Monday 28 September 2020

ಕಾಮನ ಬಿಲ್ಲು


ಅಂದದಿ ಮೂಡಿದೆ 

ಚಂದದ ಬಿಲ್ಲಿದು

ಕಂದನ ಕರೆಯಿರಿ ತೋರಿಸುವ|

ಬಂಧನ ಇಲ್ಲದ 

ಸುಂದರ ಕಮಾನು

ವಂದಿಸಿ ಎಲ್ಲರು ಹರುಷಿಸುವ||


ಬಣ್ಣಗಳೇಳಿವೆ 

ಚಿಣ್ಣರ ಆಟಕೆ

ತಣ್ಣಗೆ ತನ್ನೆಡೆ ಕರೆಯುತಿದೆ| 

ಅಣ್ಣನು ತಂದಿಹ 

ಹೊನ್ನಿನ ಹೊಳಪಿನ|

ಬಣ್ಣದ ಬಿಲ್ಲನು ಹೋಲುತಿದೆ||


ಎಳೆಯರು ಬಂದರು 

ಗೆಳೆಯರ ಕರೆದರು

ಮಳೆಬಿಲ್ಲಿನ ಸೊಗ ತೋರಿಹರು|

ಇಳೆಗೀಗಲೆ ಬಾ 

ನಲಿಯುತ ಆಡುತ 

ಕಲಿಯುವ ಜೊತೆಯಲಿ ಎಂದಿಹರು||

 

ಏನಿದು ಅಚ್ಚರಿ 

ಸನಿಹದಿ ಮೂಡಿದೆ

ಮನಕದು ಮುದವನೆ ನೀಡುತಿದೆ|

ಭಾನಿನ ಕಿರಣವು 

ಹನಿಯಲಿ ತೂರಿದೆ

ಬಾನಲಿ ಬಣ್ಣವು ಮೆರೆಯುತಿದೆ||


ಕೆಂಪದು ಕಂಡಿದೆ

ಕಿತ್ತಳೆ ಹಳದಿಯು

ಹಸಿರಿನ ನಂತರ ನೀಲಿಯಿದೆ| 

ಊದಾನೀಲಿಯು 

ನೇರಿಳೆ ಮೂಡಿದೆ

ಕಣ್ಣಿಗೆ ಚಂದದಿ ಕಾಣುತಿದೆ||


ಕಾಮನ ಬಿಲ್ಲಿದು 

ಭೂಮಿಗೆ ಕಂಡಿದೆ

ಸೋಮನ ಕಾಂತಿಯ ಮೀರುತಿದೆ|

ಸಾಮದ ನುಡಿಯನು 

ಪ್ರೇಮದಿ ಅರುಹುತ

ಕೋಮಲ ಭಾವವ ತೋರುತಿದೆ||


ಹೊನ್ನು=ಚಿನ್ನ

ಇಳೆ= ಭೂಮಿ

ಸಾಮ =ಚತುರೋಪಾಯಗಳಲ್ಲಿ ಒಂದು, ಚಾತುರ್ಯ, ಗಾನ, ಜ್ಞಾಣ್ಮೆ, ಕೌಶಲ

ಸೋಮ=ಚಂದ್ರ

ಭಾನು=ಸೂರ್ಯ

ಬಾನು=ಆಕಾಶ

No comments:

Post a Comment