Wednesday 15 April 2020

ಶಾಂತಿಯ ಪುತ್ಥಳಿ

ಅಟ್ಟ ಅಡಿಗೆಯು ರುಚಿಯು
ತೊಟ್ಟ ತೊಡುಗೆಡಯು ಶುಭ್ರ
ಕೊಟ್ಟ ಕೊಡುಗೆಯು ಶ್ರೇಷ್ಠ
ದಟ್ಟವಾಗಿಹುದಿವಳ ಕೀರ್ತಿ
ಪಟ್ಟ ಕಷ್ಟಕಾರ್ಪಣ್ಯವ ಮರೆತು
ಇಟ್ಟ ಹೆಸರಂತೆ ಶಾಂತವಾಗಿಹಳು

ಇಟ್ಟವರು ಯಾರೋ ಹೆಸರ
ಇಟ್ಟವರ ಇಂಗಿತವ ತಿಳಿದು
ಬೆಟ್ಟು ಮಾಡದಂತೆ ಯಾರು
ಇಟ್ಟ ಹೆಸರಿಗೆ ಅನ್ವರ್ಥವಾಗಿ
ಶಾಂತಿ ರತ್ನವೇ ಆಗಿಹಳು

ಬಹುಭಾಷಾ ವಿಶಾರದೆ
ಸರಳ ಸಜ್ಜನಿಕೆಯ ಗಣಿ
ನಿರಾಡಂಬರ ಸದ್ಗುಣಿ
ನಿರಹಂಕಾರಿ, ನಿರುಪದ್ರವಿ
ನಗುಮೊಗದ ಚೆಲುವೆ
ಶುಭ್ರ ಶ್ವೇತಕೇಶ ಸುಂದರಿ
ಸಾಹಿತ್ಯರಚನಾ ಪಂಡಿತೆ

ನಾಗರಾಜನ ಕೈಹಿಡಿದು
ಸಕ್ಕರೆಗೆ ಅಕ್ಕರೆಯ ಮಗಳಂತಿದ್ದು
ಸೇತುರಾಮನ ಮುದ್ದು ಸತಿಯಾಗಿ
ಬಂಧು ಮಿತ್ರರ ಮನಗೆದ್ದು
ಸದ್ದು ಗದ್ದಲಕೆಡೆಗೊಡದೆ
ಶಾಂತಮೂರ್ತಿಯೆ ತಾನಾಗಿ
ಹೆಸರಿಗನ್ವಯವಾಗಿ ತಾನಿಹಳು

ಉಪ್ಪಿಟ್ಟು ಚಿತ್ರಾನ್ನ
ಮಾವಿನಕಾಯಿ ಚಟ್ನಿ
ಕೋಸುಂಬರಿ ಸಜ್ಜಿಗೆ
ಮಜ್ಜಿಗೆಹುಳಿ ತಿಳಿಸಾರು
ನುಚ್ಚಿನುಂಡೆ ಅಂಬೊಡೆ
ಬೆಳೆಯುವುದು ಪಟ್ಟಿ
ತಿಂದವರಿಗಷ್ಟೆಗೊತ್ತು
ಅವಳ ಕೈರುಚಿಯು
ಹದದಿ ಅಡುಗೆಯಮಾಡಿ
ಪಾಕಪ್ರವೀಣೆಯೆನಿಸಿಹಳು


ಸಾಹಿತ್ಯ ಸಂಗೀತ
ಹಾಡು ಹಸೆ
ಆಟ ಪಾಠ ಪರಿಣತೆ
ದೇಶ ವಿದೇಶಗಳ ಸುತ್ತುತ
ಹಬ್ಬಹರಿದಿನವ ಬಿಡದೆ
ನೇಮದಿಂ ಆಚರಿಸುತ
ಕಥೆ ಕವನಗಳ
ರಚಿಸಿ ಹರ್ಷಿಸುವಳು

ಎಲ್ಲವನು ಮನಸಾರೆ ಮೆಚ್ಚಿ
ಎಲ್ಲರಾ ಒಳಿತನು ತಾ ಬಯಸಿ
ಎಲ್ಲಾ ವಿಷಯಗಳನು ಬೋಧಿಸಿ
ಎಲ್ಲರಾ ಗುಣಗಳನು ತಾ ಗ್ರಹಿಸಿ
ಎಲ್ಲರನು ನಲ್ಮೆಯಿಂ ಒಂದಾಗಿಸಿ
ಎಲ್ಲರೊಡನಿರಲು ಬಯಸುವವಳು

ನೀತಿ ನಿಯಮಪಾಲನೆಯನಿಷ್ಟಪಟ್ಟು
ಕಲಿಕೆಯುವಲಿ ಕಲಿಸುವಲಿ ಬಿಗಿಪಟ್ಟು
ಊಟ ಉಪಚಾರಗಳಲಿ  ಅಚ್ಚುಕಟ್ಟು 
ಉಡುಗೆ ತೊಡುಗೆಯಲಿ ಕಟ್ಟುನಿಟ್ಟು
ಇವೇ ಇವಳ ಬಾಳಿನ ಸಾಧನೆಯಗುಟ್ಟು

ವೈ ಎಂದು ಯಾರನು ಕೇಳಿಲ್ಲ
ವಿರಸಕೆಂದು ಎಡೆಗೊಟ್ಟಿಲ್ಲ
ಶಾಂತಿಯ ಕಳೆದುಕೊಂಡಿಲ್ಲ 
ತಾರತಮ್ಯವನೆಂದೂ ಮಾಡಿಲ್ಲ
ಮಕಾರದ ನುಡಿಯ ಗಿರ್ವಾ- 
-ಣಿ ವಿದ್ಯೆಯಾ ಶಾರದೆ, ಶಾಂತಿಯ ತವನಿಧಿ
ಶಾಂತಿ, ಶಾಂತಿ ಸೇತುರಾಂ, ಶಾಂತಾ ಮಣಿ. 

No comments:

Post a Comment