Tuesday 9 July 2019

ಕಾಮನಬಿಲ್ಲು

ಅಮ್ಮ ಅಮ್ಮ ಆಗಸದಲ್ಲಿ
ವರ್ಣಗಳಾಟವದೇನಮ್ಮ
ಆಕಾಶದಿ ಮೂಡಿಹ
ಬಣ್ಣದ ಕಮಾನು ಅದೇನಮ್ಮ
ಮಳೆಗಾಲದಿ ಮಾತ್ರವೆ
ಕಾಮನಬಿಲ್ಲದು ಕಾಣುವುದೇಕಮ್ಮ?
ಇಂದ್ರಚಾಪಕೆ ಏಳು ಬಣ್ಣವದೇಕಮ್ಮ?

ಗೋಲಾಕಾರದ ಮಳೆ ಹನಿಯಲಿ
ಸೂರ್ಯನ ಕಿರಣವು ತೂರುವುದು
ಮಳೆಹನಿ ಪಟ್ಟಕದಂದದಿ ವರ್ತಿಪುದು
ಮೊದಲಿಗೆ ಬೆಳಕಿನ ವಕ್ರೀಭವನ
ನಂತರ ಸಪ್ತವರ್ಣದ ವಿಭಜನ
ಅಂತ್ಯದಿ ಅದರದೆ ಪ್ರತಿಫಲನ
ಆಗಸದಿ ವರ್ಣಗಳ ನರ್ತನ

ಸಪ್ತವರ್ಣದ ಚಿತ್ತಾರವದು
ಕೆಂಪು ಕಿತ್ತಳೆ ಹಳದಿ ಹಸಿರು
ನೀಲ ಊದ ನೇರಳೆ ಬಣ್ಣವದು
ಬೆಳಕಿನ ಬಣ್ಣದ ಅಚ್ಚರಿ ಆಟವದು
ಪ್ರಕೃತಿಯು ಕರುಣಿಪ ವರದಾನವದು
ನೋಡುವ ನಯನಕೆ ಹಬ್ಬವದು

ಸೂರ್ಯನು ಮಳೆಗಾಲಕೆ ಕಾಯುವನು
ವರ್ಣಗಳಾಟವನಾಡುತ ಮುದನೀಡುವನು
ಸೂರ್ಯನ ಕಿರಣ ಮಳೆಹನಿ ಸೇರದಿರೆ
ಕಾಮನಬಿಲ್ಲು ಮೂಡದು ತಿಳಿ ಕಂದ
ಅದನೋಡುತ ನೋಡುತ ನಲಿಕಂದ
ವೈಜ್ಞಾನಿಕ ಸತ್ಯವನರಿಯುತ ಬೆಳೆಕಂದ

ಕಾಮನಬಿಲ್ಲಿನಾಟವ ತಿಳಿದೆನು ಅಮ್ಮ
ವಕ್ರೀಭವನ ಪ್ರತಿಫಲನವಕಲಿತೆನು ಅಮ್ಮ
ಸಪ್ತವರ್ಣದ ಮರ್ಮವ ಅರಿತೆನು ಅಮ್ಮ
ಬೆಳಕಿನಾಟವ ನೋಡುತ ನಲಿವೆನು ಅಮ್ಮ
ಪ್ರಕೃತಿಯಾಟಕೆ ಮನಸಾರೆ ವಂದಿಪೆನು ಅಮ್ಮ
ಬಾನಲಿ ಮೂಡಿಹ ಕಮಾನು ನೋಡುವ ಬಾರಮ್ಮ

********************

No comments:

Post a Comment