Friday, 23 July 2021

ಹಾಯ್ಕುಗಳು

 ಓರೆಗಣ್ಣಿನ

ನೋಟದಿ ಸೆಳೆದಳು

ನನ್ನಮನವ


ಕೆಂದುಟಿಯಲಿ

ಮುತ್ತಿಟ್ಟು ಮೋಹಿಸುತ

ಸೆಳೆದಳೆನ್ನ


ಮನವ ಕದ್ದು

ಕಾಡಿಸಿದಳು ಖುದ್ದು

ಹೃದಯ ಗೆದ್ದು


ಬಳ್ಳಿ ಒಯ್ಯಾರ

ಕರಿಮೋಡ ಹೆರಳು

ನನ್ನ ಬೆಡಗಿ


ಹೃದಯೇಶ್ವರಿ

ಸರ್ವೇಶ್ವರಿ ನನ್ನಾಕೆ

ಬೇರೆಯಿನ್ನೇಕೆ


ಭುವನೇಶ್ವರಿ

ಮಮತಾ ಸ್ವರೂಪಿಣಿ

ನನ್ನ ಜನನಿ


ಸ್ವಾರ್ಥವಳಿದು

ಸಾಮರಸ್ಯ ಮೂಡಲು

ಏಳ್ಗೆಕಾಣ್ವುದು


ಬಲೂನಿನಂತೆ

ಊದಿ ಉಬ್ಬದಿರು ನೀ

ಸೂಚಿತಾಕೀತು


ಪ್ರಶಸ್ತಿಗಾಗಿ

ಬರೆದರೆ ಕವನ

ಭಾವಕಾಣದು


ಮನ ಮುದುಡಿ

ಭಾವ ಬರಡಾಗಿರೆ

ಕಾವ್ಯವುಕ್ಕದು


ಸವಿಕಾಣುವೆ

ಹಾಲು ಜೇನಿನಂತಿರೆ

ಸಂಸಾರದಲಿ

ಪದ್ಮಶ್ರೀಧರ

Sunday, 18 July 2021

ಮುಗಿಯದಾಟ

ಏನಿದು ಭ್ರಮೆಯೋ ವಿಭ್ರಮೆಯೋ 
ಅರಿಷಡ್ವರ್ಗಗಳ ಮೇಳೈಸುವಿಕೆಯೋ
ಅಹಮಿಕೆಯ ಅಡಗದಟ್ಟಹಾಸವೋ
ತೀರದಾ ಸ್ವಾರ್ಥದ ಪರಾಕಾಷ್ಠೆಯೋ

ನಾಗರೀಕತೆಯ ಸಮಷ್ಠಿಯ ಫಲವೋ

ವಿಕೃತ ಮನಸಿನ ವಿಪರೀತ ಬುದ್ಧಿಯೋ

ತಾನತಿಶಯನೆಂಬ ಭ್ರಾಂತಿಯ ಫಲವೋ

ಪ್ರಕೃತಿಯು ಮುನಿದು ನೀಡಿರುವ ಶಾಪವೋ


ಊಹೆಗೂ ನಿಲುಕದ ವುಹಾನ್ ವೈರಸ್‌ನಾಟ

ವರುಷಗಳು ಕಳೆದರೂ ಅಡಗಿಲ್ಲವಿನ್ನು ಕಾಟ

ಲಾಕ್ ಡೌನ್ ನಿಂದ ಮನೆಯಲ್ಲೇ ಎಲ್ಲ ನೋಟ

ಮನೆಯೊಳಗೇ ಇದ್ದಿದ್ದೆಲ್ಲರ ತಲೆಕೆಟ್ಟು ಹುಚ್ಚಾಟ


ವಾಟ್ಸಪ್ ಫೇಸ್‌ಬುಕ್‌ನಲ್ಲಿ ತಿಂಡಿಗಳ ಹರಿದಾಟ

ಹೊತ್ತು ಹಿಟ್ಟಿಗೂ ಪರದಾಡುವ ಗೋಳಿನ ನೋಟ

ಎಲ್ಲೆಲ್ಲೋ ಸಿಲುಕಿ ಅತಂತ್ರವಾಗಿಹರ ಪರದಾಟ

ಕೈಯಲ್ಲಿ ಕೆಲಸವಿದ್ದರೂ ಮಾಡಲಾಗದೆ ಒದ್ದಾಟ 


ಆತಂಕ ಅನಿಶ್ಚಿತತೆಯಲಿ ಬೆಂದವರ ತೊಳಲಾಟ

ಜೀವದ ಹಂಗುತೊರೆದು ಸೇವಾನಿರತರ ಹೋರಾಟ

ವಿಶ್ವದುಳಿವಿಗೆ ಉದಾರಿಗಳ ಕೊಡುಗೈಯ ಮೇಲಾಟ

ಕಾಟ ಕೂಟ ನೋಟ ಓ ಬಲ್ಲವರಿಲ್ಲ ಕಾಣದ ದೇವರಾಟ


ಕಪ್ಪು ಬಿಳುಪು ಹಳದಿ ನೀಲಿ ಫಂಗಸ್‌ ಗಳ ದರ್ಶನ

ಆಲ್ಫಾಬೀಟಾಗಾಮಾಡೆಲ್ಟಾ ಡೆಲ್ಟಾ ಪ್ಲಸ್ಗಳಾಗಮನ

ನಿರಂತ ನಡೆದಿದೆ ಕೋವಿಡ್‌ ಲಸಿಕೆಯ ಅಭಿಯಾನ

ಎಚ್ಚರ ತಪ್ಪಿದರೆ ಯಮಪುರಿಗೆ ಸಮೂಹಿಕ ಯಾನ 


ಅಜ್ಜಿಯಡುಗೆ ಔಷಧ ನೇಮನಿಷ್ಠೆ ಮಡಿಯಾಟವನಾಡುತ 

ಕೈಯ ತೊಳೆದು ಅಂತರ ಕಾಯ್ದು ಕಷಾಯ ಕುಡಿಯುತ

ಮನೆಯೊಳಗಿದ್ದು ಆಳುವವರ ಆದೇಶಗಳ ಪಾಲಿಸುತ

ಸಂಯಮದಿ ಮನುಕುಲದುಳಿವಿಗೆ ದೇವರನು ಬೇಡುತ 


ಎಚ್ಚರ ತಪ್ಪಿದರೆ ಗಂಡಾಂತರ

 ಕಪ್ಪು ಬಿಳುಪು ಹಳದಿ ನೀಲಿ ಫಂಗಸ್‌ ಗಳ ದರ್ಶನ
ಆಲ್ಫಾಬೀಟಾಗಾಮಾಡೆಲ್ಟಾ ಡೆಲ್ಟಾ ಪ್ಲಸ್ಗಳಾಗಮನ
ನಿರಂತ ನಡೆದಿದೆ ಕೋವಿಡ್‌ ಲಸಿಕೆಯ ಅಭಿಯಾನ

ಎಚ್ಚರ ತಪ್ಪಿದರೆ ಗಂಡಾಂತರ ತಪ್ಪದು ನನ ಕಂದ


ವೈರಾಣು ಸ್ಥಿರ

ವೈರಾಣುಗಳುದಿಸಿ ಕಾಡುವವು ವೈರಾಣು ಸ್ಥಿರ

ಸೈರಿಸದೆ ಅನ್ಯಮಾರ್ಗವೆಮಗಿಲ್ಲ ರೋಗ ಚಿರ

ಹೋರಾಡುತಿರು ನಡೆಸಿ ಅನ್ವೇಷಣೆ ನಿರಂತರ

ಮೀರದಂತೆ ಬಾಳ್ವೆಯ ಮಾಡು ನನ ಕಂದ||