆಗೆ ಅಲ್ಲಿಗೆ ಬಂದ ವನಜ ಈ ದೃಶ್ಯವನ್ನುಕಂಡು ದಂಗಾದಳು. ಇವರು ನಿಮಗೆ ಸಂಬಂಧವೇ ಅಕ್ಕ! …….ಇವರೆ, ಇವರೇ ಮೋಹನನ ತಂದೆ ಎಂದಾಗ ಗಿರಿಜಳಿಗೆ ಎಲ್ಲಾ ಅರ್ಥವಾಯಿತು. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ದುಃಖದ ಕೋಡಿ ಹರಿಸಿದರು. ಇಬ್ಬರೂ ಸಂಸಾರದ ಗುಟ್ಟನ್ನು ಕಾಪಾಡಿಕೊಂಡು ಬದುಕಿನ ಬವಣೆಯನ್ನು ಅನುಭವಿಸಿ ಬದುಕಿನ ಬಂಡಿಯನ್ನು ಎಳೆದದ್ದು ಇಬ್ಬರ ಕಣ್ಮುಂದೆ ಬಂದಿತು. ಮೋಹನನ್ನು ನೋಡಿದೊಡನೆ ತಮ್ಮ ಕಷ್ಟ ಸಾರ್ಥಕವಾಯಿತು ಎಂಬ ಧನ್ಯತಾಭಾವ ಮೂಡಿತು.
   ಹೇಗಾದರೂ ಮಾಡಿ ಮಾಲೂರಿನ ರೋಗಿಯನ್ನು ಉಳಿಸುವಂತೆ ಇಬ್ಬರೂ ಮೋಹನನಲ್ಲಿ ಮೊರೆಹೋದರು

No comments:

Post a Comment