Tuesday 15 January 2019

ಒಂದು ಪುಟ ಆರು ಅಂಕ

ಕವಿಪರಿಚಯ ಆರು ಅಂಕಗಳನ್ನು ಸುಲಭವಾಗಿ ಪಡೆಯಲು ಸಿದ್ಧರಾಗಿ.
1. ಸಾರಾ ಅಬೂಬಕ್ಕರ್ : ಶ್ರೀಮತಿ ಸಾರಾ ಅಬೂಬಕ್ಕರ್ ಅವರು ಕ್ರಿ. ಶ. 1936 ರಲ್ಲಿ ಕಾಸರಗೋಡಿನಲ್ಲಿ ಜನಿಸಿದರು. ಇವರು ಚಪ್ಪಲಿಗಳು, ಖೆಡ್ಡಾ, ಪಯಣ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಚಂದ್ರಗಿರಿಯ ತೀರದಲ್ಲಿ, ಕದನವಿರಾಮ, ವಜ್ರಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ನೃಪತುಂಗ ಪ್ರಶಸಿಯು ಇವರಿಗೆ ಲಭಿಸಿದೆ.
2. ಪು. ತಿ. ನರಸಿಂಹಾಚಾರ್ : ಶ್ರೀ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಅವರು ಕ್ರಿ. ಶ. 1905 ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರು ಶಬರಿ, ಅಹಲ್ಯೆ, ಗೋಕುಲ ನಿರ್ಗಮನ, ವಿಕಟಕವಿ ವಿಜಯ, ಹಂಸ ದಮಯಂತಿ, ‘ಶ್ರೀ ಹರಿಚರಿತೆ’ ಮೊದಲಾದ ಕೃತಿಗಳನ್ನೂ ರಚಿಸಿದ್ದಾರೆ. ಶ್ರೀಯುತರಿಗೆ ‘ಪಂಪ ಪ್ರಶಸ್ತಿ’ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.
3. ವಿ. ಕೃ. ಗೋಕಾಕ್ : ‘ವಿನಾಯಕ’ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ ಕೃಷ್ಣ ಗೋಕಾಕ್ ಅವರು ಕ್ರಿ. ಶ. 1909 ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಇವರು ಸಮುದ್ರದಾಚೆಯಿಂದ, ಜೀವನಪಾಠಗಳು, ಭಾರತ ಸಿಂಧು ರಶ್ಮಿ, ಸಮುದ್ರಗೀತೆಗಳು, ಪಯಣ, ಉಗಮ, ಇಜ್ಜೋಡು, ದ್ಯಾವಾಪೃಥಿವೀ, ಸಮರಸವೇ ಜೀವನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪದವಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
4. ಡಿ. ಎಸ್. ಜಯಪ್ಪಗೌಡ : ಶ್ರೀ ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಅವರು ಕ್ರಿ. ಶ. 1947ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯಲ್ಲಿ ಜನಿಸಿದರು. ಇವರು ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು, ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸಿಯು ಲಭಿಸಿದೆ.
5. ದೇವನೂರು ಮಹಾದೇವ : ಶ್ರೀ ದೇವನೂರು ಮಹಾದೇವ ಅವರು ಕ್ರಿ. ಶ. 1949 ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ಎದೆಗೆ ಬಿದ್ದ ಅಕ್ಷರ. ಕುಸುಮ ಬಾಲೆ, ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೋ, ನಂಬಿಕೆಯ ನಂಟ, ನೋಡು ಮತ್ತು ಕೂಡು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸಿಯು ಲಭಿಸಿದೆ.
6. ಎ. ಎನ್. ಮೂರ್ತಿರಾವ್ : ಶ್ರೀ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್ ಅವರು ಕ್ರಿ. ಶ. 1900 ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಜನಿಸಿದರು. ಇವರು ಸಮಗ್ರ ಲಲಿತಪ್ರಬಂಧಗಳು, ದೇವರು, ಹಗಲುಗನಸು, ಅಲೆಯುವ ಮನ, ಅಪರವಯಸ್ಕನ ಅಮೆರಿಕಾ ಯಾತ್ರೆ, ಚಂಡಮಾರುತ, ಮಿನುಗು ಮಿಂಚು, ಪೂರ್ವಸೂರಿಗಳೊಡನೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಪ್ರಶಸ್ತಿಗಳು ಲಭಿಸಿವೆ.
7. ದುರ್ಗಸಿಂಹ : ಶ್ರೀ ದುರ್ಗಸಿಂಹನು ಕ್ರಿ. ಶ. ಸುಮಾರು 1031 ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು. ಇವನು ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ ಸಂಧಿವಿಗ್ರಹಿಯೂ ಆಗಿದ್ದನು. ಮತಧರ್ಮ ಸಮನ್ವಯನಾದ ಈತ ಸಯ್ಯಡಿಯಲ್ಲಿ ಹಲವಾರು ಹರಿಹರ ಭವನಗಳನ್ನು ನಿರ್ಮಿಸಿದ್ದಾನೆ. ಈತನು ‘ಕರ್ಣಾಟಕ ಪಂಚತಂತ್ರ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ.
8. ಶಿವಕೋಟ್ಯಾಚಾರ್ಯ : ಶ್ರೀ ಶಿವಕೋಟ್ಯಾಚಾರ್ಯ ಅವರು ಕ್ರಿ. ಶ. ಸುಮಾರು 10 ನೇ ಶತಮಾನದ ಆದಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ಹಾಗೂ ಹೂವಿನ ಹಡಗಲಿ ತಾಲ್ಲೋಕುಗಳನ್ನು ಒಳಗೊಂಡ ಕೋಗಳಿನಾಡು ಎಂಬಲ್ಲಿ ಜೀವಿಸಿದ್ದರು. ಇವರು ಹಳಗನ್ನಡ ಕಾಲದ ಅಪೂರ್ವ ಹಾಗೂ ಉಪಲಬ್ಧ ಮೊದಲ ಗದ್ಯಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ವಡ್ಡಾರಾಧನೆ’ ಎಂಬ ಗದ್ಯಕಾವ್ಯವನ್ನು ರಚಿಸಿದ್ದಾರೆ. ಇದರಲ್ಲಿ ಜೈನಧರ್ಮಕ್ಕೆ ಸೇರಿದ 19 ಕಥೆಗಳಿದ್ದು, ಅನೇಕ ಉಪಕಥೆಗಳಿವೆ.
9. ಜಿ. ಎಸ್. ಶಿವರುದ್ರಪ್ಪ : ಸಮನ್ವಯ ಕವಿ ಎಂದು ಪ್ರಸಿದ್ಧರಾದ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ಕ್ರಿ. ಶ. 1926 ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಎದೆತುಂಬಿ ಹಾಡಿದೆನು, ಸಾಮಗಾನ, ಚೆಲುವು-ಒಲವು, ದೇವಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವ ಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ, ಕಾವ್ಯಾರ್ಥ ಚಿಂತನ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ರಾಷ್ಟ್ರಕವಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಿ. ಲಿಟ್ ಪದವಿಗಳು ಲಭಿಸಿವೆ.
10. ದ. ರಾ. ಬೇಂದ್ರೆ : ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ. ಶ. 1896 ರಲ್ಲಿ ಧಾರವಾಡದಲ್ಲಿ ಜನಿಸಿದರು. ಇವರು ಗರಿ, ನಾಕುತಂತಿ, ನಾದಲೀಲೆ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ಮೇಘದೂತ, ಗಂಗಾವತರಣ, ಅರಳು ಮರಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳು ಲಭಿಸಿವೆ.
11. ಕುಮಾರವ್ಯಾಸ: ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ ಗದುಗಿನ ನಾರಣಪ್ಪ ಅವರು ಕ್ರಿ. ಶ. ಸುಮಾರು 1430 ರಲ್ಲಿ ಗದಗ ಪ್ರಾಂತ್ಯದ ಕೋಳಿವಾಡದಲ್ಲಿ ಜನಿಸಿದರು. ಇವರು ವ್ಯಾಸರ ಸಂಸ್ಕøತ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿ ಕುಮಾರವ್ಯಾಸ ಎಂಬ ಅಭಿದಾನಕ್ಕೆ ಪಾತ್ರರಾದರು. ಇವರು ‘ಕರ್ನಾಟ ಭಾರತ ಕಥಾ ಮಂಜರಿ’ (ಕುಮಾರವ್ಯಾಸ ಭಾರತ, ಗದುಗಿನ ಭಾರತ) ಮತ್ತು ‘ಐರಾವತ’ ಎಂಬ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂಬ ಬಿರುದು ಲಭಿಸಿದೆ.
12. ಕೆ. ವಿ. ಪುಟ್ಟಪ್ಪ : ‘ಕುವೆಂಪು’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕ್ರಿ. ಶ. 1904 ರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೋಕಿನ ಕುಪ್ಪಳಿ ಎಂಬಲ್ಲಿ ಜನಿಸಿದರು. ಇವರು ಮಲೆನಾಡಿನ ಚಿತ್ರಗಳು, ಕೊಳಲು, ಪಾಂಚಜನ್ಯ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಬೊಮ್ಮನ ಹಳ್ಳಿಯ ಕಿಂದರಿಜೋಗಿ, ಜಲಗಾರ, ನೆನಪಿನ ದೋಣಿಯಲ್ಲಿ, ಶ್ರೀರಾಮಾಯಣ ದರ್ಶನಂ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಶ್ರೀಯುತರಿಗೆ ಭಾರತೀಯ ಜ್ಞಾನಪೀಠಪ್ರಶಸ್ತಿ, ರಾಷ್ಟ್ರಕವಿ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ, ಮೊದಲಾದ ಪ್ರಶಸ್ತಿಗಳು ಲಭಿಸಿವೆ.
13. ಕವಿ ರನ್ನ : ಕನ್ನಡ ‘ರತ್ನತ್ರಯ’ರಲ್ಲಿ ಒಬ್ಬನಾದ ಮಹಾಕವಿ ರನ್ನನು ಕ್ರಿ. ಶ. ಸುಮಾರು 949 ರಲ್ಲಿ (ಹತ್ತನೆಯ ಶತಮಾನದಲ್ಲಿ) ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಈಗಿನ ಮುಧೋಳ) ಎಂಬ ಗ್ರಾಮದಲ್ಲಿ ಜನಿಸಿದನು. ಈತನು ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದನು. ಇವನು ‘ಸಾಹಸ ಭೀಮ ವಿಜಯಂ’, ‘ಅಜಿತ ತೀರ್ಥಂಕರ ಪುರಾಣ ತಿಲಕಂ’, ಪರಶುರಾಮ ಚರಿತಂ’, ‘ಚಕ್ರೇಶ್ವರ ಚರಿತಂ’ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ‘ರನ್ನ ಕಂದ’ ಎಂಬ ನಿಘಂಟನ್ನು ರಚಿಸಿರುವುದಾಗಿ ತಿಳಿದು ಬರುತ್ತದೆ. ಇವನಿಗೆ ತೈಲಪನು ‘ಕವಿ ಚಕ್ರವರ್ತಿ’ ಎಂಬ ಬಿರುದನ್ನು ನೀಡಿ ಗೌರವಿಸಿದನು.
14. ಲಕ್ಷ್ಮೀಶ : ಕವಿ ಲಕ್ಷ್ಮೀಶನು ಕ್ರಿ. ಶ. ಸುಮಾರು 1550 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಇವರು ‘ಜೈಮಿನಿ ಭಾರತ’ ಎಂಬ ಪ್ರಸಿದ್ಧ ಕಾವ್ಯವನ್ನು ರಚಿಸಿದ್ದಾನೆ. ಈತನಿಗೆ ಉಪಮಾಲೋಲ, ಕರ್ಣಾಟ ಕವಿಚೂತವನ ಚೈತ್ರ ಎಂಬ ಬಿರುದುಗಳು ಲಭಿಸಿವೆ.
15. ಪಂಪ : ಕನ್ನಡದ ಆದಿಮಹಾಕವಿ ಪಂಪನು ಕ್ರಿ. ಶ. ಸುಮಾರು 941 ರಲ್ಲಿ ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರದಲ್ಲಿ ಜನಿಸಿದನು. ‘ವಿಕ್ರಮಾರ್ಜುನ ವಿಜಯ ಮತ್ತು ಆದಿ ಪುರಾಣ’ ಎಂಬ ಮಹಾಕಾವ್ಯಗಳನ್ನು ರಚಿಸಿದ್ದಾನೆ. ಈತನಿಗೆ ಸರಸ್ವತೀ ಮಣಿಹಾರ, ಸಂಸಾರ ಸಾರೋದಯ, ಕವಿತಾ ಗುಣಾರ್ಣವ ಎಂಬ ಬಿರುದುಗಳು ಇದ್ದವು. ಕನ್ನಡದ ರತ್ನತ್ರಯರಲಿ ಒಬ್ಬನಾದ ಕಲಿಯೂ ಕವಿಯೂ ಆಗಿದ್ದ ಪಂಪನು ಚಾಲುಕ್ಯ ದೊರೆ ಅರಿಕೇಸರಿಯ ಆಸ್ಥಾನ ಕವಿಯಾಗಿದ್ದನು.

No comments:

Post a Comment