1. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
‘ಶರಣ’ ಎಂಬ ಶಬ್ದಕ್ಕೆ ಸಿದ್ಧ, ಮಹಂತ, ಅನುಭಾವಿ, ಜ್ಞಾನಿ ದಾರ್ಶನಿಕ ಎಂಬೆಲ್ಲ ಅರ್ಥಗಳಿವೆ. ವಾಸ್ತವವಾಗಿ ಅದು ವಿಕಾಸದ ಒಂದು ಪರಿಪೂರ್ಣ ಸ್ಥಿತಿ. ಇದು ಸ್ಪಷ್ಟಗೊಂಡಾಗ ಶರಣ ಶಬ್ದದ ನಿಜವಾದ ಅರ್ಥ ನಮಗೆ ಮನವರಿಕೆಯಾಗುತ್ತದೆ. ಕಲ್ಲುಮಠದ ಪ್ರಭುದೇವನು ತನ್ನ ’ಲಿಂಗಲೀಲಾ ವಿಲಾಸ ಚಾರಿತ್ರ್ಯ’ದಲ್ಲಿ ವಚನಗಳು, ಶರಣರು ‘ನಡೆದು ನುಡಿದ ಮಾತುಗಳು’ ಎಂದು ವಿವರಿಸಿದ್ದು ಸತ್ಯ. ಶರಣಸಾಹಿತ್ಯ ಕೇವಲ ವೀರಶೈವರು ಬರೆದುದು ಎಂಬ ಕಾರಣಕ್ಕಾಗಿ ಅಲ್ಲ, ಅದರಲ್ಲಿ ಚಿರಂತನಮೌಲ್ಯಗಳಿವೆ ಎಂಬ ಕಾರಣಕ್ಕಾಗಿ ಇಂದಿಗೂ ಅದು ವಿಶ್ವಮಾನ್ಯವಾಗಿದೆ.
ಕನ್ನಡ ಪ್ರಥಮ ಭಾಷೆಗಾಗಿ
2 X 2=4.
1. ಶರಣ ಶಬ್ದದ ವೈಶಿಷ್ಟ್ಯವೇನು?
2. ಶರಣಸಾಹಿತ್ಯದ ಮಹತ್ವವೇನು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1 X 4=4
1. ಶರಣ ಎಂಬ ಶಬ್ದಕ್ಕಿರುವ ಬೇರೆ ಬೇರೆ ಅರ್ಥಗಳನ್ನು ತಿಳಿಸಿರಿ.
2. ಶರಣ ಶಬ್ದದ ನಿಜವಾದ ಅರ್ಥ ನಮಗೆ ಯಾವಾಗ ಮನವರಿಕೆಯಾಗುತ್ತದೆ ?
3. ಶರಣಸಾಹಿತ್ಯವು ವಿಶ್ವಮಾನ್ಯವಾಗಲು ಕಾರಣವೇನು?
4. ಪ್ರಭುದೇವನ ಕೃತಿ ಯಾವುದು?
2. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಶರಣರು ಅನುಭವವನ್ನು ಕಲಾತ್ಮಕಗೊಳಿಸಲು ಪ್ರಯತ್ನಿಸದೆ ಜನರ ಬದುಕು ಕಲಾತ್ಮಕವಾಗಿರಬೇಕೆಂದು ಬಯಸಿದರು. ಹೀಗಾಗಿ ಅವರು ತಾವು ಒಲಿದಂತೆ ಹಾಡಿದರು, ಬರೆದರು, ಬದುಕಿದರು. ಶರಣಸಾಹಿತ್ಯಕ್ಕೆ ಜಾತಿಸೂತಕ, ವರ್ಗಸೂತಕ, ಲಿಂಗಸೂತಕಗಳು ಇರುವುದಿಲ್ಲ. ಶರಣ ಎನ್ನುವುದು ಜಾತಿಯಲ್ಲ, ಜ್ಯೋತಿರ್ಮಯ ವ್ಯಕ್ತಿತ್ವ. ಶರಣ ಸಾಹಿತ್ಯ ಸಮಸ್ತ ಮಾನವ ಕುಲಕ್ಕೆ ಸಂಬಂಧಿಸಿದ ಸಾಹಿತ್ಯ. ಮಾನವೀಯ ಮೌಲ್ಯಗಳ ಪ್ರತಿಪಾದನೆಯೇ ಈ ಸಾಹಿತ್ಯದಲ್ಲಿ ವಿಶೇಷವಾಗಿ ಕಾಣಸಿಗುತ್ತದೆ. ವಿಶ್ವದ ವಿವಿಧ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಮಾನಸಿಕ ಅಶಾಂತಿ, ಸಾಮಾಜಿಕ ಸಂಘರ್ಷ, ಧಾರ್ಮಿಕ ಮತಾಂಧತೆ, ಮಾನವೀಯತೆಯ ಅವಹೇಳನ, ಮಾನವೀಯ ಮೌಲ್ಯಗಳ ಅಪಮೌಲ್ಯೀಕರಣ, ಭಯದ ಬದುಕು, ಜೀವನದ ಅಸ್ಥಿರತೆ, ಅಶಾಂತಿ ಮೊದಲಾದ ಹಲವಾರು ಜ್ವಲಂತ ಸಮಸ್ಯೆಗಳಿಗೆ ಶರಣ ಸಾಹಿತ್ಯ ಸಂಜೀವಿನಿಯೆನಿಸಿದೆ.
ಕನ್ನಡ ಪ್ರಥಮ ಭಾಷೆಗಾಗಿ
2 X 2=4
1. ಶರಣ ಸಾಹಿತ್ಯ ಸಮಸ್ತ ಮಾನವ ಕುಲಕ್ಕೆ ಸಂಬಂಧಿಸಿದ ಸಾಹಿತ್ಯವೆನಿಸಲು ಕಾರಣವೇನು?
2. ಶರಣ ಸಾಹಿತ್ಯವು ಸಂಜೀವಿನಿ ಎನಿಸಲು ಕಾರಣವೇನು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1 X 4=4
1. ಶರಣರು ಏನನ್ನು ಬಯಸಿದರು?
2. ಶರಣಸಾಹಿತ್ಯದಲ್ಲಿ ವಿಶೇಷವಾಗಿ ಏನನ್ನು ಕಾಣಬಹುದು?
3. ವಿಶ್ವದ ವಿವಿಧ ಭಾಗಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಾವುವು?
4. ಶರಣ ಸಾಹಿತ್ಯ ಯಾವುದಕ್ಕೆ ಸಂಜೀವಿನಿ ಯಾಗಿದೆ?
3. ಈ ಕೆಳಗಿನ ಗದ್ಯಭಾಗವನ್ನು ಓದಿಕೊಂಡು ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
ಶರಣರು ಕೊಟ್ಟ ಮಹತ್ವಪೂರ್ಣವಾದ ಕೊಡುಗೆಗಳಲ್ಲಿ ಕಾಯಕವು ಒಂದು. ಕಾಯಕವು ವೈದಿಕರ ‘ನಿಷ್ಕಾಮ ಕರ್ಮ’, ಜೈನರ ‘ಅಪರಿಗ್ರಹ’, ಕ್ರೈಸ್ತರ ‘ಕಾಲಿಂಗ್’ ಮುಂತಾದ ಪದಗಳಿಗಿಂತಲೂ ಭಿನ್ನವಾಗಿದೆ. “ಕಾಯವುಳ್ಳವರೆಲ್ಲ ಕಾಯಕ ಮಾಡಲೇಬೇಕು, ಗುರು-ಲಿಂಗ-ಜಂಗಮವಿರಲಿ ಎಲ್ಲವೂ ಕಾಯಕದೊಳಗು” ಎಂಬಲ್ಲಿ ಕಾಯಕ ಎಲ್ಲರಿಗೂ ಕಡ್ಡಾಯವಾಗಿದೆ. “ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು” ಎಂಬ ಆಯ್ದಕ್ಕಿ ಮಾರಯ್ಯನ ಈ ವಚನ ಕಾಯಕ ತತ್ತ್ವಕ್ಕೆ ಉಜ್ವಲ ಉದಾಹರಣೆಯಾಗಿದ್ದು ಕಾಯಕನಿಷ್ಠೆಯನ್ನು ಎತ್ತಿ ಹಿಡಿದಿದೆ. “ಅಸಿ ಮಸಿ ಕೃಷಿ ವಾಣಿಜ್ಯ ಪಹರಿ ಬಾಗಿಲು ಬೊಕ್ಕಸ ಬಿಯಗ ಮುಂತಾದ ಕಾಯಕಗಳೆಲ್ಲ ಒಂದೇಯೆಂಬೆ” ಎಂಬ ಅಕ್ಕಮ್ಮನ ಈ ವಚನದಿಂದ ಶರಣರು ಎಲ್ಲ ಕಾಯಕವನ್ನು ಸಮಾನವಾಗಿ ಕಂಡಿದ್ದಾರೆ ಎಂಬುದು ವಿದಿತವಾಗುತ್ತದೆ. “ಆವಾವ ಕಾಯಕದಲ್ಲಿ ಬಂದರೂ ಭಾವಶುದ್ಧವಾಗಿ ಗುರು-ಲಿಂಗ-ಜಂಗಮಕ್ಕೆ ಮಾಡುವುದೇ ಶಿವಪೂಜೆ” ಎಂಬ ನುಲಿಯ ಚಂದಯ್ಯನ ವಚನದಿಂದ ಕಾಯಕವು ಗುರು-ಲಿಂಗ-ಜಂಗಮ ಸೇವೆಯ ಸಾಧನವಾಗಿರುವುದರಿಂದ ಅದು ಸತ್ಯಶುದ್ಧವಾಗಿರಬೇಕು. ‘ನಿಷ್ಕಾಮ’ ನಿಸ್ವಾರ್ಥದಿಂದ ಕೂಡಿದ್ದು ಶುಚಿತ್ವವನ್ನು ರೂಢಿಸಿಕೊಂಡಿರಬೇಕು. ಇಲ್ಲಿ ಯಾರ ಒತ್ತಾಸೆ ಇರಕೂಡದು ಎಂಬ ಭಾವವಿದೆ.
ಕನ್ನಡ ಪ್ರಥಮ ಭಾಷೆಗಾಗಿ
2 X 2=4
1. ‘ಕಾಯಕ’ವು ಶರಣರು ಕೊಟ್ಟ ಮಹತ್ವಪೂರ್ಣವಾದ ಕೊಡುಗೆಯಾಗಿದೆ ಏಕೆ?
2. ಕಾಯಕವನ್ನು ಕುರಿತು ಶರಣ ಶರಣೆಯರು ನುಡಿದಿರುವ ನುಡಿಗಳಾವುವು?
ಕನ್ನಡ ದ್ವಿತೀಯ ಮತ್ತು ತೃತೀಯ ಭಾಷೆಗಾಗಿ
1X4=4
1. ‘ಕಾಯಕ’ವು ಯಾವ ಪದಗಳಿಗಿಂತಲೂ ಭಿನ್ನವಾಗಿದೆ?
2. ಕಾಯಕ ತತ್ತ್ವಕ್ಕೆ ಉಜ್ವಲ ಉದಾಹರಣೆ ಯಾವುದು?
3. ಶರಣರು ಎಲ್ಲ ಕಾಯಕವನ್ನು ಸಮಾನವಾಗಿ ಕಂಡಿದ್ದಾರೆ ಎಂದು ಹೇಳುವ ನುಡಿಯಾವುದು?
4. ನುಲಿಯ ಚಂದಯ್ಯನ ವಚನದಿಂದ ತಿಳಿದುಬರುವ ವಿಚಾರ ಯಾವುದು?
***********************