Sunday, 29 November 2026

ವಿಘ್ನ ನಿವಾರಣೆಗೆ ಗೀತೆಯ ಬೆಳಕು

 ವಿಘ್ನ ಬಂದಾಗ ಮೊದಲು ನೆನಪಾಗುವುದು ವಿಘ್ನನಿವಾರಕ ವಿಘ್ನೇಶ್ವರ, ಗಣಪತಿ. ವಿಘ್ನವೆಂಬುದು ಹೊರಗಡೆ ಇಲ್ಲ, ನಮ್ಮ ಒಳಗೇ ಇದೆ ಎಂದು ಯೋಗೇಶ್ವರ ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಒಂದು ಅದ್ಭುತವಾದ ಮಾತನ್ನು ಹೇಳುತ್ತಾನೆ.


*ನಿನ್ನ ದೊಡ್ಡ ಶತ್ರು ಹೊರಗಡೆ ಇಲ್ಲ, ನಿನ್ನ ಮನಸ್ಸೇ ನಿನ್ನ ದೊಡ್ಡ ಶತ್ರು, ನಿನ್ನ ಮನಸ್ಸೇ ನಿನ್ನ ಪರಮ ಮಿತ್ರ.*


*ವಿಘ್ನ ಅಂದರೆ ಏನು?*

ಭಗವದ್ಗೀತೆಯಲ್ಲಿ ಹೇಳುವಂತೆ

1. *ಭಯ* - "ನಮ್ಮ ಇಚ್ಛೆಯಂತೆ ಆಗುವುದೋ ಇಲ್ಲವೋ" ಎನ್ನುವ ಆತಂಕದಿಂದ ಉಂಟಾಗುವ ಅಡಚಣೆ.

2. *ಸಂಶಯ* - "ನಾನು ಮಾಡಬಲ್ಲೆನೇ?" ಎನ್ನುವ ಅನುಮಾನ ಹಾಗೂ ಕೀಳರಿಮೆಯಿಂದ ಉಂಟಾಗುವ ತೊಡಕುಗಳು.

3. *ಆಸೆ* - ಫಲಿತಾಂಶದ ಮೇಲೆ ಅತಿಯಾದ ನಿರೀಕ್ಷೆ ಮತ್ತು ಅದನ್ನು ಪಡೆಯುವ ಆತುರದಿಂದ ಉಂಟಾಗುವ ಅಧ್ವಾನಗಳು.


ಇವು ಮೂರರಿಂದ, ಕೆಲಸ ಶುರು ಮಾಡುವುದಕ್ಕೂ ಮೊದಲೇ ನಾವು ಸೋತು ಹೋಗಿರುತ್ತೇವೆ.


ಗೀತೆಯೇ ಇದಕ್ಕೆ ಪರಿಹಾರವನ್ನೂ ಹೇಳುತ್ತದೆ. ಕೃಷ್ಣ ನೀಡಿದ ಅತ್ಯಂತ ದೊಡ್ಡ ಸಂದೇಶವೂ ಇದೇ ಆಗಿದೆ.

*ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ*


ಅಂದರೆ, "ಕೈಯಲ್ಲಿ ಇರುವ ಕೆಲಸವನ್ನು ಮಾಡುವುದು ಮಾತ್ರ ನಿನಗೆ ಸೇರಿರುವುದು ಅದರ ಫಲಿತಾಂಶ ನಿನ್ನ ಕೈಯಲ್ಲಿ ಇಲ್ಲ" ಎಂದು ಸ್ಪಷ್ಟವಾಗಿ ಹೇಳುತ್ತಾನೆ.


ವಿಘ್ನಗಳು ಬಂದಾಗ ಫಲಿತಾಂಶದ ಬಗ್ಗೆ ಯೋಚಿಸಿ ಕುಳಿತುಬಿಡುತ್ತೇವೆ. ಗೀತೆ ಹೇಳುತ್ತದೆ, ಫಲಿತಾಂಶವನ್ನು ಬಿಟ್ಟುಬಿಡು, ಮಾಡಬೇಕಾದ ಕೆಲಸವನ್ನು ಮಾಡು. ವಿಘ್ನಗಳು ತಾವಾಗಿಯೇ ಕರಗಿ ಹೋಗುತ್ತವೆ.


*ಮನಸ್ಸನ್ನು ಗೆಲ್ಲುವುದು ಹೇಗೆ?*

6ನೇ ಅಧ್ಯಾಯದಲ್ಲಿ ಕೃಷ್ಣ ಹೇಳುತ್ತಾನೆ,


*ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ*


ಮನಸ್ಸನ್ನು ಗೆದ್ದವನಿಗೆ ಮನಸ್ಸೇ ಸ್ನೇಹಿತ, ಸೋತವನಿಗೆ ಮನಸ್ಸೇ ಶತ್ರು.


ವಿಘ್ನ ಬಂದೊಡನೆ ಮನಸ್ಸು ಉದ್ವಿಗ್ನಗೊಳ್ಳುತ್ತದೆ, ಜೊತೆಯಲ್ಲೇ ಕೋಪ ಬರುತ್ತದೆ. ಕೋಪ ಮಾಡದೆ, ತೊಡಕುಗಳಿಗೆ ಹೆದರದೆ, ಸ್ವಲ್ಪ ನಿಂತು, ಯೋಚಿಸಿ, ಉಸಿರು ತೆಗೆದುಕೊಂಡು, "ಇದೂ ಸಹ ನಿವಾರಣೆಯಾಗುತ್ತದೆ" ಎಂದು ಅಂದುಕೊಳ್ಳಬೇಕು. ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕು. ಕಷ್ಟಗಳು ಬಂದಾಗ ಕುಗ್ಗದೆ ಇರುವುದು, ಸುಖಕ್ಕೆ ಹಿಗ್ಗದೆ ಇರುವುದು. ಇದನ್ನೇ ಗೀತೆ *ಸ್ಥಿತಪ್ರಜ್ಞತೆ* ಎಂದು ಕರೆಯುತ್ತದೆ.


*ಮಚ್ಚಿತ್ತಃ ಸರ್ವದುರ್ಗಾಣಿ ಮತ್ಪ್ರಸಾದಾತ್ ತರಿಸ್ಯಸಿ*


"ನನ್ನ ಮೇಲೆ ಮನಸ್ಸಿಟ್ಟು ಕೆಲಸ ಮಾಡು, ನನ್ನ ಅನುಗ್ರಹದಿಂದ ಎಲ್ಲಾ ಸಂಕಷ್ಟಗಳನ್ನೂ ನಿರ್ವಿಘ್ನವಾಗಿ ದಾಟುತ್ತೀಯೆ" ಎಂಬ ಭರವಸೆಯನ್ನು 18ನೇ ಅಧ್ಯಾಯದಲ್ಲಿ ಕೃಷ್ಣ ನೀಡಿದ್ದಾನೆ.


ಹಾಗಾಗಿ ವಿಘ್ನ ನಿವಾರಣೆ ಅಂದರೆ ವಿಘ್ನ ಬರಬಾರದು ಅಂತ ಕೇಳುವುದಲ್ಲ. ವಿಘ್ನ ಬಂದರೂ ಎದ್ದು ನಿಲ್ಲುವ ಶಕ್ತಿ ಕೊಡು ಅಂತ ಕೇಳಿಕೊಳ್ಳಬೇಕು. ಇದೇ ಭಗವದ್ಗೀತೆಯ ಸಾರ.


ಕುರುಕ್ಷೇತ್ರ ಯುದ್ಧ ಆರಂಭವಾಗುತ್ತದೆ. ಅರ್ಜುನ ರಣರಂಗದಲ್ಲಿ ನಿಂತಿದ್ದಾನೆ. ಎದುರಿಗೆ ಸ್ವಬಾಂಧವರು - ತನ್ನ ಗುರುಗಳು, ಅಣ್ಣ ತಮ್ಮಂದಿರು, ಸ್ನೇಹಿತರು. ಅವನ ಕೈಯಲ್ಲಿದ್ದ ಗಾಂಡೀವ ಜಾರಿ ಹೋಗುತ್ತದೆ. ಕಾಲು ನಡುಗುತ್ತದೆ. ಬಾಯಿ ಒಣಗುತ್ತದೆ. ಇದೇ ತಾನೇ ನಿಜವಾದ ವಿಘ್ನ!


ಅರ್ಜುನನಿಗೆ ಹೊರಗಡೆ ಯಾರೂ ವಿಘ್ನ ಮಾಡಲಿಲ್ಲ. ವಿಘ್ನ ಅವನ ಒಳಗೇ ಇತ್ತು. ಭಯ, ದುಃಖ, ಅನುಮಾನ.


ನಮಗೂ ಹಾಗೆಯೇ ಅಲ್ವೇ? ಮನೆಯ ಯಾವುದೇ ಒಂದು ಕೆಲಸ ಶುರು ಮಾಡಬೇಕು ಅಂದಾಗಲೂ ವಿಘ್ನ ಹೊರಗಡೆ ಇರುವುದಿಲ್ಲ. "ಆಗುತ್ತದೆಯೋ ಇಲ್ಲವೋ, ಹೇಗಾಗುತ್ತದೆಯೋ, ಜನ ಏನು ಹೇಳುತ್ತಾರೋ, ದುಡ್ಡು ಸಾಕಾಗುವುದೋ ಇಲ್ಲವೋ, ಮನೆಯವರು ಏನು ಅನ್ನುತ್ತಾರೋ" ಅನ್ನೋ ಆತಂಕ, ಜೊತೆಗೆ ಕೀಳರಿಮೆ, ಅತಿಯಾದ ನಿರೀಕ್ಷೆ, ನಮ್ಮ ಘನತೆಗೆ ಎಲ್ಲಿ ಪೆಟ್ಟು ಬೀಳುವುದೋ ಎಂಬ ಭಯ ಒಳಗೇ ಇರುತ್ತೆ. ಇವೇ ವಿಘ್ನಗಳಿಗೆ ನಿಜವಾದ ಕಾರಣಗಳು.


ಕೃಷ್ಣ ಅರ್ಜುನನಿಗೆ ಹೇಳಿದ್ದೇನು?


*"ಎದ್ದು ನಿಲ್ಲು ಅರ್ಜುನ, ಇದು ನಿನಗೆ ಶೋಭೆ ತರುವುದಿಲ್ಲ."*


ವಿಘ್ನ ಬಂದಾಗ ಕುಳಿತುಬಿಡಬಾರದು, ಎದ್ದು ನಿಲ್ಲಬೇಕೆಂಬ ಸ್ಪಷ್ಟ ಸಂದೇಶವನ್ನು ಭಗವದ್ಗೀತೆ ನಮಗೆ ನೀಡುತ್ತದೆ.

ವಿವೇಕಾನಂದರೂ ಹೇಳಿದ್ದು ಇದನ್ನೇ, "ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ" ಅತ್ಯಂತ ಪ್ರಸಿದ್ಧ ಸ್ಫೂರ್ತಿದಾಯಕ ನುಡಿಗಳು. ಎದ್ದು ನಿಂತಾಗ ವಿಘ್ನಗಳನ್ನು ಎದುರಿಸುವುದು ಅತಿ ಸುಲಭ.


*ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ* ಎಂದು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು.


ಅಂದರೆ, "ಅರ್ಜುನ, ನಿನ್ನ ಕೆಲಸ ಬಾಣ ಬಿಡುವುದು ಮಾತ್ರ. ಅದು ಗುರಿ ತಲುಪುತ್ತದೆಯೋ ಇಲ್ಲವೋ ಅಂತ ನೀನು ಯೋಚನೆ ಮಾಡಬೇಡ. ನಿನ್ನ ಕೆಲಸವನ್ನು ನೀನು ಸರಿಯಾಗಿ ಮಾಡು."


"ನಾನು ಮಾಡಿದ ಕೆಲಸ ಸರಿ ಹೋಗುತ್ತದೆಯೇ?" ಅಂತ ಕೈಕಟ್ಟಿ ಕುಳಿತುಕೊಳ್ಳದೆ, ಫಲಿತಾಂಶದ ನಿರೀಕ್ಷೆಯನ್ನು ಬಿಟ್ಟು ಮಾಡಬೇಕಾದ ಕೆಲಸಗಳನ್ನು ಮಾಡಿದರೆ ವಿಘ್ನಗಳು ತಾನಾಗೇ ಹಿಂದೆ ಸರಿದು ಹೋಗುತ್ತವೆ.


ವಿಘ್ನ ನಿವಾರಣೆ ಅಂದರೆ ವಿಘ್ನ ಬರಬಾರದೆಂದು ಕುಳಿತುಕೊಳ್ಳುವುದಲ್ಲ.

ವಿಘ್ನ ಬಂದಾಗ, ನಿವಾರಣೆಗಿರುವ ದಾರಿಗಳನ್ನು ಹುಡುಕುವುದು. *ಇರುವುದನ್ನೇ ಬಳಸಿಕೊಂಡು ಮುಂದೆ ಹೋಗುವುದು.*


ತಕ್ಷಣ ನೆನಪಿಗೆ ಬರುವುದು ಗಣಪತಿಯೇ ವಿಘ್ನವನ್ನು ದಾಟಿದ ಕಥೆ.


ವ್ಯಾಸ ಮಹರ್ಷಿಗಳು ಮಹಾಭಾರತ ಬರೆಯಲು ಯೋಚಿಸಿದರು. ತುಂಬಾ ದೊಡ್ಡ ಗ್ರಂಥ. ಒಬ್ಬರೇ ಬರೆಯುವುದು ಕಷ್ಟ ಅನ್ನಿಸಿತು. ಅದಕ್ಕೆ ಅವರು ಗಣಪತಿಯ ಹತ್ತಿರ ಹೋಗಿ, "ಗಣಪತಿ, ನಾನು ಮಹಾಭಾರತದ ಕಥೆ ಹೇಳ್ತೀನಿ, ನೀನು ಬರೆಯುತ್ತೀಯಾ?" ಅಂತ ಕೇಳಿದರು.


"ಬರೆಯಲು ಒಮ್ಮೆ ಶುರು ಮಾಡಿದರೆ ನಾನು ಎಲ್ಲೂ ನಿಲ್ಲಿಸುವುದಿಲ್ಲ. ನೀವು ಸಹ ಹೇಳುವುದು ನಿಲ್ಲಿಸಬಾರದು" ಎಂಬ ಒಂದು ಷರತ್ತಿನ ಮೇರೆಗೆ ಬರೆಯಲು ಗಣಪತಿ ಒಪ್ಪಿಕೊಂಡನು. ವ್ಯಾಸರೂ ಒಪ್ಪಿಕೊಂಡರು.


ಬರೆಯುವುದಕ್ಕೆ ಪ್ರಾರಂಭವಾಯಿತು. ಗಣಪತಿ ವೇಗವಾಗಿ ಬರೆಯುತ್ತಾ ಹೋದನು. ಹೇಳ್ತಾ ಹೇಳ್ತಾ ವ್ಯಾಸರಿಗೂ ಕಷ್ಟ ಆಯಿತು.


ಒಂದು ದಿನ ಏನಾಯಿತು ಗೊತ್ತಾ!

ಗಣಪತಿಯ ಕೈಯಲ್ಲಿದ್ದ ಲೇಖನಿ, ಅಂದರೆ ಬರೆಯುತ್ತಿದ್ದ ಕಡ್ಡಿ *ಮುರಿದೇ ಹೋಯಿತು!*


ಇದೇ ನಿಜವಾದ ವಿಘ್ನವಲ್ಲವೇ!


ಸಾಮಾನ್ಯವಾಗಿ ನಾವಾಗಿದ್ದರೆ ಏನು ಮಾಡುತ್ತೇವೆ?

"ಅಯ್ಯೋ ಕಡ್ಡಿ ಮುರಿದು ಹೋಯಿತು, ಈಗ ಬರೆಯುವುದು ಬೇಡ, ನಾಳೆ ಬರೆಯೋಣ" ಅಂತ ಕುಳಿತುಬಿಡುತ್ತೇವೆ.


ಆದರೆ ಗಣಪತಿ ಹಾಗೆ ಮಾಡಲಿಲ್ಲ. ಒಂದು ಕ್ಷಣವೂ ಯೋಚನೆ ಮಾಡಲಿಲ್ಲ. ತನ್ನದೇ ಒಂದು *ದಂತವನ್ನು ಮುರಿದು*, ಅದನ್ನೇ ಲೇಖನಿ ಮಾಡಿಕೊಂಡು ಬರೆಯುವುದಕ್ಕೆ ಶುರು ಮಾಡಿಯೇ ಬಿಟ್ಟನು!


ಅದಕ್ಕೆ ಗಣಪತಿಗೆ *ಏಕದಂತ* ಅಂತ ಹೆಸರು ಬಂತು.


*ಇದೇ ಗೀತೆಯ ಸಾರ!*


ಭಗವದ್ಗೀತೆ ಹೇಳುತ್ತದೆ,

*ವಿಘ್ನ ಬಂದಾಗ ನಿಲ್ಲಬೇಡ, ಇರುವುದರಲ್ಲೇ ದಾರಿ ಹುಡುಕು.*


ನಮ್ಮ ಹತ್ತಿರ ಕಡ್ಡಿ ಇಲ್ಲ ಅಂದರೆ ದಂತ ಇದೆ. ದುಡ್ಡು ಇಲ್ಲ ಅಂದರೆ ಶ್ರಮ ಇದೆ. ಜನ ಸಹಾಯ ಮಾಡಲಿಲ್ಲ ಅಂದರೆ ದೇವರ ಸಹಾಯ ಇದೆ.

ಈ ರೀತಿ ಧನಾತ್ಮಕ ಚಿಂತನೆಯನ್ನು ಮಾಡಿ ಎದುರಾದ ವಿಘ್ನಗಳನ್ನು ದಾಟಬೇಕು. ಇದೇ ಗೀತೆಯ ಮೂಲಕ ಗೀತಾಚಾರ್ಯನು ನೀಡಿರುವ ಸಂದೇಶ.


ಅನನ್ಯ ಭಕ್ತಿಯಿಂದ ಭಗವಂತನನ್ನು ನಂಬಿ, ದೃಢಸಂಕಲ್ಪದಿಂದ ಮುನ್ನಡೆದರೆ ನಮ್ಮೆಲ್ಲಾ ಕಾರ್ಯಗಳ ಯೋಗಕ್ಷೇಮವನ್ನು ಸ್ವತಃ ಪರಮಾತ್ಮನೇ ವಹಿಸಿಕೊಳ್ಳುತ್ತಾನೆ.

ಭಗವಂತನ ಮೇಲೆ ಸಂಪೂರ್ಣ ಭರವಸೆಯಿಟ್ಟು, ನಿರ್ಭಯವಾಗಿ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಎಂತಹ ದೊಡ್ಡ ವಿಘ್ನವೂ ನಿಸ್ಸಂದೇಹವಾಗಿ ಸುಲಭವಾಗಿ ನಿವಾರಣೆಯಾಗಿ ಬಿಡುತ್ತದೆ.


ಜೀವನದ ಅಡೆತಡೆಗಳನ್ನು ದಾಟಲು ಗೀತೆ ನೀಡುವ ಪ್ರಮುಖ ಸಂದೇಶಗಳೇ ಇವಲ್ಲವೇ?

ನಿನ್ನ ಮನಸ್ಸನ್ನು ನನ್ನಲ್ಲಿ ನೆಲೆಗೊಳಿಸಿದರೆ, ನನ್ನ ಅನುಗ್ರಹದಿಂದ ನೀನು ಎಲ್ಲಾ ಕಷ್ಟಗಳನ್ನು (ವಿಘ್ನಗಳನ್ನು) ದಾಟುವೆ ಎಂದು ಶ್ರೀಕೃಷ್ಣನು ಅಭಯ ನೀಡುತ್ತಾನೆ.

ಕೇವಲ ಕರ್ತವ್ಯದ ಮೇಲೆ ಮಾತ್ರ ಗಮನಹರಿಸಿ *ನಿಷ್ಕಾಮ ಕರ್ಮ* ಮಾಡಿ, ಫಲದ ಚಿಂತೆಯನ್ನು ಬಿಟ್ಟಾಗ ಮನಸ್ಸಿನ ಭಯ ಮತ್ತು ಅಡೆತಡೆಗಳು ತಾವಾಗಿಯೇ ದೂರ ಸರಿಯುತ್ತವೆ.

ಕರ್ಮ ಮಾಡುವಾಗ *ಸ್ಥಿತಪ್ರಜ್ಞತೆ ಮತ್ತು ಸಮಭಾವ* ಇರಬೇಕು. ಸುಖ-ದುಃಖ, ಲಾಭ-ನಷ್ಟಗಳು ಋತುಮಾನಗಳಂತೆ ಬಂದು ಹೋಗುತ್ತವೆ. ಅವುಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ಮನೋಬಲ ಬೆಳೆಸಿಕೊಂಡರೆ ಯಾವುದೇ ವಿಘ್ನವೂ ನಮ್ಮನ್ನು ಕುಗ್ಗಿಸಲಾರದು.

*ಧೈರ್ಯ ಮತ್ತು ಆತ್ಮವಿಶ್ವಾಸ* ಬೇಕು. ಎರಡನೇ ಅಧ್ಯಾಯದಲ್ಲಿ ಕಷ್ಟಗಳಿಗೆ ಹೆದರಿ ಪಲಾಯನ ಮಾಡದೆ, ಧೈರ್ಯದಿಂದ ಎದುರಿಸುವುದೇ ವಿಘ್ನ ನಿವಾರಣೆಯ ಮೊದಲ ಹೆಜ್ಜೆ ಎಂಬ ಸ್ಪಷ್ಟ ಸಂದೇಶವನ್ನು ಶ್ರೀಕೃಷ್ಣ ನೀಡಿದ್ದಾನೆ. "ಕ್ಲೈಬ್ಯಂ ಮಾ ಸ್ಮ ಗಮಃ ಪಾರ್ಥ" - ಹೇ ಪಾರ್ಥ, ಹೇಡಿತನವನ್ನು ಬಿಟ್ಟು ಎದ್ದು ನಿಲ್ಲು ಎನ್ನುತ್ತಾ *ಯೋಗಕ್ಷೇಮದ ಭರವಸೆಯನ್ನೂ* ನೀಡಿದ್ದಾನೆ.


ವಿಘ್ನ ಬಂದಾಗ ನಾವು ವಿಘ್ನದ ಬಗ್ಗೆಯೇ ಯೋಚನೆ ಮಾಡುತ್ತೇವೆ. 'ಹೇಗೆ ದಾಟಲಿ, ಹೇಗೆ ಎದುರಿಸಲಿ, ಏನು ಮಾಡಲಿ' ಅಂತ ಚಿಂತಿಸುತ್ತೇವೆ. ಆದರೆ ಕೃಷ್ಣ ಹೇಳುತ್ತಾನೆ, 'ನೀನು ವಿಘ್ನದ ಬಗ್ಗೆ ಯೋಚನೆ ಮಾಡಬೇಡ, ನನ್ನ ಬಗ್ಗೆ ಯೋಚನೆ ಮಾಡುತ್ತಾ ಕೆಲಸಗಳನ್ನು ಮಾಡು. ವಿಘ್ನವನ್ನು ದಾಟಿಸುವ ಜವಾಬ್ದಾರಿ ನನ್ನದು' ಎಂದಿದ್ದಾನೆ.


9ನೇ ಅಧ್ಯಾಯದ 22ನೇ ಶ್ಲೋಕದಲ್ಲಿ

*ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ | ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಂ ||*


ಅದೇ ಗೀತೆಯು ನೀಡುವ ಅತ್ಯಂತ ದೊಡ್ಡ ಭರವಸೆಯಲ್ಲವೇ?


ಒಬ್ಬ ರಾಜನು ತನ್ನ ಪ್ರಜೆಗಳನ್ನು ಪರೀಕ್ಷೆ ಮಾಡುವ ಸಲುವಾಗಿ ರಸ್ತೆಯ ನಡುವೆ ಓಡಾಡಲು ಅಡಚಣೆಯಾಗುವಂತೆ ಒಂದು ದೊಡ್ಡ ಬಂಡೆಗಲ್ಲನ್ನು ಇಡಿಸಿದನು.


ಬೆಳಿಗ್ಗೆ ಅದೇ ದಾರಿಯಲ್ಲಿ ಬಂದ ಶ್ರೀಮಂತರು, ನಂತರ ಬಂದ ಅಧಿಕಾರಿಗಳು... ಹೀಗೆ ಹಲವರು ಕಲ್ಲನ್ನು ಬೈದು, ಗೊಣಗುತ್ತಾ ದಾಟಿಕೊಂಡು ಹೋಗಿಬಿಟ್ಟರು.


ಸಂಜೆ ವೇಳೆಗೆ ಒಬ್ಬ ಬಡ ರೈತ ಅದೇ ಹಾದಿಯಲ್ಲಿ ಬಂದನು. ರಸ್ತೆಗೆ ಅಡ್ಡವಾಗಿದ್ದ ಬಂಡೆಕಲ್ಲನ್ನು ಅವನು ಬೈಯಲಿಲ್ಲ. "ಈ ಕಲ್ಲು ಇದ್ದರೆ ಯಾರಾದರೂ ಬಿದ್ದುಬಿಡುತ್ತಾರೆ, ಸರಾಗವಾಗಿ ರಸ್ತೆಯಲ್ಲಿ ಓಡಾಡುವುದು ಕಷ್ಟ" ಎಂದು ಚಿಂತಿಸಿ, ಕಷ್ಟಪಟ್ಟು ಕಲ್ಲನ್ನು ಪಕ್ಕಕ್ಕೆ ತಳ್ಳಿದನು.


ಆ ಬಂಡೆಗಲ್ಲಿನ ಕೆಳಗೆ ಚಿನ್ನದ ನಾಣ್ಯಗಳ ಚೀಲವಿತ್ತು. ಅದರಲ್ಲಿ _"ದಾರಿಹೋಕರಿಗೆ ಕಷ್ಟವೆಂಬ ಬಂಡೆಗಲ್ಲನ್ನು ತೆಗೆಯುವವನಿಗೆ ಇದು ಬಹುಮಾನ"_ ಎಂದು ಒಂದು ಪತ್ರವನ್ನೂ ಬರೆದಿಡಲಾಗಿತ್ತು.


*ಇದೇ ಗೀತೆಯ ಸಾರವಲ್ಲವೇ.*


ವಿಘ್ನಗಳ ಜೊತೆಗೇ, ಅದರ ಅಡಿಯಲ್ಲೇ ನಮ್ಮ ಭಾಗ್ಯವೂ ಇರುತ್ತದೆ.

ಗೊಣಗದೆ, ಬೈಯದೆ ವಿಘ್ನಗಳನ್ನು ನಿವಾರಿಸುವ ಮಾರ್ಗವನ್ನು ಕಂಡುಕೊಳ್ಳುವವರಿಗೆ ಅನಿರೀಕ್ಷಿತ ಭಾಗ್ಯ ತಾನಾಗಿಯೇ ಲಭಿಸುತ್ತದೆ.

No comments:

Post a Comment