ಕೋವಿಡ್ 19 ಕಾಟ ತಾಳದಂತಾಗಿದೆ
ಕಣ್ಣಿಗೆಕಾಣದಂತೆಲ್ಲೆಡೆಯು ಹರಡುತಿದೆ
ಎಂದಿಗೆ ಬಿಡುಗಡೆಯೆಂದು ತಿಳಿಯದಾಗಿದೆ
ಬೇಜಾರಾಗುತ್ತಿದೆಯಲ್ಲ
ಹಗಲುರಾತ್ರಿಯೆನದೆ ಸಕ್ರಿಯೆಯಲಿ ಚಲಿಸುತಿದೆ
ಮುದುಕರು ಮಕ್ಕಳೆಂದೆನದೆ ಎಲ್ಲರನು ಕಾಡುತಿದೆ
ಏನುಮಾಡದಂತೆ ಎಲ್ಲವನು ಎಲ್ಲರನು ಬಂಧಿಸಿದೆ
ಬೇಜಾರಾಗುತ್ತಿದೆಯಲ್ಲ
ನೋಡಿದ್ದೇ ನೋಡಿ ನೋಡಿ
ಮಾಡಿದ್ದೇ ಮಾಡಿ ಮಾಡಿ
ಆಡಿದಾಟವನೇ ಆಡಿ ಆಡಿ
ಬೇಜಾರಾಗುತ್ತಿದೆಯಲ್ಲ
ಮನೆಯೊಳಗೆಇದ್ದಿದ್ದು
ಕೂತು ಮಲಗಿ ಎದ್ದು
ಸಿಕ್ಕಿದ್ದು ಸಿಕ್ಕಷ್ಟು ಮೆದ್ದು
ಬೇಜಾರಾಗುತ್ತಿದೆಯಲ್ಲ
ಮನೆಯೊಳಗೆ ಎಲ್ಲಾ
ಹೊರ ಹೋಗುತ್ತಲೇ ಇಲ್ಲ
ಯಾರೂ ಬರಲಾಗುತ್ತಿಲ್ಲ
ಬೇಜಾರಾಗುತ್ತಿದೆಯಲ್ಲ
ಮಾರಿಯಾಟವಿನ್ನೂ ನಿಲ್ಲಲಿಲ್ಲ
ಬಹುತೇಕರಿಗೆ ಅರ್ಥವಾಗುತ್ತಿಲ್ಲ
ಅತಂಕದಿಂದ ನೆಮ್ಮದಿಯೇ ಇಲ್ಲ
ಬೇಜಾರಾಗುತ್ತಿದೆಯಲ್ಲ
ಶಾಲೆಯೂ ಇಲ್ಲ
ಪರೀಕ್ಷೆಯೂ ಇಲ್ಲ
ಪಾಸಾಗಿ ಆಯಿತಲ್ಲ
ಆಟವಾಡುವಂತಿಲ್ಲ
ಬರೆಯಲು ಓದಲು ಬೇಕಿಲ್ಲ
ಮಕ್ಕಳಿಗೆ ಲವಲವಿಕೆಯೇ ಇಲ್ಲ
ಮೈ ಮನಸು ಜಡ್ಡುಹಿಡಿದಿದೆಯೆಲ್ಲ
ಬೇಜಾರಾಗುತ್ತಿದೆಯಲ್ಲ
ಮನೆಯಿಂದಲೇ ಕೆಲಸವ ಮಾಡಬೇಕಲ್ಲ
ಮಾಡಲು ಕೂತರೆ ನೆಟ್ವರ್ಕ್ ಸರಿಯಿಲ್ಲ
ಆಫೀಸಿನ ಪರಿಸರ ಮನೆಯೊಳಗೆಯಲ್ಲ
ಮಕ್ಕಳು ಮನೆಮಂದಿಯ ಸುಧಾರಿಸಬೇಕಲ್ಲ
ಬೇಜಾರಾಗುತ್ತಿದೆಯಲ್ಲ
ಕೋವಿಡ್ 19 ಕಾಟ ತಾಳದಂತಾಗಿದೆಯಲ್ಲ
ಕಣ್ಣಿಗೆಕಾಣದಂತೆಲ್ಲೆಡೆಯು ಹರಡುತ್ತಿದೆಯಲ್ಲ
ಎಂದಿಗೆ ಬಿಡುಗಡೆಯೆಂದು ತಿಳಿಯದಾಗಿದೆಯಲ್ಲ
ದೇಶಗಳ ಆರ್ಥಿಕತೆಯೇ ಬುಡಮೇಲಾಗುತ್ತಿದೆಯಲ್ಲ
ಬೇಜಾರಾಗುತ್ತಿದೆಯಲ್ಲ
No comments:
Post a Comment