Sunday 8 July 2018

ಭಾವಪೂರ್ವಕ ಶ್ರದ್ಧಾಂಜಲಿ



ಕಾಯಕದಲಿ ಕಾಯವ ಗಟ್ಟಿಗೊಳಿಸಿ
ಕರ್ಮಯೋಗವ ತಾ ನಂಬಿ
ತನ್ನೆಲ್ಲ ಕಾರ್ಯವ ತಾನೇ ಎಸಗುತ
ಕರ್ಮ ಯೋಗಿಯಂತೆ ಬದುಕಿದಾಕೆ;
ತನ್ನ ಸಿದ್ಧಾಂತಗಳಿಗೆ ತಾ ಬದ್ಧರಾಗಿ
ತನ್ನಂತೆ ತಾನಿದ್ದು ಕೊನೆವರೆಗೂ
ತನ್ನ ತನುಮನವನು ಅದಕೆ ಅಣಿಗೊಳಿಸಿ
ತನ್ನತನದೊಡನೆ ಸದಾ ಬದುಕಿದಾಕೆ;
ಮಕ್ಕಳು ಮರಿಗಳ ಅಕ್ಕರೆಯಿಂದ ಸಲಹುತ
ಬಸುರಿ ಬಾಣಂತಿಯರ ಆರೈಕೆ ಮಾಡುತ
ಅನಾರೋಗ್ಯದಿಂದ ಬಳಲುವವರ ಸಂತೈಸುತ
ತನ್ನವರ ಸೇವೆಗೆ ಮುಂದಾಗಿ ಬದುಕಿದಾಕೆ;
ತನ್ನೊಲವಿನ ಬಂಧು ಮಿತ್ರರ ತಪ್ಪು ಒಪ್ಪುಗಳ ಮನ್ನಿಸುತ
ಅವರ ಯೋಗಕ್ಷೇಮಕೆ ಕಟಿಬದ್ಧಳಾಗಿ ಅನವರತ ನಿಂತು
ಕಿಂಚಿತ್ತು ಚ್ಯುತಿ ಬಾರದಂತೆ ಎಚ್ಚರದಿ ಕಾರ್ಯ ನಿರತಳಾಗಿ
ಬದಕ ಹಸನಗೊಳಿಸೆ ತುಡುಕಿ ಬದುಕಿದಾಕೆ;
ಸೋದರಿಯ ಮಕ್ಕಳ ಅಕ್ಕರೆಯಿಂದ ಸಾಕಿ ಸಲಹಿ
ಸೋದರನಿಗೆ ತನ್ನೆಲ್ಲವನೂ ಧಾರೆಯೆರೆದು
ತವರು ಮನೆಯೇಳ್ಗೆಯ ಮನಸಾರೆ ಬಯಸುತ
ಭ್ರಾತೃ ಪ್ರೇಮದಿ ಪರಾಕಾμÉ್ಠಯ ಮೀರಿದಾಕೆ;
ಕೌತುಕಗಳಲಿ ಕುತೂಹಲವ ತಳೆದು
ವಿಸ್ಮಯಗಳನು ವಿಸ್ಮಯದಿಂದ ನೋಡಿ
ಹಾಡು ಹಸೆಯ ಮನಸಾರೆ ಮೆಚ್ಚುತ
ಹಬ್ಬ ಹರಿದಿನವ ಬಿಡದೆ ಮಾಡಿದಾಕೆ;
ಚಸ್ಮದ ಮೊರೆಯಿಲ್ಲದೆ ಕೊನೆಯವರೆಗು ಓದಿಬರೆದು
ಆರೋಗ್ಯ ಸಲಹೆಗಳ ಕಾಳಜಿಯಿಂದ ಸಂಗ್ರಹಿಸುತ
ಬಿಡದೆ ಆರೋಗ್ಯದ ಕಡೆಗೆ ಗಮನನೀಡಿ
ಜತನದಿಂದ ತನ್ನಾರೋಗ್ಯವ ತಾ ಕಾಯ್ದುಕೊಂಡಾಕೆ;
ಒಡವೆ ವಸ್ತ್ರ ಆಸ್ತಿ ಮೋಹ ಕಿಂಚಿತ್ತಿಲ್ಲದೆ
ಒಡನಾಡಿಗಳಲಂಕಾರವ ಮನಸಾರೆ ಮೆಚ್ಚಿ
ಒಡಹುಟ್ಟಿದವರ ಒಳಿತನೇ ತಾ ನಿತ್ಯ ಬಯಸಿ
ಒಡಲ ಸಂಕಟವ ಮರೆಮಾಚಿ ಬಾಳದೂಡಿದಾಕೆ;
ಸ್ವಚ್ಛತೆಗೆ ಕೊನೆಯವರೆಗು ಆದ್ಯತೆಯ ನೀಡಿ
ವಸ್ತು ವಾಸ್ತವ್ಯಗಳನು ಒಪ್ಪಗೊಳಿಸಿ
ಚಿಂದಿ ಬಟ್ಟೆ-ಬರಿಯನು ಬಿಡದೆ ಸ್ವಚ್ಛಗೊಳಿಸಿ
ಶುಭ್ರತೆಗೆ ಮತ್ತೊಂದು ಹೆಸರಾದಾಕೆ;
ಹಪ್ಪಳ ಸಂಡಿಗೆ ಉಪ್ಪಿನಕಾಯಿ ಬಾಳಕವ ಸಿದ್ಧಗೊಳಿಸಿ
ಬೋಂಡ ಪಕೋಡ ಚಕ್ಕುಲಿ ಕೋಡುಬಳೆಗಳನು ಇಚ್ಛಿಸಿ
ಒಳ್ಳೆಣ್ಣೆಯೊಂದಿಗೆ ಉಪ್ಪಿನಕಾಯಿ ಚಟ್ನಿಪುಡಿ ಗೊಜ್ಜಮಿದ್ದು
ಕಾಳುಹುಳಿ ಹಾಲುಬಾಯಿ ಸವಿಯ ಬಯಸಿದಾಕೆ;
ಶ್ರೀನಿವಾಸಜೋಯಿಸರ ಮಡದಿಯಾಗಿ
ಪುರಾಣಿಕರ ಆಸರೆಯಲಿ ಬಾಳಿ ಬದುಕಿ
ನಿಂಗು, ಅಮ್ಮ, ಅಜ್ಜಿ, ಗಿಂಡಿಅಜ್ಜಿ, ನಾಗರತ್ನಳಾಗಿ
ಯಾರಿಗೂ ಯಾವುದಕು ಎಂದೆಂದೂ ತಲೆಬಾಗದೆ
ಯಾರಿಗೂ ಯಾವುದಕು ಹೊರೆಯಾಗದಂತೆ ಬದುಕಿದ
ಅವರಾತ್ಮಕೆ ಚಿರ ಶಾಂತಿ ದೊರಕಲಿ
ಅವರು ಬಯಸಿದ ಮುಕ್ತಿ ಸಿಗಲಿ.
  *************

No comments:

Post a Comment