ಎಂಬತ್ತು ವಸಂತಗಳ ಚೆಲುವ ಸವಿದು
ಸಹಸ್ರ ಚಂದ್ರಮನ ದರ್ಶನವ ಗೈದು
ಸರಳ ಸಜ್ಜನಿಕೆಯಿಂ ಎಲ್ಲೆಡೆಯು ನಡೆದು
ಅನುಭವಾಮೃತವ ಅನ್ಯರಿಗೆ ಧಾರೆಯೆರೆದು
ಬಸವ ಸಿದ್ಧಾಂತವ ಅರೆದು ಕುಡಿದು
ರಾಜ ಗಾಂಭೀರ್ಯದಿಂ ಮೆರೆದು
ಶಾಸ್ತ್ರಿತನದಿಂ ಪಾಂಡಿತ್ಯವಾ ಪಡೆದು
ಬಸವರಾಜಶಾಸ್ತ್ರಿ’ ಗೆ ಅನ್ವರ್ಥವಾದಾತ
ಕಾಯಕ ಸಿದ್ಧಾಂತಕೆ ಸದಾ ಬದ್ಧರಾಗಿ
ನೇಮ ನಿಷ್ಠೆಯಿಂ ಸಕಲ ಕಾರ್ಯವೆಸಗಿ
ನಡೆ ನುಡಿಗಳಲ್ಲಿ ಸದಾ ಒಂದಾಗಿ
ಹಾಸ್ಯಲೇಪಿತ ಮೃದು ಮಧುರ ನುಡಿಗೆ ಹೆಸರಾಗಿ
‘ಗಟ್ಟಿಮಾತಿ’ನಿಂದ ಬೋಧನೆಯನೆಸಗಿ
ಎಲ್ಲರ ಮನದಲೂ ನೆಲೆಯ ಪಡೆದಾತ
ನೀತಿ ನಿಯಮಪಾಲನೆಯನಿಷ್ಟಪಟ್ಟು
ಊಟ ಉಪಚಾರದಲಿ ಕಟ್ಟುನಿಟ್ಟು
ಉಡುಗೆ ತೊಡುಗೆಯಲಿ ಅಚ್ಚುಕಟ್ಟು
ಕಾರ್ಯಸಾಧನೆಯಲಿ ಬಿಗಿಪಟ್ಟು
ಅವೇ ಇವರ ಬಾಳಿನ ನೆಲೆಗಟ್ಟು
ಬಹುಭಾಷಾ ವಿಶಾರದ
ಸರಳ ಸಜ್ಜನಿಕೆಯ ಗಣಿ
ನಿರಾಡಂಬರದ ಸದ್ಗುಣಿ
ನಿರಹಂಕಾರಿ, ನಿರುಪದ್ರವಿ
ಶುಭ್ರ ಶ್ವೇತವಸ್ತ್ರಧಾರಿ
ಸಾಹಿತ್ಯಾಸಕ್ತ, ಪತ್ರಿಕೋದ್ಯಮಿ
ಚಾಕಚಕ್ಯತೆಯಿಂದಲಿ
ಚತುರೋಪಾಯದಿಂದಲಿ
ಚುರುಕು ನಿರ್ಧಾರದಿಂದಲಿ
ಚಾಣಾಕ್ಷತನವ ಮೆರೆಸಿದಾತ
ಭಯದಲೂ ನಿರ್ಭಯದಿಂದಿದ್ದು
ಬಯಸಿದುದಬಿಡದೆ ಪಡೆದಾತ
ವೃತ್ತಿ ಬಾಂಧವನಿವ
ವೃತ್ತಿಗೆ ನಿಷ್ಠನಾಗಿದ್ದನಿವ
ವೃತ್ತಿಗೆ ತಕ್ಕ ಪ್ರವೃತ್ತಿಯ ಬೆಳೆಸಿಕೊಂಡವನಿವ
ವೃತ್ತಿ ಪ್ರವೃತ್ತಿಯಿಂ ಜನಾನುರಾಗಿಯಾದವನಿವ
ವೃತ್ತಿ ಬಾಂಧವರಿಂ ಬುದ್ಧನೆನಿಸಿಕೊಂಡಾತನಿವ
ವಾಕ್ಪಟುತ್ವದಲಿ, ವಾಕ್ಚತುರತೆಯಲಿ
ನಿಷ್ಣಾತನಾಗಿಹ ‘ಬಸವರಾಜ ಶಾಸ್ತ್ರಿ’ಗಳಿಗೆ
ನಮ್ಮ ನೆಚ್ಚಿನ ಒಲುಮೆಯ ‘ಪಂಡಿತ್ಜೀ’ಗೆ
ಆ ಭಗವಂತ ಸರ್ವಸಂಪದವ ಕರುಣಿಸಲೆನುತ
ಬೇಡುವೆವು ಬಯಸುವೆವು ನಾವೆಲ್ಲರೊಂದಾಗಿ
No comments:
Post a Comment