ಮೂವರು ಮುಗ್ಧ ಬಾಲಕರು
ತನ್ಮಯದಿ ಚಿತ್ರಿಸುತಿಹರು
ಭಾವಿ ನವ್ಯ ಕಲಾವಿಧರು
ಭಿತ್ತಿಯ ಚಿತ್ರವ ಬಿಡಿಸಿಹರು
ಭಿತ್ತಿಲಿ ಬಿತ್ತಿದೆ ಚಿಣ್ಣರ ಚಿತ್ತಾರ
ಬಾಲ ಭಾಷೆಯ ವರ್ಣದ ಸಾರ
ಮನೆಯೊಡೆಯಗೆ ಇದು ಭಾರ
ಏನೇ ಆದರು ಬಿಡನಿದ ಪೋರ
ಬಣ್ಣ ಬಣ್ಣದ ಬಳಪವ ಪಿಡಿದು
ಗೀಚುತ ಗೀಚುತ ಗೆರೆ ಎಳೆದು
ಮರ ಗಿಡ ಹೂ ಬಳ್ಳಿಯ ಬರೆದು
ಅದ ನೋಡಳು ಸೂರ್ಯನ ಕರೆದು
ವರ್ಣಿಸಲಾಗದ ವರ್ಣಚಿತ್ರವಿದು
ಕೆಂಪು ವರ್ಣದ ಪರದೆಯ ಹಿಡಿದು
ಚಿಟ್ಟೆಯ ಹಾರಿಸಿ ಗೆಳೆಯರ ಕರೆದು
ಸುತ್ತಲು ಹುಲ್ಲಿನ ಹಾಸನು ಬರೆದು
ಚಿತ್ರಿಸಹೊರಟಿಹ ಕುಂಚ ಬ್ರಹ್ಮರು
ಕಲ್ಪನಾ ಲೋಕದಿ ವಿಹರಿಸುತಿಹರು
ಭಿತ್ತಿಲಿ ಭಾವ ಅನಾವರಣ ಮಾಡಿಹರು
ಭವಿಷ್ಯದ ಹೆಮ್ಮೆಯ ಕವಿವರ್ಮರಿವರು
No comments:
Post a Comment