Thursday, 30 June 2016

ಎಲ್ಲಿಂದ ಬಂತು

ಹಣ್ಣು ಹೂವು ತಳಿರು ನೆರಳನೀವ ವೃಕ್ಷಕ್ಕಿಲ್ಲಿನಿತು ಸ್ವಾರ್ಥ
ಹರಿವ ನೀರು ಬೀಸು ಗಾಳಿ ಪೊರೆವ ಭೂಮಾತೆಗಿಲ್ಲಿನಿತು ಸ್ವಾರ್ಥ
ಹಗಲ ತರಣಿ ಇರುಳ ತಾರೆ ಸುಧಾಕರರಿಗಿಲ್ಲಿನಿತು ಸ್ವಾರ್ಥ
ಹಲವು ಬಗೆಬಗೆಯ ಸ್ವಾರ್ಥ ನರನಿಗೆಲ್ಲಿಂದ ಬಂತು ನನ ಕಂದ||

Friday, 24 June 2016

ಚೆಲುವಾಗಿಸು ಜೀವನವ

ಗುರಿಯೊಡನೆ ಗುರುವಾಶ್ರಯವ ಪಡೆದು
ಗುರಿ ಬಿಡದೆ ಸಾಗುತಿರು ಛಲದೊಡನೆ
ಗುರು ಬೆಂಬಲವ ಪಡೆದು ಗುರಿಮುಟ್ಟು
ಚೆಲುವಾಗಿಸು ಜೀವನವ – ನನಕಂದ||

ಒಳಿತ ನೀ ಕಾಣು

ಹಳತೆಂದು ಹಳಿಯದಿರು ಹೊಸತೆಂದು ಹೊಗಳದಿರು
ಹಳೆಯದಿಲ್ಲದಿರೆ ಹೊಸದದಕೆ ಬೆಲೆಯೆಲ್ಲಿಯದು
ಹಳೆಯದರನುಭವದಿಂದಲೆ ಹೊಸದು ಬಂದಿಹುದು
ಹಳತು ಹೊಸತರೊಳೊಳಿತ ನೀ ಕಾಣು ನನಕಂದ||

Sunday, 19 June 2016

ನಮ್ಮೆಲ್ಲರ ಸಂತಸ

ಅರವಿಂದಲೋಚನ ಅಂಗಳದಿ ಆಡಿದ
ಆಗಸದ ಚಂದಿರ ಬೇಕೆಂದು ಬಯಸಿದ
ಮುಕುರದಲಿ ಬಿಂಬವ ಕಂಡು ಸಂಭ್ರಮಿಸಿದ
ನಮ್ಮೆಲ್ಲ ಸಂತಸವು ಅಂತೆ ನನಕಂದ||