ಇಂದದೇಕೋ ಮನ ಹಗುರಾಗಿದೆ
ಮನದ ಭಾವ ತರಂಗ ಮುಗಿಲ ಕರೆದಿದೆ
ಬಾನ ವರ್ಷ ಧಾರೆ ಮನವ ಕುಣಿಸಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ
ನಭೋ ಮಂಡಲದಿ ಮೋಡ ಕವಿದಿದೆ
ಮುಗಿಲಕಂಡು ಇಳೆ ಪುಳಕಗೊಂಡಿದೆ
ಮೇಘ ಸಂದೇಶ ಧರೆಯ ತಲುಪಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ
ವಾರಿದ ಹರುಷದಿ ಹೂ ಮಳೆಗರೆದಿದೆ
ಬನದೇವಿ ವಸುಂದರೆಯ ಸಿಂಗರಿಸಿದೆ
ಶುಕಪಿಕಭೃಂಗವೃಂದ ಸೋಬಾನೆಹಾಡಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ
ಹಸಿರುಟ್ಟು ಭುವಿ ಸಿಂಗಾರವಾಗಿದೆ
ಕಮಾನು ಕಟ್ಟಿ ಬಾನು ಕರೆದಿದೆ
ರಂಗಿನ ನೋಟ ಮನವ ತಣಿಸಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ
ಹಸಿರು ಬನದಿ ಹೂ ಅರಳಿ ನಗುತಿದೆ
ಆಗಸದಿ ಅಂಬುಧರನ ನೃತ್ಯ ಜರುಗಿದೆ
ಅಲರು ಅಭ್ರರ ಬೆಡಗು ಮನ ಸೆಳೆದಿದೆ
ಬಾನು ಭೂಮಿ ಹರ್ಷದಿಂ ಒಂದಾಗಿವೆ
********
ಅಲರು=ಹೂವು
ಅಭ್ರ=ಮೋಡ, ಮುಗಿಲು.ಆಕಾಶ.
No comments:
Post a Comment