ಅಯ್ಯಯ್ಯೋ ಎಂಥ ಸ್ಥಿತಿ ಬಂತು ಎಲ್ಲ ಜನಕೆ
ಆವರಿಸಿದೆ ಭಯಾನಕ ರೋಗದ ಭೀತಿ ಜಗಕೆ
ಇರಲಿಲ್ಲ ಹಿಂದೆಂದು ಕಸಿವಿಸಿ ಈ ಪರಿ ಮನಕೆ
ಈಗ ಗೃಹಬಂಧನ ಒಂದೇ ಮದ್ದಂತೆ ಇದಕೆ
ಉಳಿಯುವೆವೇ ಅಳಿಯದಂತೆಂಬ ಪ್ರಶ್ನೆಯೆದ್ದಿದೆ
ಊಹಿಸಲಾಗದ ಸಂಕಟವನಿದು ತಂದೊಡ್ಡಿದೆ
ಋಣಾತ್ಮಕ ಚಿಂತನೆಯ ಮಾಡದಂತಿರ ಬೇಕಿದೆ
ಎಲ್ಲರೂ ಶಾಂತಿಯಿಂದಲೇ ಸಹಕರಿಸ ಬೇಕಿದೆ
ಏನು ಕರೋನದ ಮರ್ಮವೆಂದರಿಯ ಬೇಕಿದೆ
ಐಕ್ಯತೆಯಿಂದೆಲ್ಲವನೆದುರಿಸಲಣಿಯಾಗ ಬೇಕಿದೆ
ಒಬ್ಬೊಬ್ಬರನು ಒಂದೊಂದು ಪರಿಯಲಿ ಕಾಡುತಿದೆ
ಓದಲಿಲ್ಲ ಪರೀಕ್ಷೆಗಾಗಿ ಬರೆಯಲಿಲ್ಲ ಪಾಸಾಗಿದೆ
ಔಷಧವೆ ಇಲ್ಲದ ರೋಗವಿದೆಂದರಿಯ ಬೇಕಿದೆ
ಅಂತಸ್ತಿನ ಹಂಗುತೊರೆದು ಒಂದಾಗ ಬೇಕಿದೆ
ಆಃ ಇಂಥ ರೋಗದಿಂದ ಜಗಕೆ ಮುಕ್ತಿಬೇಕಿದೆ
ಕನಿಕರವಿಲ್ಲದೆ ಎಲ್ಲ ದೇಶಗಳೊಳಗೆ ನುಗ್ಗಿದೆ
ಖಗದ ವೇಗಕ್ಕಿಂತ ವೇಗವಾಗಿದು ಚಲಿಸುತ್ತಿದೆ
ಗಡಿಯ ಭದ್ರಗೊಳಿಸಿಕೊಳ್ಳುವ ಕಾಲಬಂದಿದೆ
ಘರ್ಷಣೆಯ ಮಾಡಿಕೊಳ್ಳದೆ ಒಂದಾಗಬೇಕಿದೆ
ಚಲಿಸದಂತೆ ಎಲ್ಲಿಯು ಇರುವಲ್ಲೇ ಇರಬೇಕಿದೆ
ಛತ್ರದಲ್ಲಿ ಸಭೆ ಸಮಾರಂಭ ನಡೆಯದಂತಾಗಿದೆ
ಜನತೆಯ ಕೈಯಲ್ಲೆ ಅಳಿವು ಉಳಿವು ಸೇರಿಕೊಂಡಿದೆ
ಝಳುಪಿಸಿ ಕಾನೂನು ಖಡ್ಗವ ಜನರ ಕಾಯಬೇಕಿದೆ
ಟಕ್ಕಳಕಿಯ ದೇಗುಲಗಳಲ್ಲಿ ಸಂಭ್ರಮವಿಲ್ಲದಂತಾಗಿದೆ
ಠಕ್ಕತನದಿ ಮಹಾಮಾರಿ ಕರೋನ ನುಸುಳಲನುವಾಗಿದೆ
ಡಕಾಯಿತನಂತೆಲ್ಲರ ಪ್ರಾಣವನ್ನು ತೆಗೆಯಲನುವಾಗಿದೆ
ಢವಢವ ಎನುತೆಲ್ಲರೆದೆಯನು ಬಿಡದೆ ಹೊಡೆಯುತ್ತಿದೆ
ತಕರಾರುಮಾಡದೆಲ್ಲರೂ ಸ್ವಚ್ಛತೆಯ ಕಾಪಾಡಬೇಕಿದೆ
ಥಳಿಸಿ ಮಣಿಸಿ ಶೇಷವಿಲ್ಲದಂತೆ ಹೊಡೆದೊಡಿಸಬೇಕಿದೆ
ದಡ್ಡರಂತೆ ನಡೆಯದೆ ಜವಾಬ್ದಾರಿಯಿಂದ ನಡೆಯಬೇಕಿದೆ
ಧರಣಿಯೇ ಹತ್ತಿ ಉರಿಯುತ್ತಿರಲು ನಿಲಲು ಜಾಗವೆಲ್ಲಿದೆ
ನಯವಂಚಕರ ಕುತಂತ್ರವ ಬಯಲಿಗೆಳೆಯಲೇ ಬೇಕಿದೆ
ಪರೀಕ್ಷೆಯೊಡ್ಡಿ ಪ್ರಕೃತಿ ಮನುಜರ ಎಚ್ವರಿಸುವಂತಿದೆ
ಫಲಕಾರಿಯಾಗದಂತೆ 'ಕೋವಿಡ್19' ತಡೆಯ ಬೇಕಿದೆ
ಬಯಕೆಗಳಿಗೆ ಮಿತಿಯ ಹೇರಿ ತಗ್ಗಿಬಗ್ಗಿ ಬಾಳ ಬೇಕಿದೆ
ಭಯವ ಪಡದೆ ಬಂದುದೆಲ್ಲವ ಸ್ವೀಕರಿಸುವಂತಾಗಿದೆ
ಮನೆಯಿಂದಲೇ ಎಲ್ಲವನ್ನು ನಿರ್ವಹಿಸುವಂತಾಗಿದೆ
ಯಮಪುರಿಗೆಯೆಲ್ಲರನಟ್ಟಿ ವೈರಾಣು ತಂತ್ರವೆಸಗಿದೆ
ರಜೆಯಿದ್ದರೂ ಆತಂಕದಿಂದ ದಿನವ ನೂಕಬೇಕಿದೆ
ಲವಲವಿಕೆ ಇಲ್ಲದೆ ಎಲ್ಲರ ಮನವು ಜಡ್ಡುಹಿಡಿದಿದೆ
ವರಸಿದ್ಧಿವಿನಾಯಕನ ದಯೆ ಲೋಕಕ್ಕೆ ಬೇಕಾಗಿದೆ
ಶರವೇಗದಿಂದ ಪರಿಹಾರವನೆಲ್ಲ ಹುಡುಕ ಬೇಕಿದೆ
ಷಡ್ಯಂತರವ ಮಾಡುವವರ ಬಗ್ಗುಬಡಿಯ ಬೇಕಿದೆ
'ಸರ್ವೇ ಜನಾಃ ಸುಖಿನೋ ಭವಂತು' ಪಠಿಸಬೇಕಿದೆ
ಹದುಳದಿ ಹದವರಿತು ಸಹಕರಿಸುತೊಂದಾಗ ಬೇಕಿದೆ
'ಳಙಞಣ'ಗಳ ಬಳಸುವಂತೆ ಎಲ್ಲತಂತ್ರ ಬಳಸಬೇಕಿದೆ
No comments:
Post a Comment