Sunday 29 March 2015

ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು ಪೂರಕ ಚಟುವಟಿಕೆ

          ವಿದ್ಯಾರ್ಥಿಗಳ ಈಗಾಗಲೇ ಕಲಿತಿರುವ ವಿಷಯಗಳನ್ನು ಆಧರಿಸಿ(ಸಮಾಜ ವಿಜ್ಞಾನ, ವಿಜ್ಞಾನ, ಗಣಿತ ಇತ್ಯಾದಿ) ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಬುದ್ಧಿಮತ್ತೆ ಮತ್ತು ಪರಿಭಾಷೆಗೆ ನಿಲುಕುವಂತೆ ಪ್ರಜ್ಞಾಪೂರ್ವಕವಾಗಿ ಪರಿಕಲ್ಪನೆಗಳನ್ನು ಆಯ್ಕೆಮಾಡಿಕೊಂಡು ಅವರ ಕುತೂಹಲವನ್ನು ತಣಿಸಿ, ತಕ್ಷಣವೇ ಪ್ರೇರಣೆ ನೀಡುವಂತೆಯೂ, ಪ್ರತಿಕ್ರಿಯಿಸುವಂತೆಯೂ, ಅಭಿವ್ಯಕ್ತಿಗೆ ಅವಕಾಶವಾಗುವಂತೆಯೂ ಜಾಗೃತೆವಹಿಸಿ ಚಟುವಟಿಕೆಯನ್ನು ರೂಪಿಸುವುದರಿಂದ ಭಾಷಾಕಲಿಕೆಯ ಉದ್ದೇಶಗಳನ್ನು ಈಡೇರಿಸಬಹುದು. ಸಾಹಿತ್ಯಾಸಕ್ತಿಯನ್ನು ಬೆಳಸಿಕೊಳ್ಳಲು ಪೂರಕವಾಗುವಂತೆ ಅವರಿಗೆ ತಿಳಿದ ವಿಷಯಗಳನ್ನು ಆಧರಿಸಿ ಚಟುವಟಿಕೆಗಳನ್ನು ಕೊಡುವುದರಿಂದ ಈಗಾಗಲೇ ಕಲಿತಿರುವ ವಿಷಯವು ಗಟ್ಟಿಯಾಗುವುದರ ಜೊತೆಗೆ ಭಾಷಾ ಸಾಮಥ್ರ್ಯವೂ ವೃದ್ಧಿಯಾಗಲು ಸಹಾಯವಾಗುತ್ತದೆ. ಅವರ ಅಭಿರುಚಿ ಹಾಗು ಮನೋಲೋಕಕ್ಕೆ ಸಂಬಂಧಿಸಿದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡರಂತು ನಮ್ಮ ಪ್ರಯತ್ನ ಯಶಸ್ವಿಯಾಗುತ್ತದೆ. ಆ ದೃಷ್ಟಿಯಿಂದ ಈ ಒಂದು ಪ್ರಯತ್ನ.
ಪೂರ್ವಸಿದ್ಧತೆ : ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಚಟುವಟಿಕೆಯನ್ನು ನೀಡಲಾಗುವುದು ಓದಿಕೊಂಡು ಬನ್ನಿ ಎಂದು ಮುಂಚಿತವಾಗಿಯೇ ತಿಳಿಸುವುದು.
ಈ ಕೆಳಗಿನ ಸಾಲುಗಳನ್ನು ಗಮನವಿಟ್ಟು ಓದಿಕೊಂಡು ಅರ್ಥಮಾಡಿಕೊಳ್ಳಿರಿ. ನಂತರ ಸೂಚನೆಗೆ ಅನುಗುಣವಾಗಿ ಉತ್ತರಿಸಿರಿ.
ಭಾರತದ ಸ್ವಾತಂತ್ರ್ಯ ಹೋರಾಟದ ನೋಟ
ಕಾಂಗ್ರೇಸ್ ಕಾರ್ಯಗಳಿಗೆ ಚಾಲನೆಯ ನೀಡಿ
ಡಬ್ಲ್ಯು ಸಿ ಬ್ಯಾನರ್ಜಿಯ ಅಧ್ಯಕ್ಷತೆಯಲ್ಲಿ
ಮೊದಲಾಯ್ತು ಮುಂಬೈನ ಅಧಿವೇಶನ
ಸೂರತ್‍ನ ಅಧಿವೇಶನದಿ ಒಡಕುಂಟಾಯ್ತು
ಗಾಂಧೀಜಿಗೆ ಅಸಹಕಾರ ಚಳವಳಿಯ
ನಾಯಕತ್ವವ ನೀಡಿತು ನಾಗಪುರದ ಅಧಿವೇಶನ
ಅಸಹಕಾರ ಚಳುವಳಿಗೆ ಚಾಲನೆಯು ಇದರಿಂದಾಯ್ತು
ಗಾಂಧೀಜಿಯ ಮನವ ಘಾಸಿಗೊಳಿಸಿತು ಚೌರಿಚೌರ ಘಟನೆ
ಸ್ಥಗಿತಗೊಳಿಸಿತು ಅಸಹಕಾರ ಚಳವಳಿಯ
ಸೈಮನ್ ಗಲಭೆಗೆ ಬಲಿಯಾದರು ಲಾಲಾ ಲಜಪತರಾಯ
ಸಂಪೂರ್ಣ ಸ್ವರಾಜ್ಯವ ನೆಹರು ವರದಿ ಬಯಸಿದರೇನು?
ಸಂಪೂರ್ಣ ಉಪೇಕ್ಷಿಸಿತ್ತು ಸರ್ಕಾರ ಈ ವರದಿಯ
ಸಂಪೂರ್ಣ ಸ್ವರಾಜ್ಯವನೇ ಗುರಿಯಾಗಿರಿಸಿತು
ಲಾಹೋರಿನಾ ಅಧಿವೇಶನ, ಕೊಟ್ಟಿತ್ತು ಗಾಂಧೀಜಿಗೆ
ಕಾನೂನು ಭಂಗ ಚಳವಳಿಯ ನೇತೃತ್ವವ
ಆಯ್ತಿದುವೇ ಉಪ್ಪಿನಾ ಸತ್ಯಾಗ್ರಹಕ್ಕೆ ಹಾದಿ
ತುಂಬಿ ತುಳುಕಿತ್ತು ಸೆರೆಮನೆಯ ಹಾದಿ
ದುಂಡುಮೇಜಿನ ಪರಿಷತ್ತನ್ನು ಕರೆದರೇನು? ಹೋದವರು ಯಾರು?
ಇದರಿಂದಾಯ್ತು ಗಾಂಧೀ-ಇರ್ವಿನ್ನರಾ ಒಪ್ಪಂದಕೆ ದಾರಿ
2ನೇ ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಹೋದರೇನಾಯ್ತು ಲಾಭ?
ಪುನರಾರಂಭವಾಯ್ತು ಕಾನೂನು ಭಂಗ ಚಳವಳಿಯು
1935ರ ಶಾಸನದಲೂ ಸಿಗಲೇ ಇಲ್ಲವಲ್ಲ ಸಂಪೂರ್ಣ ಸ್ವರಾಜ್ಯ
ವಿಷಾದದ ವಿಭಜನೆಯ ವಿಷಯವ, ದೇಶವ ಒಡೆವ ವಿಚಾರವ
1940ರ ಲಾಹೋರಿನಾ ಅಧಿವೇಶನದಿ ವಿಷದ ಪಡಿಸಿದರಲಾ ಜಿನ್ನಾ
2ನೇ ಮಹಾಯುದ್ಧದಾ ಹಿನ್ನೆಲೆಯಲೇ ಆಗಸ್ಟ್‍ನ ಕೊಡುಗೆ,
ಕರುಣಿಸಿತ್ತು ಡೊಮಿನಿಯನ್ ಸ್ಟೇಟಸ್‍ನ ಕ್ರಿಪ್ಸನಾ ಸಂಧಾನ
ಕಾಂಗ್ರೇಸ್ ಇದನು ತಿರಸ್ಕರಿಸಿದರೇನು, ಪುರಸ್ಕರಿಸಿದರಲಾ ಜಿನ್ನಾ
ಜಿನ್ನಾರ ನಿಲುವು ದೇಶದ ಸಮಗ್ರತೆಯನೇ ಒಡಯ ಹೊರಟ್ಟಿತ್ತು,
ದೇಶವನೇ ತುಂಡು ತುಂಡು ಮಾಡ ಬಯಸಿತ್ತು.
ಮುಂಬೈನ ಅಧಿವೇಶದ ಚಲೆ ಜಾವ್ ಚಳುವಳಿಯ ನಿರ್ಣಯಕೆ
ಸಹಕರಿಸಲೇ ಇಲ್ಲ ಜಿನ್ನಾ , ಕಿಂಚಿತ್ತು ವಿಚಲಿತನೂ ಆಗಲಿಲ್ಲ
ನೆಹರು ನಾಯಕತ್ವದಲಿ ಮಧ್ಯಂತರ ಸರ್ಕಾರ ರಚನೆಯಾದರೇನು ?
ಜಿನ್ನಾನ ಜಿಗುಟುತನ ಅಳಿಯಲಿಲ್ಲವಲ್ಲ, ಅಖಂಡ ಭಾರತವೂ ಉಳಿಯಲಿಲ್ಲ!
“ನೇರ ಕಾರ್ಯಾಚರಣೆದಿನ” ಹೊತ್ತಿತ್ತು ಕೋಮು ಡೊಳ್ಳುರಿ
ದೇಶದ ವಿಭಜನೆಗೆ ಇದುವೆ ದಾರಿಯಾಗಿತ್ತು !
ನೋವಿನಾ ನಡುವೆಯೂ ಸಂತಸದ ಸ್ವಾತಂತ್ರ್ಯ ದೊರಕಿತ್ತು
ಬೆನ್ನ ಹಿಂದೇ ಬಂದಿತ್ತು ಸಮಸ್ಯೆ , ಸವಾಲುಗಳ ಸರಮಾಲೆ.
ಇವನೆದುರಿಸುತಲೇ ಕಳೆದೆವಲಾ ದಶಕ ದಶಕಗಳ ಯೋಜನೆಗಳ ರೂಪಿಸುತ
ಯೋಚನೆ, ಯೋಜನೆಗಳಿಂದಲೇ ಪರಿಹಾರ ದೊರಕದು, ಬೇಕಿಂದು
ದೇಶದ ಉಳಿವು ಸಮೃದ್ಧಿಗೆ, ಪ್ರಾಮಾಣಿಕ ಪ್ರಯತ್ನ, ಜನನಾಯಕರ ಆದರ್ಶ,
ನಿಸ್ವಾರ್ಥ ಸೇವೆ, ತ್ಯಾಗಭಾವದೊಂದಿಗೆ ಶೀಘ್ರವೇ ಪುನರುತ್ಥಾನವಾಗಬೇಕು
ಕರುಣೆ, ಸತ್ಯ, ಪ್ರಾಮಾಣಿಕತೆ, ಅಹಿಂಸೆಯಾ ಮಾರ್ಗವ ಮತ್ತೊಮ್ಮೆ ಹಿಡಿಯ ಬೇಕು
ಸಹಕಾರ, ಸಹಾನುಭೂತಿ, ಸಂಯಮ, ಸಹಬಾಳ್ವೆ ಎಲ್ಲೆಡೆಯು ಮೂಡಬೇಕು.
ಎಲ್ಲರಂಗದಲು ದೇಶವನು ಉನ್ನತ್ತೋನ್ನತಿಗೆ ಕೊಂಡೊಯ್ಯ ಬೇಕು

ವಿ. ಸೂ : ವಿದ್ಯಾರ್ಥಿಗಳ ಸಮಾಥ್ರ್ಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಆರಿಸಿಕೊಳ್ಳುವುದು.

ಈ ಮೇಲಿನ ಸಾಲುಗಳನ್ನು ಓದಿಕೊಂಡು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ವಿಷಯಗಳನ್ನು ಆಧರಿಸಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಕಾಗ್ರೇಂಸ್‍ನ ಮೊದಲ ಅಧಿವೇಶನ ಎಲ್ಲಿ ನಡೆಯಿತು? ಅದರ ಅಧ್ಯಕ್ಷತೆ ವಹಿಸಿದವರು ಯಾರು?
2. ಕಾಂಗ್ರೇಸ್‍ನಲ್ಲಿ ಒಡಕುಂಟಾಗಲು ಕಾರಣವಾದ ಅಧಿವೇಶನ ಯಾವುದು?
3. ಸೂರತ್‍ನ ಅಧಿವೇಶನದಿ ಒಡಕುಂಟಾಗಲು ಕಾರಣವೇನು?
4. ನಾಗಪುರದ ಅಧಿವೇಶನದ ವಿಶೇಷತೆಯನ್ನು ತಿಳಿಸಿರಿ.
5. ಲಾಹೋರ್ ಅಧಿವೇಶನದ ಮಹತ್ವವನ್ನು ತಿಳಿಸಿರಿ.
6. ಅಸಹಕಾರ ಚಳುವಳಿ ಎಂದರೇನು? ಇದರ ನಾಯಕತ್ವವನ್ನು ವಹಿಸಿದವರು ಯಾರು?
7. ಗಾಂಧೀಜಿಯ ಮನಸ್ಸನ್ನು ಘಾಸಿಗೊಳಿಸಿದ ಘಟನೆಯನ್ನು ಕುರಿತು ಬರೆಯಿರಿ.
8. ಲಾಲಾ ಲಜಪತರಾಯರ ಸಾವಿಗೆ ಕಾರಣವೇನು?
9. ನೆಹರು ವರದಿ ಏನನ್ನು ಬಯಸಿತು?
10. ಸಂಪೂರ್ಣ ಸ್ವರಾಜ್ಯವನ್ನು ಗುರಿಯಾಗಿಟ್ಟುಕೊಂಡ ಅಧಿವೇಶನ ಯಾವುದು?
11. ಕಾನೂನು ಭಂಗ ಚಳವಳಿಯ ನೇತೃತ್ವವನ್ನು ವಹಿಸಿದವರು ಯಾರು?
12. ಉಪ್ಪಿನಸತ್ಯಾಗ್ರಹಕ್ಕೆ ಕಾರಣವೇನು?
13. ಉಪ್ಪಿನಸತ್ಯಾಗ್ರಹದ ಪರಿಣಾಮಗಳನ್ನು ತಿಳಿಸಿರಿ.
14. ಗಾಂಧೀ-ಇರ್ವಿನ್ನರಾ ಒಪ್ಪಂದಕ್ಕೆ ಕಾರಣವೇನು?
15. ದುಂಡು ಮೇಜಿನ ಪರಿಷತ್ತಿಗೆ ಕಾರಣವೇನು?
16. 1940ರ ಲಾಹೋರಿನಾ ಅಧಿವೇಶನದ ದುರಂತವನ್ನು ಕುರಿತು ಬರೆಯಿರಿ.
17. ‘ಆಗಸ್ಟ್‍ನ ಕೊಡುಗೆ’ಯನ್ನು ನೀಡಲು ಕಾರಣವೇನು?
18. ಕ್ರಿಪ್ಸನಾ ಸಂಧಾನ ಕಾಂಗ್ರೇಸ್ ಇದನು ತಿರಸ್ಕರಿಸಲು ಕಾರಣವೇನು?
19. ಜಿನ್ನಾರ ನಿಲುವೇನು? ಅದರ ಪರಿಣಾಮವೇನು?
20. ಮಧ್ಯಂತರ ಸರ್ಕಾರ ರಚನೆಯು ಯಾರ ನೇತೃತ್ವದಲ್ಲಿ ನಡೆಯಿತು?
21. “ನೇರ ಕಾರ್ಯಾಚರಣೆದಿನ”ಕ್ಕೆ ಕರೆನೀಡಿದವರು ಯಾರು? ಅದರ ಪರಿಣಾಮವೇನಾಯಿತು?
22. ಭಾರತದ ವಿಭಜನೆಗೆ ಕಾರಣಗಳೇನು?
23. ಸ್ವಾತಂತ್ರ್ಯ ಭಾರತದ ಸಮಸ್ಯೆ ಮತ್ತು ಸವಾಲುಗಳನ್ನು ಕುರಿತು ಬರೆಯಿರಿ.
24. ಭಾರತವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳೇನು?
25. ಭಾರತವನ್ನು ಸಮಸ್ಯೆಗಳಿದ ಮುಕ್ತಗೊಳಿಸುವಲ್ಲಿ ಭಾರತೀಯರಾದ ನಮ್ಮ ಕರ್ತವ್ಯಗಳನ್ನು ಪಟ್ಟಿಮಾಡಿರಿ.

No comments:

Post a Comment