Saturday 21 March 2015

ಇಂದಿವಳೆ ಮುಂದು

ಇಂದಿವಳೆ ಮುಂದು
ಕೈಗಳಲಿ ಬಳೆಗಳ ಸದ್ದಿಲ್ಲ, ಹಣೆಯಲಿ ಕುಂಕುಮವಿಲ್ಲ
ಕೊರಳಲಿ ಮಾಂಗಲ್ಯ ಸರವಿಲ್ಲ, ಸೊಂಟದಲಿ ಡಾಬಿಲ್ಲ
ಪಿಳ್ಳೆ, ಕಾಲುಂಗುರಗಳಿಲ್ಲ, ಗೆಜ್ಜೆಯ ಝಣ ಝಣ ನಾದವಿಲ್ಲ
ಮೂಗುತಿ ಬೆಂಡೋಲೆಗಳನೆಂದು ಹಾಕಿಯೇ ಇಲ್ಲ
ಸೀರೆಯುಟ್ಟವಳಲ್ಲ, ಕುಪ್ಪುಸವ ತೊಟ್ಟವಳೂ ಅಲ್ಲ
ಹೂಮುಡಿವುದೆಲ್ಲಿಂದ ಜಡೆಯನೆಂದೂ ಹೆಣೆದೇ ಗೊತ್ತಿಲ್ಲ
ಕೂದಲ ಬಿಚ್ಚಿ ಹರಡಿಹಳು ಹಿಂದೆ ಮುಂದೆ ಚೌಡಿಯಂತೆ
ಗೌರಮ್ಮನಂತಹ ಗಾಂಭೀರ್ಯ ಸುಳಿವುದಿನ್ನೆಲ್ಲಿಂದ
ಆದರೂ ಘನತೆ ಗೌರವಗಳಿಗೆ ಕಿಂಚಿತ್ತು ಧಕ್ಕೆ ಬಂದೇ ಇಲ್ಲ
ಜೀನ್ಸ್, ಟೈಟ್ಪ್ಯಾಂಟ್, ಮಿಡಿ, ಟಾಪು, ಹೈಹೀಲ್ಡು
ಗಾಗಲ್ಸ್, ವ್ಯಾನಿಟಿ ಬ್ಯಾಗ್, ಮೊಬೈಲ್, ಬಿಡುವುದಿಲ್ಲ
ಲ್ಯಾಪ್ ಟ್ಯಾಪ್ ಮುಂದೆ ಕುಳಿತು ಸದಾ ಕೆಲಸ ಮಾಡುತಿಹಳಲ್ಲ
ಯಾರಿಗೂ, ಯಾವುದಕೂ ಎಂದೆಂದೂ ಹೆದರುವುದಿಲ್ಲ
ನಾಲ್ಕು ಗೋಡೆಗಳ ನಡುವಿನ ಜೀವನಕೆ ಬಂದಿಯಾಗಿಲ್ಲ
ಯಾವ ಕೆಲಸ ಕಾರ್ಯಗಳಿಗೂ ಹಿಂದೆ ಮುಂದೆ ನೋಡುವುದಿಲ್ಲ
ಅಂಜದೇ ಅಳುಕದೇ ಮುನ್ನುಗ್ಗಿ ಸಾಧನೆಗಳ ಮಾಡುತಿಹಳಲ್ಲ
ಉಡುಗೆ ತೊಡುಗೆ ವೇಷ ಭೂಷಣಗಳಿಂದಲ್ಲ ಸಾಧನೆಯೆಂದು ತೋರುತಿಹಳಲ್ಲ
ಎಲ್ಲ ಕ್ಷೇತ್ರಗಳಲೂ, ಎಲ್ಲ ವಿಚಾರಗಳಲೂ ಇಂದಿವಳೆ ಮುಂದು ಮುಂದಿಹಳಲ್ಲ.
ಅಹಲ್ಯ, ದ್ರೌಪತಿ, ತಾರಾ, ಮಂಡೋದರಿ, ಸೀತಾ, ಸರಸ್ವತಿ, ಲಕ್ಷ್ಮೀ, ಪಾರ್ವತಿ,
ಸಾವಿತ್ರಿ, ಗಾಯಿತ್ರಿ, ಉಮೆ, ರಮೆ, ಚಂಡಿ, ಚಾಮುಂಡಿ, ಕಾಳಿ, ದುರ್ಗಿ, ಗಾರ್ಗಿ….

ಎಲ್ಲರೂ ತಾನಾಗಿ ಸಾಧನೆಯ ಪಥದಲಿ ಸಾಗುತಲಿ ಇಂದಿವಳೆ ಮುಂದು ಮುಂದು

ಚಿತ್ರ ಗೂಗಲ್ ಕೃಪೆ

No comments:

Post a Comment