Sunday, 29 November 2026

*ಭಗವದ್ಗೀತೆಯ ಸಾರ* ಅಧ್ಯಾಯ-೨

 ನರಗೆ ನಾ।ರಯಣನುಪ।

ದೇಶಿಸಿದ | ರಸಘಟ್ಟ

ಸೆರೆಹಿಡಿದು। ಸಾರುತಿಹ।

 ಹೃದಯಭಾಗವಿದು

ಶರಣಾರ್ಥಿ। ಪಾರ್ಥನಿಗೆ।  ಮಾರ್ಗದ।ರ್ಶನವಿತ್ತ

ಎರಡನೇ। ಅಧ್ಯಾಯ। ನನ್ನ ಕಂದ||


ಪರಮಾರ್ಥತತ್ವದವಿವೇಕ ಸಂಖ್ಯಾಯೋಗ

ಪುರುಷಾರ್ಥ ಚತುರೋಕ್ತವನರುಹಿದ ಖಂಡ

ನರನ ಖಿನ್ನತೆ ಕಳೆದು ಸರಿಪಥವ ತೋರಿಹನು

ಹರಿಯಧರ್ಮವನಳಿಸೆ ನನ್ನ ಕಂದ||


ಸರಿತಪ್ಪುಗಳ ನಿಷ್ಕರ್ಷೆಯು ಸುಲಭವೇನಲ್ಲ

ಸರಿಸಿಮೌಢ್ಯವನು ಕಣ್ಬಿಟ್ಟು ನೋಡುತಲಿ

ಪರಿಕಿಸಿದೊಡೆಲ್ಲವೂ ಪೂರ್ವನಿರ್ಧಾರಿತವು

ಪರಮಾತ್ಮನಿಚ್ಛೆಯದು ನನ್ನ ಕಂದ|| 


ಮುಂದುವರಿಯಿತು ಅರ್ಜುನನಮನದ ಖಿನ್ನತೆಯು

ಚಂದದೀ ದೇಹ ನಶ್ವರ ಪಾರ್ಥ ಕೇಳು

ಎಂದಾತ್ಮದಮರತ್ವವ,  ಸ್ಥಿತಪ್ರಜ್ಞತೆಯ

ನಂದನರುಹಿದನಂದು ನನ್ನಕಂದ||


ಕರುಣೆ ತರವಲ್ಲ ಸಮರದಿ, ದೇಹನಶ್ವರವು

ಕೊರಗುವುದ ಬಿಟ್ಟೇಳು ಕ್ಷಾತ್ರವನು ಮೆರೆಸೆನುತ

ಅರುಹಿದನು ಆತ್ಮದಮರತ್ವವನು ಭಗವಂತ 

ಧರೆಯ ಕಾಪಿಡಲೆಂದು ನನ್ನ ಕಂದ||


ಭಾವಪರವಶತೆಯಲಿ ಮೈಮರೆತ ಅರ್ಜುನನ

ಆವರಿಸುತಲಿ ಮೌಢ್ಯ ಮನಕಲಕುತಿರಲು

ಜೀವಲಕ್ಷಣದೊಡಾತ್ಮದಮರತ್ವವನರುಹುತ

ಕೈವಲ್ಯ ಪಥತೋರ್ದ ನನ್ನ ಕಂದ||


ಅಹಿತವೆಂದೆಣಿಪ ಸ್ವಜನ ಹತ್ಯೆಭಯಕಳೆದು

ವಿಹಿತವದು ಲೋಕಕಲ್ಯಾಣಕೆಂದರುಹಿ

ಮಹಿಮಾಪುರುಷ ನರನ ಮೌಢ್ಯವನು ಕಳಚಿದನು

ಮಹಿಯನುದ್ಧರಿಸಲಿಕೆ ನನ್ನ ಕಂದ||


ಹಳೆಹರುಕ ಜೀರ್ಣ ಬಟ್ಟೆಯ ಧರಿಸಲಾದೀತೆ

ಹಳೆಯ ಜರ್ಜರಿತ ದೇಹವನಂತೆಯೆ

ತೊಳೆದು ನಿರ್ಮಲಗೊಳಿಸಿ ಮರುಬಳಸಲಾದೀತೆ 

ಕಳಚುವುದೆ ಸರಿದಾರಿ ನನ್ನ ಕಂದ||


ಜೀವಕ್ಕೆ ದೇಹವೇ ಬಂಧನದ ಪಂಚರವು 

ಜೀವಕ್ಕೆ ಸಾವಿಲ್ಲ ನಿತ್ಯವದನಾದಿ

ಜೀವಹೊಸ ಬಟ್ಟೆ ತೊಡೆ ಜನನ ತೊರೆಯಲು‌‌ ಮರಣ

ಜೀವದ್ಹರವನಂತ  ನನ್ನ. ಕಂದ||


ಕರ್ಮಕ್ಕೆ ಹೇತುನೀನಷ್ಟೆಯೆಂಬರಿವಿರಲಿ 

ಕರ್ಮಫಲ ಹೇತು ಭಗವಂತ ನೀನಲ್ಲ 

ಕರ್ಮಕ್ಕೆ ತಕ್ಕಫಲ ಕೊಡದೆಯೇ ಬಿಡನವನು

ಕರ್ಮಸಿದ್ದಾಂತವಿದು ನನ್ನ ಕಂದ||


ಜೀವವಣುರೂಪಿ  ಪರಮಾತ್ಮನ ಪ್ರತಿಕೃತಿಯು

ಜೀವ ಮಾರ್ಪಡದ ನಿಯತಿಗೆ ಬದ್ಧವು

ಸಾವಿಲ್ಲವದಕೆ ಒಣಗದು ಸುಡದು ನೆನೆಯದದು 

ಜೀವತತ್ವನಿಗೂಢ ನನ್ನ ಕಂದ||

No comments:

Post a Comment